ಮಾಧ್ಯಮ ಸಲಹೆಗಾರ ಹುದ್ದೆಗೆ ಮಹಾದೇವಪ್ರಕಾಶ್‌ ರಾಜೀನಾಮೆ; ‘ದಿ ಫೈಲ್‌’ ಈಚೆಗೆ ಮಾಡಿದ್ದ ವರದಿಗಳಿವು

ಬೆಂಗಳೂರು; ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಗೆ ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್‌ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಮಾಧ್ಯಮ ಸಲಹೆಗಾರರಾಗಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನ್ನ ವೈಯಕ್ತಿಕ ಕಾರಣಗಳಿಂದ ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ,’ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಅಂತಿಮಗೊಳ್ಳದಿದ್ದರೂ ಪ್ರಶಸ್ತಿಯನ್ನು ತಿರಸ್ಕರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಹಾದೇವ ಪ್ರಕಾಶ್‌ ಅವರು ಈಚೆಗೆ ಬರೆದುಕೊಂಡಿದ್ದರು. ಇದಾದ ನಂತರ ಅವರು ವಿವಿಧ ವಿಚಾರಗಳ ಕುರಿತು ಬರೆದಿದ್ದ ಪತ್ರಗಳನ್ನು ‘ದಿ ಫೈಲ್‌’ ಹೊರಗೆಡವಿದ ನಂತರ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು.

ಪಂಚಾಯ್ತಿ ಕ್ಷೇತ್ರವೊಂದರ ಮೀಸಲಾತಿ ಬದಲಾವಣೆ ಕುರಿತು ಅವರು ಕೋಲಾರ ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರ ಬಹಿರಂಗಗೊಂಡ ನಂತರ ಲಭ್ಯವಾದ ಇನ್ನಷ್ಟು ಪತ್ರಗಳು ಮಾಧ್ಯಮ ಸಲಹೆಗಾರರ ಕಾರ್ಯವ್ಯಾಪ್ತಿ ಮತ್ತು ಅಧಿಕಾರ ವ್ಯಾಪ್ತಿ ಕುರಿತಾದ ಚರ್ಚೆಯನ್ನು ವಿಸ್ತರಿಸಿತ್ತು.
ಸರಣಿ ರೂಪದಲ್ಲಿ ‘ದಿ ಫೈಲ್‌’ ಪ್ರಕಟಿಸಿದ ವರದಿಗಳನ್ನು ಕಿರು ಸಾರಾಂಶದ ಜತೆ ಇಲ್ಲಿ ಮತ್ತೊಮ್ಮೆ ಕೊಡಲಾಗಿದೆ.

ಕೋಲಾರ ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರದಲ್ಲೇನಿದೆ?

‘ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐನೂರು ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಕಾರಮಂಗಲ ಗ್ರಾಮದಲ್ಲಿ ಪ್ರಸ್ತುತ ಪ್ರಕಟವಾಗಿರುವ ಮೀಸಲಾತಿ ಅನುಸೂಚಿತ ಜಾತಿ (ಮಹಿಳೆ) ಮತ್ತು (ಸಾಮಾನ್ಯ) ವರ್ಗಕ್ಕೆ ಮೀಸಲಾಗಿದೆ. ಸಾಮಾನ್ಯ ವರ್ಗಕ್ಕೆ ಕಳೆದ 3 ಅವಧಿಯಿಂದ ನಿರಂತರ ಮೀಸಲಾತಿ ನೀಡಲಾಗಿದೆ. ಇದರಿಂದಾಗಿ ಹಿಂದುಳಿದ ವರ್ಗದವರಿಗೆ ಅವಕಾಶ ಇಲ್ಲದಂತಾಗಿದೆ. ಪ್ರಸಕ್ತ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗಕ್ಕೆ ನೀಡಿರುವ ಮೀಸಲಾತಿ ಬದಲಿಗೆ ಹಿಂದುಳಿದ ವರ್ಗ (ಅ) ಮೀಸಲಾತಿ ಬದಲಾಯಿಸಿ ಕೊಡಬೇಕು,’ ಎಂದು 2020ರ ಜುಲೈ 31ರಂದು ಪತ್ರದಲ್ಲಿ ಕೋರಿದ್ದರು.

ಪಂಚಾಯ್ತಿ ಮೀಸಲಾತಿ ವಿಚಾರದಲ್ಲಿ ಹಸ್ತಕ್ಷೇಪ; ಕಾರ್ಯವ್ಯಾಪ್ತಿ ಮೀರಿದ್ದರೇ ಮಹಾದೇವ ಪ್ರಕಾಶ್‌?

ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು

ಪ್ರಶಸ್ತಿಗಾಗಿ ನಾನು ಎಂದಿಗೂ ಲಾಬಿ ಮಾಡಿಲ್ಲ ಎಂದು ಬರೆದುಕೊಂಡಿದ್ದ ಮಹಾದೇವ ಪ್ರಕಾಶ್‌ ಅವರು ತಮ್ಮ ಸಂಪಾದಕತ್ವದಲ್ಲಿ ಹೊರತರುತ್ತಿರುವ ಮಾಸಿಕವೊಂದರ ಅಂಕಣಕಾರ ಪತ್ರಕರ್ತ ಎಂ ಕೆ ಭಾಸ್ಕರರಾವ್‌ ಅವರನ್ನು ಪ್ರಶಸ್ತಿಗೆ ಮಾಡಿದ್ದ ಶಿಫಾರಸ್ಸು ಪಟ್ಟಿ ಮುನ್ನೆಲೆಗೆ ಬಂದಿತ್ತು.
ಪ್ರಧಾನ ಅರ್ಚಕರು, ನಿವೃತ್ತ ಐಎಎಸ್‌ ಅಧಿಕಾರಿ, ಅವರದೇ ಮಾಸಿಕ ಪತ್ರಿಕೆ ಅಂಕಣಕಾರ, ಪತ್ರಕರ್ತರೂ ಸೇರಿದಂತೆ ಒಟ್ಟು 50 ಮಂದಿಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್‌ ಅವರು 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ಅವರಿಗೆ ಶಿಫಾರಸ್ಸು ಮಾಡಿದ್ದರು.

ಮಾಧ್ಯಮ ಸಲಹೆಗಾರರಿಂದ ಪ್ರಧಾನ ಅರ್ಚಕ ಸೇರಿ 50 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು

ವರದಿ ರವಾನಿಸಲು ಹೇಳಿದ್ದ ಪ್ರಕರಣ

ವ್ಯಾಜ್ಯದಲ್ಲಿರುವ ನಿವೇಶನವೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್‌ನ ಅಧೀಕ್ಷಕ ಮತ್ತು ಬಿಬಿಎಂಪಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಅವರಿಗೆ ಬರೆದಿರುವ ಪತ್ರ ಚರ್ಚೆಗೆ ಗ್ರಾಸವಾಗಿದೆ. ನಿವೇಶನ ಪ್ರಕರಣದಲ್ಲಿ ಕೈಗೊಂಡ ಕ್ರಮದ ವರದಿಯನ್ನೂ ತಮ್ಮ ಕಚೇರಿಗೆ ರವಾನಿಸಲು ಹೇಳಿದ್ದರು.

ಮಾಧ್ಯಮ ಸಲಹೆಗಾರ ಕಚೇರಿಗೆ ಬಿಎಂಟಿಎಫ್‌ ವರದಿ ಸಲ್ಲಿಸಬೇಕೆ?; ಚರ್ಚೆಗೆ ಗ್ರಾಸವಾದ ಪತ್ರ

ಮುಖ್ಯಮಂತ್ರಿಗೆ ಶಿಫಾರಸ್ಸು

ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತ ಡಿ ಎಂ ಸತೀಶ್‌ ಎಂಬುವರನ್ನು ಕರ್ನಾಟಕ ಪವರ್‌ ಕಾರ್ಪೋರೇಷನ್‌ ಲಿಮಿಟೆಡ್‌ಗೆ (ಕೆಪಿಸಿಎಲ್‌) ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಿಫಾರಸ್ಸು ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.

ಮಾಧ್ಯಮ ಸಲಹೆಗಾರರಿಂದ ಬಿಜೆಪಿ ಕಾರ್ಯಕರ್ತನ ನಾಮನಿರ್ದೇಶನಕ್ಕೆ ಮುಖ್ಯಮಂತ್ರಿಗೆ ಶಿಫಾರಸ್ಸು

ಪ್ರಶಸ್ತಿಗಾಗಿ ನಾನು ಎಂದಿಗೂ ಲಾಬಿ ಮಾಡಿಲ್ಲ. ಈ ಬಾರಿ ಅಧಿಕಾರದ ಬಲದಿಂದ ಪ್ರಶಸ್ತಿ ಪಡೆದೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಮೂಡಬಾರದು. ನಮ್ಮ ನಡೆ ನುಡಿ ಇತರರಿಗೆ ಮಾದರಿಯಾಗಬೇಕೇ ಹೊರತು ಮಾರಕವಾಗಬಾರದು ಎನ್ನುವ ದೃಷ್ಟಿಯಿಂದ ಪ್ರಶಸ್ತಿ ನಿರಾಕರಿಸುವ ನಿರ್ಧಾರ ಮಾಡಿದ್ದೇನೆಂದು ತಿಳಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts