ಅದಾನಿ ಕಂಪನಿಯಿಂದ ಸಿಎಂ ತವರು ಜಿಲ್ಲೆ ರೈತನ ಟ್ರಾಕ್ಟರ್‌ ಜಫ್ತಿ; ಸಂಬಂಧವಿಲ್ಲವೆಂದ ಸರ್ಕಾರ

ಬೆಂಗಳೂರು: ಪ್ರಧಾನಿ ಮೋದಿ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವ ಅದಾನಿ ಸಮೂಹದ ಅದಾನಿ ಕ್ಯಾಪಿಟಲ್‌ ಫೈನಾನ್ಷಿಯಲ್‌ ಕಂಪನಿಯು ಮುಖ್ಯಮಂತ್ರಿ ಯಡಿಯೂರಪ್ಪ ತವರು ಜಿಲ್ಲೆಯ ರೈತನೊಬ್ಬನ ಟ್ರಾಕ್ಟರ್‌ನ್ನು ಜಫ್ತಿ ಮಾಡಿದೆ.

ಮುಂಬೈನಲ್ಲಿರುವ ಅದಾನಿ ಕ್ಯಾಪಿಟಲ್‌ ಫೈನಾನ್ಷಿಯಲ್‌ ಕಂಪನಿಯಿಂದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಟ್ಟೂರು ಗ್ರಾಮದ ಗುರುರಾಜ ಯು ಸಿ ಎಂಬುವರು ಟ್ರಾಕ್ಟರ್‌ ಖರೀದಿಗಾಗಿ ಸಾಲ ಪಡೆದಿದ್ದರು. ಸಾಲ ತೀರಿಸದ ಕಾರಣಕ್ಕೆ ಅದಾನಿ ಕಂಪನಿಯು ಟ್ರಾಕ್ಟರ್‌ನ್ನು ಜಫ್ತಿ ಮಾಡಿದೆ.

ಈ ಸಂಬಂಧ ರೈತ ಗುರುರಾಜ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇವರ ನೆರವಿಗೆ ನಿಲ್ಲಬೇಕಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು, ಬಾಧಿತ ರೈತನ ರಕ್ಷಣೆಗೆ ಧಾವಿಸಿಲ್ಲ. ‘ಈ ವ್ಯವಹಾರವು ಸರ್ಕಾರಕ್ಕೆ ಸಂಬಂಧಿಸಿಲ್ಲ ಮತ್ತು ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ,’ ಎಂದು ಬಾಧಿತ ರೈತನಿಗೆ 2021ರ ಫೆ.23ರಂದು ಆರ್ಥಿಕ ಇಲಾಖೆಯ ವಿತ್ತೀಯ ಸುಧಾರಣೆ ವಿಭಾಗದ ಸರ್ಕಾರದ ಕಾರ್ಯದರ್ಶಿ ಮಂಜು ಪ್ರಸನ್ನನ್‌ ಪಿಳ್ಳೈ ಅವರು ಹಿಂಬರಹ ನೀಡಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿವಿಧೆಡೆಯೂ ಟ್ರ್ಯಾಕ್ಟರ್‌ ಜಪ್ತಿ

ಟ್ರ್ಯಾಕ್ಟರ್‌ಗಾಗಿ ಸಾಲ ನೀಡಿದ ಬ್ಯಾಂಕಿನವರು ಟ್ರ್ಯಾಕ್ಟರ್‌ ಜಪ್ತಿ ಮಾಡಿರುವ ಮತ್ತು ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟ ಮಾಡಿ ಬಂದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಂಡಿರುವ ಹಲವು ಘಟನೆಗಳು ರಾಜ್ಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿವೆ.

ರೈತರ ಸಾಲ ವಸೂಲಿಗಾಗಿ ಬ್ಯಾಂಕ್‌ಗಳು ಹಲವು ಮಾರ್ಗಗಳನ್ನು ಬಳಸುತ್ತಿವೆ. ರೈತರು ಕಷ್ಟಪಟ್ಟು ಕಟ್ಟಿದ ಎಲ್‌ಪಿಜಿಯ ಸಬ್ಸಿಡಿಯನ್ನು ಸಾಲಕ್ಕೆ ಜಮಾ ಮಾಡುತ್ತಿರುವ ನಿದರ್ಶನಗಳೂ ಇವೆ. ಸಾಲ ವಸೂಲಿ ಹೆಸರಿನಲ್ಲಿ ಹಲವೆಡೆ ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದಿವೆ.

ಫಸಲ್‌ ಬಿಮಾ ಸೇರಿದಂತೆ ಕೇಂದ್ರ ಸರ್ಕಾರದ ಇನ್ನಿತರೆ ನೆರವಿನ ಯೋಜನೆಗಳ ಫಲಾನುಭವಿ ರೈತರಿಗೆ ನೀಡಿರುವ ನೆರವಿನ ಹಣವನ್ನೂ ವಶಕ್ಕೆ ಪಡೆದು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಹೋಬಳಿ ಚಾಕವೇಲು ಗ್ರಾಮದಲ್ಲಿ ಕಳೆದ ತಿಂಗಳು ಕೃಷಿ ಸಮ್ಮಾನ್‌ನಡಿ ಬಂದ ಹಣವನ್ನು ಬ್ಯಾಂಕ್‌ನವರು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವುದು ಕಂಡುಬಂದಿತ್ತು. ಇದನ್ನು ಖಂಡಿಸಿ ಬ್ಯಾಂಕ್‌ ಒಂದರ ಮುಂದೆ ಸುಮಾರು 20ಕ್ಕೂ ಹೆಚ್ಚು ರೈತರು ಧರಣಿ ನಡೆಸಿದ್ದರು. ಅಲ್ಲದೆ ತುಮಕೂರಿನ ಗುಬ್ಬಿ ತಾಲೂಕು ನಿಟ್ಟೂರು ಶಾಖೆಯಲ್ಲಿ ಕೆಲವು ರೈತರ ಖಾತೆಗಳ ವ್ಯವಹಾರಕ್ಕೇ ತಡೆ ಒಡ್ಡಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts