ಕೋವಿಡ್‌; ಡಬ್ಲ್ಯೂಎಚ್‌ಒ ಎಚ್ಚರಿಕೆ ಮಧ್ಯೆಯೂ 1 ಕೋಟಿ ಮೌಲ್ಯದ ಐವರ್‌ಮೆಕ್ಟಿನ್‌ ಖರೀದಿ

ಬೆಂಗಳೂರು; ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ನಡುವೆಯೂ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಅಂದಾಜು 1 ಕೋಟಿ ರು. ಮೌಲ್ಯದ ಐವರ್ಮೆಕ್ಟಿನ್ ಔಷಧವನ್ನು ಖರೀದಿ ಮಾಡಿದೆ. ಈ ಔ‍ಷಧವು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಪರಿಣಾಮಕಾರಿಯಾಗುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ ಮೂರು ಬಾರಿ ದರಪಟ್ಟಿ ಆಹ್ವಾನಿಸಿ ಈ ಔಷಧವನ್ನು ಖರೀದಿಸಿದೆ.

ಆರಂಭದಲ್ಲಿ ತಮಿಳುನಾಡು ಸರ್ಕಾರವು ಐವರ್ಮೆಕ್ಟಿನ್‌ ಔಷಧವನ್ನು ಖರೀದಿಸಲು ಮುಂದಾಗಿತ್ತಾದರೂ ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕೋವಿಡ್‌ ಚಿಕಿತ್ಸೆಯಲ್ಲಿ ಬಳಸಬಾರದ ಔಷಧಗಳ ಪಟ್ಟಿಯಲ್ಲಿ ಐವರ್ಮೆಕ್ಟಿನ್‌ನನ್ನೂ ಸೇರಿಸಿದೆ. ಆದರೆ ಈ ಔಷಧವನ್ನು ಖರೀದಿ ಪ್ರಕ್ರಿಯೆಯನ್ನು ಮುಂದುವರೆಸಿರುವ ರಾಜ್ಯ ಬಿಜೆಪಿ ಸರ್ಕಾರವು ರೋಗಿಗಳ ಜೀವದ ಜತೆ ಚೆಲ್ಲಾಟ ನಡೆಸಿದೆ!

ಈ ಸಂಬಂಧ ವರುಣ ಕ್ಷೇತ್ರದ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ. ‘ಕೋವಿಡ್ ಚಿಕಿತ್ಸೆಯಲ್ಲಿ ಉಪಯೋಗಕಾರಿಯೆಂದು ವೈಜ್ಞಾನಿಕವಾಗಿ ಧೃಡಪಟ್ಟಿಲ್ಲದ ಔಷಧಿಗಳನ್ನು ನಮ್ಮ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಬಳಸಲಾಗುತ್ತಿದೆ. ಇದರಿಂದ ಅನಗತ್ಯ ಖರ್ಚಿನೊಂದಿಗೆ ರೋಗಿಗಳಿಗೆ ವ್ಯತಿರಿಕ್ತ ಪರಿಣಾಮಗಳೂ ಉಂಟಾಗುತ್ತದೆ. ಐವರ್ಮೆಕ್ಟಿನ್ ಮಾತ್ರೆ ಬಳಸದಂತೆ ವಿಶ್ವ ಆರೋಗ್ಯಸಂಸ್ಥೆಯೆ ಸೂಚಿಸಿದ್ದರೂ ನಮ್ಮಲ್ಲಿ ಇದನ್ನು ಬಳಸುತ್ತಿದ್ದಾರೆ. ಹಾಗಾಗಿ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿ, ಅದರ ಸಲಹೆಯಂತೆ ಕೋವಿಡ್ ಚಿಕಿತ್ಸೆಯಲ್ಲಿ ಸರಿಯಾದ ಔಷಧಿಗಳನ್ನು ಬಳಸಲು ಮಾರ್ಗಸೂಚಿಯೊಂದನ್ನು ರೂಪಿಸಬೇಕು,’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಪತ್ರ ಬರೆದ ನಂತರವೂ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಮೇ 15ರಂದು 50 ಲಕ್ಷ ಪ್ರಮಾಣದ ಐವರ್ಮೆಕ್ಟಿನ್‌ ಔಷಧ ಖರೀದಿಗೆ ದರಪಟ್ಟಿ ಆಹ್ವಾನಿಸಿದೆ. ಅಲ್ಲದೆ 2021ರ ಏಪ್ರಿಲ್‌ 20ರಂದು 10,000, ಏಪ್ರಿಲ್‌ 27ರಂದು 10,00,000, ಮೇ 10ರಂದು 25,00, 000 ಪ್ರಮಾಣದಲ್ಲಿ ಈ ಔಷಧವನ್ನು ಖರೀದಿಸಲು ದರಪಟ್ಟಿ ಆಹ್ವಾನಿಸಿರುವುದು ತಿಳಿದು ಬಂದಿದೆ.

20,00,000 ಟ್ಯಾಬ್ಲೆಟ್‌ಗಳ ಖರೀದಿ ಸಂಬಂಧ 2021ರ ಮೇ 11ರಂದು ದರಪಟ್ಟಿಯನ್ನು ತೆರೆದಿರುವ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 1.43 ರು. ನಮೂದಿಸಿರುವ ಸೈನೋ ಫಾರ್ಮಾ ಪ್ರೈವೈಟ್‌ ಲಿಮಿಟೆಡ್‌ಗೆ ಸರಬರಾಜು ಆದೇಶ ನೀಡಿದೆ ಎಂದು ಗೊತ್ತಾಗಿದೆ.

ವಿಶೇಷವೆಂದರೆ ಇದೇ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯು 20,00,000 ಪ್ರಮಾಣದ ಟ್ಯಾಬ್ಲೆಟ್‌ಗಳ ಖರೀದಿ ಸಂಬಂಧ ಸಲ್ಲಿಸಿದ್ದ ದರಪಟ್ಟಿಯಲ್ಲಿ 2.13 ರು. ದರ ನಮೂದಿಸಿತ್ತು. 1.43 ರು. ದರ ನಮೂದಿಸಿದ್ದ ಸೈನೋ ಫಾರ್ಮಾ ಪ್ರೈವೈಟ್‌ ಲಿಮಿಟೆಡ್‌ಗೆ ಸರಬರಾಜು ಆದೇಶ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಹಾಗೆಯೇ 10.00,000 ಪ್ರಮಾಣದ ಟ್ಯಾಬ್ಲೆಟ್‌ಗಳನ್ನು ತಲಾ 1.24 ರು.ದರದಲ್ಲಿ ಸರಬರಾಜು ಮಾಡಲು ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಗೆ ಆದೇಶ ನೀಡಿದೆ ಎಂದು ಗೊತ್ತಾಗಿದೆ.

 

ಐವರ್ಮೆಕ್ಟಿನ್ ಔಷಧವು ಕೋವಿಡ್ ರೋಗಿಗಳ ಚಿಕಿತ್ಸೆಗೆ ಪರಿಣಾಮಕಾರಿಯಾಗುತ್ತದೆ ಎನ್ನುವುದಕ್ಕೆ ದಾಖಲೆಗಳಿಲ್ಲ. ಈ ಬಗ್ಗೆ ಪುರಾವೆ ಸಿಗುವವರೆಗೂ ಅದನ್ನು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

 

ಇಂದಿನ ವಿಪತ್ತಿನ ಸಂದರ್ಭದಲ್ಲಿ ಸರ್ಕಾರ ವಿಜ್ಞಾನವನ್ನು ಮಾತ್ರ ನಂಬಬೇಕು. ತಜ್ಞ ವೈದ್ಯರು ಮತ್ತು ಪುರಾವೆಗಳ ಮೂಲಕ ಮಾತನಾಡುವ ವಿಜ್ಞಾನಿಗಳ ಅಭಿಪ್ರಾಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಊಹಾಪೋಹ, ಅಂತೆಕಂತೆಗಳ ಆಧಾರದ ಮೇಲೆ ವೈಜ್ಞಾನಿಕವಾಗಿ ಮತ್ತು ಪರಿಣಾಮಕಾರಿ ಎಂದು ದೃಢಪಡದ ಔಷಧಗಳನ್ನು ಯಾವುದೇ ಕಾರಣಕ್ಕೂ ಶಿಫಾರಸ್ಸು ಮಾಡಬಾರದು ಮತ್ತು ರೋಗಿಗಳಿಗೆ ಒದಗಿಸಬಾರದು. ಇಂತಹ ಸಂದರ್ಭದಲ್ಲಿ ಅಡ್ಡಪರಿಣಾಮಗಳು ಇರಲಾರದ ಮತ್ತು ಕಾಯಿಲೆಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ನಡುವೆಯೂ ಈ ಔಷಧವನ್ನು ಕೊಳ್ಳಲೇಬೇಕು ಎಂದು ತೀರ್ಮಾನಿಸಿರುವುದು ಸಚಿವರು ಮತ್ತು ಅಧಿಕಾರಿಗಳು ಈ ಮೂಲಕ ಯಾವುದೋ ಅವ್ಯವಹಾರ ಮತ್ತು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಸಂಶಯವನ್ನು ಹುಟ್ಟು ಹಾಕಿದೆ.

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು

ಕರ್ನಾಟಕ ರಾಷ್ಟ್ರಸಮಿತಿ

ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಐವರ್ಮೆಕ್ಟಿನ್ ಬಳಸುವುದರ ಪರಿಣಾಮದ ಕುರಿತು ಪ್ರಸ್ತುತದ ದಾಖಲೆಗಳಿಂದ ನಿರ್ಧರಿಸಲಾಗದು. ಹೆಚ್ಚಿನ ದಾಖಲೆಗಳು ಲಭ್ಯವಾಗುವವರೆಗೂ ಈ ಔಷಧವನ್ನು ಕ್ಲಿನಿಕಲ್ ಪ್ರಯೋಗಗಳಲ್ಲಿ ಮಾತ್ರ ಬಳಸಬೇಕು ಎಂಬುದಾಗಿ ಡಬ್ಲ್ಯೂಎಚ್‌ಒ ಶಿಫಾರಸು ಮಾಡುತ್ತದೆ’ ಎಂದು ಕಳೆದ ಮಾರ್ಚ್‌ನಲ್ಲಿ ಹೇಳಿಕೆ ನೀಡಿತ್ತು. ತನ್ನ ಔಷಧವು ಕೋವಿಡ್ ಚಿಕಿತ್ಸೆಗೆ ಬಳಸುವುದನ್ನು ಲಭ್ಯವಿರುವ ದಾಖಲೆಗಳು ಪ್ರೋತ್ಸಾಹಿಸುವುದಿಲ್ಲ ಎಂದು ಐವರ್ಮೆಕ್ಟಿನ್ ಉತ್ಪಾದಕ ಮೆರ್ಕ್ ಸಂಸ್ಥೆ ಕೂಡ ಹೇಳಿದ್ದನ್ನು ಸ್ಮರಿಸಬಹುದು.

ಮೇ 25 ,2020ರಂದು ಸರ್ಕಾರಕ್ಕೆ ಪತ್ರ ಬರೆದಿದ್ದೆ. ಐವರ್‌ಮೆಕ್ಟಿನ್‌ ಮಾತ್ರವಲ್ಲ ಕೋವಿಡ್‌ ಚಿಕಿತ್ಸೆಗೆ ಅಗತ್ಯವಿಲ್ಲದ ಔಷಧಗಳನ್ನು ಖರೀದಿ ಮಾಡುತ್ತಲೇ ಇದೆ. ಈ ಹಿಂದಿನಿಂದಲೂ ಖರ್ಚು ಮಾಡುತ್ತಲೇ ಬಂದಿದೆ. ಕೊರೊನಾ ತಡೆಗಟ್ಟಲು ಅಗತ್ಯವಿಲ್ಲದ ಚಿಕಿತ್ಸಾ ಕ್ರಮವನ್ನು ಹಿಂಪಡೆಯಬೇಕು ಎಂದು ಪತ್ರದಲ್ಲಿ ವಿವರಿಸಿದ್ದೆ. ಐವರ್‌ಮೆಕ್ಟಿನ್‌ ಬಳಸಬಾರದು ಎಂದು ಸೌಮ್ಯ ಸ್ವಾಮಿನಾಥನ್‌ ಮಾತ್ರವಲ್ಲದೆ ಈ ಔಷಧ ತಯಾರಕ ಕಂಪನಿಯೂ ಕೂಡ ಪ್ರಾಮಾಣಿಕವಾಗಿ ಹೇಳಿದೆ. ಹಾಗಿದ್ದರೂ ಕೂಡ ಚಿಕಿತ್ಸಾ ಕ್ರಮದಲ್ಲಿ ಐವರ್‌ಮೆಕ್ಟಿನ್‌ನನ್ನು ಮುಂದುವರೆಸುವುದು ಮತ್ತು ಖರೀದಿ ಮಾಡುತ್ತಿರುವುದನ್ನೂ ಒಂದು ಹಗರಣವೆಂದು ಕರೆಯಬೇಕಾಗುತ್ತೆ. ಜನರಿಗೆ ಅಗತ್ಯವಿಲ್ಲದೇ ಇಲ್ಲದಿದ್ದರೂ ಔಷಧ ಖರೀದಿ ಮಾಡುವುದು ಸರಿಯಲ್ಲ. ಇದು ಮೋಸವಲ್ಲದೇ ಮತ್ತೇನು?

ಡಾ ಶ್ರೀನಿವಾಸ್‌ ಕಕ್ಕಿಲ್ಲಾಯ, ವೈದ್ಯರು ಹಾಗೂ ಚಿಂತಕರು

ಪಾರಾಸಿಟಿಕ್ ಸೋಂಕುಗಳನ್ನು ನಿವಾರಿಸುವುದಕ್ಕಾಗಿ ಅನುಸರಿಸಲಾಗುತ್ತಿದ್ದ ಚಿಕಿತ್ಸಾ ವಿಧಾನದಲ್ಲಿ ಬಾಯಿಯಿಂದ ತೆಗೆದುಕೊಳ್ಳುವ ಐವರ್ಮೆಕ್ಟಿನ್ ಔಷಧಿಯನ್ನು ಕೋವಿಡ್-19 ರೋಗಿಗಳಿಗೂ ನೀಡುವುದಕ್ಕೆ ಭಾರತ ಸರ್ಕಾರ ಪ್ರಕಟಿಸಿರುವ ಕೋವಿಡ್-19 ನಿರ್ವಹಣೆ ನಿಯಮಗಳಲ್ಲಿ ಸಲಹೆ ನೀಡಲಾಗಿತ್ತು. ಆದರೆ ಇದರ ವಿರುದ್ಧ ಡಬ್ಲ್ಯುಹೆಚ್ಒ ಸಾರ್ವತ್ರಿಕ ಬಳಕೆಯ ವಿರುದ್ಧ ಎಚ್ಚರಿಸಿದೆ. ಪ್ರಾರಂಭಿಕ ಹಂತದ ಸೋಂಕು ಲಕ್ಷಣಗಳಿರುವವರಿಗೆ ಐವರ್ಮೆಕ್ಟಿನ್ ಔಷಧ ಬಳಕೆ ಮಾಡಲು ಹೇಳಲಾಗಿತ್ತಾದರೂ ಆದರೆ ಕೋವಿಡ್-19 ಗೆ ಈ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲ ಎಂದು ಹೇಳಲಾಗುತ್ತಿದೆ.

ಹೊಸ ರೋಗಗಳಿಗೆ ಔಷಧಗಳನ್ನು ನೀಡುವಾಗ ಸುರಕ್ಷತೆ ಹಾಗೂ ಪರಿಣಾಮಕಾರಿತ್ವ ಬಹಳ ಮುಖ್ಯವಾಗುತ್ತದೆ. ಕ್ಲಿನಿಕಲ್ ಟ್ರಯಲ್ ಗಳನ್ನು ಹೊರತುಪಡಿಸಿ ಕೋವಿಡ್-19 ಗೆ ಐವರ್ಮೆಕ್ಟಿನ್ ನೀಡುವುದರ ವಿರುದ್ಧ ಡಬ್ಲ್ಯುಹೆಚ್ಒ ಶಿಫಾರಸು ಮಾಡುತ್ತದೆ ಎಂದು ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದರು.

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಐವರ್ಮೆಕ್ಟಿನ್ ಬಳಕೆಯ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಚ್​ನಲ್ಲಿಯೂ ಇದೇ ರೀತಿಯ ಎಚ್ಚರಿಕೆ ನೀಡಿತ್ತು.ಯುಎಸ್ ಫುಡ್ ಆ್ಯಂಡ್​ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್​ಡಿಎ) ಕಳೆದ ವರ್ಷ ಏಪ್ರಿಲ್​ನಲ್ಲಿ, ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ಐವರ್ಮೆಕ್ಟಿನ್ ಬಳಕೆಯ ವಿರುದ್ಧ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಅಲ್ಲದೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಳೆದ ವರ್ಷ ಕೊರೊನಾಗಾಗಿ ತನ್ನ ಅಧಿಕೃತ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್‌ನಲ್ಲಿ ಐವರ್ಮೆಕ್ಟಿನ್ ಬಳಕೆಯನ್ನು ನಿಷೇಧಿಸಿದೆ.

the fil favicon

SUPPORT THE FILE

Latest News

Related Posts