ಜಾರಕಿಹೊಳಿ ವಿರುದ್ಧ 376-ಸಿ ಸೆಕ್ಷನ್; ‘ದಿ ಫೈಲ್‌’ ಮುಂದಿಟ್ಟಿದ್ದ ಕಾನೂನಿನ ಆಯಾಮ ವಿಸ್ತರಣೆ

ಬೆಂಗಳೂರು; ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ 376 (ಸಿ) ದಾಖಲಿಸಿರುವುದರ ಹಿಂದೆ ಬಿಜೆಪಿ ಸರ್ಕಾರದ ದುರುದ್ದೇಶ ಅಡಗಿದೆ ಎಂದು ‘ದಿ ಫೈಲ್‌’ ಮುಂದಿಟ್ಟಿದ್ದ ಕಾನೂನಿನ ಆಯಾಮವನ್ನು ಇದೀಗ ಹಿರಿಯ ಕಾನೂನು ತಜ್ಞ ಸಿ ಎಚ್‌ ಹನುಮಂತರಾಯ ಅವರೂ ಸೇರಿದಂತೆ ಹಲವರು ವಿಸ್ತರಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡ ಮಾಡಿರುವ ಅವರು 376 (ಸಿ) ದಾಖಲಿಸಿರುವುದರ ಹಿಂದೆ ಆರೋಪಿಗೆ ಅನುಕೂಲ ಮಾಡಿಕೊಡುವ ಕಪಟತನವಿದೆ. ಸಾಂಸ್ಥಿಕ ದೌರ್ಜನ್ಯದ ವ್ಯಾಪ್ತಿಗೆ ಈ ದೂರನ್ನು ಸೀಮಿತಗೊಳಿಸಿದರೆ ಆರೋಪಿಯು ಸುಲಭವಾಗಿ ಜಾಮೀನು ಪಡೆದುಕೊಳ್ಳಲು ಅನುವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ರಮೇಶ ಜಾರಕಿಹೊಳಿ ನುಣುಚಿಕೊಳ್ಳಲು 376-ಸಿ ಸೆಕ್ಷನ್ ದಾರಿಯಾಗಲಿದೆಯೇ? ಎಂದು ‘ದಿ ಫೈಲ್‌’ 2021ರ ಮಾರ್ಚ್‌ 27ರಂದು ಕಾನೂನಿನ ಅಂಶಗಳನ್ನಾಧರಿಸಿ ವರದಿಯನ್ನು ಪ್ರಕಟಿಸಿತ್ತು.

ಅತ್ಯಾಚಾರ ಆರೋಪ; ರಮೇಶ ಜಾರಕಿಹೊಳಿ ನುಣುಚಿಕೊಳ್ಳಲು 376-ಸಿ ಸೆಕ್ಷನ್ ದಾರಿಯಾಗಲಿದೆಯೇ?

ಹೇಳಿಕೆಯಲ್ಲೇನಿದೆ?

ಸಚಿವರಾಗಿದ್ದವರೊಬ್ಬರ ವಿರುದ್ಧ ಯುವತಿಯೊಬ್ಬರು ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ದೂರು ನೋಂದಾಯಿಸಲ್ಪಟ್ಟಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ ಸಚಿವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದರೆ ನೌಕರಿ ಕೊಡಿಸುವ ಆಮಿಷ ಒಡ್ಡಿ ಬಲೆಗೆ ಹಾಕಿಕೊಂಡಿದ್ದಾಗಿ ತಿಳಿಸಿದ್ದಾರೆ. ಸಚಿವರೊಬ್ಬರು ಸಾರ್ವಜನಿಕ ನೌಕರ. ತನ್ನ ಶಾಸನಬದ್ಧ ಅಧಿಕಾರವನ್ನು ಬಳಸಿ ಅಕ್ರಮವಾಗಿ ಕೆಲಸ ಕೊಡಿಸುವುದನ್ನು ದುರ್ನಡತೆ ಎಂದು ವ್ಯಾಖ್ಯಾನಿಸಲಾಗಿದೆ. ಭ್ರಷ್ಟಾಚಾರ ಕೇವಲ ಹಣದ ರೂಪದಲ್ಲಿಯೇ ಇರಬೇಕಾಗಿಲ್ಲ. ಅದು ಯಾವ ಬಗೆಯಲ್ಲಾದರೂ ಇರಬಹುದು. ಇದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹವಾದುದು ಎಂದು ಹೇಳಿಕೆಯಲ್ಲಿ ಸಿ ಎಚ್‌ ಹನುಮಂತರಾಯ, ವಕೀಲರಾದ ಕೆ.ಬಿ.ಕೆ.ಸ್ವಾಮಿ, ಡೆರಿಕ್ ಅನಿಲ್‌ ವಿವರಿಸಿದ್ದಾರೆ.

ಬಾಧಿತೆಯ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್ 376C ಅಡಿಯಲ್ಲಿ ಎಫ್.ಐ.ಆರ್ ಹೂಡಲಾಗಿದೆ. ಹೆಣ್ಣೊಂದು ಸಾಂಸ್ಥಿಕವಾಗಿ ಕಾನೂನಿನ ರಕ್ಷಣೆಯಲ್ಲಿದ್ದಾಗ ನಡೆಯುವ ದೌರ್ಜನ್ಯದ ಕುರಿತು ಈ ಕಲಂ ಸ್ಪಷ್ಟವಾಗಿ ಹೇಳುತ್ತದೆ. ಮಾಜಿ ಸಚಿವರ ಪ್ರಕರಣದಲ್ಲಿ ಸಂತ್ರಸ್ತೆಯು ಕಾನೂನಿನ ದೃಷ್ಟಿಯಿಂದ ಯಾವುದೇ ಸಾಂಸ್ಥಿಕ ಹಿಡಿತದಲ್ಲಿ ಇರಲಿಲ್ಲ. ಅಲ್ಲದೆ ಸಚಿವರನ್ನು ಒಂದು ಸಂಸ್ಥೆಯೆಂದು ಅರ್ಥೈಸಲಾಗದು. ಜೈಲು, ಆಸ್ಪತ್ರೆ, ಮಹಿಳಾ ರಕ್ಷಣಾ ಕೇಂದ್ರ, ಮಹಿಳಾ ಹಾಸ್ಟೆಲ್‌ನಂತಹ ವಸತಿ ಕೇಂದ್ರದಲ್ಲಿ ಮಹಿಳೆಯರು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಕಾನೂನಿನ ಅಡಿಯಲ್ಲಿ ರಕ್ಷಣೆಯಲ್ಲಿರುತ್ತಾರೆ. ಅಲ್ಲಿ ಜರುಗುವ ಲೈಂಗಿಕ ಅಪರಾಧ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡು ರೂಪಿಸಿರುವ ಕಾನೂನಿನ ಅಂಶವನ್ನು ಸದರಿ ಪ್ರಕರಣದಲ್ಲಿ ಅಳವಡಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ.

ಈ ಸರಳ ಕಾನೂನಿನ ಅಂಶ ಪೊಲೀಸ್‌ ಇಲಾಖೆಗೆ ತಿಳಿದಿಲ್ಲ ಎಂದು ಭಾವಿಸಲಾಗದು. ಇದರ ಹಿಂದೆ ಆರೋಪಿಗೆ ಅನುಕೂಲ ಮಾಡಿಕೊಡುವ ಕಪಟತನವಿದೆ. ಸಾಂಸ್ಥಿಕ ದೌರ್ಜನ್ಯದ ವ್ಯಾಪ್ತಿಗೆ ಈ ದೂರನ್ನು ಸೀಮಿತಗೊಳಿಸಿದರೆ ಆರೋಪಿಯು ಸುಲಭವಾಗಿ ಜಾಮೀನು ಪಡೆದುಕೊಳ್ಳಲು ಅನುವಾಗುತ್ತದೆ. ಅಲ್ಲದೆ ಈ ಪ್ರಕರಣವನ್ನು ಅತ್ಯಾಚಾರವಲ್ಲದ ಲೈಂಗಿಕ ಕ್ರಿಯೆ ಎಂದು ವ್ಯಾಖ್ಯಾನಿಸಿ, ಕಾನೂನಿನ ಅಡಿಯಲ್ಲಿ ಸಂತ್ರಸ್ತೆಗೆ ದೊರಕುವ ಕಾನೂನಿನ ಮೂಲಭೂತ ರಕ್ಷಣೆಯನ್ನು ಹೊಸಕಿ ಹಾಕುವ ಹುನ್ನಾರ ಅಡಗಿದೆಯೇ ಎಂಬ ಬಲವಾದ ಶಂಕೆಗೆ ಎಡೆಮಾಡಿಕೊಟ್ಟಂತಾಗುತ್ತದೆ.

ಹಾಗಾಗಿ ಈ ಪ್ರಕರಣದಲ್ಲಿ ಸೆಕ್ಷನ್ 376ರ ಅಡಿಯಲ್ಲಿಯೇ ತನಿಖೆಯನ್ನು ಸ್ಥಿರಗೊಳಿಸಬೇಕು. ಕಾನೂನಿನ ಅಡಿಯಲ್ಲಿ ಶೋಷಿತರಿಗೆ ನ್ಯಾಯಬದ್ಧವಾಗಿ ಲಭಿಸಬೇಕಾದ ರಕ್ಷಣೆಗಳನ್ನು ತಪ್ಪಿಸುವುದು ಅಕ್ಷ್ಯಮ. ಇಲ್ಲದೇ ಹೋದಲ್ಲಿ ಇದು ಸರ್ಕಾರದ ತನಿಖಾ ಸಂಸ್ಥೆಗಳು ಅತ್ಯಾಚಾರ ಸಂತ್ರಸ್ತೆಯ ಮೇಲೆ ನಡೆಸುವ ಪರೋಕ್ಷ ದಾಳಿಯೆಂದು ಅರ್ಥೈಸಬೇಕಾದೀತು ಎಂದು ವಿಶ್ಲೇಷಿಸಿದ್ದಾರೆ.

the fil favicon

SUPPORT THE FILE

Latest News

Related Posts