ಸರ್ಕಾರಿ ಉದ್ಯೋಗ ಕಸಿದ ಇ-ಆಫೀಸ್‌; ಸಚಿವಾಲಯವೊಂದರಲ್ಲೇ 378 ಹುದ್ದೆಗಳಿಗೆ ಕೊಕ್‌?

ಬೆಂಗಳೂರು; ಸಚಿವಾಲಯವೂ ಸೇರಿದಂತೆ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಜಾರಿಗೊಳಿಸಿರುವ ಇ-ಆಫೀಸ್‌ ವ್ಯವಸ್ಥೆಯು ಸರ್ಕಾರಿ ಉದ್ಯೋಗಗಳನ್ನು ಕಸಿದುಕೊಳ್ಳಲಾರಂಭಿಸಿದೆ. ಸರ್ಕಾರಿ ಕಚೇರಿಗಳನ್ನು ಕಾಗದ ರಹಿತ ಕಚೇರಿಗಳನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಜಾರಿಗೊಂಡಿರುವ ಇ-ಆಫೀಸ್‌ ವ್ಯವಸ್ಥೆಯು ಅಧಿಕಾರಿ, ನೌಕರರ ಕೆಲಸದ ಒತ್ತಡ ಕಡಿಮೆಯಾಗುತ್ತಿರುವುದನ್ನೇ ನೆಪವಾಗಿರಿಸಿಕೊಂಡು ಸಚಿವಾಲಯ ಸೇರಿದಂತೆ ಹಂತ ಹಂತವಾಗಿ ಸರ್ಕಾರದ ಇತರೆ ಇಲಾಖೆಗಳಲ್ಲಿ ನೂರಾರು ಹುದ್ದೆಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ.

ಸರ್ಕಾರದ ವಿವಿಧ ಇಲಾಖೆ/ಕಚೇರಿಗಳ ವಿಲೀನ, ರದ್ದುಗೊಳಿಸುವುದು, ಮಂಜೂರಾಗಿರುವ ವಿವಿಧ ವೃಂದಗಳ ವೃಂದ ಬಲದ ವೈಜ್ಞಾನಿಕ ಪರಿಷ್ಕರಣೆ, ಹುದ್ದೆಗಳ ರದ್ಧತಿ, ಮರು ವಿನ್ಯಾಸ, 6ನೇ ರಾಜ್ಯ ವೇತನ ಆಯೋಗವು ಮಾಡಿರುವ ಶಿಫಾರಸ್ಸುಗಳ ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸ್ಸು ಮಾಡಲು ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯು ಕೆಲಸದ ಒತ್ತಡ ಕಡಿಮೆ ಇರುವ ಸರ್ಕಾರಿ ಕಚೇರಿಗಳಲ್ಲಿನ ಹುದ್ದೆಗಳನ್ನು ರದ್ದಗೊಳಿಸಲು ಶಿಫಾರಸ್ಸು ಮಾಡಿದೆ.

ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ಹಾಗೂ ಸಚಿವ ಆರ್‌ ಅಶೋಕ್‌ ಅಧ್ಯಕ್ಷತೆಯಲ್ಲಿ 2021ರ ಜುಲೈ 15ರಂದು ನಡೆದಿರುವ ಸಭೆಯು ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಸಹಾಯಕರ ಹುದ್ದೆಗಳ ಸಂಖ್ಯೆಯಲ್ಲಿ ಕಡಿತಗೊಳಿಸುವುದು ಸೇರಿದಂತೆ ಹಲವು ಶಿಫಾರಸ್ಸು ಮಾಡಿದೆ. ಸಭೆಯ ನಡವಳಿಗಳ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಚಿವಾಲಯದ 378 ಹುದ್ದೆಗಳಿಗೆ ಕೊಕ್‌?

ಸಚಿವಾಲಯದಲ್ಲಿ ಇ-ಆಫೀಸ್‌ ವ್ಯವಸ್ಥೆಯು ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಹೀಗಿರುವಾಗ ಸಂಪುಟ ಉಪ ಸಮಿತಿಯು 542 ಕಿರಿಯ ಸಹಾಯಕರಿಗೆ ಕೆಲಸದ ಒತ್ತಡ ಕಡಿಮೆಯಾಗಿದೆ ಎಂದು ವಿಶ್ಲೇಷಿಸಿದೆ. ಹೀಗಾಗಿ 542 ಹುದ್ದೆಗಳಲ್ಲಿ 164 ಕಾರ್ಯನಿರತ ಹುದ್ದೆಗಳನ್ನಷ್ಟೇ ಮುಂದುವರೆಸಿ ಕೆಲಸದ ಒತ್ತಡವೇ ಇಲ್ಲದ 378 ಹುದ್ದೆಗಳನ್ನು ರದ್ದುಪಡಿಸಲು ಸಮಿತಿಯು ಶಿಫಾರಸ್ಸು ಮಾಡಿರುವುದು ನಡವಳಿಯಿಂದ ತಿಳಿದು ಬಂದಿದೆ.

ವಿಶ್ವವಿದ್ಯಾಲಯಗಳಲ್ಲೂ ಉದ್ಯೋಗಕ್ಕೆ ಕತ್ತರಿ!

ಉನ್ನತ ಶಿಕ್ಷಣ ಉತ್ತಮಗೊಳಿಸುವುದು ಮತ್ತು ವಿಶ್ವವಿದ್ಯಾಲಯಗಳ ಆಡಳಿತಕ್ಕೆ ಚುರುಕಿನ ವೇಗ ನೀಡಿ ಪಾರದರ್ಶಕಗೊಳಿಸುವ ಇ-ಆಫೀಸ್‌ ವ್ಯವಸ್ಥೆಯನ್ನು ಜಾರಿಗೊಳಿಸಲು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ಕುಲಪತಿ, ರಿಜಿಸ್ಟ್ರಾರ್‌ಗಳಿಗೆ ಸೂಚನೆ ನೀಡಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಇ-ಅಫೀಸ್‌ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಗೊಂಡಲ್ಲಿ ಸಚಿವಾಲಯದಲ್ಲಿ ಹುದ್ದೆಗಳನ್ನು ಕಡಿತಗೊಳಿಸಲು ಮುಂದಾಗಿರುವಂತೆಯೇ ವಿಶ್ವವಿದ್ಯಾಲಯಗಳಲ್ಲಿ ಕೆಲಸದ ಒತ್ತಡ ಕಡಿಮೆಯಾಗಬಹುದಾದ ಹುದ್ದೆಗಳನ್ನೂ ರದ್ದುಗೊಳಿಸಬಹುದು ಎನ್ನಲಾಗಿದೆ.

ಪ್ರಾದೇಶಿಕ ಆಯುಕ್ತರುಗಳಿಗೆ ಚುನಾವಣಾ ಕಾರ್ಯಕ್ಕೆ ನಿಯೋಜನೆ

ಪ್ರಾದೇಶಿಕ ಆಯುಕ್ತರ ಹುದ್ದೆಗಳನ್ನು ರದ್ದುಗೊಳಿಸಬೇಕು ಎಂದ ಕರ್ನಾಟಕ ಆಡಳಿತ ಸುಧಾರಣೆ ಆಯೋಗ-2 ಮಾಡಿದ್ದ ಶಿಫಾರಸ್ಸನ್ನು ಸಚಿವ ಸಂಪುಟ ಉಪ ಸಮಿತಿಯು ಒಪ್ಪಿಕೊಂಡಿದೆ. ಅಲ್ಲದೆ 4 ಪ್ರಾದೇಶಿಕ ವಿಭಾಗಳಲ್ಲಿ (ಕಲ್ಬುರ್ಗಿ, ಮೈಸೂರು, ಬೆಳಗಾವಿ ಮತ್ತು ಬೆಂಗಳೂರು) ಲಭ್ಯ ಇರುವ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ಚುನಾವಣೆ ಮತ್ತು ಇತರೆ ಕಾರ್ಯಗಳಿಗೆ ನೇಮಿಸಬೇಕು ಎಂದು ಉಪ ಸಮಿತಿಯು ಸೂಚಿಸಿರುವುದು ನಡವಳಿಯಿಂದ ಗೊತ್ತಾಗಿದೆ.

ರಾಜ್ಯ ಮಟ್ಟದ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಕಚೇರಿ, ಎಲ್ಲಾ ಪ್ರಾದೇಶಿಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್, ಪೋಲಿಸ್ ವರಿಷ್ಠಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ)ಗಳ ಕಚೇರಿಗಳಲ್ಲಿಯೂ ” ಇ – ಆಫೀಸ್ ” ಅನ್ನು ಜಾರಿಗೆ ತರಲಾಗಿದೆ.

the fil favicon

SUPPORT THE FILE

Latest News

Related Posts