ಬೆಂಗಳೂರು: ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸದೇ ನಿರ್ಲಕ್ಷ್ಯ ವಹಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಇನ್ನಿತರೆ ಪೊಲೀಸ್ ಅಧಿಕಾರಿಗಳ ವಿರುದ್ಧದ ಪ್ರಕರಣವು ಇದೀಗ ಮುಖ್ಯ ನ್ಯಾಯಾಧೀಶರ ಮೆಟ್ಟಿಲೇರಿದೆ.
ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸದೆಯೇ ನಿರ್ಭಯಾ ಕಾಯ್ದೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ‘ದಿ ಫೈಲ್’ ವರದಿ ಮಾಡಿದ್ದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದೆ.
ಈ ಮೇಲ್ ಮತ್ತು ನೋಂದಾಯಿತ ಅಂಚೆ ಮೂಲಕ ದೂರು ಸಲ್ಲಿಸಿರುವ ಜನಾಧಿಕಾರ ಸಂಘರ್ಷ ಪರಿಷತ್, ಕಮಲ್ ಪಂತ್ ಮತ್ತಿತರ ಅಧಿಕಾರಿಗಳ ವಿರುದ್ಧದ ದೂರನ್ನು ಕಬ್ಬನ್ ಪಾರ್ಕ್ ಠಾಣಾಧಿಕಾರಿಗೆ ನೀಡಿತ್ತಾದರೂ ಠಾಣಾಧಿಕಾರಿ ದೂರನ್ನು ಸ್ವೀಕರಿಸಿಲ್ಲ. ಹೀಗಾಗಿ ದೂರನ್ನು ಪೊಲೀಸ್ ಆಯುಕ್ತ, ಡಿಜಿಐಜಿಪಿ ಕಚೇರಿಗೂ ದೂರು ಸಲ್ಲಿಸಿದೆ ಎಂದು ತಿಳಿದು ಬಂದಿದೆ. ಈ ದೂರಿನ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳದ ಪೊಲೀಸ್ ಅಧಿಕಾರಿಗಳು ನಿರ್ಭಯಾ ಕಾಯ್ದೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆಯೇ ಎಂದು ‘ದಿ ಫೈಲ್’ ವರದಿ ಪ್ರಕಟಿಸಿತ್ತು. ಇದಾದ ನಂತರ ದಿ ನ್ಯೂಸ್ ಮಿನಿಟ್ ಸೇರಿದಂತೆ ಉಳಿದ ಡಿಜಿಟಲ್ ಮಾಧ್ಯಮಗಳೂ ‘ದಿ ಫೈಲ್’ ವರದಿಯನ್ನು ಇನ್ನಷ್ಟು ವಿಸ್ತರಿಸಿದವು.
ರಮೇಶ ಜಾರಕಿಹೊಳಿ ವಿರುದ್ಧ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಅವರು ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರನ್ನಾಧರಿಸಿ ಎಫ್‌ಐಆರ್ ದಾಖಲಿಸದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ನಿರ್ಭಯಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆಯೇ ಎಂಬ ಕುರಿತು ಕಾನೂನು ತಜ್ಞರ ಅಭಿಪ್ರಾಯದೊಂದಿಗೆ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಮುಖ್ಯ ನ್ಯಾಯಾಧೀಶರಿಗೆ ಬರೆದಿರುವ ಪತ್ರದಲ್ಲೇನಿದೆ?
ಈ ಪ್ರಕರಣದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರ ವಿರುದ್ಧ ದೂರು ಸಲ್ಲಿಸಿದ್ದ ದೂರುದಾರರನ್ನು ಅಪರಾಧಿಯಂತೆ ಪರಿಗಣಿಸಿ ಮತ್ತು ನಿಜವಾದ ಅಪರಾಧಿಯನ್ನೇ ಸಂತ್ರಸ್ತನೆಂದು ಪರಿಗಣಿಸಲಾಗುತ್ತಿದೆ. ಅಲ್ಲದೆ ಅಪರಾಧಿಯ ಪತ್ರದ ಮೇರೆಗೆ ಗೃಹ ಸಚಿವರು ಹಾಗೂ ಬೆಂಗಳೂರು ನಗರದ ಪೊಲೀಸ್ ಆಯುಕ್ತರು ಉನ್ನತ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನೇ ರಚಿಸಿರುವುದು ರಾಜಕೀಯ ಮತ್ತು ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ. ಈ ಅಂಶಗಳನ್ನಳಗೊಂಡಂತೆ ದೂರನ್ನು ಮುಖ್ಯ ನ್ಯಾಯಾಧೀಶರು ಪುರಸ್ಕರಿಸಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಎಂದು ಕೋರಿದೆ.
2013ರಲ್ಲಿ ಜಾರಿಗೆ ಬಂದಿರುವ ನಿರ್ಭಯಾ ಕಾಯ್ದೆ ಪ್ರಕಾರ ಲೈಂಗಿಕ ಕಿರುಕುಳದ ದೂರು ಕಂಡು ಬಂದಲ್ಲಿ ತತ್‌ಕ್ಷಣವೇ ಪ್ರಥಮ ವರ್ತಮಾನ ವರದಿಯನ್ನು (ಎಫ್‌ಐಆರ್)ನ್ನು ದಾಖಲಿಸುವುದು ಕಡ್ಡಾಯ. ಆದರೆ ದೂರು ದಾಖಲಾದ 24 ಗಂಟೆಯೊಳಗೆ ಆರೋಪಿತರ ವಿರುದ್ಧ ಎಫ್‌ಐಆರ್ ದಾಖಲಾಗಿರಲಿಲ್ಲ. ಪೊಲೀಸ್ ಅಧಿಕಾರಿಗಳ ಈ ನಡೆಯು ಇದೀಗ ನಿರ್ಭಯಾ ಕಾಯ್ದೆ ಉಲ್ಲಂಘಿಸಿದ್ದಾರೆ ಎಂಬ ಅನುಮಾನಗಳನ್ನು ಕಾನೂನು ತಜ್ಞರು ವ್ಯಕ್ತಪಡಿಸಿದ್ದರು.
ನಿರ್ಭಯಾ ಕಾಯ್ದೆ ಪ್ರಕಾರ ಎಫ್‌ಐಆರ್ ದಾಖಲಿಸದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತ್ ಮತ್ತು ಕಬ್ಬನ್ ಪಾರ್ಕ್ ಠಾಣಾಧಿಕಾರಿ ಮಾರುತಿ ಬಿ ಅವರು ಐಪಿಸಿ ಸೆಕ್ಷನ್ 166-ಎ ಅಡಿಯಲ್ಲಿ ಅಪರಾಧ ಎಸಗಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಲ್ಲದೆ ನಿರ್ಭಯ ಕಾಯ್ದೆ ಉಲ್ಲಂಘಿಸಿರುವುದು ಸಾಬೀತಾದರೆ 6 ತಿಂಗಳಿನಿಂದ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಪ್ರಕರಣದ ಹಿನ್ನೆಲೆ
ಸಂತ್ರಸ್ತ ಯುವತಿಯ ಪರವಾಗಿ ದೂರು ಸಲ್ಲಿಸಿದ್ದ ದಿನೇಶ್ ಕಲ್ಲಹಳ್ಳಿ, ಸಚಿವರು ಯುವತಿಯ ಜತೆ ಏಕಾಂತದಲ್ಲಿ ಇರುವ ವಿಡಿಯೊ ತುಣುಕುಗಳು, ಇಬ್ಬರ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕುಗಳ ಸಿ.ಡಿಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರಿನ ಸಮೇತ ಸಲ್ಲಿಸಿದ್ದರು.
‘ಉತ್ತರ ಕರ್ನಾಟಕ ಮೂಲದ ಬಡ ಕುಟುಂಬದ ಯುವತಿಯೊಬ್ಬರು ಕಿರುಚಿತ್ರವೊಂದರ ನಿರ್ಮಾಣಕ್ಕೆ ನೆರವು ಕೋರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದರು. ನಿನಗೆ ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಬಳಿಕ ಕಾಮತೃಷೆಗಾಗಿ ಬಳಸಿಕೊಂಡು ವಂಚಿಸಿದ್ದಾರೆ’ ಎಂದು ದಿನೇಶ್ ಕಲ್ಲಹಳ್ಳಿ ಅವರು ಆರೋಪಿಸಿ ಕಮಿಷನರ್ ಕಮಲ್ ಪಂತ್ ಅವರಿಗೆ ನೇರವಾಗಿ ದೂರು ಸಲ್ಲಿಸಲು ಯತ್ನಿಸಿದ್ದರು. ಆದರೆ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕಮಿಷನರ್ ಸೂಚಿಸಿದರು. ಬಳಿಕ ಅಲ್ಲಿಗೆ ಬಂದ ದಿನೇಶ್, ಸಚಿವರ ವಿರುದ್ಧ ದೂರು ಸಲ್ಲಿಸಿದ್ದರು.