ಇಸ್ಲಾಮಿಯಾ ಒತ್ತುವರಿ ಪ್ರಕರಣ; ಆರೋಪಮುಕ್ತವಾದರೂ ಬೆನ್ನೆತ್ತಿದ ರವಿಕುಮಾರ್‌

ಬೆಂಗಳೂರು; ಐದು ಎಕರೆ ವಿಸ್ತೀರ್ಣದ ಜಮೀನು ಒತ್ತುವರಿ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರಿನ ಇಸ್ಲಾಮಿಯಾ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಗೆ ಉನ್ನತ ಶಿಕ್ಷಣ ಇಲಾಖೆ ಕ್ಲೀನ್‌ ಚಿಟ್‌ ನೀಡಿದ್ದರೂ ಸಂಘ ಪರಿವಾರ ಹಿನ್ನೆಲೆಯ ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಕಂದಾಯ ಇಲಾಖೆ ಕದ ತಟ್ಟಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ 16 ವರ್ಷಗಳ ಹಿಂದೆಯೇ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರೂ ಎನ್‌ ರವಿಕುಮಾರ್‌ ಅವರು ಕಂದಾಯ ಇಲಾಖೆಯ ಕದ ತಟ್ಟಿರುವುದು ಇಸ್ಲಾಮಿಯಾ ಸಂಸ್ಥೆಯನ್ನು ಒತ್ತುವರಿ ಪ್ರಕರಣದಲ್ಲಿ ಸಿಲುಕಿಸಲು ಬೆನ್ನು ಬಿದ್ದಿದ್ದಾರೆ ಎಂಬ ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಕುಮಾರ್‌ ಅವರು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆ (ಸಂಖ್ಯೆ 04) ಮತ್ತು ಪ್ರಶ್ನೆ ಸಂಖ್ಯೆ 249ಕ್ಕೆ ಉನ್ನತ ಶಿಕ್ಷಣ ಮತ್ತು ಕಂದಾಯ ಇಲಾಖೆಯು ನೀಡಿರುವ ಉತ್ತರವು ಪರಸ್ಪರ ವಿರೋಧಾಭಾಸದಿಂದ ಕೂಡಿದೆ.

ಈ ಸಂಸ್ಥೆ ಒತ್ತುವರಿ ಮಾಡಿಕೊಂಡಿಲ್ಲ ಎಂದು ಸ್ಥಳ ತನಿಖಾ ವರದಿ ಆಧರಿಸಿ ಉನ್ನತ ಶಿಕ್ಷಣ ಇಲಾಖೆ ಉತ್ತರಿಸಿದ್ದರೇ 5 ಎಕರೆ ಜಾಗವನ್ನು ಒತ್ತುವರಿ ಮಾಡಿದೆ ಎಂದು ಕಂದಾಯ ಇಲಾಖೆ ಉತ್ತರಿಸಿದೆ. ಈ ಎರಡೂ ಉತ್ತರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಇಸ್ಲಾಮಿಯಾ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜನ್ನು ಆರಂಭಿಸಲು ಶಿಫಾರಸ್ಸು ಮಾಡಿರುವ ಅಧಿಕಾರಿ ಯಾರು, ಯಾವ ನಿಯಮಗಳನ್ವಯ ಒತ್ತುವರಿ ಮಾಡಿದ ಜಾಗದಲ್ಲಿ ಕಾಲೇಜನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಪ್ರಶ್ನೆ ಕೇಳಿದ್ದರು.

ಈ ಜಾಗದ ಒತ್ತುವರಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಆದೇಶ (2009ರ ಜುಲೈ 25) ನೀಡುವ ಮುನ್ನವೇ ಅಂದರೆ 2004ರ ಆಗಸ್ಟ್‌ 16ರಂದೇ ಸ್ಥಳ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಇದರಲ್ಲಿ ಭೂಮಿ ಒತ್ತುವರಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಒತ್ತುವರಿ ಇಲ್ಲ ಎಂದ ಅಶ್ವಥ್‌ನಾರಾಯಣ್‌

ಒತ್ತುವರಿ ಮಾಡಿಕೊಂಡಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವೂ ಸ್ಥಳ ಮತ್ತು ದಾಖಲೆಗಳ ಪರಿಶೀಲನೆ ನಡೆಸಿತ್ತಲ್ಲದೆ, ಅದರಲ್ಲಿಯೂ ಭೂಮಿ ಒತ್ತುವರಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು ಎಂದು ಅಶ್ವಥ್‌ನಾರಾಯಣ್‌ ಅವರು ಮಾರ್ಚ್‌ನಲ್ಲಿ ನಡೆದಿದ್ದ ಅಧಿವೇಶನದಲ್ಲೇ ಲಿಖಿತ ಉತ್ತರ ನೀಡಿದ್ದರು.

ಒತ್ತುವರಿ ಎಂದಿರುವ ಕಂದಾಯ ಇಲಾಖೆ

ಉನ್ನತ ಶಿಕ್ಷಣ ಇಲಾಖೆ ನೀಡಿದ್ದ ವರದಿಯನ್ನು ಕಂದಾಯ ಇಲಾಖೆಯು ತಳ್ಳಿ ಹಾಕಿದೆ. ‘ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಹುಳಿಮಾವು ಗ್ರಾಮದ ಸರ್ವೆ ನಂಬರ್‌ 63ರಲ್ಲಿ 5 ಎಕರೆ ಜಾಗವನ್ನು ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್‌ ನ್ಯಾಯಾಲಯದ ಆದೇಶದ ಮೇರೆಗೆ 2009ರ ಜುಲೈ 25ರಂದು ಆದೇಶಿಸಿದೆ. 2016ರ ಅಕ್ಟೋಬರ್‌ 1ರಂದು ಒತ್ತುವರಿ ಜಾಗವನ್ನು ತೆರವುಗೊಳಿಸಲಾಗಿದೆ,’ ಎಂದು ಉತ್ತರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಒತ್ತುವರಿ ತೆರವುಗೊಳಿಸಲು 2009ರಲ್ಲಿ ನ್ಯಾಯಾಲಯ ಆದೇಶಿಸಿದ್ದರೆ 2016ರಲ್ಲಿ ತೆರವುಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ಹೇಳುತ್ತಿದೆ. ಆದರೆ ಶಿಕ್ಷಣ ಇಲಾಖೆಯ ತಜ್ಞರ ಸಮಿತಿಯು 2004ರ ಆಗಸ್ಟ್‌ 16ರಂದು ಸರ್ಕಾರಕ್ಕೆ ನೀಡಿದ್ದ ಸ್ಥಳ ತನಿಖಾ ವರದಿಯಲ್ಲಿ ಭೂಮಿ ಒತ್ತುವರಿ ಬಗ್ಗೆ ಮಾಹಿತಿ ಇರಲಿಲ್ಲ ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

ಸಿಎಜಿಯಲ್ಲೂ ವಿವರಣೆ

ಸರ್ಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವ ಸಂಬಂಧ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು 2018ರ ಡಿಸೆಂಬರ್‌ 12ರಂದು ಸಲ್ಲಿಸಿದ್ದ ವರದಿಯಲ್ಲಿಯೂ ಇಸ್ಲಾಮಿಯಾ ಇನ್ಸಿಟಿಟ್ಯೂಟ್‌ ಅಫ್‌ ಟೆಕ್ನಾಲಜಿ ಒತ್ತುವರಿ ಮಾಡಿದೆ ಎಂಬ ವಿವರಣೆ ಇದೆ.

‘5 ಎಕರೆ ಭೂಮಿಯನ್ನು ಇಸ್ಲಾಮಿಯಾ ಇನ್ಸಿಟಿಟ್ಯೂಟ್‌ ಆಫ್‌ ಇನ್ಫರ್ಮೇಷನ್‌ ಇದು ಶೈಕ್ಷಣಿಕ ಉದ್ದೇಶಕ್ಕಾಗಿ ಒತ್ತುವರಿ ಮಾಡಿಕೊಂಡಿರುವುದು. ತಹಶೀಲ್ದಾರ್‌ ಅವರು ತೆರವುಗೊಳಿಸುವುದಕ್ಕಾಗಿ ಆದೇಶವನ್ನು ಜಾರಿಗೊಳಿಸಿದ್ದಾರೆ. ಆದರೆ ಒತ್ತುವರಿ ಮಾಡಿಕೊಳ್ಳಲಾಗಿದ್ದ ಭೂಮಿಯಲ್ಲಿರುವ ಕಟ್ಟಡವು ಇನ್ನೂ ಇದೆ/ಕಾರ್ಯನಿರ್ವಹಿಸುತ್ತಿದೆ,’ ಎಂದು ಷರಾ ಬರೆದಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಬೆಂಗಳೂರಿನ ಇಸ್ಲಾಮಿಕ್‌ ಮಿಷನ್‌ ಆಫ್‌ ಇಂಡಿಯಾ 2004-05ರಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಹುಳಿಮಾವು ಗ್ರಾಮದ ಸರ್ವೆ ನಂಬರ್‌ 63ರಲ್ಲಿನ 5 ಎಕರೆ ವಿಸ್ತೀರ್ಣದ ಜಾಗದಲ್ಲಿ ಆರಂಭಿಸಲು ಉದ್ದೇಶಿಸಿದ್ದ ಇಂಜಿನಿಯರಿಂಗ್‌ ಕಾಲೇಜಿಗೆ ಸಂಯೋಜನೆ ನೀಡುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಿದ್ದ ಪ್ರೊ.ಕೆ ಬಸವರಾಜು ನೇತೃತ್ವದ ತನಿಖಾ ತಂಡ, ಈ ಸಂಸ್ಥೆ ಯಾವುದೇ ಭೂ ಒತ್ತುವರಿ ಮಾಡಿರುವ ಮಾಹಿತಿ ಇರುವುದಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದನ್ನು ಸ್ಮರಿಸಬಹುದು.

ಈಗಾಗಲೇ ಮುಕ್ತಾಯಗೊಂಡಿರುವ ಈ ಪ್ರಕರಣವನ್ನು ‘ಈ ಸಂಸ್ಥೆಯು ಒತ್ತುವರಿ ಮಾಡಿರುವ ಜಾಗದಲ್ಲಿ ಕಾಲೇಜನ್ನು ಆರಂಭಿಸಿರುವ ಬಗ್ಗೆ ನಿಯಮಾನುಸಾರ ಸೂಕ್ತ ದಾಖಲೆಗಳೊಂದಿಗೆ ದೂರು ಸ್ವೀಕೃತವಾದಲ್ಲಿ ಸರ್ಕಾರವು ಅನುಮತಿ ಹಿಂಪಡೆಯಲು ಕ್ರಮ ವಹಿಸಲಾಗುವುದು,’ ಎಂದು ಡಾ ಸಿ ಅಶ್ವಥ್‌ನಾರಾಯಣ್‌ ಅವರು ನೀಡಿರುವ ಉತ್ತರ, ಮತ್ತೊಮ್ಮೆ ದೂರು ನೀಡಲು ಪ್ರೇರೇಪಿಸುವಂತಿತ್ತು.

Your generous support will help us remain independent and work without fear.

Latest News

Related Posts