ಬೆಂಗಳೂರು; ಬಜೆಟ್ ಮೇಲಿನ ಚರ್ಚೆ ವೇಳೆ ಶಾಸಕರು ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ಕುರಿತು ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ನಡೆಸಿದ ಗಂಭೀರ ಸ್ವರೂಪದ ಚರ್ಚೆಯು ಹಲವು ಆಯಾಮ ಪಡೆದುಕೊಳ್ಳಲಾರಂಭಿಸಿದೆ.
ನ್ಯಾಯಾಂಗ ಭ್ರಷ್ಟಾಚಾರ ಕುರಿತು ಗಂಭೀರ ಚರ್ಚೆಗೆ ಪೀಠಿಕೆ ಹಾಕಿದ್ದ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಸೇರಿದಂತೆ ಇನ್ನಿತರೆ ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಕುರಿತು ಚಿತ್ರದುರ್ಗದ ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಶರಣರು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ರಮೇಶ್‌ಕುಮಾರ್ ಅವರ ವಿರುದ್ಧ ಕೇಳಿ ಬಂದಿದ್ದ ಅರಣ್ಯ ಒತ್ತುವರಿ ಆರೋಪದ ಕುರಿತು ಹಾಗೂ ಡಿ ಕೆ ಶಿವಕುಮಾರ್, ಪಿ ಚಿದಂಬರಂ ಅವರ ಹೆಸರನ್ನೂ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.
ನ್ಯಾಯಾಂಗ ಭ್ರಷ್ಟಾಚಾರದ ಕುರಿತು ಶಾಸಕರು ನಡೆಸಿದ್ದ ಚರ್ಚೆಯ ಕುರಿತಾಗಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯು ವಿಸ್ತರಿಸಿದೆ. ಪತ್ರಿಕಾ ಹೇಳಿಕೆಯ ಪ್ರತಿ ಮತ್ತು ವಿಡಿಯೋ ತುಣುಕು ಸಹ ‘ದಿ ಫೈಲ್’ಗೆ ಲಭ್ಯವಾಗಿದೆ.
ಹೇಳಿಕೆಯಲ್ಲೇನಿದೆ?
‘ಈ ದೇಶದ ನ್ಯಾಯಾಂಗ ವ್ಯವಸ್ಥೆಗೆ ಭ್ರಷ್ಟಾಚಾರವನ್ನು ಕಲಿಸಿದ್ದೇ ಕಾಂಗ್ರೆಸ್ ಸರ್ಕಾರ ಎಂಬುದನ್ನು ಯಾರೂ ಮರೆಯಬಾರದು. ರಾಹುಲ್‌ಗಾಂಧಿ, ಡಿ ಕೆ ಶಿವಕುಮಾರ್, ಪಿ ಚಿದಂಬರಂ ಹೀಗೆ ಹತ್ತು ಹಲವು ಧುರೀಣರು ಸಾವಿರಾರು ಕೋಟಿ ರುಪಾಯಿಗಳ ಅಪರಾ ತಪರಾ, ಕೊಲೆ ಪ್ರಕರಣ ಮತ್ತು ಅರಣ್ಯ ಒತ್ತುವರಿ ಆರೋಪದಲ್ಲಿ ಸಿಲುಕಿರುವ ರಮೇಶ್‌ಕುಮಾರ್ ಅಂತಹವರು ಜೈಲು ಕಂಬಿ ಎಣಿಸುವುದರ ಬದಲು ಜಾಮೀನು ಪಡೆದು ಅಡ್ಡಾಡುತ್ತಾ ವ್ಯವಸ್ಥೆಯ ಬಗ್ಗೆ ವಿಧಾನಸಭೆಯಲ್ಲಿ ನ್ಯಾಯಾಂಗದ ಭ್ರಷ್ಟಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಚೋದ್ಯವೇ ಸರಿ,’ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿಗಳ ಆಯ್ಕೆಯ ವಿಷಯದಲ್ಲಿ ಕೊಲಿಜಿಯಂ ಪದ್ಧತಿಯಲ್ಲಿ ಮಾರ್ಪಾಡು ಆದರೆ ನ್ಯಾಯಾಂಗ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎಂದು ಹೇಳಿದ್ದಾರೆ. ಕೊಲಿಜಿಯಂನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದ ಅಂದಿನ ಪ್ರಧಾನಿ ನೆಹರೂ ಮತ್ತು ಇಂದಿರಾಗಾಂಧಿಯವರೇ ಇಂದಿನ ಪರಿಸ್ಥಿತಿಗೆ ನೇರ ಕಾರಣ ಎಂದೂ ಆರೋಪಿಸಿದ್ದಾರೆ.
ಶಾಸಕಾಂಗ ಮತ್ತು ಕಾರ್ಯಾಂಗ ತಮ್ಮ ಜವಾಬ್ದಾರಿಗಳನ್ನು ಮರೆತಿದ್ದಾಗ ‘ನ್ಯಾಯಾಂಗ ಕ್ರಿಯಾಶೀಲತೆ’ (ಜುಡಿಷಿಯಲ್ ಆಕ್ಟಿವಿಸಮ್) ಆರಂಭವಾಯಿತು. ಈಗೀಗ ನ್ಯಾಯಾಲಯಗಳಿಂದ ಹೊರ ಬೀಳುತ್ತಿರುವ ತೀರ್ಪುಗಳನ್ನು ನೋಡಿದರೆ ಆತಂಕವಾಗುತ್ತದೆ. ನ್ಯಾಯದ ದೀಪ ಹೊಯ್ದಾಡುತ್ತಿದ್ದು, ಎಲ್ಲಿ ಆರಿ ಹೋಗುವುದೊ ಎಂಬ ಆತಂಕ ಕಾಡುತ್ತಿದೆ’ ಎಂದು ಶಾಸಕರು ಹೇಳಿದ್ದನ್ನು ಸ್ಮರಿಸಬಹುದು.
ನ್ಯಾಯದ ದೀಪ ಹೊಯ್ದಾಡುತ್ತಿದ್ದು, ಅದು ಆರಿ ಹೋದರೆ ದೇಶದಲ್ಲಿ ಅರಾಜಕತೆಯ ಕಾರ್ಗತ್ತಲು ಕವಿಯುತ್ತದೆ. ನ್ಯಾಯಾಂಗದಲ್ಲಿ ವಿಪರೀತ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನ್ಯಾಯಾಧೀಶರು ಜನಪ್ರತಿನಿಧಿಗಳನ್ನು ಕಳ್ಳ–ಕಾಕರಂತೆ ನೋಡುತ್ತಾರೆ ಎಂದೂ ಹೇಳಿದ್ದರು.
‘ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಹೊರಗೆ ಎಲ್ಲೂ ಧ್ವನಿ ಎತ್ತಲು ಸಾಧ್ಯವಿಲ್ಲ. ಮಾತನಾಡಿದರೆ ಮಾರನೇ ದಿನವೇ ನೋಟಿಸ್ ಬರುತ್ತದೆ. ಇಲ್ಲಿ (ಸದನದಲ್ಲಿ) ಮಾತ್ರ ನಮಗೆ ರಕ್ಷಣೆ ಇದೆ. ಇಲ್ಲಿಯೇ ವಿಮರ್ಶಾತ್ಮಕವಾಗಿ ಮಾತನಾಡದಿದ್ದರೆ ಇನ್ನೆಲ್ಲಿ ಮಾತನಾಡುವುದು’ ಎಂದು ಶಾಸಕರು ಕೇಳಿದರು.
‘ಶಾಸಕಾಂಗ ಮತ್ತು ಕಾರ್ಯಾಂಗ ತಮ್ಮ ಜವಾಬ್ದಾರಿಗಳನ್ನು ಮರೆತಿದ್ದಾಗ ‘ನ್ಯಾಯಾಂಗ ಕ್ರಿಯಾಶೀಲತೆ’ (ಜುಡಿಷಿಯಲ್ ಆಕ್ಟಿವಿಸಮ್) ಆರಂಭವಾಯಿತು. ಈಗೀಗ ನ್ಯಾಯಾಲಯಗಳಿಂದ ಹೊರ ಬೀಳುತ್ತಿರುವ ತೀರ್ಪುಗಳನ್ನು ನೋಡಿದರೆ ಆತಂಕವಾಗುತ್ತದೆ. ನ್ಯಾಯದ ದೀಪ ಹೊಯ್ದಾಡುತ್ತಿದ್ದು, ಎಲ್ಲಿ ಆರಿ ಹೋಗುವುದೊ ಎಂಬ ಆತಂಕ ಕಾಡುತ್ತಿದೆ’ ಎಂದು ರಮೇಶ್‌ಕುಮಾರ್ ಹೇಳುವ ಮೂಲಕ ನ್ಯಾಯಾಂಗ ಭ್ರಷ್ಟಾಚಾರದ ಕುರಿತು ಪೀಠಿಕೆಯನ್ನು ಹಾಕಿದ್ದರು.
ಆರಂಭಿಕ ಹಂತದಲ್ಲಿ ಕಾವು ಪಡೆದುಕೊಂಡಿದ್ದ ಈ ಚರ್ಚೆ ಆನಂತರ ಅಪೂರ್ಣವಾಗುತ್ತಿದ್ದಂತೆ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಅವರು ಚರ್ಚೆಯನ್ನು ಮತ್ತಷ್ಟು ಬೆಳೆಸಲು ಮುಂದಾದರಲ್ಲದೆ, ‘ಎಲ್ಲ ಕ್ಷೇತ್ರಗಳಂತೆ ನ್ಯಾಯಾಂಗವೂ ನೈತಿಕತೆ ಕಳೆದುಕೊಂಡಿದೆ. ನ್ಯಾಯಾಂಗ ನೌಕರರ ಗೃಹ ನಿರ್ಮಾಣ ಮಂಡಳಿಯ ಸದಸ್ಯರಲ್ಲದ ಮತ್ತು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನ 84 ನ್ಯಾಯಾಧೀಶರು ನಿವೇಶನ ಖರೀದಿಸಿದ್ದಾರೆ. ನಿಯಮಾವಳಿ ಪ್ರಕಾರ ನ್ಯಾಯಾಧೀಶರಿಗೆ ನಿವೇಶನ ಖರೀದಿಸುವ ಹಕ್ಕು ಇಲ್ಲ. ಹಾಗಿದ್ದರೆ ಇವರಿಗೇ ಬೇರೆ ಕಾನೂನು ಇದೆಯೇ’ ಎಂದು ಖಾರವಾಗಿ ಪ್ರಶ್ನಿಸಿದ್ದರು.
‘ಈ ಹಗರಣ ನಡೆದು ಇಷ್ಟು ಸಮಯವಾದರೂ ಇವರ (ನ್ಯಾಯಾಧೀಶರ) ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ? ನಾವು ಯಾರ ಬಳಿ ಹೋಗಿ ನ್ಯಾಯ ಕೋರಬೇಕು? ನ್ಯಾಯಾಂಗದಲ್ಲಿ ಪಾವಿತ್ರ್ಯ ಉಳಿದಿದೆಯೇ’ ಎಂದೂ ರಾಮಸ್ವಾಮಿ ಕೇಳಿದ್ದರು. ’ಸಂವಿಧಾನದಲ್ಲಿ ಜನಪ್ರತಿನಿಧಿ ಸಭೆಯೇ ಅಂತಿಮ ಸಭೆ. ಜನಪ್ರತಿನಿಧಿಗಳು ಎಲ್ಲಿಯವರೆಗೆ ಸಮರ್ಪಕವಾಗಿ ಕೆಲಸ ಮಾಡುತ್ತಾರೋ ಅಲ್ಲಿಯವರೆಗೆ ಸಂಶಯದಿಂದ ನೋಡಬಾರದು‘ ಕಾಂಗ್ರೆಸ್ ಸದಸ್ಯ ಎಚ್.ಕೆ.ಪಾಟೀಲ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
‘ನಾನೂ ಕಾನೂನು ಸಚಿವನಾಗಿದ್ದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದ ಪ್ರಕರಣಗಳ ಸಂಖ್ಯೆಯನ್ನು ಒಬ್ಬ ದೊಡ್ಡ ವಕೀಲರ ಬಳಿ ಕೇಳಿದೆ. ಅದಕ್ಕೆ ಅವರು… ಅಯ್ಯೋ ಅದನ್ನೆಲ್ಲಾ ಕೇಳಿ ತಪ್ಪು ಮಾಡಬೇಡಿ. ಅದರಿಂದ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಗಾಬರಿ ಬೀಳಿಸಿದರು’ ಎಂದು ಪಾಟೀಲ್ ಅವರು ಹೇಳಿದ್ದನ್ನು ಸ್ಮರಿಸಬಹುದು.