ಬೆಂಗಳೂರು; ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ , ಆಂಪೋಟೆರಿಸಿನ್ ಬಿ ಔಷಧ ಖರೀದಿಯಲ್ಲಿನ ಅಕ್ರಮ ಮತ್ತು ಮೊದಲ ಬಾರಿ ಕರೆದಿದ್ದ ದರಪಟ್ಟಿ ಅಂತಿಮಗೊಳಿಸದೆಯೇ ಸರ್ಕಾರಕ್ಕೆ ಕೋಟ್ಯಂತರ ರುಪಾಯಿನಷ್ಟು ನಷ್ಟ ಸಂಭವಿಸಿರುವ ಕುರಿತು ‘ದಿ ಫೈಲ್’ ದಾಖಲೆ ಸಮೇತ ಹೊರಗೆಡವಿದ್ದ ಪ್ರಕರಣಗಳು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಸದ್ದು ಮಾಡಿವೆ.
ಕೋವಿಡ್ ನಿರ್ವಹಣೆಗಾಗಿ ವೈದ್ಯಕೀಯ ಉಪಕರಣಗಳ ಖರೀದಿ ವಿಧಾನ ಮತ್ತು ಹಣ ನಿಗದಿಯಲ್ಲಿ ಹಲವು ಸಂಶಯಗಳಿವೆ ಎಂದು ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿರುವ ಪಿಎಸಿ ಮಂಗಳವಾರ ನಡೆಸಿದ್ದ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ‘ದಿ ಫೈಲ್’ ತನಿಖಾ ವರದಿಗಳನ್ನಾಧರಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಖರೀದಿಸಲು ಆಹ್ವಾನಿಸಿದ್ದ ದರಪಟ್ಟಿಯನ್ನು ನಿಗಮವು ಅಂತಿಮಗೊಳಿಸಿರಲಿಲ್ಲ. ಇದೇ ಉಪಕರಣ ಖರೀದಿಸಲು ಎರಡನೇ ಬಾರಿ ಆಹ್ವಾನಿಸಿದ್ದ ದರಪಟ್ಟಿಯಲ್ಲಿ ಭಾಗವಹಿಸಿದ್ದ ಕಂಪನಿಗಳು ಹೆಚ್ಚುವರಿ ದರವನ್ನು ನಮೂದಿಸಿದ್ದವು. ಆದರೂ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸುವಲ್ಲಿ ವಿಳಂಬ ದ್ರೋಹ ಎಸಗಿದ್ದರ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ದನಿ ಎತ್ತಿದ್ದಾರೆ. ಈ ಪ್ರಕರಣವನ್ನು ‘ದಿ ಫೈಲ್’ ಹೊರಗೆಡವಿತ್ತು.
ಅದೇ ರೀತಿ ಆರೋಗ್ಯ ಇಲಾಖೆಯು ರಚಿಸಿರುವ ಕಾರ್ಯಪಡೆಯು ಔಷಧ ಖರೀದಿಗೆ 80.34 ಕೋಟಿ ರು. ಅನುಮತಿ ನೀಡಿದ್ದರೂ ನಿಗಮವು ತೆವಳಿದ್ದರಿಂದ ಔಷಧ ದಾಸ್ತಾನು ಹೆಚ್ಚಿಸುವಲ್ಲಿ ಹಿಂದೆ ಬಿದ್ದಿತ್ತು. ‘ದಿ ಫೈಲ್’ ಹೊರಗೆಡವಿದ್ದ ಈ ಪ್ರಕರಣವೂ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ.
ಇನ್ನು, ಕಪ್ಪು ಶಿಲೀಂಧ್ರ ರೋಗಕ್ಕೆ ಸಂಬಂಧಿಸಿದಂತೆ ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಎರಡನೇ ಬಿಡ್‌ದಾರರಾಗಿದ್ದರೂ ಹೆಚ್ಚಿನ ಮೊತ್ತಕ್ಕೆ ಆಂಪೋಟೆರಿಸಿನ್ ಬಿ ಚುಚ್ಚುಮದ್ದು ಖರೀದಿಸಿದ್ದರಿಂದ ಸರ್ಕಾರಕ್ಕೆ ಹೆಚ್ಚುವರಿ ನಷ್ಟ ಸಂಭವಿಸಿತ್ತು. ಈ ಪ್ರಕರಣವನ್ನು ‘ದಿ ಫೈಲ್’ ಬಹಿರಂಗಗೊಳಿಸಿತ್ತು. ಈ ಸಂಬಂಧ ವಿಚಾರಣೆಗೆ ಕೈಗೆತ್ತಿಕೊಂಡಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಅಧಿಕಾರಿಗಳನ್ನು ಪ್ರಶ್ನಿಸಲಾರಂಭಿಸಿದೆ. ಈ ಮೂರು ಪ್ರಕರಣಗಳ ವಿವರಗಳನ್ನು ಸಂಕ್ಷಿಪ್ತವಾಗಿ ಮತ್ತೊಮ್ಮೆ ಇಲ್ಲಿ ಕೊಡಲಾಗಿದೆ.
ಕಿಟ್ ಖರೀದಿಯಲ್ಲಿ ಅಕ್ರಮ
ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್ ಪರಿಕರಗಳ ಖರೀದಿ ಪ್ರಕ್ರಿಯೆಯಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ಅಧಿಕಾರಿಗಳು ಎಸಗಿರುವ ವಿಳಂಬ ದ್ರೋಹದಿಂದಾಗಿ ಬೊಕ್ಕಸಕ್ಕೆ 14.75 ಕೋಟಿ ರು. ಹೆಚ್ಚುವರಿ ಹೊರೆಯಾಗಿದೆ. ಈ ಹೊರೆಯನ್ನು ತಪ್ಪಿಸಲು ಎಲ್ಲಾ ರೀತಿಯ ಅವಕಾಶಗಳಿದ್ದರೂ ನಿಗಮದ ಅಧಿಕಾರಿಗಳ ಕಮಿಷನ್ ವ್ಯವಹಾರವೇ ಮೇಲುಗೈಯಾಗಿದ್ದರಿಂದ ಬೊಕ್ಕಸಕ್ಕೆ 14.75 ಕೋಟಿ ನಷ್ಟ ಭರಿಸಬೇಕಾಗಿದೆ.
ಕಿಟ್ ಖರೀದಿ ಅಕ್ರಮ; ಹೆಚ್ಚುವರಿ ಹೊರೆಯಾಗಿದ್ದು 10 ಕೋಟಿಯಲ್ಲ, 14.75 ಕೋಟಿ
ದರಪಟ್ಟಿಯಲ್ಲಿ ಭಾಗವಹಿಸಿದ್ದ ಕಂಪನಿಗಳು ಮಾಡಿದ್ದ ದರ ಹೆಚ್ಚಳವನ್ನು ತಪ್ಪಿಸಿ ಉತ್ತರ ಪ್ರದೇಶ ಸರ್ಕಾರ ಖರೀದಿಸಿದ್ದ ದರದಂತೆಯೇ ದರ ಸಂಧಾನ ಮಾಡಲು ಅಧಿಕಾರಿಗಳು ಮುಂದಾಗಿದ್ದರಾದರೂ ಕಡೆಯಲ್ಲಿ 2ನೇ ದರಪಟ್ಟಿಯನ್ನು ಅಂತಿಮಗೊಳಿಸಿ ಕಂಪನಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಉತ್ತರ ಪ್ರದೇಶ ಸರ್ಕಾರ ಖರೀದಿಸಿರುವ ದರದಲ್ಲಿಯೇ ಕಿಟ್‌ಗಳನ್ನು ಖರೀದಿಸಿದ್ದರೇ 20.70 ಕೋಟಿ ರು.ವೆಚ್ಚವಾಗುತ್ತಿತ್ತು. ಆದರೀಗ 83.77 ರು. ದರ ಪ್ರಕಾರ ಖರೀದಿಸಿರುವುದರಿಂದ 14.75 ಕೋಟಿಯಷ್ಟು ಹೆಚ್ಚುವರಿ ಹೊರೆ ಬಿದ್ದಿದೆ. ಇದಕ್ಕೆ ಮುಖ್ಯ ಪರಿವೀಕ್ಷಕ ಡಾ ಚಂದ್ರಮೋಹನ್ ಸೇರಿದಂತೆ ಹಲವು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು.
80.43 ಕೋಟಿ ರು.ಇದ್ದರೂ ನಿಗಮದ ತೆವಳಿಕೆ
ಬೆಂಗಳೂರು; ಕೋವಿಡ್-19ರ ಅಲೆಯು ಮೇ ಮಧ್ಯಭಾಗದಲ್ಲಿ ಸೋಂಕಿತ ಪ್ರಮಾಣವು ಹಾಲಿ ಇರುವ ಪ್ರಮಾಣಕ್ಕಿಂತ 3-4 ಪಟ್ಟು ಹೆಚ್ಚಾಗಲಿದೆ ಎಂಬ ತಜ್ಞರ ವರದಿಗಳ ಹಿನ್ನೆಲೆಯಲ್ಲಿ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಪ್ರಮಾಣವನ್ನು 4 ಪಟ್ಟು ಪ್ರಮಾಣದಲ್ಲಿ ಶೇಖರಿಸಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಲ್ಲದೆ ಕೋವಿಡ್ ತಡೆಗಟ್ಟಲೆಂದು ಪಟ್ಟಿ ಮಾಡಿರುವ ಒಟ್ಟು 27 ಔಷಧ ಮತ್ತು ಪರಿಕರಗಳನ್ನು 2 ಪಟ್ಟು ಖರೀದಿಸಲು ಸೂಚಿಸಿತ್ತು.
80.43 ಕೋಟಿ ರು.ಗೆ ಅನುಮೋದನೆ; ನಿಗಮದ ತೆವಳಿಕೆಯಿಂದಾಗಿ ಕೋವಿಡ್ ಔಷಧಕ್ಕೂ ಕೊರತೆ?
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ 2021ರ ಮೇ 4ರಂದು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾರ್ಯಪಡೆ ಸಭೆಯು ಔಷಧ ಮತ್ತು ಸಲಕರಣೆಗಳ ಖರೀದಿ ಪ್ರಕ್ರಿಯೆ ಕುರಿತು ಹಲವು ಸೂಚನೆಗಳನ್ನು ನೀಡಿತ್ತು.
ಈ ಸಂಬಂಧ 2021ರ ಜುಲೈ ಅಂತ್ಯಕ್ಕೆ ಔಷಧಗಳು ಎಷ್ಟು ಪ್ರಮಾಣದಲ್ಲಿ ಬೇಕಾಗಲಿದೆ ಎಂಬ ಬೇಡಿಕೆ ಪಟ್ಟಿಯನ್ನೂ ಸಿದ್ಧಪಡಿಸಿದೆ. ಇದಕ್ಕಾಗಿ 80.43 ಕೋಟಿ ರು ಎಂದು ಅಂದಾಜಿಸಿದ್ದ ಸರ್ಕಾರ, ಇದಕ್ಕೆ ಅನುಮೋದನೆಯನ್ನೂ ಪಡೆದುಕೊಂಡಿತ್ತು. ಆದರೆ ಸರ್ಕಾರ ಅಂದುಕೊಂಡಷ್ಟರ ಮಟ್ಟಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಚುರುಕಿನಿಂದ ಕಾರ್ಯನಿರ್ವಹಿಸಿರಲಿಲ್ಲ. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೊರತೆಯಾಗದಂತೆ ಔಷಧ ಮತ್ತು ಸಲಕರಣೆಗಳನ್ನು ಖರೀದಿಸಬೇಕಿದ್ದ ನಿಗಮದ ನಿರ್ದೇಶಕರೂ ಸೇರಿದಂತೆ ಇತರೆ ಅಧಿಕಾರಿಗಳು ಕ್ರಮವಹಿಸದೇ ಮತ್ತಷ್ಟು ನಿರ್ಲಕ್ಷ್ಯ ವಹಿಸಿದ್ದರು.
ಆಂಪೋಟೆರಿಸಿನ್ ಖರೀದಿಯಲ್ಲಿ ಅಕ್ರಮ
ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಅತ್ಯವಶ್ಯಕವಾಗಿರುವ ಆಂಪೋಟೆರಿಸಿನ್ ಚುಚ್ಚುಮದ್ದು ಖರೀದಿ ಸಂಬಂಧ ನಾಲ್ವರು ಬಿಡ್‌ದಾರರ ಪೈಕಿ ಇಬ್ಬರನ್ನು ಆಯ್ಕೆ ಮಾಡಿದ್ದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಮೊದಲ ಬಿಡ್‌ದಾರ (ಎಲ್ 1) ಭಾರತ್ ಸೀರಮ್ಸ್ ವ್ಯಾಕ್ಸಿನ್ಸ್ ಲಿಮಿಟೆಡ್ ನಮೂದಿಸಿದ್ದ ದರಕ್ಕೆ ಹೊಂದಾಣಿಕೆ ಮಾಡಲು ನಿರಾಕರಿಸಿದ್ದ ಎರಡನೇ ಬಿಡ್‌ದಾರ ಮೈಲಾನ್ ಫಾರ್ಮಾಸ್ಯುಟಿಕಲ್ಸ್ ನಮೂದಿಸಿದ್ದ 460 ರು. ಹೆಚ್ಚುವರಿ ದರದಲ್ಲಿಯೇ (ತಲಾ ವಯಲ್‌ವೊಂದಕ್ಕೆ) 25,000 ವಯಲ್‌ಗಳನ್ನು ಖರೀದಿಸಿ ಅಂದಾಜು 1.14 ಕೋಟಿ ರು. ನಷ್ಟವಾಗಿತ್ತು.
ನಿಯಮಗಳ ಪ್ರಕಾರ ಎಲ್ 1 ದರದಲ್ಲಿಯೇ ಖರೀದಿಸಬೇಕಿತ್ತು. ಎಲ್ 1 ಬಿಡ್‌ದಾರನ ದರಕ್ಕೆ ಹೊಂದಾಣಿಕೆ ಮಾಡಲು ನಿರಾಕರಿಸಿದ ಮೈಲಾನ್ ಕಂಪನಿಗೆ ವಯಲ್‌ವೊಂದಕ್ಕೆ 460 ರು. ಹೆಚ್ಚುವರಿ ದರದಲ್ಲಿಯೇ ಖರೀದಿ ಆದೇಶ ನೀಡಿರುವುದರ ಹಿಂದೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರ ಅತ್ಯಾಸಕ್ತಿಯೇ ಕಾರಣ ಎಂದು ಹೇಳಲಾಗಿದೆ.
ಆಂಪೋಟೆರಿಸಿನ್; ದರ ಹೊಂದಾಣಿಕೆಗೆ ನಿರಾಕರಿಸಿದ್ದ ಮೈಲಾನ್‌ಗೆ 1.14 ಕೋಟಿ ಹೆಚ್ಚುವರಿ ಲಾಭ?
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಸಹ ಸುಧಾಕರ್ ಅವರ ಅತ್ಯಾಸಕ್ತಿಯನ್ನು ಪ್ರೋತ್ಸಾಹಿಸಿದ್ದಾರೆ. ಮೈಲಾನ್ ಕಂಪನಿ ನಮೂದಿಸಿದ್ದ 460 ರು. ಹೆಚ್ಚುವರಿ ದರದಲ್ಲಿಯೇ 25,000 ವಯಲ್‌ಗಳನ್ನು ಖರೀದಿಸಲು 2021ರ ಜೂನ್ 2ರಂದು ಆರ್ಥಿಕ ಇಲಾಖೆ ನೀಡಿದ್ದ 4(ಜಿ) ವಿನಾಯಿತಿಗೆ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅಧ್ಯಕ್ಷರಾಗಿರುವ ಕಾರ್ಯಪಡೆ ಸಮಿತಿಯು 2021ರ ಜೂನ್ 7ರಂದು ನಡೆದಿದ್ದ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಿದ್ದರು.