ಇ-ವಿಧಾನಮಂಡಲಕ್ಕೆ 254 ಕೋಟಿ; ದುರ್ಬಳಕೆ, ದುಂದುವೆಚ್ಚವೆಂದ ಸಿದ್ದರಾಮಯ್ಯ

ಬೆಂಗಳೂರು; ಪ್ರಾಯೋಗಿಕವಾಗಿ ಇ-ವಿಧಾನ ಮಂಡಲ ಯೋಜನೆಯನ್ನು ಅನುಷ್ಠಾನಗೊಳಿಸದೆಯೇ ನೇರವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕೋಟ್ಯಂತರ ರುಪಾಯಿ ದುಂದುವೆಚ್ಚ ಮಾಡಲು ಮುಂದಾಗಿರುವ ವಿಧಾನಸಭೆ ಸಚಿವಾಲಯದ ನಡೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಇ-ವಿಧಾನಮಂಡಲ ಯೋಜನಾ ವೆಚ್ಚದಲ್ಲಿ ಆಗಿದ್ದ ಹೆಚ್ಚಳವನ್ನು ‘ದಿ ಫೈಲ್‌’ ಹೊರಗೆಡವಿತ್ತು. ಯೋಜನಾ ವೆಚ್ಚದಲ್ಲಿ ಆಗಿರುವ ಹೆಚ್ಚಳವನ್ನು ಪುನರ್‌ ಪರಿಶೀಲಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ವಿಧಾನಮಂಡಲ ಕಾಗದ ರಹಿತ ಯೋಜನೆಗೆ 254 ಕೋಟಿ ಅಂದಾಜು ಮಾಡಿರುವುದು ತಿಳಿದು ಬಂದಿದೆ. ಈ ಯೋಜನೆಗೆ ಈ ಹಿಂದೆ ಎನ್‌ಐಸಿ ಸಂಸ್ಥೆಯು 60.84 ಕೋಟಿ ರು. ಅಂದಾಜಿಸಲಾಗಿತ್ತು. ಅನಾವಶ್ಯಕವಾಗಿ 254 ಕೋಟಿ ವೆಚ್ಚದ ಯೋಜನೆಯನ್ನು ಕಾರ್ಯಗತಗೊಳಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಈ ರೀತಿ ರಾಜ್ಯದ ಜನತೆಯ ಶ್ರಮದ ಹಣವನ್ನು ದುಂದುವೆಚ್ಚ ಮತ್ತು ದುರ್ಬಳಕೆ ಮಾಡುವ ಅವಶ್ಯಕತೆ ಇರುವುದೇ,’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಅಲ್ಲದೆ ‘ಸಾರ್ವಜನಿಕ ಹಿತಾಸಕ್ತಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲು ಎರಡು ಸರ್ಕಾರಿ ಸಂಸ್ಥೆಗಳು ನೀಡಿರುವ ವಿಸ್ತೃತ ವರದಿಯನ್ನು ನಿಖರವಾಗಿ ಪರಿಶೀಲಿಸಿ ಅನಗತ್ಯವಾಗಿ ಹಣವನ್ನು ಪೋಲು ಮಾಡುವ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಪುನರ್‌ ಪರಿಶೀಲಿಸಬೇಕು,’ ಎಂದು ಆಗ್ರಹಿಸಿರುವುದು ಪತ್ರದಿಂದ ಗೊತ್ತಾಗಿದೆ.

ಪ್ರಕರಣದ ಹಿನ್ನೆಲೆ

ಯೋಜನೆ ಅನುಷ್ಠಾನದ ಮೊದಲ ಹಂತದಲ್ಲಿ ಸಾಫ್ಟ್‌ವೇರ್‌ಗೆ 39.20 ಕೋಟಿ, ಹಾರ್ಡ್‌ವೇರ್‌, ನೆಟ್‌ವರ್ಕಿಂಗ್‌ಗೆ 1,24,26,14,655 ರು ಸೇರಿ ಒಟ್ಟು 1,63,46,87,002 ರು. ವೆಚ್ಚ ಅಂದಾಜಿಸಲಾಗಿದೆ. ಮೊದಲ ಹಂತಕ್ಕೆ ಖರೀದಿಯಾಗುವ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ಗೆ ಜಿ ಎಸ್‌ ಟಿ 29.42 ಕೋಟಿ ರು ಭರಿಸಬೇಕು. ಅದೇ ರೀತಿ ಯೋಜನೆ ಅನುಷ್ಠಾನದ 2ನೇ ಹಂತದಲ್ಲಿ 63.15 ಲಕ್ಷ ರು., ಸಾಫ್ಟ್‌ವೇರ್‌ಗೆ ಎಂದು ಅಂದಾಜಿಸಿರುವ ವಿಧಾನಸಭೆ ಸಚಿವಾಲಯವು ಹಾರ್ಡ್‌ವೇರ್‌, ನೆಟ್‌ವರ್ಕಿಂಗ್‌ಗೆ 50.94 ಕೋಟಿ ರು. ಸೇರಿ ಒಟ್ಟು 51,57,50,173 ರು. ಎಂದು ಅಂದಾಜಿಸಿದೆ. 2ನೇ ಹಂತದ ಉಪಕರಣಗಳ ಖರೀದಿಗೆ ಜಿ ಎಸ್‌ ಟಿ ಶುಲ್ಕ 9,28,35,031 ರು. ಎಂದು ಅಂದಾಜಿಸಿದೆ ಎಂದು ಗೊತ್ತಾಗಿದೆ. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು. ಭ

ಇ-ವಿಧಾನಮಂಡಲಕ್ಕೆ 253 ಕೋಟಿ ವೆಚ್ಚ; ಆರ್ಥಿಕ ಸಂಕಷ್ಟದಲ್ಲೂ ದುಂದುವೆಚ್ಚ!

ವಿಧಾನಮಂಡಲವನ್ನು ಕಾಗದ ರಹಿತವನ್ನಾಗಿಸುವ ಸಂಬಂಧ 2014ರಲ್ಲಿ ಉಭಯ ಸದನಗಳ ಅಂದಿನ ಪೀಠಾಧ್ಯಕ್ಷರು ಅಧ್ಯಯನ ಸಮಿತಿ ರಚಿಸಿದ್ದರು. ಈ ಸಮಿತಿಯು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಈ ಸಂಬಂಧ ವರದಿಯನ್ನು ನೀಡಿತ್ತು. ಈ ಮಧ್ಯೆ ಬಜೆಟ್‌ ಪೂರ್ವದಲ್ಲಿ ಸುಮಾರು 66.00 ಕೋಟಿ ರು.ಗಳ ಅಂದಾಜು ಪಟ್ಟಿಯನ್ನು ನೀಡಿತ್ತು. ಆದರೆ ವಿಧಾನಸಭೆ ಸಚಿವಾಲಯವು 253 ಕೋಟಿ ರು.ವೆಚ್ಚದಲ್ಲಿ ಇ-ವಿಧಾನಮಂಡಲ್‌ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಅಲ್ಲದೆ ಇ-ವಿಧಾನಮಂಡಲ ಯೋಜನೆ ಕುರಿತು ಶಾಸಕರಿಗೆ ಯಾವುದೇ ಪ್ರಾಥಮಿಕ ತರಬೇತಿಯನ್ನೂ ನೀಡಿಲ್ಲ.

ಇ-ಆಫೀಸ್‌ ತಂತ್ರಾಂಶವನ್ನು ಸಚಿವಾಲಯದ ಅಧಿಕಾರಿಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಳಸುತ್ತಿಲ್ಲ. ಹೀಗಿರುವಾಗ ಇ-ವಿಧಾನಮಂಡಲ ಯೋಜನೆ ಅನುಷ್ಠಾನಗೊಳಿಸಲು ನಡೆಸುತ್ತಿರುವ ತರಾತುರಿಯ ಹಿಂದೆ ‘ಕಮಿಷನ್‌ ವ್ಯವಹಾರ’ವೂ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಕಾಗದ ರಹಿತ ವಿಧಾನಮಂಡಲ ವಹಿವಾಟು/ಕಲಾಪ ವ್ಯವಸ್ಥೆ ಮಾಡುವುದು ಮತ್ತು ಕಾಗದಕ್ಕಾಗಿ ವ್ಯಯ ಮಾಡುತ್ತಿರುವ ಸರ್ಕಾರದ ಹಣವನ್ನು ಉಳಿತಾಯ ಮಾಡುವ ಉದ್ದೇಶ ಹೊಂದಿರುವ ಈ ಯೋಜನೆಗೆ ಕೇಂದ್ರ ಸರ್ಕಾರವೇ ಶೇ. 60ರಷ್ಟು ನೀಡುವ ಹಣವನ್ನು ಒದಗಿಸಲಿದೆ. ಆರಂಭಿಕ ಹಂತದಲ್ಲಿ ಕೇಂದ್ರದ ಅನುದಾನವನ್ನು ಬಳಸಿಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ.

ಪ್ರಾಯೋಗಿಕ ಹಂತದಲ್ಲಿ ಯಶಸ್ಸನ್ನಾಧರಿಸಿ ಯೋಜನೆಯನ್ನು ವಿಸ್ತರಿಸಬೇಕಿದ್ದ ಸಚಿವಾಲಯವು ಅನಗತ್ಯವಾಗಿ ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

the fil favicon

SUPPORT THE FILE

Latest News

Related Posts