ಬೆಂಗಳೂರು; ಶಿವಮೊಗ್ಗ ಜಿಲ್ಲೆಯ ಹುಣಸೋಡು ಮತ್ತು ಚಿಕ್ಕಬಳ್ಳಾಪುರದಲ್ಲಿ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ಸಂಭವಿಸಿದ ಜಿಲೆಟಿನ್ ಸ್ಪೋಟದ ಸದ್ದಿನ ನಡುವೆಯೇ ಗಣಿ ಉದ್ಯಮಿಗಳ ಮೇಲೆ ವಿಧಿಸಿದ್ದ ದಂಡದ ಪ್ರಮಾಣವನ್ನು ಅರ್ಧದಷ್ಟು ಇಳಿಕೆ ಮಾಡಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ನೀಡಿದ್ದ ಹೇಳಿಕೆ ಸಣ್ಣ ಸದ್ದೂ ಮಾಡಲಿಲ್ಲ.
ನಿರಾಣಿ ಅವರು ಒದಗಿಸಿರುವ ಮಾಹಿತಿಯಂತೆ ಎಲ್ಲಾ ಬಗೆಯ ಗಣಿಗಾರಿಕೆಯಿಂದ ಸರ್ಕಾರಕ್ಕೆ ನ್ಯಾಯಬದ್ಧವಾಗಿ ಬರಬೇಕಿರುವ ಮೊತ್ತ 6,700 ಕೋಟಿ ರು. ಇದೆ. ದಂಡದ ಪ್ರಮಾಣವನ್ನು ಅರ್ಧದಷ್ಟು ಇಳಿಕೆ ಮಾಡುವ ಹೇಳಿಕೆ ಅನುಷ್ಠಾನಗೊಂಡಲ್ಲಿ 3,350 ಕೋಟಿ ರು. ಬೊಕ್ಕಸಕ್ಕೆ ಖೋತಾ ಆಗಲಿದೆ. 6,700 ಕೋಟಿಯಲ್ಲಿ ಅರ್ಧದಷ್ಟು ಇಳಿಕೆ ಮಾಡಲು ಹೊರಟಿರುವ ಬಿಜೆಪಿ ಸರ್ಕಾರವು ಗಣಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ ಎಂಬುದನ್ನು ಮೇಲ್ನೋಟಕ್ಕೆ ಸುಲಭವಾಗಿ ತೀರ್ಮಾನಿಸಬಹುದು. ಒಂದೊಮ್ಮೆ ಈ ಹೇಳಿಕೆ ಏನಾದರೂ ಅನುಷ್ಠಾನಗೊಂಡಿದ್ದೇ ಆದಲ್ಲಿ 3,350 ಕೋಟಿಯಲ್ಲಿ ಯಾರ್ಯಾರ ಪಾಲು ಎಷ್ಟೆಷ್ಟು?.
ಐದು ಪಟ್ಟು ದಂಡ ವಸೂಲು ಮಾಡುವ ಲೆಕ್ಕಾಚಾರದಲ್ಲಿ ಬೃಹತ್ ಮೊತ್ತ ಸರ್ಕಾರದ ಬೊಕ್ಕಸಕ್ಕೆ ಬರಬೇಕಾಗಿದೆ. ಈ ಮೊತ್ತವನ್ನು ಅರ್ಧದಷ್ಟು ಕಡಿಮೆ ಮಾಡುವ ಜತೆಗೆ, ದಂಡದ ಬಾಕಿ ಪಾವತಿಗಾಗಿ ಏಕಕಂತು ತೀರುವಳಿ ಯೋಜನೆ ಜಾರಿ ಮಾಡಲಾಗುವುದು ಎಂದು ನೀಡಿರುವ ಹೇಳಿಕೆಯು, ನಿರಾಣಿ ಒಬ್ಬರ ಹೇಳಿಕೆಯಲ್ಲ, ಬದಲಿಗೆ ಸರ್ಕಾರದ ಹೇಳಿಕೆಯಂತೆಯೇ ಇದೆ.
ಬೊಕ್ಕಸಕ್ಕೆ ಸೇರಬೇಕಿರುವ ಸಾವಿರಾರು ಕೋಟಿ ರುಪಾಯಿ ಖೋತಾ ಮಾಡಲು ಹೊರಟಿರುವ ಬಗ್ಗೆ ಗಣಿ ಸಚಿವ ನಿರಾಣಿ ಅವರು ನೀಡಿರುವ ಬಹಿರಂಗ ಹೇಳಿಕೆಯೂ ರಾಜ್ಯದಲ್ಲಿ ವಿರೋಧದ ಮಾತಿರಲಿ, ಕನಿಷ್ಠ ಚರ್ಚೆಯೂ ನಡೆದಿಲ್ಲ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ತನ್ನ ಕಿವಿ ಮೇಲೆ ನಿರಾಣಿ ಹೇಳಿಕೆ ಬೀಳದಂತೆ ನೋಡಿಕೊಂಡವು. ಹೇಳಿಕೆ ನೀಡಿದ್ದ ಸಂದರ್ಭದಲ್ಲೇ ಅಧಿವೇಶನ ನಡೆಯುತ್ತಿತ್ತಾದರೂ ಸಿ ಡಿ ಗದ್ದಲದ ಮುಂದೆ ಬೊಕ್ಕಸದಿಂದ 3,350 ಕೋಟಿ ರು. ಕೈ ತಪ್ಪಲಿದೆ ಎಂಬ ಹೇಳಿಕೆಯ ಸದ್ದು ಕೇಳಿಸಲೇ ಇಲ್ಲ.
ಹೀಗೆ ಅಪರಾಧ ಕೃತ್ಯಗಳಿಗೆ ಮತ್ತು ನಿಯಮ ಉಲ್ಲಂಘನೆಗಳ ಅಕ್ರಮಗಳನ್ನು ಸಕ್ರಮ ಮಾಡುವುದರ ಬದಲಿಗೆ ಎಲ್ಲಾ ತರಹದ ಅಪರಾಧಿ ಕೃತ್ಯಗಳಿಗೆ ಸರ್ಕಾರ ಒಂದು ರೇಟ್ ಫಿಕ್ಸ್ ಮಾಡುವುದು ಒಳಿತು. ಆಗ ಖಜಾನೆಯೂ ತುಂಬುತ್ತದೆ. ನ್ಯಾಯ ನೀತಿ ಎಂದು ಹೋರಾಡುವವರ ಶ್ರಮ ಮತ್ತು ನೆಮ್ಮದಿಯೂ ಉಳಿಯುತ್ತದೆ. ಇದೊಂದು ನಾಚಿಕೆಗೆಟ್ಟ ಅಪರಾಧಗಳನ್ನು ಪ್ರೋತ್ಸಾಹಿಸುವ ಕಡು ಭ್ರಷ್ಟ ಸರ್ಕಾರದ ನಿರ್ಧಾರ. ವಿಪರ್ಯಾಸವೆಂದರೆ ಶಾಸನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಹ ಈ ಕಾನೂನುಬಾಹಿರ ನಿರ್ಧಾರಕ್ಕೆ ಮೌನ ಸಮ್ಮತಿ ಸೂಚಿಸಿದ್ದಾರೆ. ನಿರಾಣಿ ನೀಡಿರುವ ಹೇಳಿಕೆಯನ್ನು ಕರ್ನಾಟಕ ರಾಷ್ಟ್ರಸಮಿತಿ ಕಟುವಾಗಿ ಖಂಡಿಸುತ್ತದೆ.
ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು
ಕರ್ನಾಟಕ ರಾಷ್ಟ್ರಸಮಿತಿ
ಕೋವಿಡ್‌ನಿಂದಾಗಿ ಉದ್ಭವಿಸಿರುವ ಸಂಕಷ್ಟವು ಆರ್ಥಿಕತೆ ಮೇಲೂ ಭಾರೀ ಪೆಟ್ಟು ನೀಡಿದೆ. ಸಂಪನ್ಮೂಲ ಸಂಗ್ರಹಣೆಯಲ್ಲಿನ ಕೊರತೆಯಿಂದಾಗಿ ಚಾಲ್ತಿಯಲ್ಲಿರುವ ಜನಪ್ರಿಯ ಯೋಜನೆಗಳನ್ನೂ ಸರ್ಕಾರ ಕೈ ಬಿಟ್ಟಿದೆ. ಇಂತಹ ಹೊತ್ತಿನಲ್ಲಿ ಗಣಿ ಉದ್ಯಮಗಳಿಗೆ ದಂಡದಲ್ಲಿ ಅರ್ಧದಷ್ಟು ರಿಯಾಯಿತಿ-ವಿನಾಯಿತಿ ನೀಡಲು ಮುಂದಾಗಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ದನಿ ಎತ್ತಿಲ್ಲವೇಕೆ, ಅಕ್ರಮ ಗಣಿಗಾರಿಕೆ ಪ್ರಕರಣಗಳ ವಿರುದ್ಧ ಲೋಕಾಯುಕ್ತಕರು ನೀಡಿದ್ದ ವರದಿಯನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ ಆದಿಯಾಗಿ ಯಾವೊಬ್ಬ ಕಾಂಗ್ರೆಸ್ ಮುಖಂಡರೂ ದಂಡದ ಮೊತ್ತವನ್ನು ಇಳಿಸುತ್ತಿರುವ ಕುರಿತು ಬಾಯಿಬಿಡುತ್ತಿಲ್ಲವೇಕೆ?
ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಮತ್ತು ದಂಡ ಮೊತ್ತದಲ್ಲಿ ಪೈಸೆ ಪೈಸೆಯನ್ನೂ ವಸೂಲಿ ಮಾಡುತ್ತೇವೆ ಎಂದು ಅಧಿಕಾರಕ್ಕೇರಿದ್ದ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ಸಿಗರು ಮಾಡಿದ್ದ ವಾಗ್ದಾನ ಈಡೇರಿಸಿಲ್ಲ. ಇನ್ನು ನಿರಾಣಿ ಹೇಳಿಕೆಯನ್ನು ಹೇಗೆ ತಾನೇ ವಿರೋಧಿಸಬಲ್ಲರು ಅಥವಾ ವಿರೋಧಿಸಲು ನೈತಿಕತೆಯನ್ನೂ ಉಳಿಸಿಕೊಂಡಿಲ್ಲವಲ್ಲವೇ…?
ಲೋಕಾಯುಕ್ತ ವರದಿ ಏನಾಯಿತು?
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಪ್ರಕರಣಗಳ ಸಂಬಂಧ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿ ಪ್ರಕಾರ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದು 12,228 ಕೋಟಿ ರುಪಾಯಿ. ನಷ್ಟಕ್ಕೆ ಕಾರಣರಾದ ಗಣಿ ಉದ್ಯಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿರುವ ಮಾತಿರಲಿ ಒಟ್ಟು ನಷ್ಟದ ಪೈಕಿ ಎಷ್ಟು ಮೊತ್ತವನ್ನು ವಸೂಲು ಮಾಡಲಾಗಿದೆ ಎಂದು ಸಿದ್ದರಾಮಯ್ಯ ನೇತೃತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರ ಶ್ವೇತಪತ್ರವನ್ನೂ ಹೊರಡಿಸಲಿಲ್ಲ.
ಸಚಿವ ಸಂಪುಟ ಉಪ ಸಮಿತಿಯಲ್ಲಿ ಬಹಿರಂಗವಾಗಿದ್ದೇನು?
ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ಲೋಕಾಯುಕ್ತರು ನೀಡಿದ್ದ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಆಗಿದ್ದ ಒಂದೇ ಒಂದು ಕ್ರಮವೆಂದರೆ ಸಚಿವ ಸಂಪುಟದ ಉಪ ಸಮಿತಿ ರಚಿಸಿದ್ದು. ಎಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿದ್ದ ಸಚಿವ ಸಂಪುಟದ ಉಪ ಸಮಿತಿ ನಡೆಸಿದ್ದ ಸಭೆಗಳಲ್ಲಿ ಬಹಿರಂಗಗೊಂಡಿದ್ದ ಮಾಹಿತಿಗಳೇ ಆಘಾತಕಾರಿಯಾಗಿದ್ದವು. ಅವೆಲ್ಲವೂ ಸಾರ್ವಜನಿಕವಾಗಿ ಚರ್ಚೆಗೆ ಬಂದಿದ್ದರೆ ಅಥವಾ ಸಂಪುಟ ಉಪ ಸಮಿತಿ ನಿರ್ಧಾರ, ಶಿಫಾರಸ್ಸುಗಳನ್ನೇನಾದರೂ ಹಿಂದಿನ ಸರ್ಕಾರ ಜಾರಿಗೊಳಿಸಿದ್ದರೆ ಅಕ್ರಮ ಗಣಿಗಾರಿಕೆ ನಡೆಸಿದವರು ಸೆರೆಮನೆಯಲ್ಲಿರಬೇಕಿತ್ತು. ದಂಡ ರೂಪದಲ್ಲಿ ಒಂದು ಲಕ್ಷ ಕೋಟಿಗೂ ಹೆಚ್ಚಿನ ಮೊತ್ತ ಬೊಕ್ಕಸ ಸೇರಬೇಕಿತ್ತು.
ಅಕ್ರಮ ಗಣಿಗಾರಿಕೆ ನಡೆದಿರುವ ಗಣಿ ಪ್ರದೇಶಗಳಲ್ಲಿದ್ದ ಅದಿರನ್ನು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿ ಮತ್ತು ನಿರ್ದೇಶನದ ಪ್ರಕಾರ ಹರಾಜು ಹಾಕಲಾಗಿತ್ತೇ ವಿನಃ ಕಾಂಗ್ರೆಸ್ ಸರ್ಕಾರದ ತೀರ್ಮಾನದಿಂದೇನಲ್ಲ. ಒಂದು ವೇಳೆ ಲೋಕಾಯುಕ್ತರ ಶಿಫಾರಸ್ಸಿನ ಪ್ರಕಾರ ಮತ್ತು ಚಾಲ್ತಿಯಲ್ಲಿದ್ದ ನಿಯಮದ ಪ್ರಕಾರ 5 ಪಟ್ಟು ದಂಡ ವಿಧಿಸಿದ್ದ ಮೊತ್ತದ ವಸೂಲಿಗೆ ಹೋಲಿಸಿದರೆ ಹರಾಜಿನಿಂದ ಬಂದಿರುವ ಸಾವಿರಾರು ಕೋಟಿ ರು. ಮೊತ್ತವೂ ಚಿಲ್ಲರೆ ಲೆಕ್ಕದಲ್ಲಿರುವುದು ಗಮನಾರ್ಹ.