ಬೆಂಗಳೂರು; ಕೋವಿಡ್-19ರ ಅಲೆಯು ಮೇ ಮಧ್ಯಭಾಗದಲ್ಲಿ ಸೋಂಕಿತ ಪ್ರಮಾಣವು ಹಾಲಿ ಇರುವ ಪ್ರಮಾಣಕ್ಕಿಂತ 3-4 ಪಟ್ಟು ಹೆಚ್ಚಾಗಲಿದೆ ಎಂಬ ತಜ್ಞರ ವರದಿಗಳ ಹಿನ್ನೆಲೆಯಲ್ಲಿ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಪ್ರಮಾಣವನ್ನು 4 ಪಟ್ಟು ಪ್ರಮಾಣದಲ್ಲಿ ಶೇಖರಿಸಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಲ್ಲದೆ ಕೋವಿಡ್ ತಡೆಗಟ್ಟಲೆಂದು ಪಟ್ಟಿ ಮಾಡಿರುವ ಒಟ್ಟು 27 ಔಷಧ ಮತ್ತು ಪರಿಕರಗಳನ್ನು 2 ಪಟ್ಟು ಖರೀದಿಸಲು ಸೂಚಿಸಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ 2021ರ ಮೇ 4ರಂದು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾರ್ಯಪಡೆ ಸಭೆಯು ಔಷಧ ಮತ್ತು ಸಲಕರಣೆಗಳ ಖರೀದಿ ಪ್ರಕ್ರಿಯೆ ಕುರಿತು ಹಲವು ಸೂಚನೆಗಳನ್ನು ನೀಡಿದೆ. ಸಭೆಯ ನಡವಳಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಸಂಬಂಧ 2021ರ ಜುಲೈ ಅಂತ್ಯಕ್ಕೆ ಔಷಧಗಳು ಎಷ್ಟು ಪ್ರಮಾಣದಲ್ಲಿ ಬೇಕಾಗಲಿದೆ ಎಂಬ ಬೇಡಿಕೆ ಪಟ್ಟಿಯನ್ನೂ ಸಿದ್ಧಪಡಿಸಿದೆ. ಇದಕ್ಕಾಗಿ 80.43 ಕೋಟಿ ರು ಎಂದು ಅಂದಾಜಿಸಿರುವ ಸರ್ಕಾರ, ಇದಕ್ಕೆ ಅನುಮೋದನೆಯನ್ನೂ ಪಡೆದುಕೊಂಡಿದೆ. ಆದರೆ ಸರ್ಕಾರ ಅಂದುಕೊಂಡಷ್ಟರ ಮಟ್ಟಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಚುರುಕಿನಿಂದ ಕಾರ್ಯನಿರ್ವಹಿಸುತ್ತಿಲ್ಲ. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೊರತೆಯಾಗದಂತೆ ಔಷಧ ಮತ್ತು ಸಲಕರಣೆಗಳನ್ನು ಖರೀದಿಸಬೇಕಿದ್ದ ನಿಗಮದ ನಿರ್ದೇಶಕರೂ ಸೇರಿದಂತೆ ಇತರೆ ಅಧಿಕಾರಿಗಳು ಕ್ರಮವಹಿಸದೇ ಮತ್ತಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ.!
ಕೋವಿಡ್‌ನ ಮೊದಲ ಅಲೆ ಅಪ್ಪಳಿಸಿದಾಗ ರಾಜ್ಯ ಸರ್ಕಾರವು ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರ ನೀಡಿ ಔಷಧ ಮತ್ತು ಸಲಕರಣೆಗಳನ್ನು ಖರೀದಿಸಿತ್ತು. 2ನೇ ಅಲೆ ಸಂದರ್ಭದಲ್ಲಿ ಮಾರುಕಟ್ಟೆಗಿಂತಲೂ ಅತ್ಯಂತ ಕಡಿಮೆ ದರಕ್ಕೆ ಔಷಧ ಮತ್ತು ಸಲಕರಣೆಗಳ ಖರೀದಿಗೆ ಮುಂದಾಗಿದೆ. ಮಾರುಕಟ್ಟೆಗಿಂತಲೂ ಕಡಿಮೆ ದರದಲ್ಲಿ ಔಷಧ ಮತ್ತು ಸಲಕರಣೆಗಳನ್ನು ಪೂರೈಕೆ ಮಾಡಲು ಸರಬರಾಜುದಾರರು ನಿರಾಕರಿಸುತ್ತಿದ್ದಾರೆ. ಹೀಗಾಗಿ ನಿಗಮದ ನಿರ್ದೇಶಕರು ಮತ್ತು ಸರಬರಾಜುದಾರರ ತಿಕ್ಕಾಟದಿಂದಾಗಿ ಖರೀದಿ ಪ್ರಕ್ರಿಯೆ ತೆವಳಲಾರಂಭಿಸಿದೆ.
ಉದಾಹರಣೆಗೆ ಪ್ಯಾರಾಸಿಟಮಲ್ ಖರೀದಿ ಪ್ರಕ್ರಿಯೆಯೇ ಉತ್ತಮ ನಿದರ್ಶನ. ನಿಗಮವು ಆಹ್ವಾನಿಸಿದ್ದ ಮೊದಲ ದರಪಟ್ಟಿಯಲ್ಲಿ 26 ಮಂದಿ ಬಿಡ್‌ದಾರರಿದ್ದರು. ದರ ಸಂಧಾನದಲ್ಲಿ ವಿಫಲವಾದ ಕಾರಣ 2ನೇ ದರಪಟ್ಟಿ ಆಹ್ವಾನ ನೀಡುವ ಹೊತ್ತಿಗೆ 10-12ರಷ್ಟು ಬಿಡ್‌ದಾರರು ಭಾಗವಹಿಸಿದ್ದರು. ನಿಗಮ ನಿಗದಿಪಡಿಸಿದ ದರವನ್ನು ಸರಬರಾಜುದಾರರು ಒಪ್ಪದ ಕಾರಣ ಮೂರನೇ ಬಾರಿಗೆ ದರಪಟ್ಟಿ ಆಹ್ವಾನಿಸಿತ್ತು. ಆಗ ಬಿಡ್‌ದಾರರು ಕನಿಷ್ಟ ಸಂಖ್ಯೆಯಲ್ಲಿದ್ದರು.
ಅಲ್ಲದೆ ಔಷಧ ಮತ್ತು ಸಲಕರಣೆಗಳ ಪೂರೈಕೆಗೆ ಕಡಿಮೆ ಕಾಲಾವಕಾಶ ನೀಡಿದೆ. ಅಧಿಕಾರಿಗಳ ಕಾರ್ಯವೈಖರಿಯಿಂದಾಗಿ ಸರಬರಾಜುದಾರರು ನಿಗಮದತ್ತ ಸುಳಿಯುತ್ತಿಲ್ಲ. ಇದೆಲ್ಲದರ ಒಟ್ಟು ಪರಿಣಾಮ ಔಷಧ ಮತ್ತು ಸಲಕರಣೆಗಳ ಅಲಭ್ಯತೆಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ.
2021ರ ಜುಲೈ 31ರ ಅಂತ್ಯಕ್ಕೆ 2,00,000 ರೆಮ್‌ಡಿಸಿವಿರ್(100 ಎಂಜಿ) ಖರೀದಿಸಿಟ್ಟುಕೊಳ್ಳಬೇಕು. ಇದಕ್ಕೆ 1,568 ರು. ದರ ನಿಗದಿಪಡಿಸಿರುವ ಉನ್ನತ ಸಮಿತಿಯು ರೆಮ್‌ಡಿಸಿವಿರ್ ಖರೀದಿಗೆ ಒಟ್ಟು 3.13 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. ಆದರೆ ಬಹುತೇಕ ಕಂಪನಿಗಳು ರಾಜ್ಯಕ್ಕೆ ರೆಮ್‌ಡಿಸಿವಿರ್‌ನ್ನು ಸರಬರಾಜು ಮಾಡದೇ ಮುಕ್ತ ಮಾರುಕಟ್ಟೆಯತ್ತಲೇ ಒಲವು ವ್ಯಕ್ತಪಡಿಸಿದ್ದಾರೆ.
ಮೀಥಲ್‌ಪ್ರಿಡನ್ಸೋಲನ್ (1,50,000 ) ಡಿಯಾಕ್ಸ್‌ಮೆತೋಸೋನ್ (1,00,000) ವಿಟಮಿನ್ ಸಿ (1,00,000) ಜಿಂಕ್ ಸಲ್ಫೈಟ್(50,000) ಗ್ಲೋವ್ಸ್(3,00,000) ಪಿಪಿಇ ಕಿಟ್ (5,00,000) ಎನ್ 95 ಮಾಸ್ಕ್ (5,00,000) ಪ್ಯಾರಾಸಿಟಮಲ್ (1,00,000) ಸೇರಿದಂತೆ ಒಟ್ಟು 25 ಔಷಧ ಮತ್ತು ಪರಿಕರಗಳನ್ನು 2 ಪಟ್ಟು ಖರೀದಿಸಲು ಸೂಚಿಸಿ ಹಲವು ದಿನಗಳಾದರೂ ವೈದ್ಯಕೀಯ ಸರಬರಾಜು ನಿಗಮವು ಟೆಂಡರ್ ಪ್ರಕ್ರಿಯೆಗೆ ಬಿರುಸಿನ ಚಾಲನೆ ನೀಡಿಲ್ಲ ಎಂದು ಗೊತ್ತಾಗಿದೆ.
ಔಷಧ ಮತ್ತು ಪರಿಕರಗಳ ಸರಬರಾಜಿಗೆ ಸಂಬಂಧಿಸಿದಂತೆ ಸರ್ಕಾರದ ಬೇಡಿಕೆಗೆ ತಕ್ಕಂತೆ ಕಂಪನಿ ಬಳಿ ಅಷ್ಟೊಂದು ದಾಸ್ತಾನಿಲ್ಲ. ಹೊಸ ಬೇಡಿಕೆಗೆ ತಕ್ಕಂತೆ ಔಷಧ ಮತ್ತು ಪರಿಕರಗಳನ್ನು ಹೊಸದಾಗಿ ಉತ್ಪಾದಿಸಬೇಕು. ಹೀಗಾಗಿ ದರಪಟ್ಟಿ ಅಥವಾ ಟೆಂಡರ್ ಪ್ರಕ್ರಿಯೆಗೆ ಚುರುಕು ನೀಡಬೇಕು. ಕಡೇಗಳಿಗೆಯಲ್ಲಿ ಬೇಡಿಕೆ ಪೂರೈಸಿ ಎಂದು ದುಂಬಾಲು ಬಿದ್ದರೂ ಕಂಪನಿಗಳು ಅಸಹಾಯಕವಾಗುತ್ತವೆ. ಜುಲೈ 2021ರರೊಳಗೆ ಔಷಧ ಮತ್ತು ಪರಿಕರಗಳನ್ನು 2 ಪಟ್ಟು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಲು ಸಭೆ ಸೂಚಿಸಿದ್ದರೂ ಖರೀದಿ ಆದೇಶ ನೀಡದಿದ್ದರೆ ಕೋವಿಡ್ ಔಷಧಗಳ ತೀವ್ರ ಕೊರತೆ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಔಷಧ ಕಂಪನಿಯೊಂದರ ಸರಬರಾಜುದಾರರೊಬ್ಬರು.