ಜಾರಕಿಹೊಳಿ ಸಿ ಡಿ; ಪೊಲೀಸ್‌ ಅಧಿಕಾರಿಗಳು ನಿರ್ಭಯಾ ಕಾಯ್ದೆ ಉಲ್ಲಂಘಿಸಿದ್ದಾರೆಯೇ?

ಬೆಂಗಳೂರು: ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ವಿರುದ್ಧ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ ಅವರು ನಗರದ ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಗೆ ಸಲ್ಲಿಸಿದ್ದ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸದ ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸೇರಿದಂತೆ ಇತರೆ ಪೊಲೀಸ್‌ ಅಧಿಕಾರಿಗಳು ನಿರ್ಭಯಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಕಳೆದ ಹಲವು ದಿನಗಳಿಂದಲೂ ಸದ್ದು ಮಾಡುತ್ತಿರುವ ಸಿ ಡಿ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಪೊಲೀಸ್‌ ಅಧಿಕಾರಿಗಳು ನಿರ್ಭಯಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆಯೇ ಎಂಬ ಮಾತುಗಳು ಕಾನೂನು ತಜ್ಞರ ವಲಯದಲ್ಲಿ ಕೇಳಿ ಬರುತ್ತಿದೆ. ಕಾನೂನು ವಲಯದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯಗಳು ಈ ಪ್ರಕರಣವನ್ನು ಮತ್ತೊಂದು ಆಯಾಮಕ್ಕೆ ಕೊಂಡೊಯ್ದಿವೆ.

2013ರಲ್ಲಿ ಜಾರಿಗೆ ಬಂದಿರುವ ನಿರ್ಭಯಾ ಕಾಯ್ದೆ ಪ್ರಕಾರ ಲೈಂಗಿಕ ಕಿರುಕುಳದ ದೂರು ಕಂಡು ಬಂದಲ್ಲಿ ತತ್‌ಕ್ಷಣವೇ ಪ್ರಥಮ ವರ್ತಮಾನ ವರದಿಯನ್ನು (ಎಫ್‌ಐಆರ್‌)ನ್ನು ದಾಖಲಿಸುವುದು ಕಡ್ಡಾಯ. ಆದರೆ ದೂರು ದಾಖಲಾದ 24 ಗಂಟೆಯೊಳಗೆ ಆರೋಪಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿರಲಿಲ್ಲ. ಪೊಲೀಸ್‌ ಅಧಿಕಾರಿಗಳ ಈ ನಡೆಯು ಇದೀಗ ನಿರ್ಭಯಾ ಕಾಯ್ದೆ ಉಲ್ಲಂಘಿಸಿದ್ದಾರೆಯೆ ಎಂಬ ಅನುಮಾನಗಳನ್ನು ಕಾನೂನು ತಜ್ಞರು ವ್ಯಕ್ತಪಡಿಸಲಾರಂಭಿಸಿದ್ದಾರೆ.

ಎಫ್‌ಐಆರ್‌ ದಾಖಲಿಸದೆಯೇ ನಿರ್ಭಯಾ ಕಾಯ್ದೆ ಉಲ್ಲಂಘಿಸಿರುವ ಆರೋಪದ ಮೇರೆಗೆ ಕಮಲ್‌ ಪಂತ್‌ ಸೇರಿದಂತೆ ಇನ್ನಿತರೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು.

ಆದರ್ಶ ಐಯ್ಯರ್‌, ಜನಾಧಿಕಾರ ಸಂಘರ್ಷ ಪರಿಷತ್‌

ನಿರ್ಭಯಾ ಕಾಯ್ದೆ ಪ್ರಕಾರ ಎಫ್‌ಐಆರ್‌ ದಾಖಲಿಸದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಡಿಸಿಪಿ ಅನುಚೇತ್‌ ಮತ್ತು ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಮಾರುತಿ ಬಿ ಅವರು ಐಪಿಸಿ ಸೆಕ್ಷನ್‌ 166-ಎ ಅಡಿಯಲ್ಲಿ ಅಪರಾಧ ಎಸಗಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಲ್ಲದೆ ನಿರ್ಭಯ ಕಾಯ್ದೆ ಉಲ್ಲಂಘಿಸಿರುವುದು ಸಾಬೀತಾದರೆ 6 ತಿಂಗಳಿನಿಂದ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಪ್ರಕರಣದ ಹಿನ್ನೆಲೆ

ಸಂತ್ರಸ್ತ ಯುವತಿಯ ಪರವಾಗಿ ದೂರು ಸಲ್ಲಿಸಿದ್ದ ದಿನೇಶ್‌ ಕಲ್ಲಹಳ್ಳಿ, ಸಚಿವರು ಯುವತಿಯ ಜತೆ ಏಕಾಂತದಲ್ಲಿ ಇರುವ ವಿಡಿಯೊ ತುಣುಕುಗಳು, ಇಬ್ಬರ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕುಗಳ ಸಿ.ಡಿಗಳನ್ನು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಲಿಖಿತ ದೂರಿನ ಸಮೇತ ಸಲ್ಲಿಸಿದ್ದರು.

‘ಉತ್ತರ ಕರ್ನಾಟಕ ಮೂಲದ ಬಡ ಕುಟುಂಬದ ಯುವತಿಯೊಬ್ಬರು ಕಿರುಚಿತ್ರವೊಂದರ ನಿರ್ಮಾಣಕ್ಕೆ ನೆರವು ಕೋರಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದರು. ನಿನಗೆ ಕೆ‍ಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಬಳಿಕ ಕಾಮತೃಷೆಗಾಗಿ ಬಳಸಿಕೊಂಡು ವಂಚಿಸಿದ್ದಾರೆ’ ಎಂದು ದಿನೇಶ್‌ ಕಲ್ಲಹಳ್ಳಿ ಅವರು ಆರೋಪಿಸಿ ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ನೇರವಾಗಿ ದೂರು ಸಲ್ಲಿಸಲು ಯತ್ನಿಸಿದ್ದರು. ಆದರೆ, ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಕಮಿಷನರ್‌ ಸೂಚಿಸಿದರು. ಬಳಿಕ ಅಲ್ಲಿಗೆ ಬಂದ ದಿನೇಶ್‌, ಸಚಿವರ ವಿರುದ್ಧ ದೂರು ಸಲ್ಲಿಸಿದ್ದರು.

ಯಾವುದೇ ಸಂಜ್ಞೆ ಅಪರಾಧಕ್ಕೆ ಸಂಬಂಧಿಸಿದಂತೆ ದೂರು ಅಥವಾ ಮಾಹಿತಿ ಬಂದಲ್ಲಿ ಅದನ್ನು ತಕ್ಷಣವೇ ಸಿಆರ್‌ಪಿಸಿ ಸೆಕ್ಷನ್‌ 154ರ ಅಡಿಯಲ್ಲಿ ದೂರನ್ನು ದಾಖಲಿಸಿಕೊಂಡು ಅದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕಾದ ಜವಾಬ್ದಾರಿ ಪೋಲೀಸರ ಮೇಲಿದೆ. 154ರ ಅಡಿಯಲ್ಲಿ ಮಾಹಿತಿ ಅಥವಾ ದೂರನ್ನು ದಾಖಲಿಸದಿರುವುದು ಐಪಿಸಿ ಸೆಕ್ಷನ್‌ 166-ಎ ಕಲಂ ಪ್ರಕಾರ ಅಪರಾಧವಾಗಿರುತ್ತದೆ. ಅಂತಹ ಆರೋಪ ಸಾಬೀತಾದಲ್ಲಿ ಆ ಅಪರಾಧಕ್ಕೆ ಆ ಅಧಿಕಾರಿಗೆ 6 ತಿಂಗಳಿಗಿಂತಲೂ ಕಡಿಮೆ ಆಗದ ಸಜೆ ಮತ್ತು 2 ವರ್ಷದ ತನಕ ಹೆಚ್ಚಿಸಬಹುದಾದ ಶಿಕ್ಷೆ ವಿಧಿಸಲು ಅವಕಾಶವಿದೆ. ಇದು ತುಂಬಾ ಮುಖ್ಯವಾದ ಕಾನೂನು. ಇದು ಸಂಜ್ಞೆಯ ಅಪರಾಧಕ್ಕೆ ಸಂಬಂಧಿಸಿರುವುದರಿಂದ ದೂರು ಅಥವಾ ಮಾಹಿತಿಯನ್ನು ತಕ್ಷಣವೇ ದಾಖಲಿಸಿಕೊಳ್ಳಬೇಕಿತ್ತು. ನಂತರ ವಿಚಾರಣೆ ನಡೆಸಬಹುದು. ಆದರೆ ಈ ಸಂಬಂಧ ಪ್ರಯತ್ನ ನಡೆದಿಲ್ಲ. ಹಾಗಾಗಿ ಇದು ಪೊಲಿಸ್‌ ಅಧಿಕಾರಿಯ ಬೇಜವಾಬ್ದಾರಿ ಎಂಬುದು ತೋರಿಸುತ್ತದೆ. ಹೀಗಾಗಿ ಸೆಕ್ಷನ್‌ 166-ಎ ಅಡಿಯಲ್ಲಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಬಿ ಟಿ ವೆಂಕಟೇಶ್‌, ಮಾಜಿ ರಾಜ್ಯ ಸರ್ಕಾರಿ ಅಭಿಯೋಜಕರು.

ದಿನೇಶ್‌ ಅವರಿಂದ ದೂರು ಸ್ವೀಕರಿಸಿದ ಕಬ್ಬನ್ ಪಾರ್ಕ್‌ ಠಾಣೆ ಪೊಲೀಸರು, ದಿನೇಶ್‌ ಅವರ ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡರು. ಸಚಿವರು ಮತ್ತು ಯುವತಿಗೆ ಸಂಬಂಧಿಸಿದ ವಿಡಿಯೊ, ಆಡಿಯೊ ಸಿ.ಡಿಗಳು ಹೇಗೆ ಲಭ್ಯವಾದವು ಯಾರು ತಲುಪಿಸಿದರು, ಸಂತ್ರಸ್ತರ ಬದಲು ದೂರು ನೀಡಲು ಬಂದಿದ್ದೇಕೆ ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದರು.

ಹೇಳಿಕೆ ಪಡೆದು ಹಲವು ದಿನಗಳಾಗಿದ್ದರೂ ಕಬ್ಬನ್‌ ಪಾರ್ಕ್‌ ಠಾಣಾ ಪೊಲೀಸರು ಆರೋಪಿತ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿರಲಿಲ್ಲ. ದೂರು ದಾಖಲಾಗುತ್ತಿದ್ದಂತೆ ಸಚಿವರದ್ದು ಎನ್ನಲಾದ ವಿಡಿಯೊ, ಆಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆರೋಪ ಹೊರಬೀಳುತ್ತಿದ್ದಂತೆ ರಮೇಶ್‌ ಜಾರಕಿಹೊಳಿ ಅವರು ಅಜ್ಞಾತವಾಗಿದ್ದರು.

‘ಸಚಿವರ ಜತೆಗಿರುವುದನ್ನು ಸಂತ್ರಸ್ತ ಯುವತಿ ವಿಡಿಯೊ ರೆಕಾರ್ಡ್‌ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅವರು ಯುವತಿಯ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದರು. ಬಳಿಕ ನನ್ನನ್ನು ಸಂಪರ್ಕಿಸಿದ ಯುವತಿಯ ಕುಟುಂಬದವರು, ವಿಡಿಯೊ ಮತ್ತು ಆಡಿಯೊ ಸಿ.ಡಿಗಳನ್ನು ನೀಡಿದ್ದರು. ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ, ಸಚಿವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಸಂತ್ರಸ್ತ ಯುವತಿ ರಕ್ಷಣೆಗೆ ಮುಂದಾಗಬೇಕು’ ಎಂದು ದೂರಿನಲ್ಲಿ ಕೋರಿದ್ದರು.

ಈ ದೂರನ್ನು ಪರಿಶೀಲನೆ ನಡೆಸಿದ್ದ ಕಬ್ಬನ್ ಪಾರ್ಕ್ ಪೊಲೀಸರು, ದಿನೇಶ್ ನೀಡಿದ್ದ ದೂರಿನಲ್ಲಿ ಮಾಹಿತಿ ಅಪೂರ್ಣ ಇತ್ತು. ದೂರು ನೀಡುವಾಗ ಕುಟುಂಬಸ್ಥರ ಅಥವಾ ಸಂಬಂಧಿಕರ ವಿವರ ತಿಳಿಸಿರಲಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ‌ ಪಡೆಯಲು ಪೊಲೀಸರು ನೋಟಿಸ್​ ನೀಡಿದ್ದರು. ಈ ಬೆಳವಣಿಗೆ ನಡುವೆಯೇ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ದಿನೇಶ್‌ ಕಲ್ಲಹಳ್ಳಿ ವಾಪಸ್‌ ತೆಗೆದುಕೊಂಡಿದ್ದರು.

SUPPORT THE FILE

Latest News

Related Posts