ಬೆಂಗಳೂರು; ಹಳೆಯ 100 ರು. ಮುಖಬೆಲೆ ನೋಟುಗಳನ್ನು ಅಮಾನ್ಯ ಮಾಡಲಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಸರ್ಕಾರಿ ಇಲಾಖೆಗಳಲ್ಲಿರುವ ಲಂಚಕೋರ ಅಧಿಕಾರಿಗಳು 100ರ ಮುಖಬೆಲೆ ನೋಟುಗಳಿಗೆ ಬದಲಾಗಿ ಗುಲಾಬಿ ಬಣ್ಣ ಹೊಂದಿರುವ 2,000 ರು. ಮುಖಬೆಲೆ ನೋಟುಗಳನ್ನು ಕೊಡಿ ಎಂದು ಕೇಳಲಾರಂಭಿಸಿದ್ದಾರೆ!
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯೊಳಗೆ ಬರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಂಟಿ ಆಯುಕ್ತ ಡಾ ಹರ್ಷವರ್ಧನ್ ಎಂಬುವರು ಇಲಾಖೆಯ ಅಧಿಕಾರಿಗಳ ಗ್ರೂಪ್‌ಗೆ ಇಂತದ್ದೊಂದು ಸಂದೇಶವನ್ನು ಹರಿಬಿಟ್ಟಿದ್ದಾರೆ. ಸಂದೇಶವನ್ನು ಗ್ರೂಪ್‌ಗೆ ಹಾಕಿದ್ದರಿಂದ ಭ್ರಷ್ಟಾಚಾರವನ್ನು ಹರ್ಷವರ್ಧನ್ ಅವರು ಬೆಂಬಲಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಅವರನ್ನು ಇಲಾಖೆಯಿಂದ ಬಿಡುಗಡೆಗೊಳಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರಾಗಿರುವ ಐಎಎಸ್ ಅಧಿಕಾರಿ ಮಂಜುಶ್ರೀ ಅವರು ಹರ್ಷವರ್ಧನ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಯಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬಿಡುಗಡೆಗೊಳಿಸಿದ್ದಾರೆ. ಈ ಸಂಬಂಧ 2021ರ ಜನವರಿ 21ರಂದು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಹಳೆಯ 100 ರು.ಮುಖಬೆಲೆಯ ನೋಟುಗಳು ಅಮಾನ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ಪ್ರಕಟಣೆ ಹೊರಡಿಸಿತ್ತು. ಇದರ ಬೆನ್ನಲ್ಲೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳ ವಾಟ್ಸಾಪ್ ಗ್ರೂಪ್‌ನಲ್ಲಿ ಹರ್ಷವರ್ಧನ್ ಅವರು ಸಂದೇಶವನ್ನು ಕಳಿಸಿದ್ದರು. ‘ನಾವು ಇನ್ನು ಮೇಲೆ ಎಫ್‌ಎಸ್‌ಎಸ್‌ಎಐ ಲೈಸೆನ್ಸ್‌ಗಾಗಿ ಪಿಂಕ್ ನೋಟ್ ಕೊಡಿ ಅಂತ ಪೇಪರ್‌ಗೆ ಹಾಕಿಸಬೇಕು,’ ಎಂದು ಸಂದೇಶ ಕಳಿಸಿದ್ದರು. ಈ ಸಂದೇಶದ ಸ್ಕ್ರೀನ್ ಶಾಟ್ ಸಹ ‘ದಿ ಫೈಲ್’ಗೆ ಲಭ್ಯವಾಗಿದೆ.
ಇಲಾಖೆ ಅಧಿಕಾರಿಗಳ ವಾಟ್ಸಾಪ್ ಗ್ರೂಪ್‌ನಲ್ಲಿ ಇದು ಚರ್ಚೆಗೆ ಒಳಗಾಗುತ್ತಿದ್ದಂತೆ ಗ್ರೂಪ್‌ನಲ್ಲಿದ್ದ ಇಲಾಖೆಯ ಆಯುಕ್ತರಾದ ಮಂಜುಶ್ರೀ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ‘ಸದರಿ ಅಧಿಕಾರಿಗಳು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸರ್ಕಾರದ ಅಧಿಕಾರಿಗಳಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುತ್ತಾರೆ. ಈ ನಡವಳಿಕೆಯು ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಗಳು 1957ಗೆ ವಿರುದ್ಧವಾಗಿರುತ್ತದೆ. ಇಂತಹ ಅಧಿಕಾರಿಗಳ ಸೇವೆಯು ಈ ಇಲಾಖೆಗೆ ಅವಶ್ಯಕವಿರುವುದಿಲ್ಲ. ಹೀಗಾಗಿ ಇವರನ್ನು ಮಾತೃ ಇಲಾಖೆಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬಿಡುಗಡೆಗೊಳಿಸಲಾಗಿದೆ,’ ಎಂದು ಜನವರಿ 21ರಂದು ಹೊರಡಿಸಿರುವ ಅಧಿಕೃತ ಜ್ಞಾಪನಾ ಪತ್ರದಲ್ಲಿ ವಿವರಿಸಿದ್ದಾರೆ.
ಡಾ ಹರ್ಷವಧನ್ ಅವರು ಮಂಡ್ಯ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 1995ರಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಇದಾದ ನಂತರ ತಾಲೂಕು ಆರೋಗ್ಯ ಅಧಿಕಾರಿ, ಉಪ ನಿರ್ದೇಶಕ, ಶಿಷ್ಟಾಚಾರ, ನೋಡಲ್ ಅಧಿಕಾರಿ ಆ ನಂತರ ಆಹಾರ ಸುರಕ್ಷತೆ ಇಲಾಖೆಯ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.