ನಕಲಿ ವೈದ್ಯರಿಗೆ ಪ್ರಮಾಣ ಪತ್ರ; ಶಾಸಕರ ಭವನದ ವೈದ್ಯಾಧಿಕಾರಿಗೆ ನೋಟೀಸ್‌

ಬೆಂಗಳೂರು: ವೈದ್ಯ ವೃತ್ತಿಗೆ ಅರ್ಹರಲ್ಲದಿದ್ದರೂ ಅನಧಿಕೃತವಾಗಿ ನೋಂದಣಿ ಸಂಖ್ಯೆ ನೀಡುವುದು , ಅನರ್ಹರು ಮತ್ತು ನಕಲಿ ವೈದ್ಯರಿಗೆ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ವೈದ್ಯ ವೃತ್ತಿಗೆ ಕ್ಲಿನಿಕ್‌/ಆಸ್ಪತ್ರೆಗಳನ್ನು ತೆರೆಯಲು ಶಿಫಾರಸ್ಸು ಪತ್ರ ನೀಡುವ ಮೂಲಕ ಸರ್ಕಾರಕ್ಕೆ ಮೋಸ ಮಾಡಿ, ಗಂಭೀರ ಕರ್ತವ್ಯಲೋಪ ಎಸಗಿ ಆರೋಪಕ್ಕೆ ಸಾಬೀತಾಗಿರುವ ಡಾ ಅಂಬರಕರ್‌ ವಿನಾಯಕ್‌ ಸುಭಾಷ್‌ ಅವರೀಗ ಶಾಸಕರ ಭವನದಲ್ಲಿರುವ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ.

ಡಾ ಅಂಬರಕರ್‌ ವಿನಾಯಕ್‌ ಸುಭಾಷ್‌ ಅವರು 2016ರಿಂದ 2018ರವರೆಗೆ ವೈದ್ಯಾಧಿಕಾರಿಯಾಗಿದ್ದ ಅವಧಿಯಲ್ಲಿ ಸಿರಾ, ಗುಬ್ಬಿ, ಬಳ್ಳಾರಿ, ಸಿರುಗಪ್ಪ, ತುಮಕೂರು, ಹಿರಿಯೂರು, ಕುಂದಗೋಳ, ಉಪ್ಪಿನಬೆಟಗೇರಿ, ನವಲಗುಂದ, ಶಿರಹಟ್ಟಿ, ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಹಲವು ಅನರ್ಹರು ಮತ್ತು ನಕಲಿ ವೈದ್ಯರಿಗೆ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದರು. ಅಲ್ಲದೆ ವೈದ್ಯ ವೃತ್ತಿಗೆ ಕ್ಲಿನಿಕ್‌/ಆಸ್ಪತ್ರೆಗಳನ್ನು ತೆರೆಯಲು ಶಿಫಾರಸ್ಸು ಪತ್ರ ನೀಡುವ ಮೂಲಕ ಸರ್ಕಾರಕ್ಕೆ ಮೋಸ ಮಾಡಿ, ಗಂಭೀರ ಕರ್ತವ್ಯಲೋಪ ಎಸಗಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಹಿಂದಿನ ನೋಂದಣಾಧಿಕಾರಿ ಡಾ ಶ್ರೀನಿವಾಸವರ್ಮ ಅವರ ಸಹಿ ಫೋರ್ಜರಿ ಮಾಡಿ ಕೆಪಿಎಇ ಕಾಯ್ದೆ ಅಡಿಯಲ್ಲಿ ಕ್ಲಿನಿಕ್, ಆಸ್ಪತ್ರೆಗಳಿಗೆ ಪರವಾನಿಗೆ ನೀಡಿ ಅನರ್ಹರು ಕ್ಲಿನಿಕ್‌ ಮತ್ತು ಆಸ್ಪತ್ರೆಗಳನ್ನು ತೆರೆಯಲು ಕಾನೂನುಬಾಹಿರವಾಗಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಬಿ ಎಸ್‌ ನಾಗರಾಜ್‌ 2020ರ ನವೆಂಬರ್‌ 30ರಂದು ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದ್ದಾರೆ. ಈ ನೋಟೀಸ್‌ನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಹಾಗೆಯೇ ದಾಸ್ತಾನು ಪುಸ್ತಕ ನಿರ್ವಹಣೆ ಮಾಡದಿರುವುದು ಮತ್ತು ಹಿಂದಿನ ನೋಂದಣಾಧಿಕಾರಿ ಅವರ ಪ್ರಭಾರ ವಹಿಸಿಕೊಂಡಿದ್ದ ಸಂದರ್ಭದಲ್ಲಿ ಹಾರ್ಡ್‌ ಡಿಸ್ಕ್‌ನ್ನು ಕಳೆದುಹಾಕಿ ಮಂಡಳಿಗೆ ನಷ್ಟವುಂಟು ಮಾಡಿದ್ದಾರೆ. ಇವರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಐಪಿಸಿ ಕಲಂ 465, 468,471 ಮತ್ತು 420 ಅಡಿಯಲ್ಲಿ (237/2018) ಮೊಕದ್ದಮೆ ದಾಖಲಾಗಿರುವುದು ನೋಟೀಸ್‌ನಿಂದ ತಿಳಿದು ಬಂದಿದೆ.

‘ವೈದ್ಯ ವೃತ್ತಿಗೆ ಅರ್ಹರಲ್ಲದಿದ್ದರೂ ಕಾನೂನುಬಾಹಿರವಾಗಿ ನಕಲಿ ವೈದ್ಯರಿಗೆ ಪ್ರಮಾಣಪತ್ರಗಳನ್ನು ಸೃಷ್ಟಿಸಿ ವೈದ್ಯ ವೃತ್ತಿಗೆ ಅರ್ಹರೆಂದು ಕ್ಲಿನಿಕ್‌/ಆಸ್ಪತ್ರೆಗಳನ್ನು ತೆರೆಯಲು ಜಿಲ್ಲಾ ಆಯುಷ್‌ ಅಧಿಕಾರಿಗೆ ಶಿಫಾರಸ್ಸು ಪತ್ರಗಳನ್ನು ನೀಡಿ ಸರ್ಕಾರಿ ಸೇವೆಯಲ್ಲಿ ಗಂಭೀರ ಕರ್ತವ್ಯಲೋಪ ಎಸಗಿದ್ದೀರಿ. ಸರ್ಕಾರದ ಆದೇಶವನ್ನು ಪಾಲಿಸಲು ವಿಫಲರಾಗಿ ಸರ್ಕಾರಿ ನೌಕರರಿಗೆ ಸಲ್ಲದ ರೀತಿಯಲ್ಲಿ ವರ್ತಿಸಿ ಕರ್ನಾಟಕ ನಾಗರಿಕ ಸೇವಾ ನಿಯಮ (ನಡತೆ) ನಿಯಮಾವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದೀರಿ. ನಿಯಮಾವಳಿ 1957 ನಿಯಮ 11 ರ ಅನ್ವಯ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು,’ ಎಂದು ನೋಟೀಸ್‌ ಜಾರಿ ಮಾಡಿದೆ.

ನಕಲಿ ನೋಂದಣಿ ಪತ್ರ ನೀಡಿಕೆ ಪ್ರಕರಣಗಳಿವು

ಮಂಡಳಿಯಲ್ಲಿ ಈಗಾಗಲೇ ಡಾ ಎಸ್‌ ಕೆ ಜಯರಾಜ್‌ ಅವರ ಹೆಸರಿನಲ್ಲಿ ಅಧಿಕೃತವಾಗಿ ನೋಂದಣಿಯಾಗಿದ್ದ (ನೋಂದಣಿ ಸಂಖ್ಯೆ 8292) ಸಂಖ್ಯೆಯನ್ನು ಸಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಭಗವತಿ ಕ್ಲಿನಿಕ್‌ನ ಚೌಡಪ್ಪ ಎಂಬುವರಿಗೆ ಪ್ರಾಕ್ಟೀಸಿಂಗ್‌ ಎಕ್ಸ್‌ಪೀರಿಯನ್ಸ್‌ ಅಡಿಯಲ್ಲಿ ನಕಲಿ ನೋಂದಣಿ ಪ್ರಮಾಣ ಪತ್ರ ನೀಡಿದ್ದರು. ಹಿಂದಿನ ನೋಂದಣಾಧಿಕಾರಿ ಡಾ ಶ್ರೀನಿವಾಸವರ್ಮ ಅವರ ಸಹಿ ಫೋರ್ಜರಿ ಮಾಡಿದ್ದರು. ಕಚೇರಿಯ ಮೂಲ ನೋಂದಣಿ ಪುಸ್ತಕದಲ್ಲಿ ಚೌಡಪ್ಪ ಎಂಬುವರ ಹೆಸರಿಲ್ಲದಿದ್ದರೂ ಸಹ ಕೆಪಿಎಂಂಇ ಕಾಯ್ದೆ ಅಡಿಯಲ್ಲಿ ಕ್ಲಿನಿಕ್‌/ಆಸ್ಪತ್ರೆ ಲೈಸೆನ್ಸ್‌ ಪಡೆಯಲು ತುಮಕೂರು ಜಿಲ್ಲಾ ಆಯುಷ್‌ ಅಧಿಕಾರಿಗೆ ಶಿಫಾರಸ್ಸು ಪತ್ರ ನೀಡಿದ್ದರು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.

ಡಾ ಶೇಖ್‌ ಜಾವೇದ್‌ ಹುಸೇನ್‌ ಹೆಸರಿನಲ್ಲಿ ಅಧಿಕೃತವಾಗಿ ನೋಂದಣಿಯಾಗಿದ್ದ (ಸಂಖ್ಯೆ; 8679)ಸಂಖ್ಯೆಯನ್ನು ಗುಬ್ಬಿ ತಾಲೂಕಿನ ಹಗಲವಾಡಿಯ ಯೋಗಾನಂದ ಅವರಿಗೆ ನಕಲಿ ನೋಂದಣಿ ಪ್ರಮಾಣ ಪತ್ರ ನೀಡಿದ್ದರು. ಅದೇ ರೀತಿ ಬಳ್ಳಾರಿ ತಾಲೂಕಿನ ದಮ್ಮೂರಿನ ಶೀಲವೇರಿ ದಿವಾಕರ್‌ (ಶ್ರೀ ಸಾಯಿ ಕ್ಲಿನಿಕ್‌), ಸಿರಗುಪ್ಪ ತಾಲೂಕಿನ ಲಕ್ಷ್ಮಿನಾರಾಯಣರೆಡ್ಡಿ (ಸಾಯಿ ಕ್ಲಿನಿಕ್‌), ತುಮಕೂರು ಕೆಸ್ತೂರಿನ ದಿನೇಶ್‌ ಕೆ ಎಸ್‌ (ಮಂಜುನಾಥ ಕ್ಲಿನಿಕ್‌), ರಾಮಾಂಜನೇಯ (ಲಿಖಿತ್‌ರಾಮ್‌ ಕ್ಲಿನಿಕ್‌), ಹಿರಿಯೂರು ತಾಲೂಕಿನ ಚಳ್ಳಕೆರೆ ರಸ್ತೆಯಲ್ಲಿ ಎಂ ವಿ ನಾಗರಾಜು, ಧಾರವಾಡದ ಕುಂದಗೋಳದ ಅಬ್ದುಲ್‌ ಅಜೀಮ್‌ ಮುಲ್ಲಾ, ಉಪ್ಪಿನ ಬೆಟಗೇರಿಯ ನಾಗಯ್ಯ ಮಠ (ಎಸ್‌ ಜಿ ವಿ ಕ್ಲಿನಿಕ್‌), ನವಲಗುಂದ ಹೆಬ್ಬಾಳದ ರಾಜಶೇಖರ (ತೋರಗಲ್ಲು ಕ್ಲಿನಿಕ್‌), ಶಿರಹಟ್ಟಿ ಮಾಗಡಿಯ ಸೋಮೇಶ್ವರಪ್ಪ ಶೇಖಪ್ಪ ಕದಡಿ ಇವರು ಅರ್ಹತೆ ಹೊಂದದಿದ್ದರೂ ಕ್ಲಿನಿಕ್‌/ಆಸ್ಪತ್ರೆಗಳನ್ನು ತೆರೆಯಲು ಡಾ ಅಂಬರ್‌ಕರ್‌ ಅವರು ಆಯಾ ಜಿಲ್ಲಾ ಆಯುಷ್‌ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದರು. ಅಲ್ಲದೆ ಕಚೇರಿಯ ಮೂಳ ನೋಂದಣಿ ಪುಸ್ತಕದಲ್ಲಿ ಇವರ ಹೆಸರುಗಳೂ ಇರಲಿಲ್ಲ ಎಂಬುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

28 ಲಕ್ಷ ಮೌಲ್ಯದ ಹಾರ್ಡ್‌ಡಿಸ್ಕ್‌ ನಾಪತ್ತೆ

2016ರಿಂದ 2018ರವರೆಗೆ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯಲ್ಲಿ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಡಾ ಅಂಬರ್‌ಕರ್‌ ಅವರು 28 ಲಕ್ಷ ಮೌಲ್ಯದ ಹಾರ್ಡ್‌ಡಿಸ್ಕ್‌ನ್ನು ಕಳೆದಿರುತ್ತಾರೆ ಎಂಬುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

ಹಿಂದಿನ ನೋಂದಣಾಧಿಕಾರಿ ಡಾ ರಾಮಚಂದ್ರನಾಯಕ್‌ ಅವರಿಂದ ಅಧಿಕಾರ ವಹಿಸಿಕೊಂಡಾಗ ಅವರಿಂದ ಹಾರ್ಡ್‌ಡಿಸ್ಕ್‌ನ್ನು ಪಡೆದೇ ಇಲ್ಲ ಎಂದು ಸುಳ್ಳು ಹೇಳಿದ್ದಾರೆ. ಆದರೆ ಸಾಫ್ಟ್‌ವೇರ್‌ ಏಜೆನ್ಸಿ ಪರಿಶೀಲನೆ ವೇಳೆಯಲ್ಲಿ ಈ ಅಪ್ಲಿಕೇಷನ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಡಿಲಿಟ್‌ ಮಾಡಲಾಗಿತ್ತು ಎಂಬುದನ್ನು ಪತ್ತೆ ಹಚ್ಚಲಾಗಿತ್ತು. ‘ಉದ್ದೇಶಪೂರ್ವಕವಾಗಿ ಹಾರ್ಡ್ ಡಿಸ್ಕ್‌ನಲ್ಲಿದ್ದ ಮಾಹಿತಿಗಳನ್ನು ಡಿಲೀಟ್‌ ಮಾಡಿ ಹಾರ್ಡ್‌ ಡಿಸ್ಕ್‌ನ್ನುಕಳೆದು ಹಾಕಿ ಮಂಡಳಿಗೆ ನಷ್ಟ ಉಂಟು ಮಾಡಿರುವುದಲ್ಲದೆ ಮಂಡಳಿಯಲ್ಲಿ ಮಾಹಿತಿ ಇಲ್ಲದಂತೆ ಮಾಡಿರುತ್ತೀರಿ,’ ಎಂದು ನೋಟೀಸ್‌ ನೀಡಲಾಗಿದೆ.

SUPPORT THE FILE

Latest News

Related Posts