ಹಳಿ ತಪ್ಪಿದ ಪರಿಷತ್‌ ಆಡಳಿತ; ಅಧಿಕಾರಿಗಳು ಸಿ ಸಿ ಕ್ಯಾಮರಾಗಳನ್ನು ಹಾಳುಗೆಡವಿದರೇ?

ಬೆಂಗಳೂರು: ವಿಧಾನಪರಿಷತ್‌ ಸಚಿವಾಲಯದ ಶಾಖೆಗಳಲ್ಲಿ ಅಳವಡಿಸಿರುವ ಸಿ ಸಿ ಕ್ಯಾಮರಾಗಳನ್ನು ಕೆಲ ಅಧಿಕಾರಿ, ಸಿಬ್ಬಂದಿಯೇ ಹಾಳುಗೆಡುವುತ್ತಿದ್ದಾರೆ. ಅಲ್ಲದೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಕೆಲ ಅಧಿಕಾರಿ, ಸಿಬ್ಬಂದಿಯಲ್ಲಿ ಅಶಿಸ್ತಿನಿಂದಾಗಿ ಆಡಳಿತ ವ್ಯವಸ್ಥೆ ಹಳಿ ತಪ್ಪಿದೆ. ಹಾಗೆಯೇ ಸರಿಯಾದ ಸಮಯಕ್ಕೆ ಕೆಲಸಕ್ಕೂ ಹಾಜರಾಗುತ್ತಿಲ್ಲ. ಹಾಗೆಯೇ ವಿಧಾನಪರಿಷತ್‌ನ ವಿಶೇಷವಾಗಿ ಡಿ ಮತ್ತು ಸಿ ಗ್ರೂಪ್‌ ನೌಕರರು ಸಮವಸ್ತ್ರ ಧರಿಸದ ಕಾರಣ ಸಚಿವಾಲಯದ ಅಧಿಕಾರಿ ಮತ್ತು ನೌಕರರ್ಯಾರು ಎಂದು ಗುರುತಿಸಲಾಗುತ್ತಿಲ್ಲ.

ಪರಿಷತ್‌ಗೆ ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಹೊರಟ್ಟಿ ಅವರು ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೆ ಇಂತಹ ಕೃತ್ಯಗಳಲ್ಲಿ ಭಾಗಿಯಾದ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಡಳಿತ ಶಾಖೆಗೆ ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಧಾನಪರಿಷತ್‌ನಲ್ಲಿ ಜಡ್ಡುಗೊಂಡಿರುವ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವುದು ಮತ್ತು ಮೈಗಳ್ಳ ಅಧಿಕಾರಿ, ಸಿಬ್ಬಂದಿಗಳಿಗೆ ಚಳಿ ಬಿಡಿಸುವ ಭಾಗವಾಗಿ ಹಲವು ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಇವುಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿರುವುದು ಟಿಪ್ಪಣಿಯಿಂದ ತಿಳಿದು ಬಂದಿದೆ.

‘ವಿಧಾನಪರಿಷತ್ತಿನ ಎಲ್ಲ ಶಾಖೆಗಳಲ್ಲಿಯೂ ಸಿ ಸಿ ಕ್ಯಾಮರಾ ಅಳವಡಿಸಲಾಗಿದ್ದು, ಈ ಕ್ಯಾಮರಾಗಳು ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಕೆಲವರು ಉದ್ದೇಶಪೂರ್ವಕವಾಗಿ ಹಾಳು ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಅವುಗಳನ್ನು ದುರಸ್ತಿಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,’ ಎಂದು ಹೊರಟ್ಟಿ ಅವರು ಆಡಳಿತ ಶಾಖೆಗೆ ಆದೇಶಿಸಿರುವುದು ಗೊತ್ತಾಗಿದೆ.

ಅಲ್ಲದೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಕೆಲ ಸಿಬ್ಬಂದಿಗಳ ಅಶಿಸ್ತು ಪರಮಾವಧಿ ತಲುಪಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಹೊರಟ್ಟಿ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಅಧಿಕಾರಿ ಸಿಬ್ಬಂದಿ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ. ‘ಹಲವು ಅಧಿಕಾರಿ, ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿಲ್ಲ. ಅಲ್ಲದೆ ಅದನ್ನು ಸಂಬಂಧಪಟ್ಟವರು ಮೇಲಾಧಿಕಾರಿಗಳಿಗೆ ತಿಳಿಸುತ್ತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.

ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗದ ಅಧಿಕಾರಿಗಳು ಮತ್ತು ಜವಾಬ್ದಾರಿ ಮರೆತು ಕರ್ತವ್ಯವನ್ನು ಸರಿಯಾಗಿ ಮಾಡದೇ ಇರುವ ಸಿಬ್ಬಂದಿ ಮೆಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರಲ್ಲದೆ ಶಿಸ್ತು, ಸಮಯಪಾಲನೆ ವಿಚಾರದಲ್ಲಿ ಬಯೋ ಮೆಟ್ರಿಕ್‌ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇದರ ವರದಿಯನ್ನು ಪ್ರತಿ ತಿಂಗಳು ತಮ್ಮ ಆಪ್ತ ಶಾಖೆಗೆ ತಲುಪಿಸಬೇಕು ಮತ್ತು ಈ ನಿಯಮ ಉಲ್ಲಂಘಿಸುವ ನೌಕರರ ವಿರುದ್ಧ ಕೈಗೊಂಡ ಶಿಸ್ತು ಕ್ರಮದ ಬಗ್ಗೆಯೂ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಡಿ ಗ್ರೂಫ್‌ ನೌಕರರು (ಡ್ರೈವರ್‌ ಸಹಿತ) ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಸಮವಸ್ತ್ರ ಧರಿಸದೇ ಇರುವುದರಿಂದ ವಿಧಾನಪರಿಷತ್ತಿನಲ್ಲಿ ಗ್ರೂಪ್‌ ಡಿ ಮತ್ತು ಸಿ ಗ್ರೂಫ್‌ ಮತ್ತು ಅಧಿಕಾರಿ ಯಾರು ಎಂಬುದು ಗೊತ್ತಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಗ್ರೂಪ್‌ ಡಿ ನೌಕರರು ಸಮವಸ್ತ್ರ ಧರಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.

ವಿಧಾನಪರಿಷತ್ತಿನ ಪ್ರತಿಯೊಂದು ಶಾಖೆಯಲ್ಲಿ ಸಿಬ್ಬಂದಿಯವರು ಕಡ್ಡಾಯವಾಗಿ ಚಲನವಲನ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಿರ್ವಹಿಬೇಕು. ಪರಿಷತ್ತಿನ ಕೆಲಸವನ್ನು ಬಿಟ್ಟು ಹೊರಗಡೆ ಹೋದ ಸಿಬ್ಬಂದಿ ಮಾಡಿದ ಪ್ರಮಾದಗಳಿಗೆ ವಿಧಾನಪರಿಷತ್ತಾಗಲಿ, ಸರ್ಕಾರವಾಗಲಿ ಜವಾಬ್ದಾರವಾಗುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.

the fil favicon

SUPPORT THE FILE

Latest News

Related Posts