ಅತ್ಯಾಚಾರ ಆರೋಪ; ರಮೇಶ ಜಾರಕಿಹೊಳಿ ನುಣುಚಿಕೊಳ್ಳಲು 376-ಸಿ ಸೆಕ್ಷನ್ ದಾರಿಯಾಗಲಿದೆಯೇ?

ಬೆಂಗಳೂರು; ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ನಗರದ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗುವ ಮೂಲಕ ಸಿ ಡಿ ಪ್ರಕರಣ ದಿನಕ್ಕೊಂದು ತಿರುವ ಪಡೆದುಕೊಳ್ಳುತ್ತಿರುವ ನಡುವೆಯೇ ಈ ಪ್ರಕರಣದಿಂದ ರಮೇಶ್‌ ಜಾರಕಿಹೊಳಿ ಅವರನ್ನು ಸುಲಭವಾಗಿ ಪಾರಾಗಿಸಲು ಬಿಜೆಪಿ ಸರ್ಕಾರ ಹೂಡಿರುವ ತಂತ್ರ ಬಹಿರಂಗವಾಗಿದೆ. ಆರೋಪಿ ವಿರುದ್ಧ 376 (ಸಿ) ದಾಖಲಿಸಿರುವುದರ ಹಿಂದೆ ಬಿಜೆಪಿ ಸರ್ಕಾರದ ದುರುದ್ದೇಶ ಅಡಗಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

ರಮೇಶ್‌ ಜಾರಕಿಹೊಳಿ ಅವರ ವಿರುದ್ಧ 376(1) ಕಲಂನ್ನು ದಾಖಲಿಸದ ಪೊಲೀಸರು, 376-ಸಿ ಸೆಕ್ಷನ್‌ ದಾಖಲಿಸಿರುವುದು ಆರೋಪಿಯು ಈ ಪ್ರಕರಣದಿಂದ ಸುಲಭವಾಗಿ ನುಣುಚಿಕೊಳ್ಳಲು ದಾರಿಮಾಡಿಕೊಡಲಾಗಿದೆಯೇ ಎಂಬ ಅನುಮಾನಗಳು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿವೆ. ಅದೇ ರೀತಿ ಜಾರಕಿಹೊಳಿ ಅವರ ವಿರುದ್ಧ ಹೊರಿಸಿರುವ ಆರೋಪಗಳನ್ನು ಸಂತ್ರಸ್ತೆಯೇ ರುಜುವಾತು ಪಡಿಸಬೇಕಾದ ಅನಿವಾರ್ಯತೆಯನ್ನೂ ಸೃಷ್ಟಿಸಿದೆ. ಹಾಗೆಯೇ ಇದೊಂದು ಒಪ್ಪಿತ ಲೈಂಗಿಕ ಕ್ರಿಯೆ ಎನ್ನುವ ರೀತಿಯಲ್ಲಿ ಪ್ರಕರಣ ದಾಖಲಿಸಿರುವುದು ಕೂಡ ಕಂಡು ಬರುತ್ತಿದೆ.

376 (1) ದಾಖಲಿಸಿದ್ದರೆ ಆರೋಪಿಗೆ ಗರಿಷ್ಠ ಶಿಕ್ಷೆ ಪ್ರಮಾಣ ನೀಡುವ ಅವಕಾಶವಿದೆ. ಅಲ್ಲದೆ ಶಿಕ್ಷೆ ಪ್ರಮಾಣವು ಜಾಮೀನು ಪಡೆಯಲು ಬಹುಮುಖ್ಯವಾದ ಅಂಶವೂ ಹೌದು. ಅಪರಾಧಕ್ಕೆ ನೀಡುವ ಶಿಕ್ಷೆಯ ಪ್ರಮಾಣವು ಆರೋಪಿಯೊಬ್ಬನಿಗೆ ಜಾಮೀನು ಪಡೆಯಲು ಮತ್ತು ಪಡೆಯದೇ ಇರಲು ಒಂದು ಮುಖ್ಯ ಮಾನದಂಡವಾಗಿರುತ್ತದೆ. ಹೀಗಾಗಿಯೇ ಆರೋಪಿ ರಮೇಶ ಜಾರಕಿಹೊಳಿ ಪ್ರಕರಣದಿಂದ ಸುಲಭವಾಗಿ ಪಾರಾಗಲು ಯತ್ನಿಸಿರುವ ಬಿಜೆಪಿ ಸರ್ಕಾರವು, ಅವರ ವಿರುದ್ಧ 376-ಸಿ ಸೆಕ್ಷನ್‌ ದಾಖಲಿಸುವ ಮೂಲಕ ತನ್ನ ಹಾದಿಯನ್ನು ಸುಗಮವಾಗಿರಿಸಿಕೊಂಡಂತಿದೆ.

ಅತ್ಯಾಚಾರ ಪ್ರಕರಣಗಳಲ್ಲಿ ದೂರು ನೀಡಿದ ಮಹಿಳೆಯು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂಬ ಪೂರ್ವಭಾವನೆಯೊಂದಿಗೆ ವಿಚಾರಣೆಯನ್ನು ಆರಂಭಿಸಬೇಕು. ಅದರೆ 376-ಸಿನಲ್ಲಿ ಆ ಪೂರ್ವಭಾವನೆ ಲಾಭ ಸಂತ್ರಸ್ತೆಗೆ ದೊರಕುವುದಿಲ್ಲ. ಇದು ಆರೋಪಿ ಪರವಾಗಿರುತ್ತದೆ ಎಂಬ ಚರ್ಚೆಗಳು ಕಾನೂನು ತಜ್ಞರ ವಲಯದಲ್ಲಿ ನಡೆಯುತ್ತಿವೆ.
ಯಾವುದೇ ಅಪರಾಧಕ್ಕೆ ಇರುವ ಕನಿಷ್ಠ ಮತ್ತು ಗರಿಷ್ಠ ಶಿಕ್ಷೆಯ ಪ್ರಮಾಣವು ಆರೋಪಿಯೊಬ್ಬನಿಗೆ ಜಾಮೀನು ಪಡೆಯಲು ಮುಖ್ಯ ಮಾನದಂಡವಾಗಿರುತ್ತದೆ. ಈ ಪ್ರಕರಣದಲ್ಲಿಯೂ 376(ಸಿ) ಅಡಿಯಲ್ಲಿ ಸೆಕ್ಷನ್‌ ದಾಖಲಿಸುವ ಮೂಲಕ ಆರೋಪಿ ರೇಶ ಜಾರಕಿಹೊಳಿಗೆ ಜಾಮೀನು ಪಡೆಯಲು ಅನುಕೂಲ ಮಾಡಿಕೊಟ್ಟಂತಿದೆ.

‘ಸಂತ್ರಸ್ತೆ ತನ್ನ ದೂರಿನಲ್ಲಿ ಸಚಿವ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದರೆ ನೌಕರಿ ಕೊಡಿಸುವ ಆಮಿಷ ಒಡ್ಡಿ ಬಲೆಗೆ ಹಾಕಿದನೆಂದು ತಿಳಿಸಿದ್ದಾಳೆ. ಕಲಂ. 376C ಹೆಣ್ಣೊಂದು ಸಾಂಸ್ಥಿಕವಾಗಿ ಕಾನೂನಿನ ರಕ್ಷಣೆಯಲ್ಲಿದ್ದಾಗ ನೆಡೆಯುವ ದೌರ್ಜನ್ಯ ಕುರಿತು ಸ್ಪಷ್ಟವಾಗಿ ಹೇಳುತ್ತದೆ. ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ತೆ ಕಾನೂನಿನ ದೃಷ್ಟಿಯಿಂದ ಯಾವುದೇ ಸಾಂಸ್ಥಿಕ ಹಿಡಿತದಲ್ಲಿ ಇರಲಿಲ್ಲ,’ ಎಂದು ವಕೀಲ ಕೆ ಬಿ ಕೆ ಸ್ವಾಮಿ ಅವರು ಮಾಡಿರುವ ಟ್ವೀಟ್‌, ಚರ್ಚೆಯನ್ನು ವಿಸ್ತರಿಸಿದೆ.

ಅಲ್ಲದೆ, ‘ಆರೋಪಿಯ ವಿರುದ್ಧದ ಆರೋಪಗಳು ಕಲಂ 376(1) ರ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಬೇಕಾಗಿತ್ತು. ದೂರಿನಲ್ಲಿ ಅಂಶಗಳಿಗೂ ಸದ್ಯ ಹೂಡಿರುವ ಎಫ್.ಐ.ಆರ್ ನಡುವೆ ದೊಡ್ಡ ವ್ಯತ್ಯಾಸ ಮೇಲ್ನೋಟಕ್ಕೆ ಕಾಣಬಹುದು. ಇದು ಆರೋಪಿಯು ನುಣುಚಿಕೊಳ್ಳಲು ಅನುಕೂಲವಾಗುವಂತಿದೆ. Minister is not Institution,’ ಎಂದೂ ಟ್ವೀಟ್‌ ಮಾಡಿದ್ದಾರೆ.

ಆಸ್ಪತ್ರೆ, ಜೈಲು , ನರ್ಸಿಂಗ್‌ ಹೋಂ, ರಿಮ್ಯಾಂಡ್‌ ಹೋಂ, ಕಾನೂನಿನ ಹಿಡಿತ ಮತ್ತ6ಉ ಅಭಿರಕ್ಷೆಯಲ್ಲಿರುವವರ ಮೇಲೆ ಜರುಗುವ ಲೈಂಗಿಕ ದೌರ್ಜನ್ಯಕ್ಕೆ 376-ಸಿ ಅಡಿಯಲ್ಲಿ ಮೊಕದ್ದಮೆ ದಾಖಲಿಸಲು ಅವಕಾಶವಿದೆ. ಆದರೆ ರಮೇಶ್‌ ಜಾರಕಿಹೊಳಿ ಒಬ್ಬ ಸಚಿವ. ಈತ ಯಾವುದೇ ಸಂಸ್ಥೆಯಲ್ಲ. ಆತ ವೈಯಕ್ತಿಕ ಸಾಮರ್ಥ್ಯದಡಿಯಲ್ಲಿ ಆಮಿಷ ಒಡ್ಡುತ್ತಾನೆ. ಇದು ಅವಳನ್ನು ಬಲೆಗೆ ಎಳೆದುಕೊಳ್ಳಲು ಒಡ್ಡುವ ಆಮಿಷವೂ ಹೌದು. ಇದು ಅಧಿಕಾರ ದುರುಪಯೋಗ ಮತ್ತು ಪಿ ಸಿ ಕಾಯ್ದೆಯಡಿಯಲ್ಲಿಯೂ ಅಪರಾಧವಾಗುತ್ತದೆ. ಯಾವುದೇ ಸಾರ್ವಜನಿಕ ನೌಕರ ತನ್ನ ಅಧಿಕಾರ ಅಥವಾ ತನ್ನ ಶಾಸನಬದ್ಧ ಅಧಿಕಾರವನ್ನು ಹಣ ಪಡೆಯುವ ಮುಖಾಂತರ ಅಥವಾ ಇನ್ನಿತರೆ ಮಾರ್ಗಗಳ ಮೂಲಕ ಫಲಾಪೇಕ್ಷೆ ಹೊಂದಿದ್ದರೆ ಅದು ಕೂಡ ಭ್ರಷ್ಟಾಚಾರವಾಗುತ್ತದೆ ಎಂಬು ಅಭಿಪ್ರಾಯಗಳು ಕಾನೂನು ತಜ್ಞರ ವಲಯದಲ್ಲಿ ಕೇಳಿ ಬರುತ್ತಿವೆ.

ಇಲ್ಲಿ ಸಚಿವ ಸಾರ್ವಜನಿಕ ನೌಕರ ಆದರೂ ಸಂತ್ರಸ್ತೆ ಮೇಲೆ ಕಾನೂನಿನ ಹಿಡಿತ (ಸಾಂಸ್ಥಿಕವಾಗಿ) ಅಥವಾ ಯಾವುದೇ ನಿಗಾವಣೆ ಹೊಂದಿಲ್ಲ. ಹಾಗಾಗಿ 376-ಸಿ ಅನ್ವಯವಾಗುವುದಿಲ್ಲ. ಈ ಕಲಂ ಅಡಿಯಲ್ಲಿ 5ರಿಂದ 10 ವರ್ಷದವರೆಗೆ ಶಿಕ್ಷೆ ಇದೆ. ಆದರೆ ಅತ್ಯಾಚಾರ ಎಂದು ಪರಿಗಣಿಸುವುದಿಲ್ಲ. ಇದೊಂದು ಒಪ್ಪಿತ ಲೈಂಗಿಕ ಕ್ರಿಯೆ ಎನ್ನುವ ರೀತಿಯಲ್ಲಿ ಪ್ರಕರಣ ದಾಖಲಿಸಿರುವುದು ಪ್ರಕರಣದಿಂದ ಆರೋಪಿ ರಮೇಶ್‌ ಜಾರಕಿಹೊಳಿ ಅವರನ್ನು ಪಾರಾಗಿಸುವ ಸಂಚು ಕೂಡ ಇದರಲ್ಲಿ ಅಡಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಇನ್ನು, ಎಲ್ಲಾ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆ ಪರವಾಗಿ ಪೂರ್ವಭಾವನೆ ಇರುತ್ತೆ. ಆದರೆ 376- ಸಿ ನಲ್ಲಿ ಆ ಕಾನೂನಿನ ಪೂರ್ವಭಾವನೆ ಸಂತ್ರಸ್ತೆಗೆ ದಕ್ಕುವುದಿಲ್ಲ. ಅತ್ಯಾಚಾರ ಪ್ರಕರಣಗಳಲ್ಲಿ ದೂರು ನೀಡಿದ ಮಹಿಳೆಯು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂಬ ಪೂರ್ವಭಾವನೆಯೊಂದಿಗೆ ವಿಚಾರಣೆಯನ್ನು ಆರಂಭಿಸಭೇಕು. ಅದರೆ 376-ಸಿನಲ್ಲಿ ಆ ಪೂರ್ವಭಾವನೆ ಲಾಭ ಸಂತಗ್ರಸ್ತೆಗೆ ದೊರಕುವುದಿಲ್ಲ. ಆರೋಪಿಯನ್ನು ರಕ್ಷಿಸುವ ಭಾಗವಾಗಿಯೇ ಈ ಕಲಂನ್ನು ಹಾಕಲಾಗಿದೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, 376-ಸಿ ಅಡಿಯಲ್ಲಿ ಎಲ್ಲಾ ರೀತಿಯ ಸಾಕ್ಷ್ಯವನ್ನು ರುಜುವಾತುಪಡಿಸುವ ಹೊರೆ, ಭಾರ ಸಂತ್ರಸ್ತೆ ಮೇಲೆಯೇ ಇರುತ್ತದೆ. ಇದು ಪರೋಕ್ಷವಾಗಿ ಆರೋಪಿಗೆ ಅನುಕೂಲ ಮಾಡಿಕೊಟ್ಟಿದೆ. ಹಾಗೆಯೇ ಪ್ರಕರಣದಿಂದ ನುಣುಚಿಕೊಳ್ಳುವ ದಾರಿಯೂ ಸರಳವಾಗಿಸಲಾಗಿದೆ. ಒಂದು ವೇಳೆ ಆತ ಬಂಧನಕ್ಕೊಳಗಾದರೂ ಸುಲಭವಾಗಿ ಜಾಮೀನು ದೊರೆಯುವ ಸಾಧ್ಯತೆಗಳೇ ಹೆಚ್ಚಿವೆ ಎಂದೂ ಹೇಳಲಾಗುತ್ತಿದೆ.

‘ಕೆಲಸ ಕೊಡಿಸುವುದಾಗಿ ಹೇಳಿದ್ದ ರಮೇಶ ಜಾರಕಿಹೊಳಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ಯುವತಿ, ವಕೀಲ ಕೆ.ಎನ್. ಜಗದೀಶ್ ಕುಮಾರ್ ಮೂಲಕ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು.

‘ಉದ್ದೇಶಪೂರ್ವಕ ಲೈಂಗಿಕ ದೌರ್ಜನ್ಯ (ಐಪಿಸಿ 354 ಎ), ಜೀವ ಬೆದರಿಕೆ (ಐಪಿಸಿ 506), ಅವಾಚ್ಯ ಶಬ್ದಗಳಿಂದ ಬೈದಿರುವ (ಐಪಿಸಿ 504), ಅಧಿಕಾರದಲ್ಲಿ ದುರುಪಯೋಗಪಡಿಸಿಕೊಂಡು ನೌಕರಿ ಕೊಡಿಸುವುದಾಗಿ ವಂಚನೆ (ಐಪಿಸಿ 417) ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗಿದೆ.

SUPPORT THE FILE

Latest News

Related Posts