ನಕಲಿ ಖಾತೆಗಳಿಗೆ 55 ಕೋಟಿ ವರ್ಗಾವಣೆ; ಇನ್ನೂ ಕಪ್ಪು ಪಟ್ಟಿಗೆ ಸೇರದ ಐಒಬಿ ಬ್ಯಾಂಕ್‌

ಬೆಂಗಳೂರು; ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್‌) ಅನುದಾನದ ಮೊತ್ತ 55 ಕೋಟಿ ರು.ಗಳನ್ನು  ಅಕ್ರಮವಾಗಿ ವರ್ಗಾವಣೆ ಮಾಡಿ ದುರುಪಯೋಗಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ವಿರುದ್ಧ ಕ್ರಮಕೈಗೊಳ್ಳುವ ಪ್ರಕ್ರಿಯೆ 3 ವರ್ಷಗಳಿಂದಲೂ ತೆವಳುತ್ತಿದೆ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪ್ರಕರಣದ ಬಗ್ಗೆ ಸದನದಲ್ಲಿ ಗದ್ದಲ ಎಬ್ಬಿಸಿದ್ದ ಆಗಿನ ಪ್ರತಿಪಕ್ಷ ಬಿಜೆಪಿಯೇ ಈಗ ಅಧಿಕಾರದಲ್ಲಿದ್ದರೂ ಬ್ಯಾಂಕ್‌ ವಿರುದ್ಧ ಕಠಿಣ ಕ್ರಮಕೈಗೊಂಡಿಲ್ಲ. ಸಚಿವ ಈಶ್ವರಪ್ಪ ಕೂಡ ಈ ಪ್ರಕರಣದ ಬಗ್ಗೆ ಮೌನ ವಹಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ರಾಜ್ಯ ಸರ್ಕಾರದ ಮಟ್ಟದಲ್ಲಿ ವಹಿವಾಟು ನಡೆಸದಂತೆ ಬ್ಯಾಂಕ್‌ನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಳ್ಳಿ ಹಾಕಿದೆ.

55 ಕೋಟಿ ರು. ಮೊತ್ತ ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿ ಅಕ್ರಮ ಎಸಗಿರುವ ಪ್ರಕರಣದ ತನಿಖೆ ಸಿಐಡಿ ಅಂಗಳದಲ್ಲಿ ತೆವಳುತ್ತಿರುವ ಬೆನ್ನಲ್ಲೇ ಐಒಬಿ ಬ್ಯಾಂಕ್‌ನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬ ಪ್ರಸ್ತಾವನೆಗೆ ಸಹಮತ ವ್ಯಕ್ತಪಡಿಸದ ಆರ್ಥಿಕ ಇಲಾಖೆಯು ಬ್ಯಾಂಕ್‌ನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಆರ್‌ಬಿಐಗೆ ಪತ್ರ ಬರೆಯಬಹುದು ಎಂದು ಅಭಿಪ್ರಾಯಿಸಿದೆ.

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ಕ್ರಿಡಿಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ 2020ರ ನವೆಂಬರ್‌ 2ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ವಿರುದ್ಧ ಸೂಕ್ತ ಕ್ರಮವಹಿಸುವುದರ ಸಂಬಂಧ ಹಾಗೂ ಬ್ಯಾಂಕ್‌ನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ವಹಿವಾಟು ನಡೆಸದಂತೆ ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ವಹಿಸುವ ಸಂಬಂಧ ಆರ್‌ಬಿಐಗೆ ಪತ್ರ ಬರೆಯಬೇಕು,’ ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ 

ಕೆಆರ್‌ಐಡಿಎಲ್‌ನ 20 ಕೋಟಿ ಹಾಗೂ 35 ಕೋಟಿ ರೂ.ಅನುದಾನವನ್ನು ಮಂಗಳೂರಿನ ಕುಳಾಯಿಯ ಗೋಕುಲನಗರದ ನವನಿಧಿ ಕಾಂಪ್ಲೆಕ್ಸ್‌ನಲ್ಲಿರುವ ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ ಶಾಖೆಯಲ್ಲಿ ನಿಗದಿತ ಠೇವಣಿ ಸಂಖ್ಯೆ 320104000000026 ಹಾಗೂ 320104000000027ರಲ್ಲಿ 2017 ಆಗಸ್ಟ್‌ 24 ಮತ್ತು 30ರಂದು ಇರಿಸಲಾಗಿತ್ತು.

ಕೆಆರ್‌ಐಡಿಎಲ್‌ನ ಹೆಸರಿನಲ್ಲಿ ನಕಲಿ ಚಾಲ್ತಿ ಖಾತೆ ಸೃಷ್ಟಿಸಿ ಆ ಖಾತೆ ಮೂಲಕ ಬೇರೆಬೇರೆ ಅನುತ್ಪಾದಕ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಬಹಿರಂಗಗೊಂಡಿತ್ತು.  ಇದರಲ್ಲಿ ಬೆಂಗಳೂರಿನ ವಿಜಯಾ ಬ್ಯಾಂಕ್‌ನ ಕೋರಮಂಗಲ ಶಾಖೆಯ ಷಾ ಎಕ್ಸ್‌ಪೋರ್ಟ್ಸ್ ಖಾತೆಗೆ 50 ಲಕ್ಷ ರೂ. ವರ್ಗಾವಣೆ ಆಗಿತ್ತು.  2 ವರ್ಷಗಳಿಂದ ಶೂನ್ಯ ವ್ಯವಹಾರವಾಗಿದ್ದ ಖಾತೆಗೆ ಇಷ್ಟು ದೊಡ್ಡ ಪ್ರಮಾಣದ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ವಿಜಯಾ ಬ್ಯಾಂಕ್‌ ಹೊರಗೆಡವಿತ್ತು.

ಕೆಆರ್‌ಐಡಿಎಲ್‌ನ ನಕಲಿ ವಿಳಾಸ

ಕೆಆರ್‌ಐಡಿಎಲ್‌ ವಿವಿಧ ಬ್ಯಾಂಕ್‌ಗಳಲ್ಲಿ 23 ನಿಗದಿತ ಠೇವಣಿಗಳಲ್ಲಿ 740,89,28,461ರೂ.ಗಳನ್ನು ಇಟ್ಟಿತ್ತು.  2013 ಫೆಬ್ರವರಿಯಲ್ಲಿ ಕೆಆರ್‌ಐಡಿಎಲ್‌ ಮುಖ್ಯ ಕಚೇರಿ ಚಿನ್ನಸ್ವಾಮಿ ಸ್ಟೇಡಿಯಂನಿಂದ ಗ್ರಾಮೀಣಾಭಿವೃದ್ಧಿ ಭವನಕ್ಕೆ ಸ್ಥಳಾಂತರಗೊಂಡಿತ್ತು.  ಆದರೆ, 2017 ಆಗಸ್ಟ್‌ 30ರಂದು 35 ಕೋಟಿ ರೂ. ನಿಗದಿತ ಠೇವಣಿ ಸರ್ಟಿಫಿಕೇಟ್‌ ಸಂಖ್ಯೆ 584635ರಲ್ಲಿ ಸಂಸ್ಥೆಯ ಹಳೇ ವಿಳಾಸವಿತ್ತು. ಇನ್ನು 20 ಕೋಟಿ ರೂ. ನಿಗದಿತ ಠೇವಣಿ ಸರ್ಟಿಫಿಕೇಟ್‌ ಸಂಖ್ಯೆ 584636ರಲ್ಲಿ ಸಂಸ್ಥೆಯ ವಿಳಾಸವೇ ಇರಲಿಲ್ಲ. ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಇಲ್ಲಿಯೇ ಕಂಡುಬಂದಿತ್ತು. ಹಣದ ಅಕ್ರಮ ವರ್ಗಾವಣೆ ನಡೆದ ಸಮಯದಲ್ಲಿ ಕೆಆರ್‌ಐಡಿಎಲ್‌ನಲ್ಲಿ ಡಾ.ರಾಜು (ವ್ಯವಸ್ಥಾಪಕ ನಿರ್ದೇಶಕ), ಎಚ್‌.ಪಿ.ರಾಜಶೇಖರಮೂರ್ತಿ (ಮುಖ್ಯ ಎಂಜಿನಿಯರ್‌), ಡಾ.ವೀರಗೌಡ ಪಾಟೀಲ (ಸಿಎಫ್‌ಒ-1), ಪ್ರಶಾಂತ ಮಾಡಾಳ್‌ (ಡಿಎಫ್‌ಒ), ಶಂಕರಾಚಾರಿ (ಲೆಕ್ಕ ಅಧೀಕ್ಷಕ) ಕಾರ‍್ಯ ನಿರ್ವಹಿಸುತ್ತಿದ್ದರು.

ಅರ್ಹವಲ್ಲದ ಶಾಖೆ

ಕೆಆರ್‌ಐಡಿಎಲ್‌ನಲ್ಲಿದ್ದ ಹೆಚ್ಚಿನ ಅನುದಾನವನ್ನು ನಿಗದಿತ ಠೇವಣಿಯನ್ನಾಗಿಡಲು ದೂರದ ಮಂಗಳೂರಿನ ಕುಳಾಯಿಯಲ್ಲಿರುವ ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ ಶಾಖೆಯನ್ನು ಆಯ್ಕೆ ಮಾಡಿಕೊಂಡಿದ್ದೇ ಸೂಕ್ತವಾಗಿರಲಿಲ್ಲ. ಠೇವಣಿ ಸರ್ಟಿಫಿಕೇಟ್‌ಗಳಲ್ಲಿ ವಿಳಾಸ ಸರಿ ಇಲ್ಲದಿರುವುದನ್ನು ಪರಿಶೀಲಿಸಿ ಹಿಂದಿರುಗಿಸಬೇಕಿತ್ತು. ಐಒಬಿ ಶಾಖೆಯಲ್ಲಿ ಠೇವಣಿ ಇಟ್ಟ ನಂತರ ವಂಚಕರು ಕೆಆರ್‌ಐಡಿಎಲ್‌ ಸಂಸ್ಥೆಯ ಸುಳ್ಳು ಮನವಿ ಮತ್ತು ಆರ್ಟಿಕಲ್‌ ಆಫ್‌ ಅಸೋಸಿಯೇಷನ್‌, ಮಂಡಳಿ ತೀರ್ಮಾನದ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನ ಸಹಯೋಗದೊಂದಿಗೆ ಚಾಲ್ತಿ ಖಾತೆ ತೆರೆದು ಬೇರೆಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿತ್ತು.

ವಂಚನೆ ಆಗಿದ್ಹೇಗೆ?

ಅಮಿತ್‌, ಐಎಎಸ್‌ ಅಧಿಕಾರಿ, ಕೆಆರ್‌ಐಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಬ್ದುಲ್‌ ಸಲಾಂ, ಮುಖ್ಯ ಲೆಕ್ಕಾಧಿಕಾರಿ ಎಂದು ಹೇಳಿಕೊಂಡು ಕುಳಾಯಿಯ ಐಒಬಿ ಶಾಖೆಗೆ ಇಬ್ಬರೂ ಭೇಟಿ ನೀಡಿದ್ದರು. ‘ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ಪೀನಾಕಲ್‌ ಸಾಫ್ಟ್‌ವೇರ್‌ ತೊಂದರೆ ಇದೆ. ನಿಮ್ಮ ಬ್ಯಾಂಕ್‌ನಲ್ಲಿ ಚಾಲ್ತಿ ಖಾತೆ ತೆರೆದು ಕಾಮಗಾರಿ ನಿರ್ವಹಿಸಲು ಉದ್ದೇಶಿಸಲಾಗಿದೆ’ ಎಂದಿದ್ದರು.

ಚಾಲ್ತಿ ಖಾತೆ ತೆರೆಯಲು ಅಗತ್ಯವಿರುವ ಆಡಳಿತ ಮಂಡಳಿ ನಿರ್ಣಯ, ಗುರುತಿನ ಪತ್ರ, ಸಂಸ್ಥೆಯ ಮನವಿಪತ್ರ, ಆರ್ಟಿಕಲ್ಸ್‌ ಆಫ್‌ ಅಸೋಸಿಯೇಷನ್‌ಗಳನ್ನು ನಕಲು ಮಾಡಿ ಶಾಖೆಯ ವ್ಯವಸ್ಥಾಪಕರಿಗೆ ನೀಡಿ ಚಾಲ್ತಿ ಖಾತೆ ತೆರೆದಿದ್ದರು. ಈ ಖಾತೆಗೆ 55 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿಕೊಂಡು ನಂತರ ಸುಮಾರು 53.5 ಕೋಟಿ ರೂ.ಗಳನ್ನು ಮುಂಬಯಿಯ ಬಂದನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಹಾಗೂ ಬೆಂಗಳೂರಿನ ಕೋರಮಂಗಲ ಶಾಖೆಯ ವಿಜಯಾ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ್ದರು.

SUPPORT THE FILE

Latest News

Related Posts