ಮರಾಠ ಸೇರಿ ಇತರೆ ಜಾತಿ ಆಧಾರಿತ ಪ್ರಾಧಿಕಾರ ಸ್ಥಾಪನೆ ವಿರುದ್ಧ ರಿಟ್‌ ಅರ್ಜಿ ದಾಖಲು

ಬೆಂಗಳೂರು; ಕರ್ನಾಟಕ ಮರಾಠ ಅಭಿವೃದ್ಧಿ ನಿಗಮ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಸ್ಥಾಪಿತವಾಗಿರುವ ವಿವಿಧ ಜಾತಿಗಳ ಅಭಿವೃದ್ಧಿ ಪ್ರಾಧಿಕಾರಗಳ ಸ್ಥಾಪನೆಯನ್ನು ಪ್ರಶ್ನಿಸಿ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಕೀಲ ಎಸ್‌ ಬಸವರಾಜ್‌ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.

ಸಂವಿಧಾನದ ಹಲವು ಪರಿಚ್ಛೇಧಗಳನ್ನು ಉಲ್ಲೇಖಿಸಿರುವ ಅರ್ಜಿದಾರ ಎಸ್‌ ಬಸವರಾಜ್‌ ಅವರು ನಿರ್ದಿಷ್ಟ ಜಾತಿ ಆಧಾರದ ಮೇಲೆ ವಿಶೇಷ ಆದ್ಯತೆ ನೀಡಲು ನಿಗಮ, ಪ್ರಾಧಿಕಾರಗಳನ್ನು ರಚಿಸುವುದು ಸಂವಿಧಾನಬಾಹಿರ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಈ ಅರ್ಜಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕರ್ನಾಟಕ ಆರ್ಯ ವೈಶ್ಯ ಜನಾಂಗ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾಡುಗೊಲ್ಲಾ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ಲಿಮಿಟೆಡ್ ಸ್ಥಾಪನೆಯನ್ನೂ ಅರ್ಜಿದಾರರು ಪ್ರಶ್ನಿಸಿದ್ದಾರೆ.

ಅಲ್ಲದೆ ರಾಜ್ಯದಲ್ಲಿ ಸ್ಥಾಪಿಸಲಾದ ಎಲ್ಲಾ ಜಾತಿ ಆಧಾರಿತ ಸಂಸ್ಥೆಗಳ ವಿವರಗಳನ್ನು ಮತ್ತು ಅವರಿಗೆ ನೀಡಿದ ಆರ್ಥಿಕ ಕೊಡುಗೆಗಳ ವಿವರಗಳನ್ನು ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ನೀಡುವಂತೆ ಮಧ್ಯತಂರ ಆದೇಶವನ್ನು ಸಹ ಕೋರಿದ್ದಾರೆ.

ಅರ್ಜಿಯಲ್ಲಿ ಉಲ್ಲೇಖಿಸಿರುವ ಸಂವಿಧಾನದ ಪರಿಚ್ಛೇಧ 27ರ ಪ್ರಕಾರ ಯಾವ ತೆರಿಗೆಗಳ ಉತ್ಪತ್ತಿಗಳನ್ನು ಯಾವುದೇ ಒಂದು ನಿರ್ದಿಷ್ಟ ಸಮುದಾಯದ ಧರ್ಮದ ಅಥವಾ ಧಾರ್ಮಿಕ ಸಂಪ್ರದಾಯದ ಉನ್ನತಿಯ ಅಥವಾ ನಿರ್ವಹಣೆಯ ವೆಚ್ಚಗಳ ಸಂದಾಯಕ್ಕಾಗಿ ನಿರ್ದಿಷ್ಟವಾಗಿ ನಿಯೋಜಿಸಲಾಗುವುದು. ಅಂತಹ ತೆರಿಗೆಗಳನ್ನು ಸಂದಾಯ ಮಾಡುವಂತೆ ಯಾರೇ ವ್ಯಕ್ತಿಯನ್ನು ಒತ್ತಾಯಿಸತಕ್ಕದ್ದಲ್ಲ.

ಅದೇ ರೀತಿ ಸಂವಿಧಾನದ 15 ಮತ್ತು 16ರ ವಿಧಿ ಪ್ರಕಾರ ರಾಜ್ಯವು ಯಾರೇ ನಾಗರಿಕನ ವಿರುದ್ಧ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾವುದೇ ತಾರತಮ್ಯವನ್ನು ಮಾಡತಕ್ಕದ್ದಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಬರೀ ಜಾತಿ ಆಧರಿತ ಸಂಸ್ಥೆಗಳಾಗಲಿ, ಪ್ರಾಧಿಕಾರಗಳಾಗಲಿ ಸಂವಿಧಾನದ ಕೆಳಗಡೆ ಸ್ಥಾಪಿಸಲು ಅವಕಾಶವಿಲ್ಲ. ಜಾತ್ಯತೀತ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಸರ್ಕಾರವು ಬರೀ ಜಾತಿಯ ಆಧಾರದ ಮೇಲೆ ಸಾರ್ವಜನಿಕ ಹಣವನ್ನು ಖರ್ಚು ಮಾಡುವುದು ಸಂವಿಧಾನಬಾಹಿರ.

ಎಸ್‌. ಬಸವರಾಜು, ಸದಸ್ಯ, ರಾಜ್ಯ ವಕೀಲರ ಪರಿಷತ್ತು

ಅಂಗಡಿಗಳು, ಸಾರ್ವಜನಿಕ, ಉಪಾಹಾರಗೃಹ, ಹೋಟೆಲ್‌ ಮತ್ತು ಸಾರ್ವಜನಿಕ ಮನೋರಂಜನ ಸ್ಥಳಗಳೀಗೆ ಪ್ರವೇಶಿಸುವ ಸಂಬಂಧದಲ್ಲಿ ಅಥವಾ ಪೂರ್ಣವಾಗಿ ಅಥವಾ ಭಾಗಶಃ ರಾಜ್ಯ ನಿಧಿಗಳಿಂದ ಪೋಷಿತವಾದ ಅಥವಾ ಸಾರ್ವಜನಿಕರ ಉಪಯೋಗಕ್ಕಾಗಿ ಸಮರ್ಪಿತವಾದ ಬಾವಿಗಳನ್ನು, ಕೆರೆಗಳನ್ನು, ಸ್ನಾನಘಟ್ಟಗಳನ್ನು, ರಸ್ತೆಗಳನ್ನು, ಮತ್ತು ಸಾರ್ವಜನಿಕರು ಸೇರುವ ಸ್ಥಳಗಳನ್ನು ಉಪಯೋಗಿಸುವ ಸಂಬಂಧದಲ್ಲಿ ಅಸಮರ್ಥತತೆಗೆ, ಹೊಣೆಗಾರಿಕೆಗೆ, ನಿರ್ಬಂಧಕ್ಕೆ ಅಥವಾ ಷರತ್ತಿಗೆ ಒಳಪಟ್ಟಿರತಕ್ಕದ್ದಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸಾಮಾಜಿಕವಾಗಿ, ಶೈಕ್ಷಣೀಕವಾಗಿ ಹಿಂದುಳಿದಿರುವ ನಾಗರಿಕರ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ ಅಥವಾ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಸಲುವಾಗಿ ರಾಜ್ಯವು ಯಾವುದೇ ವಿಶೇಷ ಉಪಬಂಧವನ್ನು ಮಾಡದಂತೆ ಪ್ರತಿಬಂಧಿಸತಕ್ಕದ್ದಲ್ಲ ಎಂದು ಕೋರ್ಟ್‌ನ ಗಮನಕ್ಕೆ ತರಲಾಗಿದೆ.

ಕಾನೂನಿನ ಮೂಲಕ ವಿಶೇಷ ಉಪಬಂಧಗಳನ್ನು ಮಾಡದಂತೆ, ಆ ವಿಶೇಷ ಉಪ ಬಂಧಗಳು 30ನೇ ಅನುಚ್ಛೇದದ ಒಂದನೆ ಖಂಡದಲ್ಲಿ ಹೇಳಲಾದ ಅಲ್ಪಸಂಖ್ಯಾತ, ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿ ರಾಜ್ಯದಿಂದ ಅನುದಾನ ಪಡೆದಿರುವ ಅಥವಾ ಅನುದಾನ ಪಡೆಯದಿರುವ ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿರುವಷ್ಟರ ಮಟ್ಟಿಗೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ ಎಂದೂ ಹೇಳಲಾಗಿದೆ.

ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವ ಹೊತ್ತಿನಲ್ಲಿ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿತ್ತು. ಇದು ಕನ್ನಡಪರ ಸಂಘಟನೆಗಳು ಮಾತ್ರವಲ್ಲದೆ ಕುರುಬ ಸೇರಿದಂತೆ ಇತರೆ ಹಿಂದುಳಿದ ಜಾತಿಗಳನ್ನು ಕೆರಳಿಸಿತ್ತು. ಇದರಿಂದ ಸರ್ಕಾರ ತಕ್ಷಣವೇ ಪ್ರಾಧಿಕಾರದ ಬದಲಿಗೆ ನಿಗಮ ಎಂದು ಬದಲಿಸಿತ್ತು. ಆದರೂ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಇನ್ನಿತರೆ ಕನ್ನಡಪರ ಸಂಘಟನೆಗಳು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ಬೀದಿಗಿಳಿದು ರಾಜ್ಯ ಬಂದ್‌ ಕರೆ ಕೊಟ್ಟಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts