ಲೋಕಾಯುಕ್ತರ ಆಸ್ತಿ ವಿವರ; ಕಾಯ್ದೆ ತಿದ್ದುಪಡಿಗೆ ಸರ್ಕಾರದ ಮೆಟ್ಟಿಲೇರಿದ ಪರಿಷತ್‌ ಮಾಜಿ ಸದಸ್ಯ

ಬೆಂಗಳೂರು; ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 22ರಲ್ಲಿ ಲೋಕಾಯುಕ್ತರು ಆಸ್ತಿ ವಿವರ ಸಲ್ಲಿಸುವ ಸಂಬಂಧ ಏನನ್ನೂ ಹೇಳಿಲ್ಲ ಎಂಬುದನ್ನೇ ಮುಂದಿರಿಸಿಕೊಂಡು ಆಸ್ತಿ ವಿವರ ಸಲ್ಲಿಸದೇ ನುಣುಚಿಕೊಂಡಿದ್ದ ಲೋಕಾಯುಕ್ತರು ಸಹ ಪ್ರತಿ ವರ್ಷ ಆಸ್ತಿ ಮತ್ತು ದಾಯಿತ್ವ(ಸಾಲಸೋಲ ಕೊಡಬೇಕಾದ ಬಾಧ‍್ಯತೆ) ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಇದೀಗ ವಿಧಾನಪರಿಷತ್‌ ಮಾಜಿ ಸದಸ್ಯ ರಮೇಶ್‌ಬಾಬು ಅವರು ಕಾನೂನು, ಸಂಸದೀಯ ಇಲಾಖೆಯ ಮೆಟ್ಟಿಲೇರಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಲವು ಬಾರಿ ತಿದ್ದುಪಡಿಗೆ ಒಳಗಾಗುತ್ತಿದೆಯಾದರೂ ಲೋಕಾಯುಕ್ತರು, ಉಪ ಲೋಕಾಯುಕ್ತರು ಕೂಡ ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸುವ ಸಂಬಂಧ ಕಾಯ್ದೆಗೆ ತಿದ್ದುಪಡಿ ತರುವ ಧೈರ್ಯವನ್ನು ಯಾವೊಬ್ಬ ಶಾಸಕರೂ ತೋರಿರಲಿಲ್ಲ. ಇದೀಗ ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರು ಈ ನಿಟ್ಟಿನಲ್ಲಿ ಮುಂದುವರೆದಿದ್ದಾರಲ್ಲದೆ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾನೂನು, ಸಂಸದೀಯ ಸಚಿವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.

‘ಲೋಕಾಯುಕ್ತದ ಪ್ರಮುಖರು ಆಸ್ತಿ ವಿವರ ನೀಡದೇ ಇರುವುದು ತಪ್ಪು ಸಂಪ್ರದಾಯಕ್ಕೆ ಕಾರಣವಾಗಿದ್ದು, ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಅನಿವಾರ್ಯವಾಗಿರುತ್ತದೆ. ಲೋಕಾಯುಕ್ತ ಪ್ರಮುಖರೇ ಆಸ್ತಿ ವಿವರಗಳನ್ನು ಪ್ರತಿ ವರ್ಷ ಬಹಿರಂಗ ಮಾಡದೇ ಹೋದರೆ ಸಾರ್ವಜನಿಕವಾಗಿ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ. ಹೀಗಾಗಿ ಸಂಸದೀಯ ಮತ್ತು ಕಾನೂನು ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಕರ್ನಾಟಕ ಲೋಕಾಯುಕ್ತ ಕಾಯಿದೆಗೆ ಸೂಕ್ತ ತಿದ್ದುಪಡಿ ಮಾಡಿ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುವ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತೀ ವರ್ಷ ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಪ್ರಕಟಿಸಲು ಕ್ರಮಕೈಗೊಳ್ಳಬೇಕು,’ ಎಂದು 2021ರ ಜುಲೈ 12ರಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

ಮುಖ್ಯಮಂತ್ರಿಯೂ ಸೇರಿದಂತೆ ವಿಧಾನಸಭೆ, ವಿಧಾನಪರಿಷತ್‌, ಮಹಾನಗರಪಾಲಿಕೆ, ಜಿಲ್ಲಾ ಪಂಚಾಯ್ತಿ ಸದಸ್ಯರು, ರಾಜ್ಯ ಸರ್ಕಾರದ ಸೇವೆಯಲ್ಲಿರುವ ಡಿ ಗ್ರೂಪ್‌ ನೌಕರರೂ ಆಯಾ ವರ್ಷದ ಆಸ್ತಿ ಮತ್ತು ದಾಯಿತ್ವ(ಸಾಲಸೋಲ ಕೊಡಬೇಕಾದ ಬಾಧ‍್ಯತೆ) ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆಜ್ಞೆ ಹೊರಡಿಸುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರು  ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಹಲವು ವರ್ಷಗಳಿಂದಲೂ ಸಲ್ಲಿಸದೇ ನುಣುಚಿಕೊಳ್ಳುತ್ತಿದ್ದರ ಬಗ್ಗೆ ‘ದಿ ಫೈಲ್‌’  2020ರ ಅಕ್ಟೋಬರ್‌ 21ರಂದು ಪ್ರಕಟಿಸಿದ್ದ ವರದಿಯನ್ನು ಇದೀಗ ರಮೇಶ್‌ ಬಾಬು ಅವರು ವಿಸ್ತರಿಸಿದ್ದಾರೆ.

ಶಾಸಕರ ಆಸ್ತಿ ವಿವರ ಕೇಳುವ ಲೋಕಾಯುಕ್ತರೇ ಆಸ್ತಿ ವಿವರ ಸಲ್ಲಿಸಲ್ಲ

ನುಣುಚಿಕೊಂಡಿದ್ದ ಲೋಕಾಯುಕ್ತ ವಿಶ್ವನಾಥ ಶೆಟ್ಟಿ

ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರು ಸ್ಥಿರ ಮತ್ತು ಚರಾಸ್ತಿಗಳ ವಿವರಗಳನ್ನು ಸಲ್ಲಿಸಲು ಹಿಂದೇಟು ಹಾಕಿದ್ದರು. ‘ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 22ರಲ್ಲಿ ಸಾರ್ವಜನಿಕರು/ಚುನಾಯಿತ ಪ್ರತಿನಿಧಿಗಳು ಮಾತ್ರ ಲೋಕಾಯುಕ್ತ ಸಂಸ್ಥೆಗೆ ಪ್ರತಿ ವರ್ಷ ಆಸ್ತಿಮತ್ತು ದಾಯಿತ್ವ ಪಟ್ಟಿಯನ್ನು ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸುತ್ತದೆ. ಈ ಕಾಯ್ದೆ ಅಥವಾ ಯಾವುದೇ ಕಾಯ್ದೆಯ ಅಡಿಯಲ್ಲಿ ಗೌರವಾನ್ವಿತ ಲೋಕಾಯುಕ್ತರು/ಉಪ ಲೋಕಾಯುಕ್ತರು ಆಸ್ತಿ ವಿವರಗಳನ್ನು ಸಲ್ಲಿಸಬೇಕು ಎಂದು ಹೇಳಿರುವುದಿಲ್ಲ,’ ಎಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದನ್ನು ಸ್ಮರಿಸಬಹುದು.

ಮುಖ್ಯಮಂತ್ರಿಯೂ ಸೇರಿದಂತೆ ವಿಧಾನಸಭೆ, ವಿಧಾನಪರಿಷತ್‌, ಮಹಾನಗರಪಾಲಿಕೆ, ಜಿಲ್ಲಾ ಪಂಚಾಯ್ತಿ ಸದಸ್ಯರು, ರಾಜ್ಯ ಸರ್ಕಾರದ ಸೇವೆಯಲ್ಲಿರುವ ಡಿ ಗ್ರೂಪ್‌ ನೌಕರರೂ ಆಯಾ ವರ್ಷದ ಆಸ್ತಿ ಮತ್ತು ದಾಯಿತ್ವ(ಸಾಲಸೋಲ ಕೊಡಬೇಕಾದ ಬಾಧ‍್ಯತೆ) ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆಜ್ಞೆ ಹೊರಡಿಸುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರು  ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಹಲವು ವರ್ಷಗಳಿಂದಲೂ ಸಲ್ಲಿಸದಿದ್ದಕ್ಕೆ ಸಾರ್ವಜನಿಕರು ಮತ್ತು ಸಾಮಾಜಿಕ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಕಾನೂನಿನಲ್ಲಿ ಹೇಳಿಲ್ಲ ಎಂಬ ತಾಂತ್ರಿಕ ಆಂಶವನ್ನೇ ಮುಂದಿರಿಸಿಕೊಂಡಿರುವ ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡು ವರ್ಷದಿಂದಲೂ ಈವರೆವಿಗೂ ಆಸ್ತಿ ವಿವರ ಸಲ್ಲಿಸುವುದರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಆಸ್ತಿ ವಿವರಗಳನ್ನು ಬಹಿರಂಗಪಡಿಸುವ ಧೈರ್ಯ ಮತ್ತು ಬದ್ಧತೆಯನ್ನೂ ಪ್ರದರ್ಶಿಸಿಲ್ಲ. ಸ್ವಾಯತ್ತ ಸಂಸ್ಥೆಯಾಗಿರುವ ಲೋಕಾಯುಕ್ತದ ಘನತೆ ಕಾಪಾಡಬೇಕಿದ್ದವರೇ ಆಸ್ತಿ ವಿವರ ಸಲ್ಲಿಸುವುದರಿಂದ ನುಣುಚಿಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು.

ಕಾಯ್ದೆಯಲ್ಲೇನಿದೆ?

ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ರ ಕಲಂ 22ರಲ್ಲಿ ‘ಸಾರ್ವಜನಿಕ ನೌಕರರು ಸ್ವತ್ತಿನ ಹೇಳಿಕೆಯನ್ನು ಒಪ್ಪಿಸುವ ಸಂಬಂಧ ಸ್ಪಷ್ಟಪಡಿಸಿದೆ. ಸರ್ಕಾರಿ ನೌಕರರನ್ನುಳಿದು 7ನೇ ಪ್ರಕರಣದ(1)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಿದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ಈ ಅಧಿನಿಯಮ ಪ್ರಾರಂಭವಾದ ತರುವಾಯ 3 ತಿಂಗಳೊಳಗೆ ಮತ್ತು ಆ ತರುವಾಯ ಪ್ರತಿ ವರ್ಷ ಜೂನ್‌30ರೊಳಗೆ (ತನ್ನ ಆಸ್ತಿಗಳ ಮತ್ತು ಹೊಣೆಗಾರಿಕೆ) ತನ್ನ ಕುಟುಂಬದ ಸದಸ್ಯರುಗಳ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ಹೇಳಿಕೆಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸತಕ್ಕದ್ದು,’ ಎಂದು ಹೇಳಿದೆ.

2 ವರ್ಷ ಕಳೆದರೂ ಲೋಕಾಯುಕ್ತರೇ ಆಸ್ತಿ ವಿವರ ಘೋಷಣೆ ಮಾಡದಿರುವುದು ಬೇಸರದ ಸಂಗತಿ. ಇದರಿಂದ ಲೋಕಾಯುಕ್ತ ಸಂಸ್ಥೆ ಮೇಲಿನ ನಂಬಿಕೆ ಕಳೆದು ಹೋಗುತ್ತದೆ. ಲೋಕಾಯುಕ್ತರಾಗಿ ಸಂಸ್ಥೆಯ ಅಧಿಕಾರ ವಹಿಸಿಕೊಂಡ ನಂತರ ಅದರ ಘನತೆಯನ್ನು ಅವರೇ ಕಾಪಾಡಬೇಕು ಎನ್ನುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌.

ಸ್ವಾಯತ್ತ ಸಂಸ್ಥೆಯ ಅಧಿಕಾರ ಸ್ವೀಕರಿಸಿರುವ ಲೋಕಾಯುಕ್ತರು, ಉಪ ಲೋಕಾಯುಕ್ತರು ಆಸ್ತಿ ವಿವರಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ಪ್ರಾಮಾಣಿಕತೆಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಅವರು ತಮ್ಮ ಜವಾಬ್ದಾರಿಯನ್ನು ತೋರಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

the fil favicon

SUPPORT THE FILE

Latest News

Related Posts