ಕಿಟ್‌ ಖರೀದಿ ಅಕ್ರಮ; ಹೆಚ್ಚುವರಿ ಹೊರೆಯಾಗಿದ್ದು 10 ಕೋಟಿಯಲ್ಲ, 14.75 ಕೋಟಿ

ಬೆಂಗಳೂರು; ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್‌ ಪರಿಕರಗಳ ಖರೀದಿ ಪ್ರಕ್ರಿಯೆಯಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ಅಧಿಕಾರಿಗಳು ಎಸಗಿರುವ ವಿಳಂಬ ದ್ರೋಹದಿಂದಾಗಿ ಬೊಕ್ಕಸಕ್ಕೆ 14.75 ಕೋಟಿ ರು. ಹೆಚ್ಚುವರಿ ಹೊರೆಯಾಗಿದೆ. ಈ ಹೊರೆಯನ್ನು ತಪ್ಪಿಸಲು ಎಲ್ಲಾ ರೀತಿಯ ಅವಕಾಶಗಳಿದ್ದರೂ ನಿಗಮದ ಅಧಿಕಾರಿಗಳ ಕಮಿಷನ್‌ ವ್ಯವಹಾರವೇ ಮೇಲುಗೈಯಾಗಿದ್ದರಿಂದ ಬೊಕ್ಕಸಕ್ಕೆ 14.75 ಕೋಟಿ ನಷ್ಟ ಭರಿಸಬೇಕಾಗಿದೆ.

ದರಪಟ್ಟಿಯಲ್ಲಿ ಭಾಗವಹಿಸಿದ್ದ ಕಂಪನಿಗಳು ಮಾಡಿದ್ದ ದರ ಹೆಚ್ಚಳವನ್ನು ತಪ್ಪಿಸಿ ಉತ್ತರ ಪ್ರದೇಶ ಸರ್ಕಾರ ಖರೀದಿಸಿದ್ದ ದರದಂತೆಯೇ ದರ ಸಂಧಾನ ಮಾಡಲು ಅಧಿಕಾರಿಗಳು ಮುಂದಾಗಿದ್ದರಾದರೂ ಕಡೆಯಲ್ಲಿ 2ನೇ ದರಪಟ್ಟಿಯನ್ನು ಅಂತಿಮಗೊಳಿಸಿ ಕಂಪನಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಉತ್ತರ ಪ್ರದೇಶ ಸರ್ಕಾರ ಖರೀದಿಸಿರುವ ದರದಲ್ಲಿಯೇ ಕಿಟ್‌ಗಳನ್ನು ಖರೀದಿಸಿದ್ದರೇ 20.70 ಕೋಟಿ ರು.ವೆಚ್ಚವಾಗುತ್ತಿತ್ತು. ಆದರೀಗ 83.77 ರು. ದರ ಪ್ರಕಾರ ಖರೀದಿಸಿರುವುದರಿಂದ 14.75 ಕೋಟಿಯಷ್ಟು ಹೆಚ್ಚುವರಿ ಹೊರೆ ಬಿದ್ದಿದೆ. ಇದಕ್ಕೆ ಮುಖ್ಯ ಪರಿವೀಕ್ಷಕ ಡಾ ಚಂದ್ರಮೋಹನ್‌ ಸೇರಿದಂತೆ ಹಲವು ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಅಲ್ಲದೆ ಇದರ ಹಿಂದೆ ಅಧಿಕಾರಿಗಳ ಕಮಿಷನ್‌ ವ್ಯವಹಾರವು ನಡೆದಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ. ಈ ಪ್ರಕರಣವನ್ನು ಹೊರಗೆಡವಿದ್ದ ‘ದಿ ಫೈಲ್‌’, ಸಕಾಲದಲ್ಲಿ ಕಿಟ್‌ ಖರೀದಿಸದ ಕಾರಣ ಬೊಕ್ಕಸಕ್ಕೆ 10 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ವರದಿ ಮಾಡಿತ್ತು.

‘ದಿ ಫೈಲ್‌’ ತನಿಖೆ; ಆ್ಯಂಟಿಜನ್ ಟೆಸ್ಟ್ ಕಿಟ್‌ ಖರೀದಿಯಲ್ಲಿ 10 ಕೋಟಿ ನಷ್ಟ?

ಕಿಟ್‌ ಖರೀದಿಸಲು ನಿಗಮ ಆಹ್ವಾನಿಸಿದ್ದ ದರಪಟ್ಟಿಯಲ್ಲಿ ಭಾಗವಹಿಸಿಸದ್ದ ಭೋಗಿಲಾಲ್‌, ಟ್ರಿವಿಟ್ರಾನ್‌, ಮೆರಿಲ್‌ ಮತ್ತು ಸಿಪ್ಲಾ ಕಂಪನಿ ಪೈಕಿ ಭೋಗಿಲಾಲ್‌ ಕಂಪನಿ ಎಲ್‌-1 ಆಗಿತ್ತಾದರೂ ತಾಂತ್ರಿಕವಾಗಿ ವಿಫಲವಾಗಿತ್ತು. ಹೀಗಾಗಿ ಎಲ್‌-2 ಹಂತದಲ್ಲಿದ್ದ ಟ್ರಿವಿಟ್ರಾನ್‌ ಕಂಪನಿಗೆ ಖರೀದಿ ಆದೇಶ ನೀಡಿದೆ ಎಂದು ವಿಶ್ವಸನೀಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

ವಿಶೇಷವೆಂದರೆ ಮೊದಲ ಬಾರಿ ಆಹ್ವಾನಿಸಿದ್ದ ದರಪಟ್ಟಿಯಲ್ಲಿ ಭಾಗವಹಿಸಿದ್ದ ಇದೇ ಟ್ರಿವಿಟ್ರಾನ್‌ ಕಂಪನಿಯು ಕಿಟ್‌ವೊಂದಕ್ಕೆ 34.60 ರು. ನಮೂದಿಸಿ ಟ್ರಿವಿಟ್ರಾನ್‌ ಎಲ್‌ 2 ಆಗಿತ್ತು. ಎರಡನೇ ಬಾರ ಆಹ್ವಾನಿಸಿದ್ದ ದರಪಟ್ಟಿಯಲ್ಲಿಯೂ ಭಾಗವಹಿಸಿದ್ದ ಇದೇ ಕಂಪನಿಯು ಕಿಟ್‌ವೊಂದಕ್ಕೆ 83.77 ರು.ಗಳನ್ನು ನಮೂದಿಸಿ ಎಲ್‌ 2 ಅಗಿತ್ತು. ಮೊದಲ ದರಪಟ್ಟಿಯಲ್ಲಿ ಟ್ರಿವಿಟ್ರಾನ್‌ ಕಂಪನಿ ನಮೂದಿಸಿದ್ದ ದರದ ಪ್ರಕಾರ 10.38 ಕೋಟಿ ರು. ವೆಚ್ಚದಲ್ಲಿ ಕಿಟ್‌ಗಳನ್ನು ಖರೀದಿಸಬಹುದಾಗಿತ್ತು. ಆದರೆ ನಿಗಮದ ಅಧಿಕಾರಿಗಳ ವಿಳಂಬ ದ್ರೋಹದಿಂದಾಗಿ ಇದೇ ಕಂಪನಿ ಮಾಡಿದ್ದ ದರ ಹೆಚ್ಚಳವನ್ನು ಒಪ್ಪಿಕೊಂಡಿರುವ ಪರಿಣಾಮ 25.13 ಕೋಟಿ ರು.ವೆಚ್ಚ ಮಾಡಿದಂತಾಗಿದೆ. ಒಟ್ಟು 14.75 ಕೋಟಿಯಷ್ಟು ಹೆಚ್ಚುವರಿ ಹೊರೆ ಬಿದ್ದಂತಾಗಿದೆ.

ವಿಳಂಬ ದ್ರೋಹ-ಕಮಿಷನ್‌ ವ್ಯವಹಾರ ಹೀಗೆ ನಡೆದಿತ್ತು

30 ಲಕ್ಷ ಪರೀಕ್ಷೆ ನಡೆಸಲು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ (RAT) ಕಿಟ್‌ ಖರೀದಿಗಾಗಿ 2021ರ ಏಪ್ರಿಲ್‌ 6ರಂದು ಮೊದಲು ದರ ಪಟ್ಟಿ ಆಹ್ವಾನಿಸಿತ್ತು. ಆ ಸಂದರ್ಭದಲ್ಲಿ ಒಟ್ಟು 4 ಕಂಪನಿಗಳು ಭಾಗವಹಿಸಿದ್ದವು. ಸುದರ್ಶನ್‌ ಫಾರ್ಮಾ ತಲಾ ಟೆಸ್ಟ್‌ಗೆ 33.85 ರು. ನಮೂದಿಸಿತ್ತು. ಹಾಗೆಯೇ ಟ್ರಿವಿಟ್ರಾನ್‌ ಹೆಲ್ತ್‌ ಕೇರ್‌ ಪ್ರೈವೈಟ್‌ ಲಿಮಿಟೆಡ್‌ 34.60 ರು., ಓಸ್ಕರ್‌ 35.60 ರು., ಪಿ ಭೋಗಿಲಾಲ್‌ ಪ್ರೈವೈಟ್‌ ಲಿಮಿಟೆಡ್‌ 35.80 ರು ನಮೂದಿಸಿತ್ತು.

ಇದರಲ್ಲಿ 33.85 ರು. ನಮೂದಿಸಿದ್ದ ಸುದರ್ಶನ್‌ ಫಾರ್ಮಾ ಕಂಪನಿಯು ಎಲ್‌-1 ಕಂಪನಿಯಾಗಿತ್ತು. ಎಲ್‌ 1 ಆಗಿ ಹೊರಹೊಮ್ಮಿದ್ದ ಕಂಪನಿಗೆ ಖರೀದಿ ಆದೇಶ ನೀಡಿದ್ದರೆ 10.15 ಕೋಟಿ ರು.ನಲ್ಲಿ 30 ಲಕ್ಷ ಟೆಸ್ಟ್‌ಗಳನ್ನು ನಡೆಸಬಹುದಿತ್ತು. ಆದರೆ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ಈ ದರಪಟ್ಟಿಯನ್ನು ಅಂತಿಮಗೊಳಿಸಲಿಲ್ಲ.

ಬದಲಿಗೆ 19 ದಿನಗಳ ಅಂತರದಲ್ಲೇ 2021ರ ಏಪ್ರಿಲ್‌ 25 ರಂದು 2ನೇ ಬಾರಿ ದರಪಟ್ಟಿ ಆಹ್ವಾನಿಸಲಾಗಿತ್ತು. ಎರಡನೇ ಬಾರಿ ಕರೆದಿದ್ದ ದರಪಟ್ಟಿಯಲ್ಲಿಯೂ 4 ಕಂಪನಿಗಳು ಭಾಗವಹಿಸಿದ್ದವು. ಆದರೆ ಈ ಹೊತ್ತಿಗೆ ಕಂಪನಿಗಳು ದುಪ್ಪಟ್ಟು ದರವನ್ನು ನಮೂದಿಸಿದ್ದವು. ಪಿ ಭೋಗಿಲಾಲ್‌ ಪ್ರೈವೈಟ್‌ ಲಿಮಿಟೆಡ್‌ ಟೆಸ್ಟ್‌ವೊಂದಕ್ಕೆ 81.64 ರು. ನಮೂದಿಸಿದ್ದರೆ ಟ್ರಿವಿಟ್ರಾನ್‌ ಹೆಲ್ತ್‌ ಕೇರ್‌ ಪ್ರೈವೈಟ್‌ ಲಿಮಿಟೆಡ್‌ 83.77 ರು., ಮೆರಿಲ್‌ ಕಂಪನಿಯು 89.06 ರು., ಸಿಪ್ಲಾ ಕಂಪನಿಯು 134.4 ರು. ನಮೂದಿಸಿತ್ತು. ಈ ಪೈಕಿ ಭೋಗಿಲಾಲ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು 81.64 ರು. ನಮೂದಿಸಿ ಎಲ್‌ 1 ಆಗಿ ಹೊರಹೊಮ್ಮಿತ್ತು.

ವಿಶೇಷವೆಂದರೆ ಮೊದಲ ಬಾರಿ ಕರೆದಿದ್ದ ದರಪಟ್ಟಿಯಲ್ಲಿ 35.84 ರು ನಮೂದಿಸಿದ್ದ ಭೋಗಿಲಾಲ್‌ ಕಂಪನಿಯು ಎಲ್‌- 4 ಆಗಿದ್ದರೆ 34.60 ರು. ನಮೂದಿಸಿದ್ದ ಟ್ರಿವಿಟ್ರಾನ್‌ ಕಂಪನಿಯು ಎಲ್‌ 2 ಆಗಿತ್ತು. 2ನೇ ಬಾರಿ ಕರೆದಿದ್ದ ದರಪಟ್ಟಿಯಲ್ಲಿಯೂ ಈ ಎರಡೂ ಕಂಪನಿಗಳು ಭಾಗವಹಿಸಿದ್ದವು. ಮೊದಲ ದರಪಟ್ಟಿಯಲ್ಲಿ ಎಲ್‌ 4 ಆಗಿದ್ದ ಭೋಗಿಲಾಲ್‌ ಕಂಪನಿಯು 2ನೇ ದರಪಟ್ಟಿಯಲ್ಲಿ 81.64 ರು. ನಮೂದಿಸಿ ಎಲ್‌ 1 ಆಗಿತ್ತು. ಟ್ರಿವಿಟ್ರಾನ್‌ ಕಂಪನಿಯು 83.77 ರು. ನಮೂದಿಸಿ ಎಲ್‌ 2 ಆಗಿತ್ತು.

ಮೊದಲ ಬಾರಿ ಕರೆದಿದ್ದ ದರಪಟ್ಟಿಯಲ್ಲಿ ಎಲ್‌ 1 ಆಗಿದ್ದ ಕಂಪನಿಯನ್ನು ಅಂತಿಮಗೊಳಿಸಿ ಖರೀದಿ ಆದೇಶ ನೀಡಿದಿದ್ದರೆ 30 ಲಕ್ಷ ಟೆಸ್ಟ್‌ಗಳಿಗೆ 10.15 ಕೋಟಿ ರು.ವೆಚ್ಚವಾಗುತ್ತಿತ್ತು. ಅದರೆ ಅಧಿಕಾರಿಗಳು ಈ ಸಂಬಂಧ ಯಾವುದೇ ನಿರ್ಧಾರವನ್ನು ಕೈಗೊಳ್ಳಲಿಲ್ಲ. ಬದಲಿಗೆ 2ನೇ ಬಾರಿಗೆ ದರಪಟ್ಟಿಯನ್ನು ಆಹ್ವಾನಿಸಿತು. 2ನೇ ದರಪಟ್ಟಿಯಲ್ಲಿ ನಮೂದಾಗಿದ್ದ ಕಡಿಮೆ ದರ 81.64 ರು. ಪ್ರಕಾರ 30 ಲಕ್ಷ ಟೆಸ್ಟ್‌ಗಳಿಗೆ 24.49 ಕೋಟಿ ರು.ಆಗಲಿದೆ. ಮೊದಲ ಮತ್ತು ಎರಡನೇ ದರಪಟ್ಟಿಯಲ್ಲಿ ನಮೂದಿಸಿರುವ ಕಡಿಮೆ ದರದ ಪ್ರಕಾರ 14.33 ಕೋಟಿ ವ್ಯತ್ಯಾಸ ಕಂಡುಬಂದಿದೆ.

ಈ ಮಧ್ಯೆ ಅಧಿಕಾರಿಗಳು 2021ರ ಮೇ 4ರಂದು ಮತ್ತೊಂದು ಸಭೆ ನಡೆಸಿದ್ದರು. ಈ ಸಭೆಯಲ್ಲಿಯೂ ಎರಡನೇ ದರಪಟ್ಟಿಯನ್ನು ಅಂತಿಮಗೊಳಿಸಲಿಲ್ಲ. ಬದಲಿಗೆ ಉತ್ತರ ಪ್ರದೇಶದಲ್ಲಿರುವ ದರದೊಂದಿಗೆ ಹೋಲಿಕೆ ಮಾಡಿದರು. ಉತ್ತರ ಪ್ರದೇಶದಲ್ಲಿ ಒಂದು ಟೆಸ್ಟ್‌ಗೆ 69.00 ರು. ನಿಗದಿಪಡಿಸಿರುವುದನ್ನು ಸಭೆಯಲ್ಲಿ ಚರ್ಚಿಸಿದ್ದಾರೆ. ಒಂದು ವೇಳೆ 69 ರು.ಗೆ ಕಂಪನಿಯನ್ನು ಒಪ್ಪಿಸಿದ್ದಲ್ಲಿ 30 ಲಕ್ಷ ಟೆಸ್ಟ್‌ಗಳಿಗೆ 20.70 ಕೋಟಿ ರು.ಗಳಾಗಲಿದೆ.

ಮೊದಲ ದರಪಟ್ಟಿಯಲ್ಲಿ ನಮೂದಿಸಿದ್ದ (33.85 ರು.) ದರದೊಂದಿಗೆ ಉತ್ತರಪ್ರದೇಶದ ದರ ಹೋಲಿಸಿದರೆ 30 ಲಕ್ಷ ಟೆಸ್ಟ್‌ಗಳಿಗೆ ಕಿಟ್‌ಗಳ ಖರೀದಿ ಮೊತ್ತದಲ್ಲಿ 10.54 ಕೋಟಿ ರು. ವ್ಯತ್ಯಾಸವಿರವುದು ಕಂಡು ಬಂದಿದೆ. ಅದೇ ರೀತಿ 2ನೇ ಬಾರಿ ದರಪಟ್ಟಿಯಲ್ಲಿ ನಮೂದಿಸಿದ್ದ ದರ (81.64 ರು.) ಪ್ರಕಾರ 3.79 ಕೋಟಿ ವ್ಯತ್ಯಾಸವಿದೆ.

the fil favicon

SUPPORT THE FILE

Latest News

Related Posts