ಸಿ ಎಂ ಕಚೇರಿಯಲ್ಲಿ ಅನಧಿಕೃತ ಕೆಲಸ; ಸಾಕ್ಷ್ಯಾಧಾರಗಳಿದ್ದರೂ ದೂರರ್ಜಿ ಮುಕ್ತಾಯ

ಬೆಂಗಳೂರು: ನಿಯೋಜನೆಯ ಸರ್ಕಾರಿ ಆದೇಶವಿಲ್ಲದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯದರ್ಶಿ ಹಿರಿಯ ಐಎಫ್‌ಎಸ್‌ ಅಧಿಕಾರಿ ಗಿರೀಶ್‌ ಹೊಸೂರ್‌ ಅವರ ಕಚೇರಿಯಲ್ಲಿ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎಂ ಪಿ ಪ್ರಶಾಂತ್‌ ಕುಮಾರ್‌ ಅವರು ಅನಧಿಕೃತವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಾಕ್ಷ್ಯಾಧಾರಗಳ ಸಮೇತ ಸಲ್ಲಿಕೆಯಾಗಿದ್ದ ದೂರರ್ಜಿಯನ್ನು ವಿಧಾನಸೌಧ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅವರು ಏಕಾಏಕೀ ಮುಕ್ತಾಯಗೊಳಿಸಿದ್ದಾರೆ.

ಗಂಭೀರ ಆರೋಪಕ್ಕೆ ಗುರಿಯಾಗಿರುವ ಪ್ರಶಾಂತ್‌ಕುಮಾರ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ ವಿವಿಧ ಕಲಂಗಳಡಿಯಲ್ಲಿ ಸಲ್ಲಿಕೆಯಾಗಿದ್ದ ದೂರರ್ಜಿಯನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಅವರ ಒತ್ತಡಕ್ಕೆ ಮಣಿದು ವಿಧಾನಸೌಧ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅವರು ದೂರರ್ಜಿಯನ್ನು ಕ್ರಮಬದ್ಧವಾಗಿ ವಿಚಾರಣೆ ನಡೆಸಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ದೂರರ್ಜಿ ಮುಕ್ತಾಯಗೊಳಿಸಿರುವ ಬಗ್ಗೆ ದೂರುದಾರ ಭೀಮನಗೌಡ ಪರಗೊಂಡ ಅವರಿಗೆ 2021ರ ಜುಲೈ 10ರಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರು ಹಿಂಬರಹ ನೀಡಿದ್ದಾರೆ. ಈ ಹಿಂಬರಹದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಹಿಂಬರಹದಲ್ಲೇನಿದೆ?

‘ಎಂ ಪಿ ಪ್ರಶಾಂತ್‌ಕುಮಾರ್‌ ಅವರನ್ನು ಮುಖ್ಯಮಂತ್ರಿಗಳ ಕಚೇರಿಯ ಆಪ್ತ ಕಾರ್ಯದರ್ಶಿಯವರ ಕಚೇರಿಯಲ್ಲಿ ತಾತ್ಕಾಲಿಕವಾಗಿ ಮುಂದುವರೆಸುವ ಸಂಬಂಧ ಸಭಾಧ್ಯಕ್ಷರ ಜತೆ ಮತ್ತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮೌಖಿಕವಾಗಿ ಸಹಮತಿ ಪಡೆಯಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಪ್ರಸ್ತುತ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದದ್ದರಿಂದ ಕಚೇರಿಯ ಕಾರ್ಯಕಲಾಪ ನಿರ್ವಹಣೆ ಸುಗಮವಾಗಿ ನಡೆಸುವ ದೃಷ್ಟಿಯಿಂದ ಇವರ ಸೇವೆಯನ್ನು ಅಗತ್ಯಾನುಸಾರ ಬಳಸಿಕೊಳ್ಳಲಾಗಿದೆ. ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿಗಳ ಕಚೇರಿಯ ಕಾರ್ಯದರ್ಶಿಯವರ ಅಧೀನ ಕಾರ್ಯದರ್ಶಿಯಾಗಿ ಕಾನೂನುಬಾಹಿರವಾಗಿ ಕೆಲಸವನ್ನು ನಿರ್ವಹಿಸಿರುವುದು ಕಂಡು ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರಾದ್ದರಿಂದ ಈ ದೂರರ್ಜಿಯನ್ನು ಮುಕ್ತಾಯ ಮಾಡಲಾಗಿದೆ,’ ಎಂದು ದೂರುದಾರ ವಕೀಲರಿಗೆ ಹಿಂಬರಹ ನೀಡಲಾಗಿದೆ.

ಮೌಖಿಕ ಸಹಮತಿಗೆ ಕಾನೂನು ಸಮ್ಮತಿ ಇದೆಯೇ?

ಮುಖ್ಯಮಂತ್ರಿ ಸಚಿವಾಲಯ ಮತ್ತು ಅವರ ಕಚೇರಿ, ಸಚಿವರ ಕಚೇರಿ ಸೇರಿದಂತೆ ಸರ್ಕಾರದ ಇಲಾಖೆಗಳ ಕಚೇರಿಗಳಿಗೆ ಅನ್ಯ ಕಾರ್ಯನಿಮಿತ್ತ ಅಥವಾ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸಲು ಸಕ್ಷಮ ನೇಮಕ ಪ್ರಾಧಿಕಾರ ಅಥವಾ ಇಲಾಖಾ ಮುಖ್ಯಸ್ಥರು ಸರ್ಕಾರಿ ಆದೇಶ ಹೊರಡಿಸಬೇಕು. ಅಥವಾ ಘಟನೋತ್ತರವಾಗಿಯಾದರೂ ಆದೇಶ ಹೊರಡಿಸಬೇಕು. ಆದರೆ ಪ್ರಶಾಂತ್‌ಕುಮಾರ್‌ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ವಿಧಾನಸಭೆ ಸಭಾಧ್ಯಕ್ಷರು ಅನುಮತಿ ನೀಡಿಲ್ಲ ಮತ್ತು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯೂ ನಿಯೋಜನೆ ಆದೇಶವನ್ನೂ ಹೊರಡಿಸಿಲ್ಲ. ಸರ್ಕಾರಿ ಆದೇಶವಿಲ್ಲದೇ ಕೇವಲ ಮೌಖಿಕ ಸಹಮತಿ ಮೇರೆಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಕಾನೂನಿನ ಸಹಮತಿ ಇರುವುದಿಲ್ಲ ಎಂಬ ಅಭಿಪ್ರಾಯ ಕಾನೂನು ತಜ್ಞರ ವಲಯದಲ್ಲಿ ವ್ಯಕ್ತವಾಗಿದೆ.

ಟಿಪ್ಪಣಿ ಆಧರಿಸಿ ಆದೇಶವೇ ಹೊರಡಿಸಿಲ್ಲ

ವಿಧಾನಸಭೆ ಸಚಿವಾಲಯದ ಶಾಖಾಧಿಕಾರಿ ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಅವರ ಕಚೇರಿಯ ಆಪ್ತಶಾಖೆಗೆ 2019ರ ಸೆಪ್ಟಂಬರ್‌ 23ರಂದು ನಿಯೋಜನೆಗೊಂಡು ಕಾರ್ಯನಿರ್ವಹಿಸಿದ್ದರು. ಪ್ರಶಾಂತ್‌ಕುಮಾರ್‌ ಅವರು 2020ರ ಜೂನ್‌ 1ರಂದು ಶಾಖಾಧಿಕಾರಿ ಹುದ್ದೆಯಿಂದ ಅಧೀನ ಕಾರ್ಯದರ್ಶಿಯಾಗಿ ಹುದ್ದೆಗೆ ಬಡ್ತಿ ಹೊಂದಿದ್ದರು. ಬಡ್ತಿ ಹೊಂದಿದ್ದ ಹುದ್ದೆಯಲ್ಲಿ ಕಾರ್ಯಭಾರ ವಹಿಸಿಕೊಂಡಿದ್ದ ಪ್ರಶಾಂತ್‌ ಅವರು ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧೀನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಇವರನ್ನು ಅನ್ಯ ಸೇವೆ ಆಧಾರದ ಮೇಲೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಪ್ತಶಾಖೆಯಲ್ಲಿ ಮುಂದುವರೆಸಲು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗೆ ಟಿಪ್ಪಣಿ ನೀಡಲಾಗಿತ್ತು.

ಆದರೆ ಈ ಟಿಪ್ಪಣಿ ಆಧರಿಸಿ ವಿಧಾನಸಭೆ ಸಚಿವಾಲಯವು ಸರ್ಕಾರಿ ಆದೇಶವನ್ನು ಹೊರಡಿಸಿರಲಿಲ್ಲ. ಆದರೂ ಪ್ರಶಾಂತ್‌ಕುಮಾರ್‌ ಅವರು ಸಚಿವಾಲಯದಿಂದ ನಿಯೋಜನೆ ಆದೇಶವಿಲ್ಲದೆಯೇ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್‌ ಹೊಸೂರ್‌ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದರು. ಸರ್ಕಾರಿ ಆದೇಶವಿಲ್ಲದೆಯೇ ಅನಧಿಕೃತವಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿದ್ದರೂ ವಿಧಾನಸೌಧ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅವರು ಪ್ರಕರಣವನ್ನು ಮುಕ್ತಾಯಗೊಳಿಸಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ನಾನು ರಿಜಿಸ್ಟರ್ ಪೋಸ್ಟ್ ಮೂಲಕ ನೀಡಿದ ದೂರಿನ ಅನ್ವಯ, ಬೆಂಗಳೂರು ಮಹಾನಗರದ ವಿಧಾನಸೌಧ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್‌ಪೆಕ್ಟರ್ ಅವರು ಉದ್ದೇಶಪೂರ್ವಕವಾಗಿ ಆಪಾದಿತನನ್ನು ರಕ್ಷಿಸಲು ನನ್ನ ದೂರನ್ನು ವಿಲೇ ಮಾಡಿ ಹಿಂಬರಹ ನೀಡಿದ್ದಾರೆ. ಸಭಾಧ್ಯಕ್ಷರ ಜೊತೆ ಮುಖ್ಯಮಂತ್ರಿ ಗಳ ಜೊತೆ ಮೌಖಿಕವಾಗಿ ಚರ್ಚೆ ಮಾಡಲಾಗಿ ಸಹಮತಿಯನ್ನು ಪಡೆಯಲಾಗಿದೆ ಎಂದು ಹೇಳಿರುವುದಕ್ಕೆ ನನ್ನ ಆಕ್ಷೇಪಣೆ ಇದೆ. ಇದು ಕಾನೂನಿನ ದೃಷ್ಟಿಯಲ್ಲಿ ಸಿಂಧುವಲ್ಲ ಮತ್ತು ಇದಕ್ಕೆ ಮಾನ್ಯತೆಯಿಲ್ಲ. ಜೊತೆಗೆ ನನ್ನ ಹೇಳಿಕೆ ದಾಖಲಿಸಿಕೊಳ್ಳದೇ ನನ್ನ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೇ ದೂರನ್ನು ವಿಲೇ ಮಾಡಲಾಗಿದೆ. ಇವರ ವಿರುದ್ಧ ಶೀಘ್ರ ಕಾನೂನು ಹೋರಾಟ ಆರಂಭಿಸುತ್ತೇನೆ.

ಭೀಮನಗೌಡ ಪರಗೊಂಡ, ದೂರುದಾರ

ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುವ ಮೂಲಕ ಐಪಿಸಿ 120(ಬಿ), 166, 170,177, 182, 199, 202, 203, 406, 408, 409, 468, 477 ಸಹ ಕಲಂ 34 ಅಡಿಯಲ್ಲಿ ಗಂಭೀರವಾದ ಅಪರಾಧ ಎಸಗಿದ್ದಾರೆ. ಆರೋಪಿತರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಬೇಕು. ಕರ್ನಾಟಕ ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಬೇಕಾಯ್ದೆ ಶೀರ ರೀತಿಯಿಂದ ಅಧಿಕಾರ ಚಲಾಯಿಸಿ ಕಾರ್ಯಾಲಯ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಬೇಕು,’ ಎಂದು ದೂರು ನೀಡಿದ್ದನ್ನು ಸ್ಮರಿಸಬಹುದು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯದರ್ಶಿ ಹಿರಿಯ ಐಎಫ್‌ಎಸ್‌ ಅಧಿಕಾರಿ ಗಿರೀಶ್‌ ಸಿ ಹೊಸೂರ್‌ ಅವರ ಕಚೇರಿಯಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಅನಧಿಕೃತವಾಗಿ ಕಾರ್ಯನಿರ್ವಹಿಸಿದ್ದ ಗಂಭೀರ ಪ್ರಕರಣ ಸಂಬಂಧ ದೂರು ಸಲ್ಲಿಕೆಯಾಗಿ ಹಲವು ದಿನಗಳು ಕಳೆದರೂ ವಿಧಾನಸಭೆ ಸಭಾಧ್ಯಕ್ಷರು, ಸಚಿವಾಲಯದ ಕಾರ್ಯದರ್ಶಿ ಅವರು ಇದುವರೆಗೂ ಕ್ರಮಕೈಗೊಳ್ಳದಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ.

ಪ್ರಶಾಂತ್‌ಕುಮಾರ್‌ ಅವರು ಅನ್ಯ ಕರ್ತವ್ಯ ಮತ್ತು ನಿಯೋಜನೆ ಮೇಲೆ ತೆರಳಿರುವುದಿಲ್ಲಎಂದು ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಬಿ ಎಂ ಶಂಭು ಅವರು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದ್ದರು. ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್‌ ಎಸ್‌ ಹೊಸೂರ್‌ ಅವರ ಕಚೇರಿಗೆ ಅನ್ಯ ಕರ್ತವ್ಯ/ ನಿಯೋಜನೆ ಮೇಲೆ ತೆರಳದಿದ್ದರೂ ಅದೇ ಕಚೇರಿಯಲ್ಲಿ ಕಾರ್ಯನಿರ್ವಹಿಸಿರುವುದು ಮತ್ತು ಅವರ ಆಪ್ತ ಕಾರ್ಯದರ್ಶಿ ಎಂದು ಸಹಿ ಮಾಡಿ ಟಿಪ್ಪಣಿಗಳನ್ನು ಹೊರಡಿಸಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.

ಮುಖ್ಯಮಂತ್ರಿ ಕಾರ್ಯದರ್ಶಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಾಜರಾತಿ ದೃಢೀಕರಣ, ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಸರ್ಕಾರಿ ವಸತಿಗೃಹಗಳಲ್ಲಿ ಕೊಠಡಿ ಕಾಯ್ದಿರಿಸುವುದು ಮತ್ತು ಅನ್ಯ ಕರ್ತವ್ಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಇತರೆ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರಕ್ಕೆ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿಯೇ ಸಹಿ ಮಾಡಿ ದೃಢೀಕರಿಸಿದ್ದಾರೆ. ಅಲ್ಲದೆ ಪ್ರಶಾಂತ್‌ಕುಮಾರ್‌ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯ ರವಾನೆ ಪುಸ್ತಕದಲ್ಲಿ ಒಎಸ್‌ಡಿ ಎಂದೇ ಸಹಿ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿತ್ತು.

the fil favicon

SUPPORT THE FILE

Latest News

Related Posts