ಒಂದನೇ ವರ್ಷಕ್ಕೆ ‘ದಿ ಫೈಲ್‌’ ಹೆಮ್ಮೆಯ ಹೆಜ್ಜೆ

‘ದಿ ಫೈಲ್‌’ ಗೀಗ ಒಂದು ವರ್ಷ. ಯಾರನ್ನೂ ಅನುಕರಿಸದ ಅಸಲಿ ಪ್ರಯತ್ನದಲ್ಲಿ ಒಂದು ವರ್ಷ ಸಾಗಿ ಬಂದಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ತುಂಬಾ ಮೆದುವಾಗಿದ್ದ ತನಿಖಾ ವರದಿಗಳನ್ನು ಸಾಣೆ ಹಿಡಿದು ಹರಿತಗೊಳಿಸಿದ್ದು ಲಂಕೇಶ್‌ ಪತ್ರಿಕೆ. ಲಂಕೇಶ್‌ ಪತ್ರಿಕೆ ನಂತರ ತನಿಖಾ ವರದಿಗಳಿಗೆಂದೇ ಮೀಸಲಾದ ಪತ್ರಿಕೆ, ವೆಬ್‌ ಪೋರ್ಟಲ್‌ಗಳು ಇರಲಿಲ್ಲ. ಇಂತಹ ಹೊತ್ತಿನಲ್ಲಿ ಆರಂಭವಾಗಿದ್ದು ‘ದಿ ಫೈಲ್‌’.

ಆಡಳಿತ ಪಕ್ಷದ ಹಗರಣಗಳು, ಅಧಿಕಾರಿಗಳ ಕರ್ತವ್ಯಲೋಪ, ಹಣಕಾಸು ದುರುಪಯೋಗ, ಸರ್ಕಾರದ ಬೊಕ್ಕಸಕ್ಕೆ ನಷ್ಟ, ಆದೇಶಗಳ ಉಲ್ಲಂಘನೆ ಪ್ರಕರಣಗಳನ್ನು ಮುಖ್ಯವಾಹಿನಿಯಲ್ಲಿರುವ ಬಹುತೇಕ ಮಾಧ್ಯಮಗಳು ಕಡೆಗಣಿಸಿ ನಿರ್ಲಕ್ಷ್ಯ ಭಾವದಿಂದಿದ್ದಾಗ ಇತರೆಲ್ಲ ಸುದ್ದಿ ಪೋರ್ಟಲ್‌ಗಳಿಗಿಂತಲೂ ಹೊಸತಾಗಿ ಕಂಡುಬಂದಿತು.
ಕರ್ನಾಟಕ ಸೇರಿ ಇಡೀ ಜಗತ್ತು ಕೋವಿಡ್‌ ದುರ್ದಿನಗಳಲ್ಲಿ ನೂಕುತ್ತಿದ್ದಾಗ ಕೋವಿಡ್‌ ಹೆಸರಿನಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳನ್ನು ಬೆನ್ನೆತ್ತಿ 50ಕ್ಕೂ ಸರಣಿ ವರದಿಗಳನ್ನು ಪ್ರಕಟಿಸಿದ್ದು ‘ದಿ ಫೈಲ್‌’.

ಕೋವಿಡ್‌ ಭ್ರಷ್ಟಾಚಾರಗಳತ್ತ ಪ್ರತಿಪಕ್ಷಗಳು ಕಣ್ಣಾಯಿಸದೇ ಮುಗುಮ್ಮಾಗಿ ಕುಳಿತಿದ್ದವು. ಒಂದೊಂದೇ ಪ್ರಕರಣಗಳನ್ನು ಹೊರಗೆಡವುತ್ತ ಹೋದಂತೆಲ್ಲಾ ಪ್ರತಿಪಕ್ಷಗಳು ಅನಿವಾರ್ಯವಾಗಿ ಬಾಯಿ ಬಿಡಬೇಕಾಯಿತು. ಕಡೆಗೆ ‘ದಿ ಫೈಲ್‌’ ವರದಿಗಳನ್ನು ಪ್ರತಿಪಕ್ಷಗಳು ಅಸ್ತ್ರವನ್ನಾಗಿಸಿಕೊಂಡಿದ್ದು ಗಮನಾರ್ಹ.

ಸರ್ಜಾಪುರ ಹೋಬಳಿಯ ಬಿಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ವ್ಯಾಜ್ಯದಲ್ಲಿದ್ದ 273 ಎಕರೆ ವಿಸ್ತೀರ್ಣದ ಜಮೀನಿಗೆ ಅಲ್ಲಿನ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಪ್ರಭಾವಿಗಳೊಂದಿಗೆ ಶಾಮೀಲಾಗಿ ಲಾಕ್‌ಡೌನ್‌ ಅವಧಿಯಲ್ಲೇ ಸರ್ಕಾರಿ ಜಮೀನಿಗೆ ಖಾತೆ ಮಾಡಿದ್ದ ಪ್ರಕರಣವನ್ನು ಹೊರಗೆಳೆದಿದ್ದು ಇದೇ ನಿಮ್ಮ ‘ದಿ ಫೈಲ್‌’. ವರದಿ ಪ್ರಕಟವಾದ ಮೂರ್ನಾಲ್ಕು ದಿನಗಳಲ್ಲೇ ಬೆಂಗಳೂರು ಜಿಲ್ಲಾ ಪಂಚಾಯ್ತಿ ಸಿಇಓ ಮತ್ತು ಆನೇಕಲ್‌ ತಾಲೂಕು ಪಂಚಾಯ್ತಿ ಇಒ, ಕಾನೂನುಬಾಹಿರವಾಗಿ ಮಾಡಿದ್ದ ಖಾತೆಗಳನ್ನು ರದ್ದುಗೊಳಿಸಿದರು. ‘ದಿ ಫೈಲ್‌’ ವರದಿಯಿಂದಾಗಿಯೇ 273 ಎಕರೆ ಜಮೀನು ಸರ್ಕಾರಕ್ಕೆ ಮರಳಿತು.

ಎಸ್‌ಎಸ್‌ಎಲ್‌ಸಿ ಬೋರ್ಡ್‌ನಲ್ಲಿ ಅಧಿಕಾರಿಗಳು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದ ಕುರಿತು ‘ದಿ ಫೈಲ್‌’ನ ವರದಿಯನ್ನೇ ಆಧರಿಸಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್‌ ಅವರು ಎಸಿಬಿಗೆ ದೂರು ದಾಖಲಿಸಿದ್ದಾರೆ. ಈ ದೂರಿನ ವಿಚಾರಣೆ ಈಗಷ್ಟೇ ಮುನ್ನೆಲೆಗೆ ಬಂದಿದೆ.

ಹೀಗೆ ರಾಜಕಾರಣಿ, ಅಧಿಕಾರಶಾಹಿಯ ಸ್ವಜನಪಕ್ಷಪಾತ, ದುರಾಡಳಿತ, ಸುಲಿಗೆಯಲ್ಲಿ ನಿರತರಾಗಿದ್ದವರನ್ನೆಲ್ಲಾ ದಾಖಲೆ ಸಮೇತ ಬೆತ್ತಲುಗೊಳಿಸಿದ್ದು ಇದೇ ‘ದಿ ಫೈಲ್‌’. ಸಿದ್ಧಾಂತ ನಿಷ್ಠೆಯ ಉಗ್ರ ಪರೀಕ್ಷೆಯಲ್ಲಿ ‘ದಿ ಫೈಲ್‌’ ತೇರ್ಗಡೆ ಆಗಿದೆಯೇ ಇಲ್ಲವೇ ಎಂಬುದನ್ನು ಓದುಗರೇ ಹೇಳಬೇಕು.

‘ದಿ ಫೈಲ್‌’ ಇತ್ತೀಚೆಗಷ್ಟೇ ಪ್ರಕಟಿಸಿದ್ದ ವರದಿಯು ಸಚಿವ ಎಚ್‌ ನಾಗೇಶ್‌ ಅವರ ರಾಜೀನಾಮೆಗೆ ಕಾರಣವಾಯಿತು. ಮುರುಘಾ ಶರಣರ ಸೋದರನ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಪ್ರಕರಣದ ಕುರಿತು ನ್ಯಾಯಾಲಯದ ನೀಡಿರುವ ತೀರ್ಪು ಆಧರಿಸಿ ಪ್ರಕಟಿಸಿದ್ದ ವರದಿಯಿಂದ ಮುರುಘಾ ಮಠ ಮುಜುಗರಕ್ಕೊಳಗಾಯಿತು. ಇದರಿಂದ ಹೊರಬರಲು ವರದಿ ಪ್ರಕಟಿಸಿದ್ದ ‘ದಿ ಫೈಲ್‌’ ಪ್ರತಿನಿಧಿ ವಿರುದ್ಧವೇ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಎಫ್‌ಐಆರ್‌ನ್ನೂ ಹಾಕಿಸಿ ಬೆದರಿಸಲು ಮುಂದಾಯಿತು.

ಅಂದರೆ ‘ದಿ ಫೈಲ್‌’ ಸರಿಯಾದ ದಾರಿಯಲ್ಲಿಯೇ ನಡೆಯುತ್ತಿದೆ ಎಂದೇ ಅರ್ಥ. ಪೂರ್ವಗ್ರಹಪೀಡಿತವಲ್ಲದ, ವಸ್ತುನಿಷ್ಠತೆಯನ್ನು ಕಾಯ್ದುಕೊಂಡು ದಾಖಲೆಗಳ ಸಮೇತ ವರದಿಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಎಫ್‌ಐಆರ್‌ ದಾಖಲಿಸಿ ಬೆದರಿಸಿದ್ದ ಹೊತ್ತಿನಲ್ಲಿ ನಿರೀಕ್ಷೆಗೂ ಮೀರಿ ‘ದಿ ಫೈಲ್‌’ಗೆ ಬೆಂಬಲವೂ ವ್ಯಕ್ತವಾಯಿತು. ಬೆಂಬಲಿಸಿದ ಎಲ್ಲರಿಗೂ ‘ದಿ ಫೈಲ್‌’ ಧನ್ಯವಾದಗಳನ್ನು ತಿಳಿಸುತ್ತದೆ.

ಅಂದ ಹಾಗೆ ಭ್ರಷ್ಟಾಚಾರದ ವಿರುದ್ಧ ನೇರಾನೇರ ಕಾರ್ಯಾಚರಣೆಗಿಳಿದಿರುವ ‘ದಿ ಫೈಲ್‌’ ನೊಂದಿಗೆ ನೀವು ಕೈ ಜೋಡಿಸುತ್ತೀರಲ್ಲವೇ….

the fil favicon

SUPPORT THE FILE

Latest News

Related Posts