ಬೆಟ್ಟದಂತೆ ಮೇಲೆದ್ದಿದೆ ಕಡತಗಳ ರಾಶಿ; ವಿಲೇವಾರಿಗೆ ಕಾಯುತ್ತಿವೆ 86,066 ಕಡತಗಳು

ಬೆಂಗಳೂರು; ಸರ್ಕಾರದ 41 ಇಲಾಖೆಗಳಲ್ಲಿ ಕಡತಗಳು ವಿಲೇವಾರಿಯಾಗದೇ ಬೆಟ್ಟದಂತೆ ಬೆಳೆಯುತ್ತಿದೆ. ಕಡತ ವಿಲೇವಾರಿಗೆ ಯಜ್ಞದ ರೀತಿಯಲ್ಲಿ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ 2020ರ ಡಿಸೆಂಬರ್‌ 17ರ ಅಂತ್ಯಕ್ಕೆ 86,066 ಕಡತಗಳು ವಿಲೇವಾರಿ ಆಗದೇ ಬಾಕಿ ಉಳಿದುಕೊಂಡಿವೆ.

ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ರಮೇಶ್‌ ಜಾರಕಿಹೊಳಿ ಅವರು ಸಚಿವರಾಗಿದ್ದ ಜಲ ಸಂಪನ್ಮೂಲ ಇಲಾಖೆಯಲ್ಲಿ 5,506 ಕಡತಗಳು ವಿಲೇವಾರಿ ಆಗಿಲ್ಲ.

ಇಷ್ಟು ಸಂಖ್ಯೆಯ ಕಡತಗಳು 2020ರ ಡಿಸೆಂಬರ್‌ನಿಂದ 2021ರ ಮಾರ್ಚ್‌ 18ರವರೆಗೂ ವಿಲೇವಾರಿಯಾಗದೇ ಇಲಾಖಾ ಮುಖ್ಯಸ್ಥರ ಕಚೇರಿಯೂ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳ ಟೇಬಲ್‌ , ಅಲ್ಮೇರಾಗಳೊಳಗೆ ಪೇರಿಸಿಡಲಾಗಿದೆ. ಕಡತಗಳ ವಿಲೇವಾರಿಯಲ್ಲಿನ ವಿಳಂಬವು ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಕೈಗನ್ನಡಿ ಹಿಡಿದಂತಾಗಿದೆ. ಕಡತಗಳ ವಿಲೇವಾರಿಯಲ್ಲಿನ ವಿಳಂಬದ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚೆಗಷ್ಟೇ ಕಿಡಿ ಕಾರಿದ್ದರೂ ವಿಲೇವಾರಿಯತ್ತ ಚುರುಕು ಕಂಡು ಬಂದಿಲ್ಲ.

ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ, ಹಜ್‌ ಮತ್ತು ವಕ್ಫ್‌, ಪ್ರವಾಸೋದ್ಯಮ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಕಡತಗಳು ತೆವಳುತ್ತಿವೆ. 2021ರ ಜನವರಿ 16ರಿಂದ ಮಾರ್ಚ್‌ 18 ರವರೆಗೆ ಕಡತ ವಿಲೇವಾರಿಯಲ್ಲಿ ಈ ಮೂರೂ ಇಲಾಖೆಗಳ ವೇಗ ಶೇ.54ರಿಂದ ಶೇ.67.6ರಷ್ಟಿವೆ. ಅಲ್ಪಸಂಖ್ಯಾತ, ಹಜ್‌ ವಕ್ಫ್‌ ಇಲಾಖೆಯಲ್ಲಿ 313, ಪ್ರವಾಸೋದ್ಯಮ ಇಲಾಖೆಯಲ್ಲಿ 675, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ 6,574 ಕಡತಗಳು ಬಾಕಿ ಇರುವುದು ತಿಳಿದು ಬಂದಿದೆ.

ಇಂಧನ ಇಲಾಖೆಯಲ್ಲಿ 1,045, ಪಶು ಸಂಗೋಪನೆ ಮೀನುಗಾರಿಕೆಯಲ್ಲಿ 1696, ಸಣ್ಣ ನೀರಾವರಿಯಲ್ಲಿ 1,203, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 5,963, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 1,651, ನಗರಾಭಿವೃದ್ಧಿ ಇಲಾಖೆಯಲ್ಲಿ 12,268 ಕಡತಗಳು ಬಾಕಿ ಇವೆ. ಅದೇ ರೀತಿ ಉನ್ನತ ಶಿಕ್ಷಣ ಇಲಾಖೆಯಲ್ಲಿ 1,995, ಲೋಕೋಪಯೋಗಿ ಇಲಾಖೆಯಲ್ಲಿ 2,102, ಜಲ ಸಂಪನ್ಮೂಲ ಇಲಾಖೆಯಲ್ಲಿ 5,506, ಕೃಷಿ ಇಲಾಖೆಯಲ್ಲಿ 2,038, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ 4,132, ಸಮಾಜ ಕಲ್ಯಾಣ ಇಲಾಖೆಯಲ್ಲಿ 2,068, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಲ್ಲಿ 1,316, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ 3,560, ಕಂದಾಯ ಇಲಾಖೆಯಲ್ಲಿ 9,825, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ 3,494, ವೈದ್ಯಕೀಯ ಶಿಕ್ಷಣದಲ್ಲಿ 2,592, ಆರ್ಥಿಕ ಇಲಾಖೆಯಲ್ಲಿ 1,359, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3,608, ಕಾನೂನು ಇಲಾಖೆಯಲ್ಲಿ 1,222, ಒಳಾಡಳಿತದಲ್ಲಿ 4,765 ಸೇರಿದಂತೆ ಒಟ್ಟು 41 ಇಲಾಖೆಗಳಲ್ಲಿ ಒಟ್ಟು 86,066 ಕಡತಗಳು ಬಾಕಿ ಇವೆ.

ಕಡತಗಳ ವಿಲೇವಾರಿಯಲ್ಲಿನ ವಿಳಂಬ ತಡೆಗಟ್ಟುವ ಸಲುವಾಗಿ ಜಾರಿಗೊಳಿಸಿದ್ದ ಇ-ಅಫೀಸ್‌ ತಂತ್ರಾಂಶದಲ್ಲಿರುವ ಕಡತಗಳೂ ನಿಗದಿತ ಅವಧಿಯೊಳಗೆ ವಿಲೇವಾರಿಯಾಗುತ್ತಿಲ್ಲ. ಬಾಕಿ ಇರುವ ಒಟ್ಟು 86,077 ಕಡತಗಳ ಪೈಕಿ 34,795 ಕಡತಗಳು ಇ-ಆಫೀಸ್‌ನಲ್ಲಿರುವುದು ತಿಳಿದು ಬಂದಿದೆ.

 

2020ರ ನವೆಂಬರ್‌ 20ರಲ್ಲಿ ಎಫ್‌ಎಂಎಸ್‌ ಮತ್ತು ಇ-ಆಫೀಸ್‌ ಸೇರಿ ಒಟ್ಟು 87,881 ಕಡತಗಳಿದ್ದರೇ ಡಿಸೆಂಬರ್‌ 17ರ ಅಂತ್ಯಕ್ಕೆ 29,518 ಕಡತಗಳನ್ನು ಹೊಸದಾಗಿ ತೆರೆಯಲಾಗಿತ್ತು. ಇದೇ ಅವಧಿಯಲ್ಲಿ 31,333 ಕಡತಗಳು ಮುಕ್ತಾಯಗೊಂಡಿದೆಯಾದರೂ ಇದನ್ನು ಹೊರತುಪಡಿಸಿಯೂ 86,066 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿರುವುದು ದಾಖಲೆಯಿಂದ ಗೊತ್ತಾಗಿದೆ.

‘ಕಡತಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳ ಹಂತದಲ್ಲಿ ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಂಡರೂ ವಿಷಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಕೋರುವ ನೆಪದಲ್ಲಿ ಮೇಲಾಧಿಕಾರಿಗಳು ತಮ್ಮ ಬಳಿಯೇ ಕಡತವನ್ನು ಇರಿಸಿಕೊಂಡಿರುತ್ತಾರೆ. ಹಲವು ಇಲಾಖೆಗಳು ಕೂಡ ಸಕಾಲದಲ್ಲಿ ಅಭಿಪ್ರಾಯವನ್ನು ನೀಡದಿರುವುದು ಕೂಡ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗಲು ಕಾರಣ,’ ಎನ್ನುತ್ತಾರೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು.

SUPPORT THE FILE

Latest News

Related Posts