2020ರ ಬಜೆಟ್‌ನ ಬಂಡವಾಳ; 1,965 ಕೋಟಿ ಮೊತ್ತದ 30 ಯೋಜನೆಗಳನ್ನು ಕೈಬಿಟ್ಟ ಸರ್ಕಾರ

ಬೆಂಗಳೂರು; ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಸರ್ಕಾರವನ್ನು ಅವಧಿಗೆ ಮುನ್ನವೇ ಪತನಗೊಳಿಸಿ ಸರ್ಕಾರ ರಚಿಸಿದ್ದ ಬಿ ಎಸ್‌ ಯಡಿಯೂರಪ್ಪ ಅವರು ಹುಮ್ಮಸ್ಸಿನಿಂದ 2020ರ ಮಾರ್ಚ್‌ನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನೂ ಘೋಷಿಸಿದ್ದರು. ವಿಪರ್ಯಾಸವೆಂದರೆ ವರ್ಷ ಕಳೆಯುತ್ತಿದ್ದಂತೆ ಬಜೆಟ್‌ನಲ್ಲಿ ಘೋಷಿಸಿದ್ದ ಒಟ್ಟು ಯೋಜನೆಗಳ ಪೈಕಿ 30ಕ್ಕೂ ಹೆಚ್ಚು ಯೋಜನೆಗಳನ್ನು ಕೈಬಿಟ್ಟಿದ್ದಾರೆ.

ಕೃಷಿ ಮತ್ತು ಪೂರಕ ಚಟುವಟಿಕೆಗಳು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ, ಅರ್ಥಿಕ ಅಭಿವೃದ್ಧಿಗೆ ಪ್ರಚೋದನೆ, ಬೆಂಗಳೂರು ಸಮಗ್ರ ಅಭಿವೃದ್ಧಿ, ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಆಢಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳ ಕುರಿತಾದ ಒಟ್ಟು 6 ವಲಯಗಳಲ್ಲಿ ಘೋಷಿಸಿದ್ದ ಒಟ್ಟು ಮೊತ್ತದ ಪೈಕಿ 1,963.5ಕೋಟಿ ರು.ಮೊತ್ತದ ಯೋಜನೆಗಳನ್ನು ವರ್ಷ ಕಳೆಯುವುದರಲ್ಲಿ ಕೈ ಬಿಟ್ಟಿದ್ದಾರೆ. ಹಲವು ಯೋಜನೆಗಳು ಇನ್ನೂ ಪರಿಶೀಲನೆಯಲ್ಲಿವೆ. ಬಹುತೇಕ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಹಲವು ಪ್ರಸ್ತಾವನೆಗಳು ಇನ್ನೂ ಪ್ರಗತಿಯಲ್ಲಿವೆ.

2020-21ನೇ ಸಾಲಿನ ಆಯವ್ಯಯ ಭಾಷಣದ ಮೇಲೆ ತೆಗೆದುಕೊಂಡ ಕ್ರಮದ ಕುರಿತು ವಿಧಾನಮಂಡಲಕ್ಕೆ 2021ರ ಮಾರ್ಚ್‌ 8ರಂದು ಮಂಡನೆಯಾಗಿರುವ ವರದಿಯಲ್ಲಿ ಕೈಬಿಟ್ಟಿರುವ ಯೋಜನೆಗಳ ವಿವರಗಳಿವೆ. ಯೋಜನೆಗಳನ್ನು ಕೈ ಬಿಡಲು ಕಾರಣಗಳೇನು ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಗಳಿಲ್ಲ. ಯೋಜನೆಯನ್ನು ಕೈಬಿಟ್ಟಿರುವ ಪೈಕಿ 5 ಕೋಟಿ ರು.ವೆಚ್ಚದಲ್ಲಿ ಸಾಹಿತಿ ಎಸ್‌ ಎಲ್‌ ಭೈರಪ್ಪ ಅವರ ಹುಟ್ಟೂರು ಹಾಸನ ಜಿಲ್ಲೆಯ ಸಂತೆಶಿವರ ಗ್ರಾಮದ ಅಭಿವೃದ್ಧಿಪಡಿಸುವ ಯೋಜನೆಯೂ ಸೇರಿದೆ.

ಕೇಂದ್ರ ಸರ್ಕಾರದ ಫೇಮ್‌-2 ಅಡಿಯಲ್ಲಿ 300 ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ಗಳನ್ನು ಸಾರಿಗೆ ಸಂಸ್ಥೆ ಬಲಕ್ಕೆ ಸೇರ್ಪಡೆಗೊಳಿಸುವ ಮಾದರಿಯಲ್ಲಿ 500 ಸಾಮಾನ್ಯ ಎಲೆಕ್ಟ್ರಿಕ್‌ ಬಸ್‌ಗಳನ್ನು ಸಂಸ್ಥೆಯ ಬಲಕ್ಕೆ ಸೇರಿಸುವ 100 ಕೋಟಿ ರು. ಅನುದಾನವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ, ನೌಕರರ ವೇತನ ವೆಚ್ಚಕ್ಕಾಗಿ ಬಳಸಿಕೊಂಡಿರುವುದು ವರದಿಯಿಂದ ಗೊತ್ತಾಗಿದೆ.

ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಪೌಷ್ಠಿಕತೆಯನ್ನು ಸಾವಯವ ಆಕರಗಳಿಂದ ಪಡೆಯುವ ಉದ್ದೇಶದಿಂದ ಸಾವಯವ ಕೃಷಿ ಪ್ರೋತ್ಸಾಹಿಸುವುದಕ್ಕಾಗಿ 200 ಕೋಟಿ ರು.ಗಳನ್ನು ಒದಗಿಸುವುದಾಗಿ ಯಡಿಯೂರಪ್ಪ ಘೋಷಿಸಿದ್ದರು. ಆದರೆ ವರ್ಷ ಕಳೆಯುವುದರೊಳಗೆ ಯೋಜನೆಯನ್ನು ಕೈ ಬಿಡಲಾಗಿದೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 5 ಕೋಟಿ ರು.ನೀಡುವ ಯೋಜನೆಯನ್ನೂ ಕೈಬಿಟ್ಟಿರುವುದು ವರದಿಯಿಂದ ಗೊತ್ತಾಗಿದೆ.

ಮೀನುಗಾರರು ಆಧುನಿಕ ಮೀನುಗಾರಿಕೆ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಕರ್ನಾಟಕ ಮತ್ಸ್ಯ ವಿಕಾಸ ಯೋಜನೆಯನ್ನು ಘೋಷಿಸಲಾಗಿತ್ತು. 2020-21ನೇ ಸಾಲಿನಲ್ಲಿ ಈ ಯೋಜನೆಗೆ 1.5 ಕೋಟಿ ರು.ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಿದ್ದ ಯಡಿಯೂರಪ್ಪ ಅವರು ಕಡೆಗೆ ಈ ಯೋಜನೆಯನ್ನು ಕೈಬಿಟ್ಟಿರುವುದು ವರದಿಯಿಂದ ತಿಳಿದು ಬಂದಿದೆ.

ಹಾಗೆಯೇ ಮೀನುಗಾರ ಮಹಿಳೆಯರು ಮೀನು ಇಳಿದಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 1,000 ಮೀನುಗಾರ ಮಹಿಳೆಯರಿಗೆ ಮಹಿಳಾ ಮೀನುಗಾರ ಸಬಲೀಕರಣವನ್ನು 5.00 ಕೋಟಿ ವೆಚ್ಚದ ಯೋಜನೆ ಮತ್ತು ಮುಲ್ಕಿಯಲ್ಲಿ 2.00 ಕೋಟಿ ಮೊತ್ತದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನೂ ಕೈಬಿಡಲಾಗಿದೆ.

130 ಕೋಟಿ ವೆಚ್ಚದಲ್ಲಿ ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಅಭಿವೃದ್ಧಿಪಡಿಸುವ ಯೋಜನೆ, 4 ಕೋಟಿ ರು.ಮೊತ್ತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸುವ ಯೋಜನೆ,ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ 5 ಕೋಟಿ ರು.,ವೆಚ್ಚದ ಯೋಜನೆಯನ್ನು ಕೈಬಿಟ್ಟಿರುವುದು ವರದಿಯಿಂದ ಗೊತ್ತಾಗಿದೆ.

ಬೆಂಗಳೂರಿನಲ್ಲಿರುವ ಐತಿಹಾಸಿಕ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇನ್ನು ಐಐಟಿ ಮಾದರಿಯಲ್ಲಿ ಸ್ವಾಯತ್ತಗೊಳಿಸಿ ಅಭಿವೃದ್ಧಿಪಡಿಸಲು 10 ಕೋಟಿ ರು. ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಯನ್ನು ಕೈಬಿಡಲಾಗಿದೆ. ಅದೇ ರೀತಿ ಕರ್ನಾಟವನ್ನು ಶ್ರವಣ ದೋಷ ಮುಕ್ತ ಮಾಡಲು 28 ಕೋಟಿ ರು. ಮೊತ್ತದ ಯೋಜನೆ, ಬಳ್ಳಾರಿ, ಚಿತ್ರದುರ್ಗ, ಹುಬ್ಬಳ್ಳಿ ಧಾರವಾಡ ನಗರದಲ್ಲಿ ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶಕ್ಕೆ ಮರು ಬಳಕೆ ಮಾಡುವ 20 ಕೋಟಿ ರು.ಮೊತ್ತದ ಯೋಜನೆ, ಹಾವೇರಿ ಜಿಲ್ಲೆಯಲ್ಲಿ 20 ಕೋಟಿ ರು.ವೆಚ್ಚದಲ್ಲಿ 20 ಹಾಸಿಗೆಗಳ ಆಯುಷ್‌ ಸಂಯುಕ್ತ ಆಸ್ಪತ್ರೆ ಆರಂಭಿಸುವ ಯೋಜನೆಯನ್ನೂ ಕೈಬಿಟ್ಟಿರುವುದು ವರದಿಯಿಂದ ತಿಳಿದು ಬಂದಿದೆ.

ಅದೇ ರೀತಿ ಕೃಷಿ ಮತ್ತು ಅದಕ್ಕೆ ಸಂಬಂಧಿತ ವಲಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು 20 ಕೋಟಿ ರು.ಮೊತ್ತದ ಕೃಷಿ ನಾವಿನ್ಯತಾ ಕೇಂದ್ರ ಸ್ಥಾಪನೆಯ ಯೋಜನೆ, ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ 10 ಎಚ್‌ಪಿ ವರೆಗಿನ ಪಂಪ್‌ಸೆಟ್‌ಗಳ ವಿದ್ಯುತ್ ಶುಲ್ಕವನ್ನು ಮರುಪಾವತಿಸುವ ಯೋಜನೆಯನ್ನೂ ಕೈಬಿಡಲಾಗಿದೆ.

ಇನ್ನು, ಬೆಂಗಳೂರು ನಗರಕ್ಕೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಿರ್ಮಿಸುತ್ತಿರುವ ನೀರಿನ ಪೈಪ್‌ಲೈನ್‌ಗಳಿಂದಾಗಿ ದುಸ್ಥಿತಿಯಲ್ಲಿರುವ ರಸ್ತೆಗಳ ಪುನಶ್ಚೇತನಕ್ಕಾಗಿ 1,000 ಕೋಟಿ ರು.ಮೊತ್ತದ ಯೋಜನೆಯನ್ನು ಕೈಬಿಟ್ಟಿದ್ದಾರೆ.

ಬೆಂಗಳೂರಿನ ಚಿತ್ರಕಲಾ ಪರಿಷತ್ತು ನಡೆಸುವ ಚಿತ್ರ ಸಂತೆ ಕಾರ್ಯಕ್ರಮವನ್ನು ಸರ್ಕಾರದ ಸಾಂಸ್ಕೃತಿಕ ಕಾರ್ಯಕ್ರಮವೆಂದು ಪರಿಗಣಿಸಿ 2020-21ನೇ ಸಾಲಿನಲ್ಲಿ 1 ಕೋಟಿ ಒದಗಿಸಲಾಗುವುದು ಎಂದು ಹೇಳಿದ್ದ ಯಡಿಯೂರಪ್ಪ ಅವರು ಈ ಯೋಜನೆಯನ್ನೂ ಕೈಬಿಟ್ಟಿದ್ದಾರೆ. ಕೈಬಿಟ್ಟಿರುವ ಸಾಲಿಗೆ 20 ಕೋಟಿ ರು.ಮೊತ್ತದಲ್ಲಿ ರೂಪಿಸಿದ್ದ ಜೀವನ ಚೈತ್ರ ಯಾತ್ರೆ ಯೋಜನೆಯೂ ಸೇರಿರುವುದು ವರದಿಯಿಂದ ತಿಳಿದು ಬಂದಿದೆ.

5 ಕೋಟಿ ರು.ವೆಚ್ಚದ ಜನಸ್ನೇಹಿ ಸಹಾಯ ವೇದಿಕೆ, ಡಿಜಿಟಲ್‌ ಜಾಹೀರಾತು ನೀತಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಸಾರಿಗೆ ಸೇವೆ ಒದಗಿಸಲು 2,450 ಹೊಸ ಬಸ್‌ ಖರೀದಿ, ಕೃಷಿ ಉತ್ಪಾದಕೆ ಹೆಚ್ಚಿಸುವ 40 ಪ್ರಾತ್ಯಕ್ಷಿಕೆ ಕ್ಷೇತ್ರಗಳ ಅಭಿವೃದ್ಧಿ, ಕೃಷಿ ಸಂಸ್ಕೃರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರಗಳ ಸಕ್ರೀಯ ಸಹಭಾಗಿತ್ವದೊಂದಿಗೆ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು, ಪ್ಯಾಕೇಜಿಂಗ್‌ಗಳ ಬಗ್ಗೆ ಹೊಸ ತಂತ್ರಜ್ಞಾನದ ಪರಿಚಯ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬೀಜ, ರಸಗೊಬ್ಬರ ಖರೀದಿ, ಕೃಷಿ ಕಾರ್ಮಿಕರ ವೆಚ್ಚ ಭರಿಸುವ ಸಮಗ್ರ ಯೋಜನೆ, ಹಾಪ್‌ಕಾಮ್ಸ್‌ ಸಂಸ್ಥೆ ಬಲಪಡಿಸುವುದು, ಕರಾವಳಿ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟು ಮಾಸ್ಟರ್‌ ಪ್ಲಾನ್‌, ರಾಯಚೂರು, ಯಾದಗಿರಿ, ಕಲಬುರಗಿ ಭಾಗದ ಜನರಿಗೆ ಕುಡಿಯುವ ನೀರಿನ ಸರಬರಾಜಿಗೆ ಅನುಕೂಲವಾಗುವ ಕೃಷ್ಣಾ ನದಿಗೆ ಜಲಾಶಯ ನಿರ್ಮಿಸುವ ಯೋಜನೆಯನ್ನೂ ಕೈಬಿಡಲಾಗಿದೆ.

ಹಂದಿ ಸಾಕಾಣಿಕೆ ಮತ್ತು ಉತ್ಪಾದನೆಯ ಗುಣಮಟ್ಟದಲ್ಲಿ ಸುಧಾರಣೆ ತ ರುವ ಸಮಗ್ರ ವರಾಹ ಅಭಿವೃದ್ಧಿ, ಹೈನುರಾಸುಗಳಲ್ಲಿ ಶೇ.90ಕ್ಕಿಂತ ಹೆಚ್ಚು ಹೆಣ್ಣು ಕರು ಪಡೆಯುವ ಲಿಂಗ ನಿರ್ಧಾರಿತ ವೀರ್ಯನಳಿಕೆಗಳಿಂದ ಕೃತಕ ಗರ್ಭಧಾರಣೆ ಮೂಲಕ ಹೆಣ್ಣು ಕರುಗಳ ಜನನ ಹೆಚ್ಚಿಸುವ ಉದ್ದೇಶದ 2 ಕೋಟಿ ರು.ಅನುದಾನ ನೀಡುವ ಯೋಜನೆಯನ್ನೂ ಕೈಬಿಟ್ಟಿರುವುದು ವರದಿಯಿಂದ ಗೊತ್ತಾಗಿದೆ.

ಅದೇ ರೀತಿ ಅಡಿಕೆ ಬೆಳೆಗಾರರ ಅಭಿವೃದ್ಧಿಗೆ ಅನುಕೂಲವಾಗಲು ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ 2 ಲಕ್ಷ ರು.ವರೆಗಿನ ಸಾಲಕ್ಕೆ ಶೇ.5ರ ಬಡ್ಡಿ ವಿನಾಯಿತಿ ನೀಡಿ ಈ ಮೊತ್ತವನ್ನು ಸರ್ಕಾರದಿಂದಲೇ ಭರಿಸುವ ಯೋಜನೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವ ಯೋಜನೆಯನ್ನೂ ಕೈಬಿಡಲಾಗಿದೆ.

ಅಲ್ಲದೆ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಲು ಅನುವಾಗುವಂತೆ ಸ್ಥಾಪಿಸಿರುವ ಆವರ್ತ ನಿಧಿಯ ಮೊತ್ತವನ್ನು ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿಸಲು 2,000 ಕೋಟಿ ರು.ಗೆ ಹೆಚ್ಚಿಸುವ ಯೋಜನೆಯ ಪ್ರಸ್ತಾವನೆಯನ್ನೇ ಮುಂದೂಡಿರುವುದು ವರದಿಯಿಂದ ತಿಳಿದು ಬಂದಿದೆ.

ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ಬಿಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳ ಅನುಕೂಲಕ್ಕಾಗಿ ರಾಜ್ಯದ ಆಯ್ದ 5 ಜಿಲ್ಲೆಗಳಲ್ಲಿ 5 ಕೋಟಿ ರು.ವೆಚ್ಚದ ಉಚಿತ ಪೆರಿಟೋನಿಯಮ್‌ ಡಯಾಲಿಸಿಸ್‌ ಸೇವೆ, ಕೆ ಸಿ ಜನರಲ್‌ ಆಸ್ಪತ್ರೆ ಮತ್ತು ಇತರೆ 5 ಆಸ್ಪತ್ರೆಗಳ ತುರ್ತು ವೈದ್ಯಕೀಯ ಚಿಕಿತ್ಸಾ ವಿಭಾಗಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ 5 ಕೋಟಿ ರು. ಅನುದಾನ ಒದಗಿಸುವ ಯೋಜನೆ, ಕೆ ಸಿ ಜನಲರ್‌ ಆಸ್ಪತ್ರೆ, ಸಿ ವಿ ರಾಮನ್‌ ಆಸ್ಪತ್ರೆಗಳಲ್ಲಿ ಹೃದಯ ರೋಗ ಚಿಕಿತ್ಸೆಗಾಗಿ ಕ್ಯಾತ್‌ಲ್ಯಾಬ್‌ ಸ್ಥಾಪಿಸುವ ಯೋಜನೆ ಘೋಷಿಸಲಾಗಿತ್ತಾದರೂ ಆ ಪ್ರಸ್ತಾವನೆಗಳು ವರ್ಷದಿಂದಲೂ ಪರಿಶೀಲನೆಯಲ್ಲೇ ಇರುವುದು ಗೊತ್ತಾಗಿದೆ.

ಅದೇ ರೀತಿ ರಾಜ್ಯದ ವ್ಯಾಪ್ತಿಯಲ್ಲಿ ಅಮೂಲ್ಯ ಖನಿಜಗಳ ನಿಕ್ಷೇಪ ಗುರುತಿಸಿ ಅವುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ರಾಜಸ್ವವನ್ನು ನಿರೀಕ್ಷಿಸುವ ಪ್ರಸ್ತಾವನೆಯೂ ವರ್ಷದಿಂದಲೂ ಪರಿಶೀಲನೆ ಹಂತದಲ್ಲೇ ಇದೆ. ಶುಭ್ರ ಬೆಂಗಳೂರು ಯೋಜನೆಯಡಿ ಬೆಂಗಳೂರು ನಗರದ ಕೆರೆಗಳ ಅಭಿವೃದ್ಧಿಗಾಗಿ 100 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ಕೋರುವ ಹಂತದಲ್ಲೇ ಇದೆ.

ಬೆಂಗಳೂರು ನಗರದ ಆಯ್ದ ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸ್ನೇಹಿ ವಾತಾವರಣ ನಿರ್ಮಿಸಲು ಮಕ್ಕಳ ಪಾಲನಾ ಕೇಂದ್ರ, ಸ್ಯಾನಿಟರಿ ನ್ಯಾಪ್‌ಕಿನ್‌ ಡಿಸ್ಪೆನ್ಸರ್‌ ಇತಗರೆ ಸೌಲಭ್ಯ ಹೊಂದಿರುವ ಮಹಿಳಾ ವಿಶ್ರಾಂತಿ ಕೋಣೆಗಳ ಸ್ಥಾಪನೆ, ನಗರದ ವಿವಿಧ ಭಾಗಗಳಲ್ಲಿ 4 ವಿದ್ಯುತ್‌ ಚಿತಾಗಾರ ಸ್ಥಾಪಿಸುವುದು, 20 ಕೋಟಿ ರು.ವೆಚ್ಚದ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಅಳವಡಿಸುವುದು, ಹಳೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು 1,000 ಕೋಟಿ ರು.ವೆಚ್ಚದಲ್ಲಿ ಪುನರುಜ್ಜೀವನ ಮತ್ತು ನವೀಕರಿಸುವುದು, ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ 60 ಕೋಟಿ ರು.ವೆಚ್ಚದಲ್ಲಿ ಕಲಾ ಕ್ಷೇತ್ರಗಳನ್ನು ಸ್ಥಾಪಿಸುವುದು, ಪ್ರಸ್ತಾವನೆಯೂ ಪರಿಶೀಲನೆ ಹಂತದಲ್ಲೇ ಇದೆ.

the fil favicon

SUPPORT THE FILE

Latest News

Related Posts