ಮಧುಕರ್‌ ಶೆಟ್ಟಿ ಹೆಸರು ನಾಮಕರಣ; ಬಿಬಿಎಂಪಿ ಪ್ರಸ್ತಾವನೆ ತಿರಸ್ಕರಿಸಿದ ಯಡಿಯೂರಪ್ಪ

ಬೆಂಗಳೂರು; ಸಚಿವರು, ಶಾಸಕರು ಭಾಗಿಯಾದ್ದ ಅನೇಕ ಪ್ರಕರಣಗಳ ತನಿಖೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಲೋಕಾಯುಕ್ತದ ಹಿಂದಿನ ಎಸ್ಪಿ ಮಧುಕರ ಶೆಟ್ಟಿ ಅವರ ಹೆಸರನ್ನು ವರ್ತೂರು ಕೋಡಿ ವೃತ್ತಕ್ಕೆ ನಾಮಕರಣ ಮಾಡುವ ಸಂಬಂಧ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಿರಸ್ಕರಿಸಿದ್ದಾರೆ.

2 ವರ್ಷಗಳ ಹಿಂದೆಯೇ ಮಧುಕರ್‌ ಶೆಟ್ಟಿ ಅಕಾಲಿಕವಾಗಿ ನಿಧನರಾಗಿದ್ದ ಸಂದರ್ಭದಲ್ಲಿ ‘ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ಅವರು ಅಕಾಲಿಕವಾಗಿ ನಿಧನರಾಗಿದ್ದು ಅತ್ಯಂತ ದುಃಖಕರ ಸಂಗತಿ. ನೇರ ನಡೆ, ನುಡಿಯ ಅಧಿಕಾರಿಯಾಗಿದ್ದ ಮಧುಕರ್‌ ಶೆಟ್ಟಿ ಅವರನ್ನು ಕಳೆದುಕೊಂಡಿರುವುದು ಪೊಲೀಸ್‌ ಇಲಾಖೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ,’ ಎಂದು ಸಂತಾಪ ಸಲ್ಲಿಸಿದ್ದ ಅಂದು ಪ್ರತಿಪಕ್ಷ ನಾಯಕನ ಸ್ಥಾನದಲ್ಲಿದ್ದ ಬಿ ಎಸ್‌ ಯಡಿಯೂರಪ್ಪ ಅವರು, ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ಮಧುಕರ್‌ ಶೆಟ್ಟಿ ಅವರ ಹೆಸರನ್ನು ನಾಮಕರಣಗೊಳಿಸುವ ಬಿಬಿಎಂಪಿ ಪ್ರಸ್ತಾವನೆಯನ್ನೇ ತಿರಸ್ಕರಿಸಿರುವುದು ವಿರೋಧಾಭಾಸವಾಗಿದೆ.

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ವಾರ್ಡ್‌ ಸಂಖ್ಯೆ 84 ಹಗದೂರು ವ್ಯಾಪ್ತಿಯ ವರ್ತೂರು ಕೋಡಿ ವೃತ್ತಕ್ಕೆ ‘ಮಧುಕರ್‌ ಶೆಟ್ಟಿ ವೃತ್ತ’ ಎಂದು ನಾಮಕರಣ ಮಾಡಲು ಪಾಲಿಕೆಯ ಕೌನ್ಸಿಲ್‌ ಸಭೆ 2020ರ ಮಾರ್ಚ್‌ 7ರಂದು ನಿರ್ಣಯ ಕೈಗೊಂಡಿತ್ತು. (ವಿಷಯ ಸಂಖ್ಯೆ; 28(612) 2019-20) ಈ ನಿರ್ಣಯಕ್ಕೆ ಸರ್ಕಾರದ ಅನುಮೋದನೆ ಕೋರಿ ಬಿಬಿಎಂಪಿ ಆಯುಕ್ತರು 2020ರ ಸೆ.22ರಂದು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಗೆ ನೀಡಿಲ್ಲ  ಎಂದು ತಿಳಿದು ಬಂದಿದೆ.

 

ಅಕ್ರಮ ಗಣಿಗಾರಿಕೆ ವರದಿ ಸಿದ್ದಪಡಿಸಿದ್ದ ಸಂತೋಷ್‌ ಹೆಗ್ಡೆ ಅವರ ತಂಡದಲ್ಲಿ ಮಧುಕರ್‌ ಶೆಟ್ಟಿ ಅವರು ಒಬ್ಬರಾಗಿದ್ದರು ಎಂಬುದೇ ಇದಕ್ಕೆ ಮೂಲ ಕಾರಣ ಎಂದು ತಿಳಿದು ಬಂದಿದೆ.

ರಸ್ತೆ ಮತ್ತು ವೃತ್ತಗಳಿಗೆ ನಾಮಕರಣಗೊಳಿಸಲು ಬಿಬಿಎಂಪಿ ಕೈಗೊಂಡಿದ್ದ ಹಲವು ನಿರ್ಣಯಗಳಿಗೆ ಅನುಮೋದನೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಧುಕರ್‌ ಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡುವ ಬಿಬಿಎಂಪಿ ಪ್ರಸ್ತಾವನೆಗೆ ಅನುಮತಿ ನೀಡದೇ ಹಳೆಯ ಸೇಡನ್ನು ಯಡಿಯೂರಪ್ಪ ಅವರು ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಐಪಿಎಸ್ ಅಧಿಕಾರಿ ಕೆ.ಮಧುಕರ ಶೆಟ್ಟಿ ಅವರು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಹಲವು ಸಚಿವರು, ಶಾಸಕರು ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಎಸಗಿದ್ದ ಹಲವು ಪ್ರಕರಣಗಳನ್ನು ಹೊರಗೆಡವಿದ್ದ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರ ತಂಡದಲ್ಲಿ ಮಧುಕರ ಶೆಟ್ಟಿ ಕೂಡ ಇದ್ದರು.

ಲೋಕಾಯುಕ್ತ ಎಸ್ಪಿಯಾಗಿದ್ದ ಅವಧಿಯಲ್ಲಿ ಶಾಸಕರು, ಸಚಿವರನ್ನೂ ಕಾನೂನಿನ ಬಲೆಗೆ ಕೆಡವುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಉದ್ಯಮಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಕೆಜಿಎಫ್ ಶಾಸಕರಾಗಿದ್ದ ವೈ.ಸಂಪಂಗಿಯನ್ನು ಶಾಸಕರ ಭವನದಲ್ಲೇ ಬಂಧಿಸಿ, ರಾಜ್ಯದ ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸಿದ್ದರು. ಹಲವು ಕೆಎಎಸ್, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಲಂಚ ಪ್ರಕರಣದಲ್ಲಿ ಬಂಧಿಸುವಲ್ಲೂ ಯಶಸ್ವಿಯಾಗಿದ್ದರು.

ಅದೇ ರೀತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಗೋವಿಂದರಾಜು ಬಂಧಿಸಿದ್ದ ಮಧುಕರ್‌ ಶೆಟ್ಟಿ ಅವರು ಪಾಲಿಕೆ ಸದಸ್ಯರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಕಡತಗಳಲ್ಲಿ ಮುಚ್ಚಿ ಹೋಗಿದ್ದ ಕೆಐಎಡಿಬಿ ಭೂಹಗರಣವನ್ನು ಹೊರಗೆಳೆದಿದ್ದು ಅವರ ಸಾಧನೆಗಳೊಲ್ಲೊಂದಾಗಿತ್ತು.

ಇನ್ನು, ಹಗರಣದ ಸಾಕ್ಷಿಯೊಬ್ಬರಿಗೆ ಲಂಚ ನೀಡುತ್ತಿರುವಾಗ ಪಾಲಿಕೆ ಸದಸ್ಯರಾಗಿದ್ದ ಕಟ್ಟಾ ಜಗದೀಶ್ ಅವರನ್ನು ಬಂಧಿಸಿದ್ದರು. ಇದಾದ ನಂತರದ ಕೆಲವೇ ದಿನಗಳಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದ ಮಧುಕರ್‌ ಶೆಟ್ಟಿ ಅವರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಸಚಿವ ಸ್ಥಾನ ಕಳೆದುಕೊಳ್ಳಲು ಕಾರಣರಾಗಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts