ರೆಡ್ಡೀಸ್‌ ಲ್ಯಾಬ್‌ ಉದ್ಧಟತನ!; ಮಾರುಕಟ್ಟೆಗೆ 25,117 ರೆಮ್‌ಡಿಸಿವಿರ್‌ ವಯಲ್‌, ಸರ್ಕಾರಕ್ಕೆ ಒಂದೂ ಇಲ್ಲ

ಬೆಂಗಳೂರು; ಡಿ2ಜಿ ತಯಾರಿಸುತ್ತಿರುವ ಡಾ ರೆಡ್ಡೀಸ್‌ ಲ್ಯಾಬೋರೇಟರಿ ಕಂಪನಿ ಸೇರಿ ಮೂರು ಕಂಪನಿಗಳು ಏಪ್ರಿಲ್‌ 21ರಿಂದ ಮೇ 16ರವರೆಗೂ ಒಂದೇ ಒಂದು ರೆಮ್‌ಡಿಸಿವಿರ್‌ ವಯಲ್‌ನ್ನೂ ಸರ್ಕಾರಕ್ಕೆ ಪೂರೈಕೆ ಮಾಡಿಲ್ಲ. ರೆಮ್‌ಡಿಸಿವಿರ್‌ ಹಂಚಿಕೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರವು ನೀಡಿದ್ದ ಗುರಿಯನ್ನು ತಲುಪಬೇಕಿದ್ದ ಈ ಮೂರು ಕಂಪನಿಗಳು ರಾಜ್ಯ ಸರ್ಕಾರಕ್ಕೆ ಒಂದೇ ಒಂದು ವಯಲ್‌ ನೀಡದೇ ಸರ್ಕಾರದ ಸೂಚನೆಯನ್ನೂ ಗಾಳಿಗೆ ತೂರಿವೆ.

ಕೇಂದ್ರ ಸರ್ಕಾರವು ಮೇ 17ರಿಂದ ಮೇ 23ರವರೆಗೆ ವಿವಿಧ ರಾಜ್ಯಗಳ ಬಳಕೆಗಾಗಿ ಹಂಚಿಕೆ ಮಾಡಿರುವ 23 ಲಕ್ಷ ವಯಲ್ಸ್‌ನಲ್ಲಿ ರಾಜ್ಯಕ್ಕೆ 10 ಲಕ್ಷ ವಯಲ್‌ ಲಭ್ಯವಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು ಹೇಳಿಕೆ ಬಿಡುಗಡೆ ಮಾಡಿರುವ ಬೆನ್ನಲ್ಲೇ ಡಾ ರೆಡ್ಡೀಸ್‌ ಲ್ಯಾಬೋರೇಟರಿ ಸೇರಿದಂತೆ ಮೂರು ಕಂಪನಿಗಳು ಈವರೆವಿಗೂ ಒಂದೇ ಒಂದು ವಯಲ್‌ ಬಿಡುಗಡೆ ಮಾಡದಿರುವುದು ಮುನ್ನೆಲೆಗೆ ಬಂದಿದೆ.

2021ರ ಏಪ್ರಿಲ್‌ 21ರಿಂದ ಮೇ 16ವರೆಗೆ ರಾಜ್ಯ ಸರ್ಕಾರಕ್ಕೆ 1,83,625 ವಯಲ್‌ಗಳು ಬಿಡುಗಡೆಯಾಗಿವೆ. ಇದೇ ಅವಧಿಯಲ್ಲಿ ಮುಕ್ತ ಮಾರುಕಟ್ಟೆಗೆ 3,31,927 ವಯಲ್‌ ಸೇರಿದಂತೆ ಒಟ್ಟು 5,15,552 ವಯಲ್‌ಗಳು ಸರಬರಾಜು ಆಗಿವೆ.

ಡಾ ರೆಡ್ಡೀಸ್‌ ಲ್ಯಾಬೋರೇಟರಿಗೆ ಒಟ್ಟು 43,700 ವಯಲ್‌ಗಳ ಹಂಚಿಕೆಗೆ ಗುರಿ ನಿಗದಿಪಡಿಸಲಾಗಿತ್ತು. ಆದರೆ ಡಾ ರೆಡ್ಡೀಸ್‌ ಲ್ಯಾಬೋರೇಟರಿ ಮೇ 16ರ ಅಂತ್ಯಕ್ಕೆ ಮುಕ್ತ ಮಾರುಕಟ್ಟೆಗೆ 25,117 ವಯಲ್‌ಗಳನ್ನು ಬಿಡುಗಡೆ ಮಾಡಿದೆಯೇ ವಿನಃ ರಾಜ್ಯ ಸರ್ಕಾರಕ್ಕೆ ಒಂದೇ ಒಂದು ವಯಲ್‌ ಸರಬರಾಜು ಮಾಡದಿರುವುದು ಔಷಧ ನಿಯಂತ್ರಕರ ಕಚೇರಿ ದಾಖಲೆಗಳಿಂದ ತಿಳಿದು ಬಂದಿದೆ.

ಅದೇ ರೀತಿ ಹಿಟಾರಿಯೋ, ಸಿಪ್ಲಾ ಮತ್ತು ಕ್ಯಾಡಿಲಾ ಕಂಪನಿಯೂ ಸಹ ರಾಜ್ಯ ಸರ್ಕಾರಕ್ಕೆಒಂದೇ ಒಂದು ವಯಲ್‌ ಬಿಡುಗಡೆ ಮಾಡಿಲ್ಲ. ಆದರೆ ಹಿಟಾರಿಯೋ ಕಂಪನಿಯು 1,43,250 ಮತ್ತು ಕ್ಯಾಡಿಲಾ ಕಂಪನಿಯು 400, ಸಿಪ್ಲಾ ಕಂಪನಿಯು 53,860 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡಿರುವುದು ದಾಖಲೆಯಿಂದ ಗೊತ್ತಾಗಿದೆ.

ಏಪ್ರಿಲ್‌ 21ರಿಂದ ಮೇ 9ರವರೆಗೆ ಒಟ್ಟು 7 ಕಂಪನಿಗಳು ಒಟ್ಟು 3,01,300 ವಯಲ್‌ಗಳನ್ನು ಸರಬರಾಜು ಮಾಡಬೇಕಿತ್ತು. ಹಿಟಾರಿಯೋ ಕಂಪನಿಯು 83,000, ಮೈಲಾನ್‌ 1,27,300, ಸಿಪ್ಲಾ 30,000, ಸಿನ್‌ಜಿನ್‌ 27,000, ಜ್ಯುಬಿಲಿಯೆಂಟ್‌ 32,000, ಡಾ ರೆಡ್ಡೀಸ್‌ 2,000 ವಯಲ್‌ಗಳನ್ನು ಹಂಚಿಕೆ ಮಾಡಲು ಗುರಿ ನಿಗದಿಪಡಿಸಲಾಗಿತ್ತು.

ನಿಗದಿತ ಗುರಿ ಪ್ರಕಾರ ರೆಮ್‌ಡಿಸಿವಿರ್‌ಗಳನ್ನು ಪೂರೈಕೆ ಮಾಡದ ಕಾರಣಕ್ಕೆ ನೋಟೀಸ್‌ ನೀಡಿದ ನಂತರವೂ ಡಾ ರೆಡ್ಡೀಸ್‌, ಹಿಟಾರಿಯೋ ಕಂಪನಿ ರಾಜ್ಯ ಸರ್ಕಾರಕ್ಕೆ ಒಂದೇ ಒಂದು ವಯಲ್‌ ಬಿಡುಗಡೆ ಮಾಡದೇ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಲಾಭಕೋರತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

the fil favicon

SUPPORT THE FILE

Latest News

Related Posts