ಲಂಚ; ಆರೋಪಿತ ಸಚಿವ ಅಶೋಕ್‌ ಆಪ್ತ ಸಹಾಯಕ ಗಂಗಾಧರ್‌, ವಿಧಾನಸಭೆ ಸಚಿವಾಲಯದ ನೌಕರ

ಬೆಂಗಳೂರು; ಸಬ್‌ ರಿಜಿಸ್ಟ್ರಾರ್‌ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಒಳಗಾಗಿರುವ ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಗಂಗಾಧರ್‌ ಅವರು ಕರ್ನಾಟಕ ವಿಧಾನಸಭೆ ಸಚಿವಾಲಯದ ನೌಕರ ಎಂದು ತಿಳಿದು ಬಂದಿದೆ.

ಅಶೋಕ್‌ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಗಂಗಾಧರ್‌ ಅವರು ಪರಿಚಿತರಾಗಿದ್ದರು ಎಂದು ಗೊತ್ತಾಗಿದೆ. ಅಶೋಕ್‌ ಅವರು ಸಚಿವರಾದ ನಂತರ ಅವರ ಆಪ್ತ ಸಹಾಯಕರಾಗಿ ನಿಯೋಜನೆ ಮೇಲೆ ತೆರಳಿದ್ದರು ಎಂದು ಹೇಳಲಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಾಖೆಯಲ್ಲಿ ಶಾಖಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಮೊದಲು ಸಚಿವಾಲಯದ ಕಾರು ಚಾಲಕರಾಗಿ ನೇಮಕಗೊಂಡಿದ್ದರು. ಆ ನಂತರ ಶಾಖಾಧಿಕಾರಿ ಹುದ್ದೆಗೆ ಹಂತ ಹಂತವಾಗಿ ಬಡ್ತಿ ಪಡೆದುಕೊಂಡಿದ್ದರು ಎಂದು ಗೊತ್ತಾಗಿದೆ.

ಕರ್ನಾಟಕ ವಿಧಾನಸಭೆ ಸಚಿವಾಲಯದ ಹಲವು ಅಧಿಕಾರಿ, ನೌಕರರು ಮುಖ್ಯಮಂತ್ರಿಗಳ ಕಚೇರಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಗಳ ಕಚೇರಿಗೆ ನಿಯೋಜನೆ ಮೇಲೆ ತೆರಳಿದ್ದಾರೆ. ಹೀಗಾಗಿ ವಿಧಾನಸಭೆ ಸಚಿವಾಲಯದ ಆಡಳಿತ ಶಾಖೆಯೂ ಸೇರಿದಂತೆ ವಿವಿಧ ಶಾಖೆಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ನಿಯೋಜನೆ ಮೇಲೆ ತೆರಳಲು ವಿಧಾನಸಭೆ ಸ್ಪೀಕರ್‌ ಕಾಗೇರಿ ಅವರೂ ಯಾವುದೇ ತಕರಾರು ತೆಗೆಯದೇ ಅನುಮತಿ ನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಕ್ಷರ ಮಿತ್ರ ಕಾರ್ಯಕ್ರಮದಲ್ಲಿ ಸಚಿವ ಆರ್‌ ಅಶೋಕ್‌ ಅವರು ಭಾಗವಹಿಸಿದ್ದರು. 2021ರ ಜನವರಿ 21ರಂದು ಕಂದಾಯ ಸಚಿವರ ಪ್ರವಾಸ ವೇಳಾಪಟ್ಟಿಯನ್ನು ಉಪ ನೋಂದಣಾಧಿಕಾರಿ ಎಚ್‌ ಎಸ್‌ ಚೆಲುವರಾಜು ಅವರ ಖಾಸಗಿ ಮೊಬೈಲ್‌ ನಂಬರ್‌ 9741114815ಗೆ ಸಂದೇಶ ಕಳಿಸಲಾಗಿತ್ತು. ಆದರೆ ಸಂದೇಶ ಕಳಿಸಿದವ ಇವರಿಗೆ ಪರಿಚಯವಿರಲಿಲ್ಲ. ಇದಾಗಿ 3 ದಿನದ ನಂತರ 2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡ ಗಂಗಾಧರ್‌ ಎಂಬ ವ್ಯಕ್ತಿಯು ತಮ್ಮನ್ನು ಮತ್ತು ಸಚಿವ ಅಶೋಕ್‌ ಅವರನ್ನು ಭೇಟಿ ಆಗಬೇಕು ಎಂದು ಸೂಚಿಸಿದ್ದರು ಎಂದು ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರನ್ನು ಭೇಟಿಯಾಗಲು ಶರಂಗೇರಿಯ ಆದಿಚುಂಚನಗಿರಿ ಸಮುದಾಯ ಭವನಕ್ಕೆ ತೆರಳಿದ್ದ ವೇಳೆಯಲ್ಲಿ ಗಂಗಾಧರ ಎಂಬಾತ ತನಗೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟರು ಎಂದು ದೂರಿದ್ದಾರೆ. ಈ ಬಗ್ಗೆ ನನಗೆ ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ನನಗೆ ಇಲ್ಲ ಎಂದು ಸ್ಥಳದಲ್ಲಿಯೇ ತಿಳಿಸಿ ಆತನ ಬೇಡಿಕೆಯನ್ನು ತಿರಸ್ಕರಿಸಿದ್ದೆ ಎಂದು ವಿವರಿಸಿದ್ದಾರೆ.

ಅದೇ ದಿನ ಗಂಗಾಧರ್‌ (ದೂರವಾಣಿ ಸಂಖ್ಯೆ ; 7760666222) 8-30ರ ಸಮಯದಲ್ಲಿ ತನ್ನ ಮೊಬೈಲ್‌ನಿಂದ ವಾಟ್ಸಾಪ್‌ ಧ್ವನಿ ಕರೆ ಮಾಡಿದ್ದ ಎಂದು ದೂರಿನಲ್ಲಿ ಹೇಳಿರುವ ಚೆಲುವರಾಜು ಅವರು ಗಂಗಾಧರ್‌ ಎಂಬುವರು ಸರ್ಕಾರಿ ಅಧಿಕಾರಿಯನ್ನು ಅಕ್ರಮ ಹಣಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಚೆಲುವರಾಜು ಅವರು ಆರೋಪಿಸಿದ್ದಾರೆ.

the fil favicon

SUPPORT THE FILE

Latest News

Related Posts