ಕಿಸಾನ್‌ ಯೋಜನೆ 2ನೇ ಕಂತಿನ ಬಿಡಿಗಾಸು ಕೊಡದ ಸರ್ಕಾರ; ಮಠಗಳಿಗಿರುವ ನೆರವು ರೈತರಿಗೇಕಿಲ್ಲ?

ಬೆಂಗಳೂರು: ಕೋವಿಡ್‌ನಿಂದ ಉದ್ಭವಿಸಿರುವ ಆರ್ಥಿಕ ಸಂಕಷ್ಟದಲ್ಲೂ ಮಠ ಮಾನ್ಯಗಳಿಗೆ 80 ಕೋಟಿ ಅನುದಾನ ಬಿಡುಗಡೆ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರವು 2020-21ನೇ ಸಾಲಿನ ಪ್ರಧಾನಮಂತ್ರಿ ಕಿಸಾನ್‌ ಕರ್ನಾಟಕ ಯೋಜನೆಯಡಿ ಎರಡನೇ ಕಂತಿನ ಆರ್ಥಿಕ ಸಹಾಯ ಧನ ಬಿಡುಗಡೆ ಮಾಡಲು ಈವರೆವಿಗೂ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲದಿರುವುದು ಇದೀಗ ಬಹಿರಂಗವಾಗಿದೆ.

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿರುವ ಪ್ರಧಾನಮಂತ್ರಿ ಕಿಸಾನ್‌ ಯೋಜನೆಗೆ ರಾಜ್ಯ ಸರ್ಕಾರವು ಅನುದಾನವನ್ನು ಹಂಚಿಕೊಳ್ಳುತ್ತಿದೆ. ಆದರೆ 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ನೀಡುವ 4,000 ರು. ಹೆಚ್ಚುವರಿ ಆರ್ಥಿಕ ಸಹಾಯಧನದ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಈ ಕುರಿತು ಕೃಷಿ ಆಯುಕ್ತರು 2021ರ ಮಾರ್ಚ್‌ 16ರಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

4,000 ರು.ಗಳ ಹೆಚ್ಚುವರಿ ಆರ್ಥಿಕ ನೆರವನ್ನು 2 ಕಂತುಗಳಲ್ಲಿ ಪಿ ಎಂ ಕಿಸಾನ್‌ ಕರ್ನಾಟಕ ಯೋಜನೆಯಡಿ ನೀಡುತ್ತಿದೆ. ಇದಕ್ಕಾಗಿ ರಾಜ್ಯವಲಯದ ಲೆಕ್ಕ ಶೀರ್ಷಿಕೆ (2401-00-800-1-05-100) ಅಡಿ ಒಟ್ಟು 2,100 ಕೋಟಿ ರು. ನಿಗದಿಪಡಿಸಿತ್ತು. ಈ ಪೈಕಿ 2020-21ನೇ ಸಾಲಿನಲ್ಲಿ ಎರಡನೇ ಕಂತಿಗೆ 51,66,395 ರೈತರಿಗೆ 1,033.28 ಕೋಟಿ ಹಾಗೂ ಮೊದಲನೇ ಕಂತಿನ ಬಾಕಿ ಬಾಕಿ 56,665 ರೈತರಿಗೆ 11.33 ಕೋಟಿ ರು. ಸೇರಿ ಒಟ್ಟಾರೆ 2020-21ನೇ ಸಾಲಿಗೆ 1,044.61 ಕೋಟಿ ರು. ಅನುದಾನ ಒದಗಿಸಬೇಕಿತ್ತು.

‘2020-21ನೇ ಸಾಲಿನಲ್ಲಿ ಎರಡನೇ ಕಂತಿನ ಆರ್ಥಿಕ ಸಹಾಯಧನವನ್ನು ಪಾವತಿಸಲು ಅನುದಾನ ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ, ‘ ಎಂದು ಕೃಷಿ ಆಯುಕ್ತರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅನುದಾನ ಹೆಚ್ಚುವರಿ ಆರ್ಥಿಕ ಸಹಾಯಧನ ಬಿಡುಗಡೆಯಾಗದ ಕಾರಣ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಸಾವಿರಾರು ಸಂಖ್ಯೆಯ ರೈತರು ಸಂಕಷ್ಟದಲ್ಲಿದ್ದರೂ ಕೃಷಿ ಸಚಿವ ಬಿ ಸಿ ಪಾಟೀಲ್‌ ರೈತರ ಸಂಕಷ್ಟವನ್ನು ಆಲಿಸಿಲ್ಲ.!

ಇದೇ ಲೆಕ್ಕ ಶೀರ್ಷಿಕೆಯಲ್ಲಿ ಕಳೆದ ಸಾಲಿನಲ್ಲಿ 59346.00 ಲಕ್ಷ ರುಗ.ಳನ್ನು ಪ್ರಸಕ್ತ ಸಾಲಿನಲ್ಲಿ ಬಳಸಿಕೊಂಡಿದ್ದ ಕೃಷಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಒದಗಿಸಿರುವ ಅನುದಾನವನ್ನು ಉಳಿಕೆ ಮಾಡಲು ಮುಂದಾಗಿದೆ ಎಂದು ಗೊತ್ತಾಗಿದೆ.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಈವರೆವಿಗೆ 60,85,996 ರೈತರು ಪಿಎಂಕೆ ಪೋರ್ಟಲ್‌ನಲ್ಲಿ ಮತ್ತು 3,77,990 ಸ್ವಯಂ/ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ವಿವರಗಳನ್ನು ಪರಿಶೀಲಿಸಿದ ನಂತರ ಕೇಂದ್ರ ಸರ್ಕಾರಕ್ಕೆ ಒಟ್ಟು 57,09,537 ರೈತರ ವಿವರಗಳನ್ನು ಕಳಿಸಿರುವುದು ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರು 2021ರ ಮಾರ್ಚ್‌ 17ರಂದು ನಡೆದಿದ್ದ ವಿಧಾನಸಭೆ ಅಧಿವೇಶನದಲ್ಲಿ ಡಾ ಅಜಯ್‌ ಧರ್ಮಸಿಂಗ್‌ ಅವರಿಗೆ ಲಿಖಿತ ಉತ್ತರದಿಂದ ತಿಳಿದು ಬಂದಿದೆ.

ಅಲ್ಲದೆ ಯೋಜನೆ ಜಾರಿಯಾದ ದಿನದಿಂದ ಈವರೆವಿಗೆ 53,96,762 ರೈತರಿಗೆ ಹಣ ಸಂದಾಯವಾಗಿದೆ. ವಿವಿಧ ಕಾರಣಗಳಿಂದಾಗಿ 20,584 ಫಲಾನುಭವಿ ರೈತರಿಗೆ ಯೋಜನೆಯ ಅರ್ಥಿಕ ನೆರವು ಲಭಿಸಿಲ್ಲ. 2018-19ರಲ್ಲಿ 1106062, 2019-20ರಲ್ಲಿ 4304980, 2020-21ರಲ್ಲಿ 296964 ರೈತರು ಪಿಎಂಕೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. 2018-19ರಲ್ಲಿ 19,872, 2019-20ರಲ್ಲಿ 50,10,591, 2020-21ರಲ್ಲಿ 53,96,762 ರೈತರು ಆರ್ಥಿಕ ನೆರವು ಪಡೆದಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts