ಬೆಂಗಳೂರು; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಸಿಡಿದೆದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ತಮ್ಮ ಇಲಾಖೆಯಲ್ಲಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಪಾದಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ದೂರು ನೀಡುವ ಒಂದು ತಿಂಗಳ ಮುನ್ನವೇ ‘ದಿ ಫೈಲ್’, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಗೆ 65 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳ ಸಚಿವಾಲಯ ಒತ್ತಡ ಹೇರಿತ್ತು ಎಂಬುದನ್ನು ಬಹಿರಂಗಪಡಿಸಿತ್ತು.
ಮುಖ್ಯಮಂತ್ರಿ ಸಚಿವಾಲಯವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕುರಿತು ‘ದಿ ಫೈಲ್’ ಫೆ.11ರಂದು ‘ಆರಂಭಗೊಳ್ಳದ ಕಾಮಗಾರಿ; 65 ಕೋಟಿ ಬಿಡುಗಡೆಗೆ ಸಿಎಂ ಸಚಿವಾಲಯ ಒತ್ತಡ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು.
ಆಡಳಿತಾರೂಢ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿರುವ ಈಶ್ವರಪ್ಪ ಅವರು ನೀಡಿರುವ ದೂರಿನ ಮೂರನೇ ಪುಟದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಗೆ 65 ಕೋಟಿ ರು ಬಿಡುಗಡೆ ಮಾಡಿಸಲು ಮುಖ್ಯಮಂತ್ರಿಗಳ ಸಚಿವಾಲಯ ಒತ್ತಡ ಹೇರಿದೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ. ‘ಇದಕ್ಕೆ ಸಂಬಂಧಿಸಿದ ಕಡತ ತಮ್ಮ ಕಚೇರಿಯಲ್ಲಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ನೇರವಾಗಿ ಕಡತ ಸಲ್ಲಿಸಲು ಸೂಚಿಸಿದ್ದಾರೆ,’ ಎಂದು ಈಶ್ವರಪ್ಪ ಅವರು ದೂರಿನಲ್ಲಿ ವಿವರಿಸಿದ್ದಾರೆ.
ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ರಸ್ತೆ ಕಾಮಗಾರಿ ಸಂಬಂಧಿಸಿದಂತೆ 65 ಕೋಟಿ ರು.ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದಾರೆ ಎಂದು ವರದಿ ಮಾಡಿತ್ತು.
ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿರುವ ಮರಿಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ನಿಕಟವರ್ತಿಗಳು ಎಂಬ ಒಂದೇ ಕಾರಣಕ್ಕೆ ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿ ಮುತುವರ್ಜಿ ವಹಿಸುತ್ತಿದ್ದಾರೆ ಎಂದು ‘ದಿ ಫೈಲ್’ ಹೊರಗೆಡವಿತ್ತು.
ಕಾಮಗಾರಿಗೆ ಅನುಮೋದನೆ ದೊರೆತಿದೆಯಾದರೂ ಇದನ್ನು ತುಂಡು ಗುತ್ತಿಗೆ ಕೊಡಬೇಕೇ ಅಥವಾ ನೇರವಾಗಿ ಟೆಂಡರ್ ಕರೆಯಬೇಕೆ ಎಂಬ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯೂ ನಿರ್ಧರಿಸಿಲ್ಲ. ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಯದೆಯೇ ಅಷ್ಟೊಂದು ಮೊತ್ತವನ್ನು ಏಕಾಏಕಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳುತ್ತಿದೆ. ಆದರೂ ಮುಖ್ಯಮಂತ್ರಿಗಳ ಸಚಿವಾಲಯವು ಹಣ ಬಿಡುಗಡೆ ಸಂಬಂಧ ಒತ್ತಡವನ್ನು ಮುಂದುವರೆಸಿದ್ದನ್ನು ‘ದಿ ಫೈಲ್’ ಬಹಿರಂಗಪಡಿಸಿತ್ತು.
ದೂರಿನಲ್ಲಿ ಇನ್ನೇನಿದೆ?
ಗ್ರಾಮೀಣ ಸುಮಾರ್ಗ ಯೋಜನೆಯಡಿ 5 ವರ್ಷಗಳಲ್ಲಿ 20 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ನಿಗದಿಪಡಿಸಿದ್ದ 780 ಕೋಟಿ ಹಣಕಾಸು ಇಲಾಖೆ ಬಿಡುಗಡೆ ಮಾಡಿಲ್ಲ. ಇದಕ್ಕೆ ಕಾರಣವೇನೆಂದು ಗೊತ್ತಿಲ್ಲ ಎಂದು ಈಶ್ವರಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ.
2020–21 ರ ಬಜೆಟ್‌ನಲ್ಲಿ ಪ್ರಕಟಿಸಿದ ಇತರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣಕಾಸು ಇಲಾಖೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ವಿಶೇಷ ಅನುದಾನದ ಹೆಸರಿನಲ್ಲಿ (ಬಜೆಟ್ ಹೊರತುಪಡಿಸಿ) 1,439.25 ಕೋಟಿಗೆ ಅನುಮೋದನೆ (ಹಿಂದಿನ ಸರ್ಕಾರದ ಬಿಡುಗಡೆ ಮಾಡಿದ ₹973.80 ಕೋಟಿ ಬಿಟ್ಟು) ನೀಡಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
81 ವಿಧಾನಸಭಾ ಕ್ಷೇತ್ರಗಳಿಗೆ 775 ಕೋಟಿ ರು.ಗೆ ಹಣಕಾಸು ಇಲಾಖೆ ಇತ್ತೀಚೆಗೆ ಅನುಮೋದನೆ ನೀಡಿದೆ. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ 5 ಕೋಟಿಯಿಂದ 23 ಕೋಟಿವರೆಗೆ ಅನುದಾನ ಹಂಚಿಕೆ ಮಾಡಿದೆ. ಬೇಕಾಬಿಟ್ಟಿ ಹಣ ನೀಡುವುದರಿಂದ ಗ್ರಾಮೀಣ ಮೂಲಸೌಕರ್ಯ ಯೋಜನೆಗಳ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರಲಿದೆ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ವಿಶೇಷ ಅನುದಾನ ಯೋಜನೆಯಡಿ ಜಾರಿಗೊಳಿಸಿರುವ 5 ಲಕ್ಷದೊಳಗೆ ರಸ್ತೆ ಕಾಮಗಾರಿಯು ರಸ್ತೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಲ್ಲದೆ, ಅಕ್ರಮದ ಆರೋಪಕ್ಕೂ ಒಳಗಾಗಬೇಕಾಗುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಈಗಾಗಲೇ 3,998.56 ಕೋಟಿ ಅನುಮೋದನೆ ನೀಡಿದೆ. ಅದರಲ್ಲಿ 1,600.42 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಇನ್ನೂ 2,398.18 ಕೋಟಿ. ಬಿಡುಗಡೆ ಮಾಡಬೇಕಿದೆ. ಇದರ ಅರ್ಥ ನನ್ನ ಇಲಾಖೆಯ ಯೋಜನೆಗಳನ್ನು ಕಡೆಗಣಿಸಲಾಗುತ್ತಿದೆ. ಈಗಿನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕರ ಹಣ ದುರುಪಯೋಗ ಎಂದೇ ಕರೆಯಬೇಕಾಗುತ್ತದೆ’ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.