ರಾಜ್ಯಪಾಲರಿಂದಲೇ ಕನ್ನಡ ಭಾಷೆ ಕಡೆಗಣನೆ; ಮೌನ ವಹಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು; ಸಚಿವ ಸಂಪುಟ ಅಂಗೀಕರಿಸಿ ಅದರ ಶಿಫಾರಸ್ಸಿನಂತೆ ಹಲವು ವರ್ಷಗಳ ಹಿಂದೆಯೇ ಜಾರಿಯಾಗಿರುವ ಆಡಳಿತ ಭಾಷೆ ಕನ್ನಡವನ್ನು ಕಡೆಗಣಿಸಿರುವ ಬಲವಾದ ಆರೋಪಕ್ಕೆ ರಾಜ್ಯಪಾಲ ವಜುಭಾಯ್‌ ವಾಲಾ ಅವರು ಗುರಿಯಾಗಿದ್ದಾರೆ.

ಹಿಂದಿ ಭಾಷೆ ಹೇರಿಕೆ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆಯೇ ರಾಜ್ಯಪಾಲ ವಜುಭಾಯ್‌ ವಾಲಾ ಅವರು ದೀಪಾವಳಿ ಹಬ್ಬಕ್ಕೆ ಹಿಂದಿ ಭಾಷೆಯಲ್ಲಿ ಶುಭಾಶಯ ಪತ್ರಗಳನ್ನು ರಾಜ್ಯದ ಮುಖ್ಯಮಂತ್ರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರೂ ಸೇರಿದಂತೆ ನಾಡಿನ ಗಣ್ಯರಿಗೆ ಕಳಿಸಿದ್ದಾರೆ. ಕನ್ನಡ ಜಾಗೃತಿ ಮತ್ತು ಕನ್ನಡ ಕಾಯಕ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ರಾಜ್ಯಪಾಲರು ಹಿಂದಿ ಭಾಷೆಯಲ್ಲಿ ಶುಭಾಶಯ ಪತ್ರಗಳನ್ನು ಕಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ದೀಪಾವಳಿ ಶುಭಾಶಯ ಕೋರಿ ಕಳಿಸಿರುವ ಶುಭಾಶಯ ಪತ್ರದಲ್ಲಿ ಕನ್ನಡ ಮತ್ತು ಇಂಗ್ಲೀಷ್‌ ಪದವಿಲ್ಲ. ಅಪ್ಪಟ ಹಿಂದಿ ಶುಭಾಶಯ ಪತ್ರಗಳನ್ನು ಕಳಿಸಿದ್ದಾರೆ. ರಾಜ್ಯದ ಬೊಕ್ಕಸದಿಂದ ಹಣವನ್ನು ಪಾವತಿಸಿ ಹಿಂದಿ ಭಾಷೆಯಲ್ಲಿ ಶುಭಾಶಯ ಪತ್ರಗಳನ್ನು ಕಳಿಸಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ರಾಜ್ಯಪಾಲರು, ಸಂವಿಧಾನ ಕಲ್ಪಿಸಿರುವ ಅವಕಾಶಗಳನ್ನು ಬಳಸಿ ನೇಮಕವಾಗುತ್ತಾರೆ. ರಾಷ್ಟ್ರಪತಿಯವರು ಹೇಗೆ ಭಾರತ ಗಣರಾಜ್ಯದ ಮುಖ್ಯಸ್ಥರೋ ಹಾಗೆಯೇ ರಾಜ್ಯಕ್ಕೆ ರಾಜ್ಯಪಾಲರು. ಹೆಸರಿಗೆ ಇಬ್ಬರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮುಖ್ಯಸ್ಥರಾದರೂ, ಅವರ ಹೆಸರಲ್ಲೇ ಆಡಳಿತ ನಡೆದರೂ ಸಹ ನೀತಿ ನಿರೂಪಣೆ, ಯೋಜನೆ ಕಾರ್ಯಕ್ರಮಗಳ ಅನುಷ್ಠಾನದ ಕಾರ್ಯಕಾರಿ ಅಧಿಕಾರ (executive powers) ಇರುವುದು ಸಚಿವ ಸಂಪುಟಕ್ಕೆ ಮತ್ತು ಅದರ ಮುಖ್ಯಸ್ಥ ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಗೆ ಮಾತ್ರ. ಸಚಿವ ಸಂಪುಟ ಅಂಗೀಕರಿಸಿ ಅದರ ಶಿಫಾರಸ್ಸಿನಂತೆ ಜಾರಿಯಾಗಿರುವ ಆಡಳಿತ ಭಾಷೆಯೊಂದನ್ನು ರಾಜ್ಯಪಾಲರು ಈ ರೀತಿ ಕಡೆಗಣಿಸಬಹುದೇ ಎಂಬ ಆಕ್ಷೇಪಣೆಗಳೂ ವ್ಯಕ್ತವಾಗಿವೆ.

ಸಂವಿಧಾನದ ಪ್ರಕಾರವೇ ರಾಜ್ಯಾಡಳಿತ ವ್ಯವಸ್ಥೆಯನ್ನು ಮುನ್ನಡೆಸುವ ರಾಜ್ಯಪಾಲರು ಆಡಳಿತ ಭಾಷೆಯಾಗಿ ಕನ್ನಡವನ್ನೇ ಅಂಗೀಕರಿಸಿರುವ ಕಾರಣ ಎಲ್ಲ ಸರ್ಕಾರದ ಕಚೇರಿಗಳೂ ಕನ್ನಡವನ್ನು ಬಳಸುವಂತೆ ರಾಜ್ಯಪಾಲರ ಕಚೇರಿಯೂ ಕನ್ನಡವನ್ನು ಬಳಸಿ ಮಾದರಿಯಾಗಬೇಕಿತ್ತು. ಅಲ್ಲದೆ ತ್ರಿಭಾಷಾ ಸೂತ್ರದ ಪ್ರಕಾರ ಕೇಂದ್ರದ ಉದ್ಯಮಗಳೂ, ಕೇಂದ್ರ ಸರ್ಕಾರದ ಪ್ರಾಂತೀಯ ಕಚೇರಿಗಳು ಕೂಡ ಕನ್ನಡದಲ್ಲಿಯೇ ಮಾಹಿತಿ ನೀಡಬೇಕು. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಸಿಎಜಿ ಕಚೇರಿ, ಅಂಚೆ ಕಚೇರಿ ಸೇರಿದಂತೆ ಇನ್ನಿತರೆ ಕಚೇರಿಗಳು ಕೂಡ ತ್ರಿಭಾಷಾ ಸೂತ್ರದ ಪ್ರಕಾರವೇ ಪ್ರಾದೇಶಿಕ ಭಾಷೆಯನ್ನು ಅಳವಡಿಸಿಕೊಳ್ಳಬೇಕು.

ಆದರೆ ರಾಜ್ಯಪಾಲ ವಜುಭಾಯ್‌ ವಾಲಾ ಅವರು ಅಪ್ಪಟ ಹಿಂದಿ ಭಾಷೆಯಲ್ಲಿಯೇ ಶುಭಾಶಯ ಪತ್ರವನ್ನು ಕಳಿಸಿರುವುದು ಹಿಂದಿ ಭಾಷೆಯೊಂದಕ್ಕೆ ಪ್ರಾಧಾನ್ಯತೆ ನೀಡಿದಂತಿದೆ. ‘ತಮಿಳುನಾಡಿನಲ್ಲಿ ಇಂಥ ಪ್ರಯೋಗವನ್ನು ಅಪ್ಪಿತಪ್ಪಿಯೂ ಮಾಡುವುದಿಲ್ಲ. ಮಾಡಲು ಸಾಧ್ಯವೂ ಇಲ್ಲ. ಅಥವಾ ನಾವು ಏನು ಬೇಕಾದರು ಮಾಡಿ ದಕ್ಕಿಸಿಕೊಳ್ಳಬಲ್ಲವೆಂಬ ಉತ್ತರದವರ ದಾರ್ಷ್ಟ್ಯವು ಇದರ ಹಿಂದೆ ಕೆಲಸ ಮಾಡಿರಬಹುದು. ಹಿಂದಿ ಮತ್ತು ಗುಜರಾತಿ ಭಾಷೆ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲದ ರಾಜ್ಯಪಾಲರೊಬ್ಬರು ತನಗೆ ಗೊತ್ತಿರುವ ಭಾಷೆಗಳು ಸಮಸ್ತ ಕರ್ನಾಟಕದ ಜನತೆಗೆ ಗೊತ್ತಿರಲೇಬೇಕೆಂದು ತೋರಿಸುವ ದಾರ್ಷ್ಟ್ಯದಂತೆ ಇದು ಕಾಣುತ್ತದೆ,’ ಎನ್ನುತ್ತಾರೆ ಲೇಖಕ ಕೆ ಪುಟ್ಟಸ್ವಾಮಿ.

ಇದು ಕೇವಲ ಭಾಷೆಯ ಪ್ರಶ್ನೆಯಷ್ಟೇ ಅಲ್ಲ. ಸಂಸ್ಕೃತಿಯ ಪ್ರಶ್ನೆಯೂ ಹೌದು. ಈ ಶುಭಾಶಯ ಪತ್ರದಲ್ಲಿ “ಶುಭ ದೀಪಾವಳಿ ಮತ್ತು ನೂತನ ವರ್ಷದ ಶುಭ ಕಾಮನೆಗಳು” ಎಂದು ರಾಜ್ಯಪಾಲರು ಹಾರೈಸಿದ್ದಾರೆ. ಉತ್ತರದ ಕೆಲವೆಡೆ ದೀಪಾವಳಿ ಹೊಸ ವರ್ಷದ ಆರಂಭವಾಗಿರಬಹುದು. ಆದರೆ ನಮಗೆ ಉಗಾದಿಯೇ ಹೊಸ ವರ್ಷದ ಆರಂಭ. ಇದೂ ಸಹ ಒಂದು ಬಗೆಯ ಹೇರಿಕೆ ಎಂದೂ ಪುಟ್ಟಸ್ವಾಮಿ ಅವರು ಅಭಿಪ್ರಾಯಿಸಿದ್ದಾರೆ.

the fil favicon

SUPPORT THE FILE

Latest News

Related Posts