ಅಲೆಯನ್ಸ್‌ ; ಸುಧೀರ್‌ ಅಂಗೂರ್‌ರಿಂದಲೂ ಅಕ್ರಮ ಖಾತೆ, ನೂರಾರು ಕೋಟಿ ಲೂಟಿ?

ಬೆಂಗಳೂರು; ಅಲೆಯನ್ಸ್‌ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ದುರ್ವವ್ಯವಹಾರ, ದುರಾಡಳಿತ, ಅಶಿಸ್ತು ಮುಂದುವರೆದಿದೆ ಎಂಬ ಬಲವಾದ ಆರೋಪಗಳ ನಡುವೆಯೇ ಸುಧೀರ್‌ ಅಂಗೂರ್‌ ಮತ್ತಿತರರು ಬ್ಯಾಂಕ್‌ಗಳಲ್ಲಿ ಅಕ್ರಮ ಖಾತೆಗಳನ್ನು ತೆರೆದಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಬಿಜೆನೆಸ್‌ ಸ್ಕೂಲ್‌, ಅಲೆಯನ್ಸ್‌ ಯೂನಿವರ್ಸಿಟಿ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಅಲೆಯನ್ಸ್‌ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಲಾ ಮತ್ತು ಕಾಲೇಜ್‌ ಆಫ್‌ ಕಾಮರ್ಸ್ ಹೆಸರಿನಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೂ 4 ಖಾತೆಗಳನ್ನು ತೆರೆದಿದ್ದಾರೆ ಎಂದು ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿ ಮಧುಕರ್‌ ಅಂಗೂರ್‌ ಅವರು 2020ರ ಅಕ್ಟೋಬರ್‌ 5ರಂದು ಉನ್ನತ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಮಧುಕರ್‌ ಅಂಗೂರ್‌ ಅವರು 2011-14ರ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಸೇರಿದ ಭಾರಿ ಮೊತ್ತದ ಅನುದಾನವನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿದ್ದರು ಎಂಬ ಆರೋಪದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಬೆನ್ನಲ್ಲೇ, ಸುಧೀರ್‌ ಅಂಗೂರ್‌ರಿಂದಲೂ ಬ್ಯಾಂಕ್‌ಗಳಲ್ಲಿ ಅಕ್ರಮ ಖಾತೆ ತೆರೆದು ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ನೂರಾರು ಕೋಟಿ ರು.ಗಳನ್ನು ಲೂಟಿ ಮಾಡಿದ್ದಾರೆ ಎಂದು ನೀಡಿರುವ ದೂರು, ಅಲೆಯನ್ಸ್‌ ವಿಶ್ವವಿದ್ಯಾಲಯದ ದುರಾಡಳಿತದ ಮತ್ತೊಂದು ಮುಖ ಅನಾವರಣಗೊಂಡಂತಾಗಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸ್ವೀಕರಿಸಲಾದ ನೂರಾರು ಕೋಟಿ ರು.ಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಲೂಟಿ ಮಾಡಲು ಸುಧೀರ್‌ ಅಂಗೂರ್‌ ಮತ್ತಿತರರು ಅಕ್ರಮ ಬ್ಯಾಂಕ್‌ ಖಾತೆಗಳನ್ನು ತೆರೆಯುವ ಮೂಲಕ ಖಾತೆಗಳನ್ನು ತೆರೆದಿದ್ದಾರೆ ಎಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯ ಟಿಪ್ಪಣಿ ಹಾಳೆಗಳು ಲಭ್ಯವಾಗಿದೆ.

ಅಕ್ರಮ ಬ್ಯಾಂಕ್‌ ಖಾತೆ ತೆರೆದು ನೂರಾರು ಕೋಟಿ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಕುರಿತು ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದೆ. ಈ ದೂರನ್ನಾಧರಿಸಿ ಎಫ್‌ಐಆರ್‌ ಕೂಡ ದಾಖಲಾಗಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ವಿಶ್ವವಿದ್ಯಾಲಯದಲ್ಲಿನ ದುರಾಡಳಿತ ಕುರಿತು ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆಗೆ ಮುಂದಾಗಿರುವ ಉನ್ನತ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯದಲ್ಲಿನ ದುರಾಡಳಿತ ಕುರಿತು ತನಿಖಾ ಸಮಿತಿ ನೀಡುವ ವರದಿ ಅನುಸಾರ ಕ್ರಮ ಕೈಗೊಳ್ಳಲಿದೆ ಎಂದು ಗೊತ್ತಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಅಡ್ವೋಕೇಟ್ ಜನರಲ್‌, ಕಾನೂನು ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರ, ಶಾಸನ ರಚನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಬೆಂಗಳೂರು ಕೇಂದ್ರ ವಲಯದ ಪೊಲೀಸ್‌ ಮಹಾನಿರೀಕ್ಷಕ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕರನ್ನೊಳಗೊಂಡ ಸಮಿತಿಯು ಸಭೆ ನಡೆಸಿದೆ ಎಂದು ತಿಳಿದು ಬಂದಿದೆ.

ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿ ಡಾ ಮಧುಕರ್‌ ಜಿ ಅಂಗೂರ್‌ ಹಾಗೂ ಸುಧೀರ್‌ ಅಂಗೂರ್‌ ವಿರುದ್ಧ ವಿವಿದ ನ್ಯಾಯಾಲಯಗಳಲ್ಲಿ ಸಿವಿಲ್‌ ಮತ್ತು ಕ್ರಿಮಿನಲ್‌ ವ್ಯಾಜ್ಯಗಳು ಇನ್ನೂ ಬಾಕಿ ಇದೆ. ಇಲ್ಲಿನ ಆಡಳಿತಾತ್ಮಕ ವಿಚಾರಗಳಲ್ಲಿ ಕಂಡು ಬಂದಿರುವ ಗೊಂದಲ, ದುರಾಡಳಿತ ಕುರಿತಂತೆ ಅಲೆಯನ್ಸ್‌ ವಿಶ್ವವಿದ್ಯಾಲಯದ ಕಾಯ್ದೆ 2010ರ ಅಧಿನಿಯಮ 56, 57ರ ಅಡಿಯ ಕಾರಣ ಕೇಳಿ ನೀಡಿದ್ದ ನೋಟೀಸ್‌ಗೆ ಇಬ್ಬರು ಕುಲಸಚಿವರು ನೀಡಿರುವ ಉತ್ತರವು ಸಮರ್ಥನೀಯವಾಗಿಲ್ಲ. ವಿಶ್ವವಿದ್ಯಾಲಯದಲ್ಲಿ ಒಬ್ಬ ಕುಲಸಚಿವರನ್ನಷ್ಟೇ ಹೊಂದಲು ಅವಕಾಶವಿದ್ದರೂ ಸಹ ಇಬ್ಬರು ಕುಲಸಚಿವರನ್ನು ನೇಮಿಸಿರುವುದು ಇಲಾಖೆಯ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಮಧುಕರ್‌ ಅಂಗೂರ್‌ರ ಡಿಜಿಟಲ್‌ ಸಹಿ ದುರ್ಬಳಕೆ

ಸುಧೀರ್‌ ಅಂಗೂರ್‌ ಮತ್ತು 9 ಮಂದಿ ಅವರ ಡಿಜಿಟಲ್‌ ಸಹಿಯನ್ನು ಮೋಸದಿಂದ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಡಾ ಮಧುಕರ್‌ ಜಿ ಅಂಗೂರ್‌ ಇಲಾಖೆಗೆ ದೂರನ್ನೂ ಸಹ ನೀಡಿದ್ದಾರೆ. ಡಿಜಿಟಲ್‌ ಸಹಿ ಪಡೆದಿರುವ ಸುಧೀರ್‌ ಅಂಗೂರ್‌ ಮತ್ತಿತರರು ಅಲೆಯನ್ಸ್‌ ವಿಶ್ವವಿದ್ಯಾಲಯ ಮತ್ತು ಅಲೆಯನ್ಸ್‌ ಬಿಜಿನೆಸ್‌ ಸ್ಕೂಲ್‌ ವೆಬ್‌ ಸೈಟ್‌ನಲ್ಲಿ ತಿರುಚಿರುವ ನಕಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಲ್ಲದೆ ಕಂಪನಿಗಳ ಸಚಿವಾಲಯವು ಕೂಡ ನಕಲಿ ದಾಖಲೆಗಳು ಎಂದು ದೃಢೀಕರಿಸಿದ್ದರೂ ಸಹ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ದಾರಿ ತಪ್ಪಿಸಿ ವಿದ್ಯಾರ್ಥಿಗಳಿಂದ ಕಾಲೇಜು ಶುಲ್ಕ ಸೇರಿದಂತೆ ಇನ್ನಿತರ ಶುಲ್ಕಗಳನ್ನು ಬಲವಂತವಾಗಿ ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ದಾಖಲೆಗಳಿಲ್ಲದಿದ್ದರೂ ಬ್ಯಾಂಕ್‌ ಖಾತೆ

ಅಲೆಯನ್ಸ್‌ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಬಿಜೆನೆಸ್‌ ಸ್ಕೂಲ್‌, ಅಲೆಯನ್ಸ್‌ ಯೂನಿವರ್ಸಿಟಿ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಅಲೆಯನ್ಸ್‌ ಯೂನಿವರ್ಸಿಟಿ ಸ್ಕೂಲ್‌ ಆಫ್‌ ಲಾ ಮತ್ತು ಕಾಲೇಜ್‌ ಆಫ್‌ ಕಾಮರ್ಸ್ ಹೆಸರಿನಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೂ 4 ಖಾತೆಗಳನ್ನು ತೆರೆದಿದ್ದಾರೆ. ಈ ಖಾತೆಗಳಲ್ಲಿ ವಿದ್ಯಾರ್ಥಿಗಳ ಹಣವನ್ನು ಸಂಗ್ರಹಿಸಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಮಧುಕರ್ ಅಂಗೂರ್‌ ವಿವರಿಸಿರುವುದು ಇಲಾಖೆಯ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ವರದಿ ಸಲ್ಲಿಸದ ಪರಿಷತ್‌

ಅಲೆಯನ್ಸ್‌ ವಿಶ್ವವಿದ್ಯಾಲಯದಲ್ಲಿನ ವಿಷಮ ಪರಿಸ್ಥಿತಿ ಮತ್ತು ಗೊಂದಲಮಯ ವಾತಾವರಣ, ಆಡಳಿತ ಅವ್ಯವಸ್ಥೆ, ಅರಾಜಕತೆಯನ್ನು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಎಸಲು ಉನ್ನತ ಶಿಕ್ಷಣ ಇಲಾಖೆಯು 2019ರ ಫೆ.2ರಂದೇ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ಗೆ ಸೂಚಿಸಲಾಗಿತ್ತು. ಆದರೆ ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts