Saturday | April 11, 2026 |

ಕಡ್ಡಾಯ ಲಸಿಕೆ ಖಾಸಗಿತನ ಹಕ್ಕಿಗೆ ಚ್ಯುತಿ?; ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮನವಿ

ಬೆಂಗಳೂರು; ನ್ಯಾಯಾಲಯದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆರಾಕ್ಸ್‌ ಸಿಬ್ಬಂದಿ, ಜಾಬ್‌ ಟೈಪಿಸ್ಟ್‌ ಮತ್ತು ಕ್ಯಾಂಟೀನ್‌ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಪ್ರಮಾಣಪತ್ರ ಹೊಂದಿದ್ದರಷ್ಟೇ ನ್ಯಾಯಾಲಯದಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಹೊರಡಿಸಿರುವ ಆದೇಶವು ಮೂಲಭೂತ ಹಕ್ಕು ಮತ್ತು ಖಾಸಗಿತನದ ಹಕ್ಕಿಗೆ ಚ್ಯುತಿ ತಂದಂತಾಗಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಆಕ್ಷೇಪ ವ್ಯಕ್ತಪಡಿಸಿದೆ.

ಕಡ್ಡಾಯ ಮತ್ತು ಬಲವಂತದ ಲಸಿಕಾ ಪ್ರಯೋಗದ ಕುರಿತಂತೆ ಜನಾಧಿಕಾರ ಸಂಘರ್ಷ ಪರಿಷತ್‌ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌, ಕಡ್ಡಾಯ ಲಸಿಕೆಯನ್ನು ಹಾಕಿಸಿಕೊಂಡು ಮತ್ತು ಆ ಲಸಿಕೆಯ ಪ್ರಮಾಣ ಪತ್ರವನ್ನು ನೀಡಿದ ಪಕ್ಷದಲ್ಲಿ ಅವರಿಗೆ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ಹೈಕೋರ್ಟ್‌ ತಾಕೀತು ಮಾಡಿದೆ. ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯಗಳು ಸಂವಿಧಾನವನ್ನು ಸಂರಕ್ಷಿಸಲು ಸ್ಥಾಪಿತವಾದ ನ್ಯಾಯಾಲಯಗಳು. ಆದರೆ ಈ ಆದೇಶದ ಬೆಳವಣಿಗೆಯು ಸಂವಿಧಾನದಲ್ಲಿ ಕ್ರೋಢೀಕೃತವಾಗಿರುವ ಮೂಲಭೂತ ಹಕ್ಕುಗಳ ವಿರುದ್ಧವಲ್ಲವೇ ಎಂದು ಮನವಿ ಪತ್ರದಲ್ಲಿ ಪ್ರಶ್ನಿಸಿದೆ. ಈ ಮನವಿ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಕರ್ನಾಟಕ ಉಚ್ಚ ನ್ಯಾಯಾಲಯವು ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಭರದಲ್ಲಿ ಜಾರಿಗೊಳಿಸಿರುವ ಆದೇಶದ ಮೂಲಕ ಸಿಬ್ಬಂದಿಗಳ ಮೂಲಭೂತ ಹಕ್ಕುಗಳಾದ ಗೋಪ್ಯತೆ, ಗೌರವಾನ್ವಿತ ಜೀವನ (ಅನುಚ್ಚೇಧ 21), ಜೀವನೋಪಾಯದ ಕಸುಬನ್ನು ನಡೆಸುವುದು (ಅನುಚ್ಚೇಧ 19(1)(ಜಿ)) ಹಾಗೂ ಕಾನೂನಿನ ದೃಷ್ಟಿಯಲ್ಲಿ ಸಮಾನತೆ (ಅನುಚ್ಚೇಧ 14) ಇತ್ಯಾದಿಗಳನ್ನು ಉಲ್ಲಂಘಿಸಲಾಗಿದೆ,’ ಎಂದು ಮನವಿಯಲ್ಲಿ ನಿವೇದಿಸಿದೆ.

ಅಲ್ಲದೆ ಈ ಆದೇಶವು ಕೇವಲ ಸಿಬ್ಬಂದಿ ವರ್ಗದವರಿಗೆ ಮಾತ್ರ ಅನ್ವಯವಾಗಿದೆ. ವಕೀಲರಿಗೆ, ವಕೀಲರ ಸಹಾಯಕ ಸಿಬ್ಬಂದಿಗೆ, ಬೆಂಚ್ ಕ್ಲರ್ಕುಗಳಿಗೆ, ಸರ್ಕಾರಿ ಅಭಿಯೋಜಕರಿಗೆ, ಮಾಜಿಸ್ಟ್ರೇಟ್‍ಗಳಿಗೆ ಹಾಗೂ ನ್ಯಾಯಾಧೀಶರುಗಳಿಗೆ ಕಡ್ಡಾಯ ಲಸಿಕೆಯ ನಿಯಮವಿಲ್ಲದಿರುವ ಕಾರಣ ತಾರತಮ್ಯದ ಸೂಚನೆ ನೀಡಲಾಗಿದೆ,’ ಎಂದೂ ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.

ಕೊರೊನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಇತರೆ ಉಚ್ಚ ನ್ಯಾಯಾಲಯಗಳು ಸಹ ಆದೇಶಗಳನ್ನು ಜಾರಿಗೊಳಿಸಿವೆ. ಅಲಹಾಬಾದ್, ದೆಹಲಿ, ಮಹಾರಾಷ್ಟ್ರ, ಮಧ್ಯ ಪ್ರದೇಶ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯಗಳ ಆದೇಶಗಳಲ್ಲಿ ಎಲ್ಲಿಯೂ ಕಡ್ಡಾಯ ಲಸಿಕೆ ನಿಬಂಧನೆ ಮತ್ತು ಲಸಿಕೆ ಪ್ರಮಾಣಪತ್ರ ನೀಡಿರೆ ಮಾತ್ರ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂಬ ಕಟ್ಟುಪಾಡು ವಿಧಿಸಿಲ್ಲ. ವಿಶೇಷವಾಗಿ ಅಲಹಾಬಾದ್‌ ಹಾಗೂ ಮಹಾರಾಷ್ಟ್ರ ಉಚ್ಛ ನ್ಯಾಯಾಲಯಗಳು ಕೋವಿಡ್‌ ನಿಯಂತ್ರಣ ಮತ್ತು ಸುರಕ್ಷತೆ ನಿಯಮಾವಳಿಗಳನ್ನು ಪಾಲಿಸಿದ್ದ ಪಕ್ಷದಲ್ಲಿ ಬಾರ್‌ ಅಸೋಸಿಯೇಷನ್‌, ಜೆರಾಕ್ಸ್‌ ನಡೆಸುವವರು, ಜಾಬ್‌ ಟೈಪಿಸ್ಟ್‌ಗಳು ಕ್ಯಾಂಟೀನ್‌ಗಳನ್ನು ತೆರೆದಿಡಲು ಅನುಮತಿ ನೀಡಿವೆ ಎಂದು ಮನವಿಯಲ್ಲಿ ವಿವರಿಸಿದೆ.

ಕಡ್ಡಾಯ ಲಸಿಕೆ ಖಾಸಗಿತನದ ಹಕ್ಕಿಗೆ ಚ್ಯುತಿ ತರಲಿದೆಯೇ?

ಕಡ್ಡಾಯ ಲಸಿಕೆಯು ಓರ್ವ ವ್ಯಕ್ತಿಯ ಖಾಸಗಿತನದ ಹಕ್ಕಿಗೆ ಚ್ಯುತಿ ತಂದಂತೆ ಎಂದು ಮನವಿಯಲ್ಲಿ ಪ್ರತಿಪಾದಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌, ಖಾಸಗಿತನದ ಹಕ್ಕಿನ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ 9 ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಕೆ ಎಸ್ ಪುಟ್ಟಸ್ವಾಮಿ ಮತ್ತು ಇನ್ನೋರ್ವ ವಿರುದ್ಧ ಭಾರತದ ಸರ್ಕಾರ ಮತ್ತು ಇತರರು [6 (2017) 10 ಎಸ್‍ಸಿಸಿ 1] ಪ್ರಕರಣದಲ್ಲಿ ಬಹಳ ಮಹತ್ತರವಾದ ತೀರ್ಪನ್ನು ಉಲ್ಲೇಖಿಸಿದೆ.

ಸರ್ವೋಚ್ಚ ನ್ಯಾಯಾಲಯವು ಖಾಸಗಿತನದ ಹಕ್ಕು ಸಂವಿಧಾನ ಪ್ರದತ್ತವಾದ ಮೂಲಭೂತ ಹಕ್ಕುಗಳಲ್ಲಿ ಒಂದು ಹಕ್ಕು ಎನ್ನುವುದರಲ್ಲಿ ಸಂಶಯವೇ ಇಲ್ಲ ಎಂದು ಬಹಳ ಅಧಿಕಾರಯುತವಾಗಿ ಹಾಗೂ ಅಧಿಕೃತವಾಗಿ ಐತಿಹಾಸಿಕವಾದ ತೀರ್ಪನ್ನು ನೀಡಿರುವ ವಿಷಯವನ್ನು ಜನಾಧಿಕಾರ ಸಂಘರ್ಷ ಪರಿಷತ್ ವಿವರಿಸಿದೆ.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತನ್ನ ವೆಬ್ ಸೈಟಿನಲ್ಲಿ “ಸಾಮಾನ್ಯ ಪ್ರಶ್ನೆಗಳು” ವಿಭಾಗದ ಅಡಿಯ 3ನೇ ಪ್ರಶ್ನೆಯಾದ “ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯವೇ?” ಎಂಬ ಪ್ರಶ್ನೆಗೆ ಉತ್ತರವಾಗಿ “ಕೋವಿಡ್ ಲಸಿಕೆ ಸ್ವಪ್ರೇರಿತ….” ಎಂದು ಹೇಳಲಾಗಿದೆ. ಈ ಉತ್ತರದ ಮೂಲ ಹಲವಾರು ವಿಜ್ಞಾನಿಗಳ, ವೈದ್ಯರ, ಸಂಶೋಧನಾಕಾರರ ಹಾಗೂ ತಜ್ಞರ ಅಭಿಪ್ರಾಯವನ್ನು ಒಳಗೊಂಡಿದೆ ಎಂದು ಪರಿಷತ್‌ ಮನವಿಯಲ್ಲಿ ಉಲ್ಲೇಖಿಸಿದೆ.

ಕಡ್ಡಾಯ ಲಸಿಕೆಯ ಹಿನ್ನಲೆಯಲ್ಲಿ, 107 ವರ್ಷಗಳ ಮುನ್ನವೇ ನ್ಯೂಯಾರ್ಕಿನ ನ್ಯಾಯಾಧೀಶರಾದ ಕಾರ್ಡೋಜೊರವರು ಸ್ಕ್ಲೋಂಡ್ರೋಫ್ ವಿರುದ್ಧ ಸೊಸೈಟಿ ಆಫ್ ನ್ಯೂಯಾರ್ಕ್‍ನಲ್ಲಿ ನೀಡಿದ ತೀರ್ಪಿನ ಪ್ರಕಾರ ಪ್ರಾಯಸ್ಥನಾದ ಹಾಗೂ ಆರೋಗ್ಯಕರ ಬುದ್ಧಿಶಕ್ತಿಯಿರುವ ವ್ಯಕ್ತಿಯು ತನ್ನ ದೇಹದ ವಿಚಾರವಾಗಿ ಏನು ಮಾಡಬೇಕು ಎಂದು ನಿರ್ಧರಿಸುವ ಹಕ್ಕು ಸಹ ಅವನಿಗೆ ಇದೆ.

ಇಂತಹ ಸಂದರ್ಭಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳಲು ಇಷ್ಟವಿಲ್ಲದ, ಶಕ್ತನಾದ, ಪ್ರಾಯಸ್ಥ ವ್ಯಕ್ತಿಗೆ ಬಲವಂತವಾಗಿ ಅಥವಾ ಕಪಟತನದಿಂದ ಲಸಿಕೆಯನ್ನು ಕೊಡುವುದು ಅಪರಾಧವೂ ಹೌದು ಮತ್ತು ಸಿವಿಲ್ ಪ್ರಕರಣಕ್ಕೂ ಸಹ ಎಡೆ ಮಾಡಿಕೊಡುವುದು ಎಂದು ಏರ್‍ಡೇಲ್ ಎನ್‍ಎಚ್‍ಎಸ್ ಟ್ರಸ್ಟ್ ವಿರುದ್ಧ ಬ್ಲಾಂಡ್ [1993 ಎಸಿ 789 = (1993) 2 ಡಬ್ಲ್ಯೂಎಲ್‍ಆರ್ 316 = (1993) 1 ಎಎಲ್‍ಎಲ್ ಇಆರ್ 821] ಪ್ರಕರಣದಲ್ಲಿ ತೀರ್ಮಾನಿಸಲಾಗಿದೆ ಎಂಬ ವಿಷಯವನ್ನು ಮನವಿಯಲ್ಲಿ ಮಂಡಿಸಲಾಗಿದೆ.

ರೋಗ ತಡೆಗಟ್ಟುವಿಕೆಯ ಒಂದು ಕ್ರಮವಾಗಿ ಕಡ್ಡಾಯ ಅಥವಾ ಬಲವಂತದ ಲಸಿಕೆಯನ್ನು ಬಳಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರೋತ್ಸಾಹಿಸದೇ ಇರುವುದು ಅಷ್ಟೇ ಅಲ್ಲ, ನಿರಂತರವಾಗಿ ಅದರ ವಿರುದ್ಧವೂ ಸಹ ತೀರ್ಪುಗಳನ್ನು ನ್ಯಾಯಾಲಯಗಳು ನೀಡುತ್ತಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಬಲವಂತದ ಲಸಿಕಾ ಪ್ರಯೋಗದಿಂದ ಆ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಪ್ರತಿಪಾದಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌ ಈ ಸಂಬಂಧ ಯೂರೋಪಿಯನ್ ಕಮೀಷನ್ ಮತ್ತು ಮಾನವ ಹಕ್ಕುಗಳ ನ್ಯಾಯಾಲಯದ ಎಕ್ಸ್ ವಿರುದ್ಧ ನೆದರ್ಲಾಂಡ್ಸ್ (ತೀರ್ಪಿನ ದಿನಾಂಕ: 04/12/1978) ಹಾಗೂ ಎಕ್ಸ್ ವಿರುದ್ಧ ಆಸ್ಟ್ರಿಯಾ (ತೀರ್ಪಿನ ದಿನಾಂಕ: 13/12/1979) ಪ್ರಕರಣವನ್ನು ಉದಾಹರಿಸಿದೆ.

ತಿಳಿವಳಿಕೆಯುಳ್ಳ ಆಯ್ಕೆ ಮತ್ತು ತಿಳಿವಳಿಕೆಯುಳ್ಳ ಒಪ್ಪಿಗೆಯ ಮೂಲಕ ಕಡ್ಡಾಯ ಲಸಿಕೆಯು ಮೂಲಭೂತ ಹಕ್ಕುಗಳಾದ ಜೀವನ ಹಾಗೂ ಸ್ವಾತಂತ್ರ್ಯಗಳಿಗೆ ಅಡ್ಡಿಪಡಿಸದೇ ಇರುವುದು ಒಂದು ವಿಷಯವಾದರೆ ಮತ್ತೊಂದು ಕಡೆ ಬಲವಂತದ ಲಸಿಕೆಯ ಲಕ್ಷಣಗಳು ಹಾಗೂ ಸ್ಪೂರ್ತಿಯೂ ಸಹ ದಬ್ಬಾಳಿಕೆಯಿಂದ ಕೂಡಿದ್ದು ಅದರ ಪ್ರಮಾಣವು ಹಾಗೂ ಪಾತ್ರವು ಬಹಳ ಭಯಾನಕವಾಗಿರುತ್ತದೆ ಎಂದು ಮನವಿ ಪತ್ರದಲ್ಲಿ ಹೇಳಿದೆ.

ಜನಸಾಮಾನ್ಯರಿಗೆ ಹಿತವನ್ನು ಮಾಡಬೇಕೆಂಬ ಸರ್ಕಾರಗಳು ಸಾರ್ವಜನಿಕ ಹಿತದೃಷ್ಟಿ ಎಂಬ ಸೋಗಿನಲ್ಲಿ ದಬ್ಬಾಳಿಕೆಯಿಂದ ಕೂಡಿದ ನಕಾರಾತ್ಮಕ ನಡಾವಳಿಗಳನ್ನು ಜಾರಿಗೊಳಿಸಿ ಜೀವನೋಪಾಯದ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ.

ಅಲ್ಲದೆ ತಮ್ಮ ಜೀವನೋಪಾಯದ ಕಸುಬಿನಿಂದ ದುಡಿಯುವುದನ್ನು ತಡೆಯುವುದು ಬಿಟ್ಟು ಅನುಚ್ಚೇಧ 38ರ ಪ್ರಕಾರ ನಡೆದುಕೊಂಡು ಜನಸಾಮಾನ್ಯರ ಜೊತೆ ಮುಖಾಮುಖಿಯಾಗಿ ಸಂವಾದಿಸಿ ಲಸಿಕೆಗಳ ಸಕಾರಾತ್ಮಕ ವಿಷಯಗಳು ಹಾಗೂ ಅದರ ಸಾಮರ್ಥ್ಯತೆಯ ಬಗ್ಗೆ ತಿಳಿಸಿದ್ದಲ್ಲಿ ಅನುಚ್ಚೇಧ 47ರಲ್ಲಿ ತಿಳಿಸಿರುವಂತೆ ಸರ್ಕಾರಗಳ ಕರ್ತವ್ಯಗಳನ್ನು ಹಾಗೂ ಅನುಚ್ಚೇಧ 39(ಎ)ನಲ್ಲಿ ನಮೂದಿಸಿರುವ ತಕ್ಕಷ್ಟು ಮಟ್ಟಿಗೆ ಜೀವನೋಪಾಯವನ್ನು ಕಾಪಾಡುವ ದಾರಿಯನ್ನು ಕಾಯುವ ಸರ್ಕಾರಗಳ ಕರ್ತವ್ಯಗಳನ್ನು ಕಾಪಾಡಿದಂತಾಗುತ್ತದೆ ಎಂದು ಪರಿಷತ್‌ ಗಮನ ಸೆಳೆದಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಈ ಆದೇಶವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದರಿಂದ ಆದೇಶದ ವಿರುದ್ಧ ಮಾನ್ಯ ಸವೋಚ್ಚ ನ್ಯಾಯಾಲಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜನಾಧಿಕಾರ ಸಂಘರ್ಷ ಪರಿಷತ್ ಆಗ್ರಹಿಸಿದೆ.

Hot this week

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

ತರಕಾರಿ ಬೀಜಗಳ ಕಿಟ್ ವಿತರಣೆ; ದಾಸ್ತಾನು ಇಲ್ಲದ ಏಜೆನ್ಸಿಗೆ 4 ಜಿ ವಿನಾಯಿತಿ, ಬಹುಕೋಟಿ ಅಕ್ರಮ, ಭ್ರಷ್ಟಾಚಾರ ಸುಳಿಯಲ್ಲಿ ಸರ್ಕಾರ?

ಬೆಂಗಳೂರು; 2023-24 ಮತ್ತು 2025-26ನೇ ಸಾಲಿನವರೆಗೆ  ತೋಟಗಾರಿಕೆ ಇಲಾಖೆಯು ಜಾರಿಗೊಳಿಸಿದ್ದ  ...

Topics

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ...

ಪುಸ್ತಕಗಳ ಖರೀದಿಯಲ್ಲಿ ವಂಚನೆ, ಭ್ರಷ್ಟಾಚಾರ ಆರೋಪ;ಎಚ್ ಟಿ ಪೋತೆ ಅವರ ವಿರುದ್ಧ ಕ್ರಮಕ್ಕೆ ಮೀನಮೇಷ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ...

Related Articles

Popular Categories

error: Content is protected !!