Sunday | May 31, 2026 |

ಗಣಿಗಾರಿಕೆ; ಬಿಜೆಪಿ ಸರ್ಕಾರದಲ್ಲೇ ಬೊಕ್ಕಸಕ್ಕೆ 1.43 ಲಕ್ಷ ಸಾವಿರ ಕೋಟಿ ರು ನಷ್ಟ

ಬೆಂಗಳೂರು: ಎಲ್ಲಾ ತರಹದ ಅಕ್ರಮ ಗಣಿಗಾರಿಕೆ ದಂಡದ ಮೊತ್ತವನ್ನು 3,350 ಕೋಟಿಯಷ್ಟು ಇಳಿಕೆ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಇಡೀ ಆಡಳಿತ ಯಂತ್ರ ಸಿ ಡಿ ಗದ್ದಲದಲ್ಲಿ ಮುಳುಗಿರುವ ಸಂದರ್ಭದಲ್ಲೇ ದಂಡದ ಮೊತ್ತವನ್ನು ಇಳಿಕೆ ಮಾಡುವ ಬಗ್ಗೆ ಗಣಿ ಸಚಿವ ನಿರಾಣಿ ಪ್ರಸ್ತಾಪವನ್ನು ಮುಂದಿಟ್ಟಿರುವ ಬೆನ್ನಲ್ಲೇ ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ಎಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿದ್ದ ಸಚಿವ ಸಂಪುಟ ಉಪ ಸಮಿತಿ ಹೊರಗೆಳೆದಿದ್ದ ಆಘಾತಕಾರಿ ಅಂಶಗಳೂ ಮುನ್ನೆಲೆಗೆ ಬಂದಿವೆ.

ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಲು ಕಾರಣವಾಗಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳ ಆಳ ಯಾರ ಅಂದಾಜಿಗೂ ಸಿಗುವುದಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರು ನೀಡಿದ್ದ ವರದಿಯಾಚೆಗೂ ಇದರ ಆಳ ವಿಸ್ತರಣೆಯಾಗಿದೆ. ಲೋಕಾಯುಕ್ತರು ನೀಡಿದ್ದ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿದ್ದ ಕಾಂಗ್ರೆಸ್‌ ಸರ್ಕಾರವು ಎಚ್‌ ಕೆ ಪಾಟೀಲ್‌ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿತ್ತು. ಈ ಸಮಿತಿಯು ಆಳಕ್ಕೆ ಇಳಿದೆಂತಲ್ಲ ಆಘಾತಕಾರಿ ಅಂಶಗಳು ಮೇಲೆದ್ದು ಬರತೊಡಗಿದವು.

ಸಚಿವ ಸಂಪುಟ ಉಪ ಸಮಿತಿಯು ಲೋಕಾಯುಕ್ತ ವರದಿಯನ್ನು ಯಾರ ಅಂದಾಜಿಗೂ ಸಿಗದಂತೆ ವಿಸ್ತರಿಸಿತ್ತು. ಕಬ್ಬಿಣ ಅದಿರು ಅಕ್ರಮ ಸಾಗಾಣಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟದ ಕುರಿತು ಲೋಕಾಯುಕ್ತರಾಗಿದ್ದ ಸಂತೋಷ್​​ ಹೆಗ್ಡೆ ಅವರು ವರದಿಯಲ್ಲಿ ನೀಡಿದ್ದ ಅಂದಾಜು ಮೊತ್ತಕ್ಕೂ ರೈಲ್ವೆ ಇಲಾಖೆ ದಾಖಲೆಗಳಿಂದ ಅಂದಾಜಿಸಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಇರುವ ಹೊಸ ಅಂಶವೊಂದನ್ನು ಹೊರಗೆಡವಿತ್ತು.

ಲೋಕಾಯುಕ್ತರು ಮಾಡಿದ್ದ ಎಲ್ಲಾ ಅಂದಾಜುಗಳನ್ನು ಪರಿಶೀಲಿಸಿದ್ದರಲ್ಲದೆ ಅವುಗಳನ್ನು ಒರೆಗೆ ಹಚ್ಚಿದ್ದರು. ಇದರ ನಡುವೆಯೇ ರೈಲ್ವೆ ಇಲಾಖೆ ದಾಖಲೆಗಳನ್ನಿಟ್ಟುಕೊಂಡು ಮಾಡಿದ್ದ ಹೊಸ ಲೆಕ್ಕಾಚಾರಗಳನ್ನು ಕಂಡು ಸ್ವತಃ ಎಚ್‌ ಕೆ ಪಾಟೀಲ್‌ ಅವರು ಆಘಾತ ವ್ಯಕ್ತಪಡಿಸಿದ್ದರು. ಹಾಗಾದರೆ ಸಚಿವ ಸಂಪುಟದ ಉಪ ಸಮಿತಿ ನೀಡಿದ್ದ ವರದಿಯಲ್ಲೇನಿತ್ತು, ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗ್ಡೆ ಮತ್ತು ಅವರ ತಂಡ ಮಾಡಿದ್ದ ನಷ್ಟದ ಲೆಕ್ಕಾಚಾರಕ್ಕೂ ಸಚಿವ ಸಂಪುಟ ಉಪ ಸಮಿತಿ ಮಾಡಿದ್ದ ಲೆಕ್ಕಾಚಾರಗಳ ಮಧ್ಯೆ ಎಷ್ಟೊಂದು ವ್ಯತ್ಯಾಸವಿದೆ ಎಂಬ ಅಂಶಗಳತ್ತ ಕಣ್ಣಾಡಿಸೋಣ.

2015ರ ಅಕ್ಟೋಬರ್​ 16ರಂದು ನಡೆದಿದ್ದ ಸಭೆಯಲ್ಲಿ ಹೊರಬಿದ್ದಿದ್ದ ದಾಖಲೆಗಳು ಲೋಕಾಯುಕ್ತರು ಮಾಡಿದ್ದ ನಷ್ಟದ ಅಂದಾಜನ್ನು ಹಲವು ಪಟ್ಟು ವಿಸ್ತರಿಸಿದೆ. 2006ರಿಂದ 2010ರ ಅವಧಿಯಲ್ಲಿ ಕರ್ನಾಟಕದ 10, ಗೋವಾ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿಧ ಬಂದರುಗಳ ಮೂಲಕ ಅಕ್ರಮವಾಗಿ 2.98 ಕೋಟಿ ಟನ್ ಅದಿರು ರಫ್ತಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ​​ 12,228 ಕೋಟಿ ರೂ.ನಷ್ಟವಾಗಿದೆ (ಟನ್​​ಗೆ 4,103 ರೂ.ಲೆಕ್ಕಚಾರದಲ್ಲಿ) ಎಂದು ಸುಂಕ ಇಲಾಖೆ ನೀಡಿದ್ದ ಅಂಕಿ ಸಂಖ್ಯೆ ಆಧರಿಸಿ ಅಂದಿನ ಲೋಕಾಯುಕ್ತ ಸಂತೋಷ್​ ಹೆಗ್ಡೆ ಅವರು ಈ ಮೊತ್ತವನ್ನು ಅಂದಾಜಿಸಿದ್ದರು. ಇದು ಸುಂಕ ಇಲಾಖೆ ನೀಡಿದ್ದ ಅಂಕಿ ಅಂಶಗಳ ಆಧರಿಸಿದ ಲೆಕ್ಕಾಚಾರಕ್ಕಷ್ಟೇ ಸೀಮಿತವಾಗಿತ್ತು.

ಆದರೆ ರೈಲ್ವೆ ಇಲಾಖೆ ದಾಖಲೆಗಳನ್ನು ಪಡೆದು ಚರ್ಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯು 2006ರಿಂದ 2010ರ ಅವಧಿಯಲ್ಲಿ ಒಟ್ಟು 35 ಕೋಟಿ ಟನ್​​ ಅಕ್ರಮವಾಗಿ ಅದಿರು ಸಾಗಣೆಯಾಗಿದೆ ಎಂದು ಹೇಳಿತ್ತು. ಆದರೆ ನಷ್ಟದ ಮೊತ್ತವನ್ನು ಉಪ ಸಮಿತಿ ಅಂದಾಜಿಸಿರಲಿಲ್ಲ. ಲೋಕಾಯುಕ್ತರು ಮಾಡಿದ್ದ ಸರಾಸರಿ ಅಂದಾಜು 4,103 ರೂ.ಗಳನ್ನು 35 ಕೋಟಿ ಟನ್​​ಗೆ ಅಂದಾಜಿಸಿದಲ್ಲಿ ನಷ್ಟದ ಮೊತ್ತ 12,228 ಕೋಟಿ ಇದ್ದದ್ದು 1 ಲಕ್ಷ 43 ಸಾವಿರ ಕೋಟಿ ರೂಪಾಯಿಗೆ ತಂದು ನಿಲ್ಲಿಸುತ್ತದೆ.

ಬಳ್ಳಾರಿಯಿಂದ ಹೊರಗಡೆ 6 ರೈಲ್ವೆ ನಿಲ್ದಾಣಗಳಿಂದ ಮತ್ತು 14 ರೈಲ್ವೆ ಸೈಡಿಂಗ್​​ಗಳಿಂದ 2006ರಿಂದ 2010ರವರೆಗೆ ಒಟ್ಟು 20 ಕೋಟಿ ಟನ್​ ಅಕ್ರಮ ಅದಿರು ರಫ್ತಾಗಿದೆ. ರೈಲ್ವೆ ಹಾಗೂ ಇತರೆ ಮೂಲಗಳ ಮೂಲಕ ಸಾಗಣೆ ಮಾಡಿರುವ ಒಟ್ಟು 35 ಕೋಟಿ ಟನ್​ ಅಕ್ರಮ ಅದಿರು ರಫ್ತಾಗಿದೆ. 2009ರ ಸೆಪ್ಟಂಬರ್​ನಿಂದ ಜೂನ್​ 2010ರವರೆಗೆ ಕೇವಲ 9 ತಿಂಗಳ ಅವಧಿಯಲ್ಲಿ 14 ಕೋಟಿ ಟನ್​ ಕಬ್ಬಿಣದ ಅದಿರು ಪ್ರತಿನಿತ್ಯ 20 ಸಾವಿರ ಟ್ರಕ್​​ಗಳ ಮೂಲಕ ಸಾಗಣೆಯಾಗಿದೆ ಎಂದು ರೈಲ್ವೆ ಇಲಾಖೆ ನೀಡಿದ್ದ ದಾಖಲೆಗಳು ಬಹಿರಂಗಪಡಿಸಿದ್ದವು. ಇವೆಲ್ಲವೂ ಕರ್ನಾಟಕಕ್ಕೆ ಆಘಾತಕಾರಿ ಘಟನೆಗಳು ಎಂದು ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್​ ಬಣ್ಣಿಸಿದ್ದರು.

ರೈಲ್ವೆಯ ವ್ಯಾಗನ್​ಗಳು ಮತ್ತು ಟ್ರಕ್​ಗಳ ಮೂಲಕ ರಾಜಕಾರಣಿಗಳು ತೋಳ್ಬಲದ ಮೂಲಕ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಣೆ ಆಗಿದೆ. ಸುಪ್ರೀಂ ಕೋರ್ಟ್​ ನೇರ ಉಸ್ತುವಾರಿಯಲ್ಲಿ ಈ ಪ್ರಕರಣದ ಮೇಲ್ವಿಚಾರಣೆ ಆಗುತ್ತಿದೆ. ಸಾರ್ವಜನಿಕ ಆಸ್ತಿ ರಕ್ಷಣೆಯಂತಹ ಕ್ರಮಗಳಿಗೆ ಅಧಿಕಾರಿಗಳು ಮುಂದಾಗದಿರುವುದು ಆತಂಕ ಸೃಷ್ಟಿಸುತ್ತಿದೆ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್​ ಅವರು ಹೇಳಿದ್ದರು. ಆದರೆ ಇವರ ಮಾತನ್ನು ಅಂದಿನ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ಭಾರತ್​ ಮೈನ್ಸ್​ ಎಂಬ ಕಂಪನಿಯನ್ನು ಉದಾಹರಿಸಿರುವ ಎಚ್.ಕೆ.ಪಾಟೀಲ್ ಅವರು, 2009ರಿಂದ 2010ರ ಅವಧಿಯಲ್ಲಿ 2,11,422 ಮೆ.ಟನ್​ ಅದಿರು ರಫ್ತು ಮಾಡಿದೆ. ಈ ಪ್ರಕರಣದಲ್ಲಿ ಅದಿರಿನ ರಫ್ತು ಪ್ರಮಾಣ ತಿಳಿದಿರುವ ಕಾರಣ ಇಂತಹ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಇದರ ಅಧಾರದ ಮೇಲೆ ವಸೂಲಾತಿಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ರಾಷ್ಟ್ರದ ಸಂಪತ್ತು ಕೆಲವು ಬಲಾಢ್ಯ ವ್ಯಕ್ತಿಗಳ ಪಾಲಾಗಿದ್ದು, ಈ ನಷ್ಟವನ್ನು ವಸೂಲು ಮಾಡಲು ಹಾಗೂ ಸ್ಥಿರಾಸ್ತಿ-ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ. ಅಂತಹ ಹಣದಿಂದ ಗಳಿಸಿದ ಅಕ್ರಮ ಆಸ್ತಿಯನ್ನು ಮನಿ ಲ್ಯಾಂಡ್ರಿಂಗ್​ ಕಾಯ್ದೆ ಅಥವಾ ಸೂಕ್ತ ಕಾಯ್ದೆ ಅಡಿಯಲ್ಲಿ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಎಚ್.ಕೆ.ಪಾಟೀಲ್​ ಅವರು ಹೇಳಿದ್ದ ಮಾತುಗಳನ್ನು ಗಣನೆಗೆ ಅಂದಿನ ಸರ್ಕಾರ ಏಕೆ ತೆಗೆದುಕೊಳ್ಳಲಿಲ್ಲ?

ಲೋಕಾಯುಕ್ತ ಸಂಸ್ಥೆ ಮಾಡಿದ್ದ ಎಲ್ಲಾ ಅಂದಾಜುಗಳನ್ನು ಪರಿಗಣಿಸಲಾಗದು ಎಂದು ಸಂಸದೀಯ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನೀಡಿದ್ದ ಅಭಿಪ್ರಾಯಕ್ಕೆ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆಯ ಉಪ ಕಾರ್ಯದರ್ಶಿ, ಇದೇ ಸಭೆಯಲ್ಲಿ ಆಕ್ಷೇಪ ಎತ್ತಿದ್ದರು. ಲೋಕಾಯುಕ್ತ ಸಂಸ್ಥೆ ಅಂದಾಜಿಸಿರುವ ನಷ್ಟದ ಮೊತ್ತ ಆಧರಿಸಿ ಸಿಇಸಿ ನೀಡಿರುವ ವರದಿಯನ್ನು ಸುಪ್ರೀಂ ಕೋರ್ಟ್​ ಒಪ್ಪಿದೆ. ಹೀಗಾಗಿ ಮತ್ತೊಮ್ಮೆ ನಷ್ಟ ಅಂದಾಜಿಸಬಹುದೇ ಎಂದು ಅರಣ್ಯ, ಕಾನೂನು ಇಲಾಖೆಯ ಅಧಿಕಾರಿಗಳು ಪ್ರಶ್ನಿಸುವ ಮೂಲಕ ಅಕ್ರಮ ಗಣಿಗಾರಿಕೆಯಿಂದಾಗಿರುವ ನಷ್ಟವನ್ನೂ ಮರೆ ಮಾಚಲು ಯತ್ನಿಸಿದ್ದರು.

ಕಾಂಗ್ರೆಸ್‌ ಸರ್ಕಾರ ತನ್ನ 5 ವರ್ಷಗಳ ಅಧಿಕಾರದಲ್ಲಿ ಎಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿದ್ದ ಸಚಿವ ಸಂಪುಟ ಉಪ ಸಮಿತಿ ವರದಿಯತ್ತ ಕಣ್ಣಾಡಿಸಿದ್ದರೆ ಬೊಕ್ಕಸವೂ ತುಂಬುತ್ತಿತ್ತು. ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯದ ಸಂಪತ್ತನ್ನು ಲೂಟಿಗೈದ ಗಣಿ ದಂಧೆಕೋರರನ್ನು ಮಟ್ಟಹಾಕಲು ಮತ್ತು ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ವಸೂಲು ಮಾಡುವ ಎಲ್ಲಾ ಅವಕಾಶಗಳಿದ್ದರೂ ಅದನ್ನು ಕಾಂಗ್ರೆಸ್‌ ಸರ್ಕಾರ ಕೈ ಚೆಲ್ಲಿ ಕುಳಿತಿತ್ತು.

ಶಿವಮೊಗ್ಗದ ಹುಣಸೋಡು ಘಟನೆಯನ್ನು ಮುಂದಿರಿಸಿಕೊಂಡು ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದನದ ಹೊರಗೆ ಮತ್ತು ಒಳಗೆ ದನಿ ಎತ್ತಿ ಆ ನಂತರ ಮೌನಕ್ಕೆ ಜಾರಿದ್ದ ಪ್ರತಿಪಕ್ಷ ಕಾಂಗ್ರೆಸ್‌, ಸಿ ಡಿ ಗದ್ದಲದಿಂದ ಹೊರಬಂದಿಲ್ಲ. ಸಚಿವ ಸಂಪುಟ ಉಪ ಸಮಿತಿ ವರದಿಯತ್ತ ಹೀಗಾಗಿಯೇ ನಿರಾಣಿ ಅವರು ಮುಂದಿರಿಸಿರುವ ಗಣಿ ದಂಡದ ಒಟ್ಟು ಮೊತ್ತದ ಪೈಕಿ 3,350 ಕೋಟಿ ಇಳಿಕೆ ಮಾಡುವ ಪ್ರಸ್ತಾಪದತ್ತಲೂ ಕಣ್ಣೆತ್ತಿಯೂ ನೋಡದ ಕಾಂಗ್ರೆಸ್‌ನ ನಡೆ ಅಚ್ಚರಿಯೇನೂ ಹುಟ್ಟಿಸಿಲ್ಲ.

Hot this week

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...
Please Scan to make Your Contribution

Topics

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

Related Articles

Popular Categories

error: Content is protected !!