ಅಕ್ಷಯಪಾತ್ರಾ ಫೌಂಡೇಷನ್‌ನಲ್ಲಿ ಅವ್ಯವಹಾರ?; ಬಿಜೆಪಿಯಿಂದಲೇ ಬಂತು ತನಿಖೆ ಮಾತು

ಬೆಂಗಳೂರು; ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಾರಿ ಏಜೆನ್ಸಿಯಾಗಿ ಅವಕಾಶ ಗಿಟ್ಟಿಸಿಕೊಂಡಿರುವ ಅಕ್ಷಯ ಪಾತ್ರಾ ಫೌಂಡೇ‍ಷನ್‌ನಲ್ಲಿ ಸಮರ್ಪಕ ಲೆಕ್ಕಪತ್ರ ತಪಾಸಣೆಯ ಪದ್ಧತಿಯೇ ಇಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ದೇಶ ಮತ್ತು ವಿದೇಶಗಳಿಂದ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರು ಮತ್ತು ಕಾರ್ಪೋರೇಟ್‌ ಸಂಸ್ಥೆ,ಕಂಪನಿಗಳಿಂದ ಕೋಟ್ಯಂತರ ರು. ದೇಣಿಗೆ ಪಡೆಯುತ್ತಿರುವ ಫೌಂಡೇಷನ್‌ನ ಆರ್ಥಿಕ ಚಟುವಟಿಕೆಗಳೂ ಸೇರಿದಂತೆ ಹಲವು ಸಂದರ್ಭದಲ್ಲಿ ಅಸಮರ್ಪಕ ದಾಖಲೆಗಳು ಮತ್ತು ವರದಿಗಳು ಕಂಡುಬಂದಿದೆಯಲ್ಲದೆ ಗಂಭೀರ ಲೋಪಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಸಂಸ್ಥೆಯ ಸ್ವತಂತ್ರ ಟ್ರಸ್ಟಿ ಟಿ ವಿ ಮೋಹನ್ ದಾಸ್ ಪೈ, ರಾಜ್ ಪಿ ಕೊಂಡೂರ್, ವಿ ಬಾಲಕೃಷ್ಣನ್ ಮತ್ತು ಅಭಯ್ ಜೈನ್ ಅವರು ನೀಡಿರುವ ಹೇಳಿಕೆಗಳು, ಅಕ್ಷಯಪಾತ್ರಾ ಫೌಂಡೇಷನ್‌ನ ಆಡಳಿತ ಲೋಪಗಳನ್ನು ಬಹಿರಂಗಪಡಿಸಿವೆ.

ಫೌಂಡೇಷನ್‌ನ ಚಟುವಟಿಕೆಗಳ ಬಗ್ಗೆ ಫೌಂಡೇಷನ್‌ ಟ್ರಸ್ಟಿಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರವನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಕಳೆದ ಅಕ್ಟೋಬರ್‌ 17ರಂದೇ ಬಯಲುಗೊಳಿಸಿದ್ದರು. ಈ ಕುರಿತು ಸರಣಿ ಟ್ವೀಟ್‌ ಮಾಡಿದ್ದ ಸುಗತ ಅವರು, ಫೌಂಡೇಷನ್‌ನ ಒಳಗುಟ್ಟುಗಳನ್ನು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ತಂದಿದ್ದನ್ನು ಸ್ಮರಿಸಬಹುದು.

 

ಅಕ್ಷಯಪಾತ್ರ ಫೌಂಡೇಷನ್‌ ವಿರುದ್ಧ ಕೇಳಿ ಬಂದಿರುವ ಹಣಕಾಸು ದುರುಪಯೋಗದ ಕುರಿತು ಬಿಜೆಪಿಯ ಕೋಶಾಧ್ಯಕ್ಷ ಹಾಗೂ ವಿದಾನಪರಿಷತ್‌ ಸದಸ್ಯ ಲೆಹರ್‌ಸಿಂಗ್‌ ತನಿಖೆಗೆ ಒತ್ತಾಯಿಸಿ ಪತ್ರ ಬರೆದ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ವಕ್ತಾರ ಹಾಗೂ ವಿಧಾನಪರಿಷತ್‌ನ ಮಾಜಿ ಸದಸ್ಯ ಗಣೇಶ್‌ ಕಾರ್ಣಿಕ್‌ ಅವರು ದನಿ ಎತ್ತಿದ್ದಾರೆ.

‘ದಿ ಫೈಲ್‌’ ಜತೆ ಮಾತನಾಡಿದ ಗಣೇಶ್‌ ಕಾರ್ಣಿಕ್‌ ಅವರು ‘ಇಸ್ಕಾನ್‌ ಸಂಸ್ಥೆಯವರು ಅಕ್ಷಯಪಾತ್ರ ಫೌಂಡೇಷನ್‌ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಬಿಸಿಯೂಟ ನೀಡುತ್ತಿರುವುದು ಸ್ತುತ್ಯಾರ್ಹ ಹಾಗೂ ಪ್ರಶಂಸನೀಯ. ಆದರೆ ಈ ಕಾರ್ಯಕ್ರಮದಲ್ಲಿ ಕೇಳಿ ಬರುತ್ತಿರುವ ಅವ್ಯವಹಾರದ ಆಪಾದನೆ ಕುರಿತು ಸಾರ್ವಜನಿಕವಾಗಿ ವಾಸ್ತವವನ್ನು ತೆರೆದಿಡಬೇಕು. ಪ್ರಸ್ತುತ ಗೊಂದಲದ ಸಮಯದಲ್ಲಿ ಸೂಕ್ತ ತನಿಖೆ ನಡೆಸುವುದೇ ಹೆಚ್ಚು ಸೂಕ್ತ. ಅಕ್ಷಯಪಾತ್ರ ಫೌಂಡೇ‍ಷನ್‌ ಅನುಷ್ಠಾನಗೊಳಿಸುತ್ತಿರುವ ಯೋಜನೆ ಕುರಿತು ಕೆಲವು ಸಂದೇಹಗಳು ಉದ್ಭವವಾಗಿದೆ. ಸಾರ್ವಜನಿಕ ಸಹಭಾಗಿತ್ವ ಇರುವ ಕಾರಣ ತನಿಖೆ ನಡೆಸುವ ಮೂಲಕ ಈ ಎಲ್ಲ ಆಪಾದನೆಗಳಿಗೂ ತೆರೆ ಎಳೆಯಬಹುದು,’ ಎಂದು ಪ್ರತಿಕ್ರಿಯಿಸಿದರು.

ಈ ಕುರಿತು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರ ಪ್ರತಿಕ್ರಿಯೆಗಾಗಿ ‘ದಿ ಫೈಲ್‌’ ಮಾಡಿದ್ದ ಕರೆಯನ್ನು ಸ್ವೀಕರಿಸಲಿಲ್ಲ ಮತ್ತು ಪ್ರತಿಕ್ರಿಯೆಗಾಗಿ ಕಳಿಸಿದ್ದ ಸಂದೇಶಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಅವರು ಈ ಸಂಬಂಧ ಪ್ರತಿಕ್ರಿಯೆ ನೀಡಿದ ನಂತರ ಈ ಸುದ್ದಿಯನ್ನು ಅಪ್‌ಡೇಟ್‌ ಮಾಡಲಾಗುವುದು.

ಅದೇ ರೀತಿ ಫೌಂಡೇಷನ್‌ನ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ‘ದಿ ಫೈಲ್‌’ ಜತೆ ಮಾತನಾಡಿದ ಸಮಾಜ ಪರಿವರ್ತನಾ ಸಮುದಾಯದ ಎಸ್‌ ಆರ್‌ ಹಿರೇಮಠ್‌ ಅವರು ‘ ಫೌಂಡೇಷನ್‌ನಲ್ಲಿ ಹಣ ದುರುಪಯೋಗವಾಗಿದೆ ಎಂಬ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಇದೊಂದು ಗಂಭೀರವಾದ ಹಗರಣ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾನು ಪರಿಶೀಲಿಸುತ್ತಿದ್ದೇನೆ. ದಾಖಲೆಗಳ ಪರಿಶೀಲನೆ ನಂತರ ಮುಂದಿನ ಕ್ರಮದ ಕುರಿತು ಚಿಂತನೆ ನಡೆಸಲಾಗುವುದು,’ ಎಂದು ಪ್ರತಿಕ್ರಿಯಿಸಿದರು.

ಅಕ್ಷಯಪಾತ್ರಾ ಫೌಂಡೇಷನ್‌ನಲ್ಲಿ ಆಡಳಿತಾತ್ಮಕ ಲೋಪಗಳು, ತಾಳೆಯಾಗದ ಲೆಕ್ಕಪತ್ರಗಳು ಮತ್ತು ಆಡಳಿತ ಮಂಡಳಿಯ ಟ್ರಸ್ಟಿಗಳಿಗೆ ಮತ್ತು ಲೆಕ್ಕಪರಿಶೋಧನಾ ಸಮಿತಿಗೆ ಉತ್ತರದಾಯಿಯಲ್ಲದ ಮತ್ತು ಕೇವಲ ಧಾರ್ಮಿಕ ಮುಖ್ಯಸ್ಥರಿಗೆ ಮಾತ್ರ ಸಂಪೂರ್ಣ ಅಧಿಕಾರ ನೀಡುವ ವ್ಯವಸ್ಥೆ ಎಂಬ ಸಂಗತಿ ಕುರಿತು ನಡೆದಿದ್ದ ಪರಿಶೋಧನೆ ಕುರಿತು ಸುಗತ ಅವರು ಲಭ್ಯವಿದ್ದ ಮಾಹಿತಿ ಮತ್ತು ಪತ್ರಗಳ ಆಧಾರವನ್ನಿಟ್ಟುಕೊಂಡು ಹೊರಗೆಡವಿದ್ದರು.

ನಿರ್ದಿಷ್ಟ ಘಟಕಗಳ ನಿರ್ವಹಣೆ, ದೇಣಿಗೆ ಸಂಗ್ರಹ, ವಾಹನ ವೆಚ್ಚ, ಅನುದಾನ ಸಂಗ್ರಹದ ಖರ್ಚು ವೆಚ್ಚ, ಬಾಡಿಗೆ ಹಂಚಿಕೆ, ಅನುದಾನ ಸಂಗ್ರಹ ಸೇರಿದಂತೆ ಹಲವು ವಿಷಯದಲ್ಲಿ ಫೌಂಡೇಷನ್ ಮತ್ತು ದೇವಾಲಯ ಟ್ರಸ್ಟುಗಳ ನಡುವೆ ಸ್ಪಷ್ಟತೆ ಇಲ್ಲದ ವ್ಯವಹಾರಗಳು, ಯಾವುದೇ ಲಿಖಿತ ಒಪ್ಪಂದ ಪತ್ರಗಳಾಗಲೀ, ಸ್ಪಷ್ಟತೆಯೇ ಇರಲಿಲ್ಲ ಎಂಬುದನ್ನು ಟ್ರಸ್ಟಿಗಳ ನಡುವೆ ನಡೆದ ಪತ್ರವ್ಯವಹಾರಗಳ ಕುರಿತು ದಿ ವೈರ್‌ ಜಾಲತಾಣದಲ್ಲಿ ವಿಸ್ತೃತವಾಗಿ ಬರೆದಿದ್ದ ಲೇಖನವನ್ನು ಸ್ಮರಿಸಬಹುದು.

https://thewire.in/government/akshaya-patra-trustees-resignation-explainer

ಹಾಗೆಯೇ ಬಹಳಷ್ಟು ಪ್ರಕರಣಗಳಲ್ಲಿ ಫೌಂಡೇಷನ್ನಿನ ಸಂಪನ್ಮೂಲ ಮೂಲಗಳ ದಾಖಲೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಹಿತಾಸಕ್ತಿ ಸಂಘರ್ಷ ತಲೆದೋರದಂತೆ ನೋಡಿಕೊಳ್ಳಲು ಅಗತ್ಯವಾದ ಸಮರ್ಪಕ ಲೆಕ್ಕಪತ್ರ ತಪಾಸಣೆಯ ಪದ್ಧತಿಯೇ ಇಲ್ಲ. ಹಲವು ಸಂದರ್ಭದಲ್ಲಿ ಅಸಮರ್ಪಕ ದಾಖಲೆಗಳು ಮತ್ತು ವರದಿಗಳು ಕಂಡುಬಂದಿದ್ದು, ಗಂಭೀರ ಲೋಪಗಳು ಪತ್ತೆಯಾಗಿರುವ ಕುರಿತು ಆಡಳಿತ ಟ್ರಸ್ಟಿಗಳ ಮಧ್ಯೆಯೇ ನಡೆಯುತ್ತಿದ್ದ ಪತ್ರ ವ್ಯವಹಾರಗಳನ್ನಾಧರಿಸಿ ಸುಗತ ಅವರು ಟ್ವೀಟ್‌ ಮಾಡಿದ್ದರು.

SUPPORT THE FILE

Latest News

Related Posts