ಬೆಂಗಳೂರು; ಭ್ರಷ್ಟಾಚಾರ, ಅಧಿಕಾರ ಮತ್ತು ಹಣಕಾಸು ದುರುಪಯೋಗ, ಕರ್ತವ್ಯ ನಿರ್ಲಕ್ಷ್ಯ ಸೇರಿದಂತೆ ಇನ್ನಿತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯ ಶಿಫಾರಸ್ಸಿನ ಅನ್ವಯ ಅಧಿಕಾರಿ, ನೌಕರರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಶಾಸನಾತ್ಮಕ ಬಾಧ್ಯತೆಯನ್ನು ಪೂರೈಸಿಲ್ಲ. ಇದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಲಂ 2(10) ಅನ್ವಯ ದುರಾಡಳಿತ ಎಂದು ಲೋಕಾಯುಕ್ತರು ಪರಿಗಣಿಸಿದ್ದಾರೆ.
ಲೋಕಾಯುಕ್ತ ಕಾಯ್ದೆ 12(4) ಅನ್ವಯ ಕಲಂ 12(3) ಅನ್ವಯ ಕಳಿಸಿಕೊಡಲಾಗುವ ವರದಿಗಳ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ಇಲಾಖಾ ಮುಖ್ಯಸ್ಥರು 3 ತಿಂಗಳೊಳಗಾಗಿ ಲೋಕಾಯುಕ್ತಕ್ಕೆ ವರದಿಗಳನ್ನೂ ಸಲ್ಲಿಸುತ್ತಿಲ್ಲ. ಈ ಕುರಿತು ಲೋಕಾಯುಕ್ತ ರಿಜಿಸ್ಟ್ರಾರ್ ಅವರು 2020ರ ಡಿಸೆಂಬರ್ ಅಂತ್ಯಕ್ಕೆ ಸಂಬಂಧಿಸಿದಂತೆ 2021ರ ಜನವರಿ 11 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುತ್ತಿರುವುದು ಸುಳ್ಳಲ್ಲ ಎಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಪಟೂರಿನಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಲೋಕಾಯುಕ್ತರ ನಿರ್ದೇಶನದ ಮೇರೆಗೆ ರಿಜಿಸ್ಟ್ರಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರವು ಮಹತ್ವಪಡೆದುಕೊಂಡಿದೆ.
ಪತ್ರದಲ್ಲೇನಿದೆ?
‘ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಲಂ 12(3) ಅನ್ವಯ ಕಳಿಸಲಾದ 436 ದೂರು ಪ್ರಕರಣಗಳಲ್ಲಿ 932 ವಿಚಾರಣಾ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರಗಳು ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿರುವುದಿಲ್ಲ. ಕರ್ನಾಟಕ ಲೋಕಾಯುಕ್ತ ಕಾಯ್ದೆ 12(4) ಅನ್ವಯ ಈ ಸಂಸ್ಥೆಯಿಂದ ಕಲಂ 12(3) ಅನ್ವಯ ಕಳಿಸಿಕೊಡಲಾದ ವರದಿಯ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ 3 ತಿಂಗಳೊಳಗಾಗಿ ವರದಿ ಸಲ್ಲಿಸತಕ್ಕದ್ದು. ಆದ್ದರಿಂದ ಶಾಸನಾತ್ಮಕ ಬಾಧ್ಯತೆಯನ್ನು ಪೂರೈಸದೇ ಇರುವುದು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 2(10) ಅನ್ವಯ ದುರಾಡಳಿತವೆಂದು ಪರಿಗಣಿಸಬಹುದಾಗಿದೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಗೌರವಾನ್ವಿತ ಲೋಕಾಯುಕ್ತರಿಂದ ನಿರ್ದೇಶಿಸಲ್ಪಟ್ಟಿದ್ದೇನೆ,’ ಎಂದು ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಪತ್ರವನ್ನಾಧರಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕೂಡಲೇ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಈ ಪತ್ರವು ಸಹ ಲೋಕಾಯುಕ್ತವು ಈ ಹಿಂದೆ ಸರ್ಕಾರಕ್ಕೆ ಕಳಿಸಿರುವ ಇತರ ಅನೇಕ ಪತ್ರಗಳಂತೆ ತಿರಸ್ಕಾರಕ್ಕೆ ಒಳಗಾಗಿ ಕಸದ ಬುಟ್ಟಿ ಸೇರುತ್ತದೆ. ಲೋಕಾಯುಕ್ತರಿಗೆ ನಿಜಕ್ಕೂ ಭ್ರಷ್ಟಾಚಾರವನ್ನು ತಡೆಗಟ್ಟುವ ಕಾಳಜಿ ಇದ್ದಲ್ಲಿ ಮತ್ತು ಲೋಕಾಯುಕ್ತ ಸಂಸ್ಥೆ ಗೌರವವನ್ನು ಉಳಿಸುವ ಕನಿಷ್ಠ ಅಪೇಕ್ಷೆ ಇದ್ದಲ್ಲಿ ಈ ಕೂಡಲೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು. ತಮ್ಮ ಪತ್ರಕ್ಕೆ ಸರ್ಕಾರವು ಮಾನ್ಯತೆ ನೀಡದಿದ್ದಲ್ಲಿ ಅಥವಾ ಕ್ರಮ ಕೈಗೊಳ್ಳದಿದ್ದಲ್ಲಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿ ಸಂಸ್ಥೆಯನ್ನು ಮುಚ್ಚಲು ಶಿಫಾರಸ್ಸು ಮಾಡುವ ಮೂಲಕ ಸಮಾಜದ ಮೇಲಿರುವ ಆರ್ಥಿಕ ಹೊರೆಯನ್ನು ಇಳಿಸಬೇಕು.
ರವಿ ಕೃಷ್ಣಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ
ಲೋಕಾಯುಕ್ತ ಕಾಯ್ದೆ 12(3) ಅನ್ವಯ ಕಂದಾಯ ಇಲಾಖೆ ಸೇರಿದಂತೆ ಒಟ್ಟು 24 ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿ, ನೌಕರರ ವಿರುದ್ಧ 436 ಪ್ರಕರಣಗಳ ವರದಿಗಳನ್ನು ಸರ್ಕಾರಕ್ಕೆ ಕಳಿಸಿತ್ತು. ಇದರಲ್ಲಿ ಲೋಕಾಯುಕ್ತರ ಅಧಿಕಾರ ವ್ಯಾಪ್ತಿಯಲ್ಲಿ 22, ಉಪ ಲೋಕಾಯುಕ್ತ-1 ಕಾರ್ಯವ್ಯಾಪ್ತಿಯಲ್ಲಿ 163, ಉಪ ಲೋಕಾಯುಕ್ತ -2 ಕಾರ್ಯವ್ಯಾಪ್ತಿಯಲ್ಲಿ 251 ಪ್ರಕರಣಗಳಿವೆ. ಈ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಗ್ರ ಸ್ಥಾನದಲ್ಲಿರುವುದು ಪತ್ರದಿಂದ ಗೊತ್ತಾಗಿದೆ.
ಅದೇ ರೀತಿ 12(1) ಅನ್ವಯ ಲೋಕಾಯುಕ್ತ ಸಂಸ್ಥೆಯು ಸರ್ಕಾರಕ್ಕೆ ಕಳಿಸಿದ್ದ ಒಟ್ಟು 342 ಪ್ರಕರಣಗಳಲ್ಲೂ ವರದಿಗಳನ್ನು ಸಲ್ಲಿಸಿಲ್ಲ. ಇದರಲ್ಲಿಯೂ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯು 101, ಕಂದಾಯ ಇಲಾಖೆಯು 100 ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವ ಬಗ್ಗೆ ವರದಿಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸದಿರುವುದು ಪತ್ರದಿಂದ ತಿಳಿದು ಬಂದಿದೆ.
ಹಾಗೆಯೇ ಲೋಕಾಯುಕ್ತ ಕಾಯ್ದೆಯ ಕಲಂ 14 (2) (ಡಿ) ಕೆಸಿಎಸ್ (ಸಿಸಿಎ) ನಿಯಮಗಳ ಅನ್ವಯ ಸರ್ಕಾರಕ್ಕೆ ಒಟ್ಟು 932 ಪ್ರಕರಣಗಳನ್ನು ಕಳಿಸಿದೆ. ಈ ಪೈಕಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಯಲ್ಲಿ 266, ಕಂದಾಯ ಇಲಾಖೆಯಲ್ಲಿ 174, ನಗರಾಭಿವೃದ್ಧಿ ಇಲಾಖೆಯಲ್ಲಿ 143 ಪ್ರಕರಣಗಳಿವೆ. ಇದರಲ್ಲಿ ಲೋಕಾಯುಕ್ತರ ಕಾರ್ಯವ್ಯಾಪ್ತಿಯೊಳಗೆ 5, ಉಪ ಲೋಕಾಯುಕ್ತ -1 ವಿಭಾಗದಲ್ಲಿ 516, ಉಪ ಲೋಕಾಯುಕ್ತ -2 ರಲ್ಲಿ 362 ಪ್ರಕರಣಗಳಿವೆ.
12(3) ಇಲಾಖಾವಾರು ಒಟ್ಟು ಪ್ರಕರಣಗಳ ಸಂಖ್ಯೆ
ಕಂದಾಯ – 82
ಶಿಕ್ಷಣ – 13
ಗ್ರಾಮೀಣಾಭಿವೃದ್ದಿ- 185
ಸಮಾಜ ಕಲ್ಯಾಣ- 7
ನಗರಾಭಿವೃದ್ದಿ – 38
ಲೋಕೋಪಯೋಗಿ- 4
ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ- 3
ಸಾರಿಗೆ – 2
ಸಣ್ಣ ನೀರಾವರಿ, ಜಲ ಸಂಪನ್ಮೂಲ – 18
ಇಂಧನ- 9
ಕೆಪಿಟಿಸಿಎಲ್ – 1
ಕೆಎಸ್‌ಆರ್‌ಟಿಸಿ – 1
ಗೃಹ- 3
ಆರೋಗ್ಯ ಕುಟುಂಬ ಕಲ್ಯಾಣ- 4
ಸಹಕಾರ – 23
ಕೃಷಿ, ತೋಟಗಾರಿಕೆ, ರೇಷ್ಮೆ- 4
ಡಿಪಿಎಆರ್ – 3
ವಸತಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ- 10
ಮಾಹಿತಿ, ಪ್ರವಾಸೋದ್ಯಮ- 1
ಕಾರ್ಮಿಕ – 1
ವಾಣಿಜ್ಯ, ಕೈಗಾರಿಕೆ – 9
ಅರಣ್ಯ, ಪರಿಸರ ಜೀವಿಶಾಸ್ತ್ರ – 10
ಆಹಾರ ನಾಗರಿಕ ಸರಬರಾಜು – 3
ಅಲ್ಪಸಂಖ್ಯಾತರ ಕಲ್ಯಾಣ, ಹಜ್, ವಕ್ಫ್ – 2
ಲೋಕಾಯುಕ್ತ ಕಾಯ್ದೆ ಕಲಂ 12(3), 12(1), 14(2) ಅಡಿಯಲ್ಲಿ ಸರ್ಕಾರಕ್ಕೆ 2016ರಿಂದಲೂ ವರದಿಗಳನ್ನು ಕಳಿಸುತ್ತಲೇ ಇದೆ. ಲೋಕಾಯುಕ್ತ ವರದಿಗಳ ಮೇಲೆ 3 ತಿಂಗಳೊಳಗೆ ಕೈಗೊಂಡ ಕ್ರಮದ ಕುರಿತು ವರದಿಗಳನ್ನು ಸಲ್ಲಿಸಬೇಕಿದ್ದ ಸಕ್ಷಮ ಪ್ರಾಧಿಕಾರಗಳು ಗಡುವು ಮೀರಿದ್ದರೂ ವರದಿಗಳನ್ನು ಕಳಿಸದೇ ಲೋಕಾಯುಕ್ತ ಸಂಸ್ಥೆಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸಿದ್ದರಾಮಯ್ಯ ಅವರು ಎಸಿಬಿಯನ್ನು ರಚನೆ ಮಾಡಿದ ನಂತರ ಲೋಕಾಯುಕ್ತ ಕೇವಲ ಬೆದರುಗೊಂಬೆ. ಈಗಿರುವ ಲೋಕಾಯುಕ್ತರು ಸಹ ಯಾವುದೇ ರೀತಿಯ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ತೋರಿಸಿಲ್ಲ. ಇಡೀ ಲೋಕಾಯುಕ್ತ ಸಂಸ್ಥೆಯೇ ಇಂದು ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಸಂಸ್ಥೆಯಾಗಿ ಸಮಾಜಕ್ಕೆ ಹೊರೆಯಾಗಿದೆ. ತಮಗಿರುವ ಕಾನೂನುಬದ್ಧ ಮತ್ತು ಶಾಸನಾತ್ಮಕ ಅಧಿಕಾರವನ್ನು ಬಳಸಲು ಬೇಕಾಗಿರುವ ಈಗಿರುವ ಲೋಕಾಯುಕ್ತರು ಯಾವುದೇ ಧೈರ್ಯ ಮತ್ತು ಕಾಳಜಿಯನ್ನು ಹೊಂದಿಲ್ಲ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ.