ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸದಂತೆ ಅವಿರತ ಹೋರಾಟಕ್ಕಿಳಿದಿರುವ ರಾಜ್ಯದ ವೀರಶೈವ-ಲಿಂಗಾಯತ ಸ್ವಾಮೀಜಿಗಳ ಒಂದು ಗುಂಪು ಕೆಲ ಹೊತ್ತು ವಿಶ್ರಮಿಸಿದ್ದ ಕುಮಾರ ಕೃಪಾ ಅತಿಥಿ ಗೃಹದಲ್ಲಿನ ಬೆಡ್ ಶೀಟ್, ಟರ್ಕಿ ಟವೆಲ್‌ಗಳು ಹಾಗೂ ನೀರು ಕಾಫಿ ಕಾಯಿಸುವ ಕ್ಯಾಟಲ್, ನ್ಯಾಪ್‌ಕಿನ್ ಗಳನ್ನು ಹೊತ್ತೊಯ್ದಿರುವ ಸುದ್ದಿ ಹರಿದಾಡುತ್ತಿದೆ.
ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಅವರ ಆಪ್ತ ಹಾಗೂ ಕೆ ಆರ್ ಡಿ ಸಿ ಎಲ್ ಅಧ್ಯಕ್ಷ ರುದ್ರೇಶ್ ಅವರು ಗುರುವಾರ (ಜು.22) ಮುಖ್ಯಮಂತ್ರಿ ಗಳು ಸ್ವಾಮೀಜಿಗಳ ಜೊತೆಯಲ್ಲಿ ಮಾತನಾಡುತ್ತಿರುವ ವೇಳೆ ಸಿ.ಎಂ ಅಧಿಕೃತ ನಿವಾಸವಾದ ಕಾವೇರಿಯಲ್ಲಿ ನೆರೆದಿದ್ದ ಎಲ್ಲ ಸ್ವಾಮೀಜಿಗಳಿಗೆ ಒಂದೊಂದು ಮುಚ್ಚಿದ ಲಕೋಟೆ ನೀಡಿದ್ದು ಸುದ್ದಿಯಾಗಿತ್ತು.
ಇದರ ಬೆನ್ನಲ್ಲೇ ಕುಮಾರಕೃಪಾ ಅತಿಥಿ ಗೃಹದಲ್ಲಿನ ಬೆಡ್‌ಶೀಟ್, ಟರ್ಕಿ ಟವೆಲ್ ಹಾಗೂ ನೀರು ಕಾಫಿ ಕಾಯಿಸುವ ಕ್ಯಾಟಲ್‌ಗಳನ್ನು ಹೊತ್ತೊಯ್ದಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ‘ದಿ ಫೈಲ್’ಗೆ ಪ್ರತಿಕ್ರಿಯಿಸಿದ ಶಿಷ್ಟಾಚಾರ (ಡಿಪಿಎಆರ್) ಉಪ ಕಾರ್ಯದರ್ಶಿ ವೀರಭದ್ರ ಹಂಚಿನಾಳ್ ಅವರು ‘ಆ ತರಹ ಏನೂ ಆಗಿಲ್ಲ. ಯಾವ ಮಾಹಿತಿಯೂ ನನಗಿಲ್ಲ. ಇದರ ನಿರ್ವಹಣೆಯನ್ನು ಕೆಎಸ್‌ಟಿಡಿಸಿ ಅಧಿಕಾರಿಗಳು ನೋಡಿಕೊಳ್ಳುತ್ತಾರೆ,’ ಎಂದು ಮಾಹಿತಿ ನೀಡಿದರು.
ಲಕೋಟೆಯಲ್ಲಿ ಹಣವಿತ್ತೇ?
ಕಾವೇರಿಯಲ್ಲಿ ನೆರೆದಿದ್ದ ಎಲ್ಲ ಸ್ವಾಮೀಜಿಗಳಿಗೆ ಮುಚ್ಚಿದ ಲಕೋಟೆ ನೀಡಿದ್ದ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಆ ಪ್ರತಿಯೊಂದು ಲಕೋಟೆಗಳಲ್ಲಿ ತಲಾ ₹ 5 ಸಾವಿರ ರೂಪಾಯಿ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಜತೆಗೆ ಗಾಡಿ ಖರ್ಚು ಎಂದು ₹ 8 ಸಾವಿರವನ್ನೂ ಅದರೊಟ್ಟಿಗೆ ವಿತರಿಸಲಾಗಿತ್ತು ಎಂಬ ಮಾತು ಕೇಳಿ ಬಂದಿದೆ.
ಆದರೆ ಗಾಡಿ ಖರ್ಚಿಗೆ ವಿಜಯೇಂದ್ರ ಅವರು ತಲಾ ₹ 10 ಸಾವಿರ ನೀಡಿ ಎಂದು ಸೂಚಿಸಿ ಆ ಲಕೋಟೆಗಳನ್ನು ಶಿರಹಟ್ಟಿ ತಾಲ್ಲೂಕು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಗೆ ನೀಡಿದ್ದರಂತೆ ಎಂದು ಹೇಳಲಾಗುತ್ತಿದೆ. ಆದರೆ, ದಿಂಗಾಲೇಶ್ವರರು ಗಾಡಿ ಖರ್ಚಿನ ಈ ಲಕೋಟೆಗಳಲ್ಲಿ ₹ 10 ಸಾವಿರದ ಬದಲಿಗೆ ತಲಾ ₹ 8 ಸಾವಿರವನ್ನು ಮಾತ್ರ ಹಂಚಿದ್ದಾರಂತೆ!!. ಎಂಬ ಸುದ್ದಿಯೂ ಹರಿದಾಡುತ್ತಿದೆ.
ಸ್ವಾಮೀಜಿಗಳ ಮಧ್ಯೆ ನಡೆದಿತ್ತೇ ಜಗಳ?
ಈ ವಿಷಯವಾಗಿ ಬಳ್ಳಾರಿ ಹಾವೇರಿ ಮತ್ತು ಹುಬ್ಬಳ್ಳಿ ಕಡೆಯಿಂದ ಬಂದಿದ್ದ ಕನಿಷ್ಠ 20 ಸ್ವಾಮೀಜಿಗಳು ದಿಂಗಾಲೇಶ್ವರರ ಜೊತೆ ಅಂದು ಕೆಲ ಹೊತ್ತು ವಿಶ್ರಮಿಸಿದ್ದ ಕುಮಾರ ಕೃಪಾ ಮತ್ತು ಕಾವೇರಿ ಅತಿಥಿ ಗೃಹಗಳಲ್ಲಿ ಜಗಳವಾಡಿದ್ದಾರೆ ಎಂದು ಗೊತ್ತಾಗಿದೆ.
ಈ ಸ್ವಾಮೀಜಿಗಳಲ್ಲಿ ಸಾಕಷ್ಟು ಜನರು, ಹಿರಿಯ ಸ್ವಾಮೀಜಿಗಳ ಸೇವೆ ಮಾಡುವ ಕಿರಿಯ ಸೇವಕ ಸ್ವಾಮಿಗಳೇ ಇದ್ದರು ಎಂಬುದು ಗಮನಾರ್ಹ. ಅವರೆಲ್ಲಾ ರಾತ್ರಿ ದಿಂಗಾಲೇಶ್ವರರ ಜೊತೆ ಜಗಳವಾಡಿದ ನಂತರ ಬೆಳಗ್ಗೆ ತಂತಮ್ಮ ಊರುಗಳಿಗೆ ಹಿಂದಿರುಗುವಾಗ ಅತಿಥಿ ಗೃಹಗಳಲ್ಲಿನ ಅಗತ್ಯ ವಸ್ತುಗಳನ್ನು ಕೊಂಡೊಯ್ದಿದ್ದಾರೆ ಎಂಬುದು ಈಗ ಗೊತ್ತಾಗಿದೆ. ಈ ವಿಷಯ ಗೊತ್ತಾದ ಮೇಲೆಯೇ ಯಡಿಯೂರಪ್ಪ ರುದ್ರೇಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, “ನೀವೆಲ್ಲಾ ನಮಗೆ ಎಲ್ಲಿಂದ ಜೋಡಾದಿರಿ” ಎಂದು ನೀರಿಳಿಸಿದ್ದಾರಂತೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸದಂತೆ ಈ ತನಕ ಮೈಸೂರು, ತುಮಕೂರು, ಶಿವಮೊಗ್ಗ ಭಾಗಗಳೂ ಸೇರಿದಂತೆ ನಾಡಿನ ವಿವಿಧೆಡೆಗಳಿಂದ 150 ಕ್ಕೂ ಹೆಚ್ಚು ಸ್ವಾಮಿಗಳು “ಕಾವೇರಿ” ಗೆ ದೌಡಾಯಿಸಿ ಬೆಂಬಲ ಸೂಚಿಸಿದ್ದಾರೆ.