ಮಾಧ್ಯಮ ಸಲಹೆಗಾರ ಕಚೇರಿಗೆ ಬಿಎಂಟಿಎಫ್‌ ವರದಿ ಸಲ್ಲಿಸಬೇಕೆ?; ಚರ್ಚೆಗೆ ಗ್ರಾಸವಾದ ಪತ್ರ

ಬೆಂಗಳೂರು; ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್‌ ಅವರು ಪಂಚಾಯ್ತಿ ಕ್ಷೇತ್ರವೊಂದರ ಮೀಸಲಾತಿ ಬದಲಾಯಿಸಲು ಕೋಲಾರ ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿಗೆ ಸಚಿವ ಸಿ ಟಿ ರವಿ ಅವರಿಗೆ ಮಾಡಿದ್ದ ಶಿಫಾರಸ್ಸು ಪಟ್ಟಿಯನ್ನು ಹೊರಗೆಡವಿದ್ದ ‘ದಿ ಫೈಲ್‌’ ಇದೀಗ ಮತ್ತೊಂದು ಪ್ರಕರಣವನ್ನು ಮುನ್ನೆಲೆಗೆ ತಂದಿದೆ.

ವ್ಯಾಜ್ಯದಲ್ಲಿರುವ ನಿವೇಶನವೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್‌ನ ಅಧೀಕ್ಷಕ ಮತ್ತು ಬಿಬಿಎಂಪಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಅವರಿಗೆ ಬರೆದಿರುವ ಪತ್ರ ಚರ್ಚೆಗೆ ಗ್ರಾಸವಾಗಿದೆ. ನಿವೇಶನ ಪ್ರಕರಣದಲ್ಲಿ ಕೈಗೊಂಡ ಕ್ರಮದ ವರದಿಯನ್ನೂ ತಮ್ಮ ಕಚೇರಿಗೆ ರವಾನಿಸಲು ಹೇಳಿರುವುದು ಅವರ ಪತ್ರದಿಂದ ಗೊತ್ತಾಗಿದೆ. ಈ ಎರಡೂ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಪರಿಗಣಿಸಿದ್ದಾರೆಂದು ತಿಳಿದು ಬಂದಿದೆ. ಆದರೆ ನಾನು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಆಗಿರುವುದರಿಂದ ಈ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲ ಎಂಬುದು ನನ್ನ ಭಾವನೆ ಎಂದು ನೈತಿಕ ವಿಚಾರವನ್ನು ಮುಂದಿಟ್ಟು ಪಟ್ಟಿ ಅಂತಿಮಗೊಳ್ಳುವ ಮುನ್ನವೇ ಪ್ರಶಸ್ತಿಯನ್ನು ಮಹಾದೇವ ಪ್ರಕಾಶ್‌ ಅವರು ತಿರಸ್ಕರಿಸಿದ್ದರು.

ನೈತಿಕತೆ ಮತ್ತು ಹಿತಾಸಕ್ತಿ ಸಂಘರ್ಷದ ಬಗ್ಗೆ ಬರೆದುಕೊಂಡಿದ್ದ ಅವರು 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ತಮ್ಮ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ಮಾಸಿಕವೊಂದರ ಅಂಕಣಕಾರೊಬ್ಬರನ್ನು ಸೇರಿದಂತೆ 50 ಮಂದಿಗೆ ಶಿಫಾರಸ್ಸು ಮಾಡಿದ್ದರು. ಈ ಎರಡೂ ಪ್ರಕರಣಗಳು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಿಎಂಟಿಎಫ್‌ ಅಧೀಕ್ಷಕರಿಗೆ ಬರೆದಿರುವ ಪತ್ರವು ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿದೆ.

ಬಿಎಂಟಿಎಫ್‌ ಅಧೀಕ್ಷಕರಿಗೆ ಬರೆದಿರುವ ಪತ್ರದಲ್ಲೇನಿದೆ?

‘ಡಿ ಕೆ ಶೈಲಜಾ ಅವರು ಚಕ್ರವರ್ತಿ ಲೇ ಔಟ್‌ 2ನೇ ಮೇನ್‌, 3-ಬಿ ಕ್ರಾಸ್‌ ಪ್ಯಾಲೇಸ್‌ ರೋಡ್‌ ಕ್ರಾಸ್‌ನಲ್ಲಿ ಸೈಟ್‌ ನಂಬರ್‌ 51, ನಿವೇಶನದ ಮಾಲೀಕತ್ವ ಹೊಂದಿದ್ದಾರೆ. ಶೈಲಜಾ ಅವರು ಸಲ್ಲಿಸಿದ ಮನವಿ ಪತ್ರದ ಅನುಸಾರ ಸೈಟ್‌ ನಂಬರ್‌ 48ರ ಮಾಲೀಕರಾದ ರಾಜೇಶ್‌ ಥಾಕರ್‌ ಅವರು ಡಿ ಕೆ ಶೈಲಜಾ ಅವರ ಸೈಟ್‌ ನಂಬರ್‌ 51ರಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದಾರೆ. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ಅನಧಿಕೃತ ನಿರ್ಮಾಣ ತೆರವುಗೊಳಿಸಲು 30-03-2009ರಂದು ಬಿಬಿಎಂಪಿಗೆ ನಿರ್ದೇಶನ ನೀಡಿರುತ್ತದೆ. ಆದಾಗ್ಯೂ ರಾಜೇಶ್‌ ಥಾಕರ್‌ ತಮ್ಮ ನಿವೇಶನ ಸೈಟ್‌ ನಂಬರ್‌ -48ನ್ನು ಡಿ ಕೆ ಶೈಲಜಾ ಅನಿತಾ ಸಿರೋಯಾ ಅವರಿಗೆ ಮಾರಿರುತ್ತಾರೆ. ಮತ್ತು ಅವರು ಅನಿತಾ ಸಿರೋಯಾ ಖಾತಾ ಬದಲಾವಣೆಗೆ ಅರ್ಜಿ ಸಲ್ಲಿಸಿರುತ್ತಾರೆ. ಈ ಎಲ್ಲ ಅಂಶಗಳನ್ನು ತಾವು ಕೂಲಂಕುಷವಾಗಿ ಪರಿಶೀಲಿಸಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಲು ತಮ್ಮಲ್ಲಿ ಕೋರುತ್ತೇನೆ. ಈ ವಿಷಯದ ಬಗ್ಗೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿಯನ್ನು ಈ ಕಚೇರಿಗೆ ರವಾನಿಸಲು ಕೋರುತ್ತೇನೆ,’ ಎಂದು 2020ರ ಅಕ್ಟೋಬರ್‌ 21ರಂದು ಬಿಎಂಟಿಎಫ್‌ ಅಧೀಕ್ಷಕರಿಗೆ ಓಬಲೇಶ್‌ ಮತ್ತು ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ವಾಸು ಅವರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಬಿಎಂಟಿಎಫ್‌ ಅಧೀಕ್ಷಕ ಓಬಲೇಶ್‌ ಅವರ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಲಾಯಿತಾದರೂ ‘ದಿ ಫೈಲ್‌’ 2 ಬಾರಿ ಮಾಡಿದ್ದ ಕರೆಯನ್ನು ಸ್ವೀಕರಿಸಲಿಲ್ಲ. ಅವರು ಪ್ರತಿಕ್ರಿಯಿಸಿದ ನಂತರ ಈ ವರದಿಯನ್ನು ಅಪ್‌ಡೇಟ್‌ ಮಾಡಲಾಗುವುದು.

ಅಧಿಕಾರ ಪ್ರಯೋಗಿಸಿದ್ದರೇ?

ಮುಖ್ಯಮಂತ್ರಿಗಳಿಗೆ ಮಾಧ್ಯಮ ಮತ್ತು ಸಂವಹನ ವಿಚಾರದಲ್ಲಿ ಸಲಹೆ ನೀಡುವ ಉದ್ದೇಶದಿಂದ ಅವರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ವ್ಯಾಜ್ಯದಲ್ಲಿರುವ ನಿವೇಶನ ಪ್ರಕರಣದಲ್ಲಿ ಮಹಾದೇವ ಪ್ರಕಾಶ್‌ ಅವರು ಬಿಎಂಟಿಎಫ್‌ನ ಅಧೀಕ್ಷಕ ಮತ್ತು ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಅವರಿಗೆ ಬರೆದಿರುವ ಪತ್ರದಲ್ಲಿ ‘ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮದ ಕುರಿತು ವರದಿಯನ್ನು ಈ ಕಚೇರಿಗೆ ರವಾನಿಸಬೇಕು,’ ಎಂದು ಹೇಳಿರುವುದರ ಹಿಂದೆ ಅಧಿಕಾರ ಪ್ರಯೋಗದ ಛಾಯೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

the fil favicon

SUPPORT THE FILE

Latest News

Related Posts