ಡಿಸಿಎಂಗಳಿಗೆ 5 ಕೋಟಿ ಸಂಗ್ರಹ; ಎಫ್‌ಐಆರ್‌ ದಾಖಲಿಸದ ಪೊಲೀಸರ ವಿರುದ್ಧ ಡಿಸಿಪಿಗೆ ದೂರು

ಬೆಂಗಳೂರು; ಉಪ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ 5 ಕೋಟಿ ಹಣ ಸಂಗ್ರಹ ಮಾಡಲು ತಮ್ಮ ಕೈ ಕೆಳಗಿನ ಅಧಿಕಾರಿಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ ಸತೀಶ್‌ಕುಮಾರ್‌ ಎಸ್‌ ಹೊಸಮನಿ ಅವರು ತಾಕೀತು ಮಾಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ವಿಧಾನಸೌಧ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸದೆ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವರು 100 ಕೋಟಿ ಹಣ ಸಂಗ್ರಹಿಸಲು ಅಲ್ಲಿನ ಪೊಲೀಸ್‌ ಕಮಿಷನರ್‌ಗೆ ತಾಕೀತು ಮಾಡಿದ್ದರು ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೀಡಾಗಿರುವ ಬೆನ್ನಲ್ಲೇ ಇದೇ ಮಾದರಿಯಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ 5 ಕೋಟಿ ಸಂಗ್ರಹ ಮಾಡಬೇಕು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ ಸತೀಶ್‌ಕುಮಾರ್‌ ಹೊಸಮನಿ ಅವರ ವಿರುದ್ಧದ ಆರೋಪ ಪ್ರಕರಣದಲ್ಲಿ ಯಾವುದೇ ಕ್ರಮ ವಹಿಸದ ಪೊಲೀಸರ ಕರ್ತವ್ಯಲೋಪವೂ ಮುನ್ನೆಲೆಗೆ ಬಂದಿದೆ.

ಉಪ ಮುಖ್ಯಮಂತ್ರಿಗಳಿಗೆ 5 ಕೋಟಿ ಹಣ ಸಂಗ್ರಹ ಮಾಡಲು ಗ್ರಂಥಾಲಯ ಇಲಾಖೆ ನಿರ್ದೇಶಕರು ತಾಕೀತು ಮಾಡಿರುವ ಪ್ರಕರಣದ ಕುರಿತು ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌ ಎಂಬುವರು ಶಿಕ್ಷಣ ಇಲಾಖೆಯ ಟಿಪ್ಪಣಿ ಹಾಳೆ ಸಮೇತ ಹಲವು ದಿನಗಳ ಹಿಂದೆ ದೂರು ಸಲ್ಲಿಸಿದ್ದರು. ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸದ ಹಿನ್ನೆಲೆಯಲ್ಲಿ ಪ್ರಕರಣವನ್ನು ಇದೀಗ ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್‌ ಆಯುಕ್ತರ ಕಚೇರಿಗೆ ಕೊಂಡೊಯ್ದಿದ್ದಾರೆ.

ಅಲ್ಲದೆ ಈ ಸಂಬಂಧ ನೀಡಿದ್ದ ದೂರಿಗೆ ಹೆಚ್ಚಿನ ಮಾಹಿತಿ ನೀಡುವಂತೆ ನೀಡಿದ್ದ ನೋಟೀಸ್‌ಗೆ ವೆಂಕಟೇಶ್‌ ಅವರು ನೀಡಿದ್ದ ಉತ್ತರವೂ ಸಂಬಂಧಿತ ಕಡತದಲ್ಲಿ ಇಲ್ಲವೆಂದು ಠಾಣಾಧಿಕಾರಿಗಳು ಸಬೂಬು ಹೇಳುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

‘ಠಾಣೆಯಲ್ಲಿ ದೂರು ಅಥವಾ ಮಾಹಿತಿಯನ್ನು ಠಾಣಾಧಿಕಾರಿಗಳು ಪಡೆದ ತಕ್ಷಣ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕೆಂದು ಭಾರತದ ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ಆದರೆ ತಮ್ಮ ವ್ಯಾಪ್ತಿಯಲ್ಲಿ ಬರುವ ವಿಧಾನಸೌಧ ಠಾಣೆಯ ಅಧಿಕಾರಿಗಳು ಇದರ ಪಾಲನೆ ಮಾಡದೇ ಅವರ ಸೇವಾ ಕರ್ತವ್ಯವನ್ನು ಮರೆತಿದ್ದಾರೆ,’ ಎಂದು ಉಪ ಪೊಲೀಸ್‌ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ವೆಂಕಟೇಶ್‌ ಅವರು ವಿವರಿಸಿದ್ದಾರೆ.

ಹಾಗೆಯೇ ‘ನಾನು ನೀಡಿದ್ದ ದೂರಿನಂತೆಯೇ ಮಹಾರಾಷ್ಟ್ರ ಸರ್ಕಾರದಲ್ಲಿ ಕೂಡ ಪೊಲೀಸ್‌ ಕಮಿಷನರ್‌ಗೆ ಗೃಹ ಮಂತ್ರಿಗಳು 100 ಕೋಟಿ ಹಣವನ್ನು ಪ್ರತಿ ತಿಂಗಳು ಸಂಗ್ರಹಿಸಿ ಕೊಡಬೇಕೆಂದು ಸೂಚಿಸಿರುವುದು ಅಲ್ಲಿನ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲಗಳನ್ನು ಉಂಟು ಮಾಡಿದೆ. ಅಲ್ಲಿನ ಸರ್ಕಾರದ ಅಳಿವು ಉಳಿವು ಪ್ರಶ್ನೆಯೂ ಎದುರಾಗಿದೆ. ಅದೇ ರೀತಿಯಲ್ಲಿ ಈ ಪ್ರಕರಣವು ಕರ್ನಾಟಕ ಸರ್ಕಾರದ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ ಸತೀಶ್‌ಕುಮಾರ್ ಹೊಸಮನಿ ಅವರು ಉಪ ಮುಖ್ಯಮಂತ್ರಿಗಳಿಗೆ 5 ಕೋಟಿ ಹಣ ಸಂಗ್ರಹ ಮಾಡುವಂತೆ ತಾಕೀತು ಮಾಡಿರುವುದು ತನಿಖೆಗೆ ಒಳಪಡುವ ವಿಷಯವಾಗಿದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿಯೂ ಅಡಗಿದೆ. ಹೀಗಾಗಿ ದೂರನ್ನಾಧರಿಸಿ ತಕ್ಷಣವೇ ಎಫ್‌ಐಆರ್‌ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು,’ ಎಂದೂ ಉಪ ಆಯುಕ್ತರಿಗೆ ಮನವಿ ಮಾಡಿರುವುದು ಪತ್ರದಿಂದ ತಿಳಿದು ಬಂದಿದೆ.

 

ಪ್ರಕರಣದ ಹಿನ್ನೆಲೆ

ಉಪ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ 5 ಕೋಟಿ ಹಣ ಸಂಗ್ರಹ ಮಾಡಲು ತಮ್ಮ ಕೈ ಕೆಳಗಿನ ಅಧಿಕಾರಿಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ ಸತೀಶ್‌ಕುಮಾರ್‌ ಎಸ್‌ ಹೊಸಮನಿ ಅವರು ತಾಕೀತು ಮಾಡಿದ್ದಾರೆ ಎಂದು ಶಿವಾನಂದ ದೊಡ್ಡಮನಿ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರನ್ನು ಸಲ್ಲಿಸಿದ್ದರು. ಇದನ್ನಾಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶಿಕ್ಷಣ ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು.

‘ದೂರಿನ ಪತ್ರವು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಸ್ವೀಕೃತವಾಗಿದೆ. ಈ ದೂರಿನ ಕುರಿತು ಇಲಾಖೆಯು ಶಿಕ್ಷಣ ಇಲಾಖೆಯ ಅಭಿಪ್ರಾಯವನ್ನು ಕೋರಿದೆ. ದೂರಿನ ಪತ್ರದಲ್ಲಿನ ಅಂಶಗಳ ಬಗ್ಗೆ ಸತ್ಯಾಸತ್ಯತೆ ತಿಳಿಯದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಅಭಿಪ್ರಾಯ ನೀಡುವುದು ಕಷ್ಟಸಾಧ್ಯವಾಗುತ್ತದೆ,’ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ನಗರಾಭಿವೃದ್ಧಿ ಇಲಾಖೆಯು 50 ಕೋಟಿ ರು.ಅನುದಾನ ಬಿಡುಗಡೆ ಮಾಡಿದ್ದು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಉಪ ಮುಖ್ಯಮಂತ್ರಿಗಳಿಗೆ 5 ಕೋಟಿ ಹಣ ಸಂಗ್ರಹ ಮಾಡಬೇಕು ಎಂದು ಕೈ ಕೆಳಗಿನ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಶಿವಾನಂದ ದೊಡ್ಡಮನಿ ಎಂಬುವರು ದೂರಿನಲ್ಲಿ ಆರೋಪಿಸಿದ್ದಾರೆ.

the fil favicon

SUPPORT THE FILE

Latest News

Related Posts