ಬೆಂಗಳೂರು; ನವ ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಆಯ್ಕೆ ಮಾಡಿರುವ ಒಟ್ಟು 317 ಫಲಾನುಭವಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 6.3 ರಷ್ಟು ಮಾತ್ರ ಪ್ರಾತಿನಿಧ್ಯ ದೊರೆತಿದೆ. ಉಡುಪಿ ಸೇರಿದಂತೆ ಕೆಲ ಜಿಲ್ಲಾ ಸಮಿತಿಗಳು ಆಯ್ಕೆ ಮಾಡಿರುವ ಫಲಾನುಭವಿಗಳ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಕಾನೂನು ಪದವೀಧರನಿಲ್ಲದಿರುವುದು ಇದೀಗ ಬಹಿರಂಗವಾಗಿದೆ.
ಜಿಲ್ಲಾ ಹಂತದಲ್ಲಿಯೇ ಆಯಾ ಜಿಲ್ಲೆಗಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಆಯ್ಕೆ ಸಮಿತಿಯು ಒಟ್ಟು 317 ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಆಯ್ಕೆಯಾದ ಫಲಾನುಭವಿಗಳಿಗೆ ತಲಾ 6,000 ರು.ಗಳಂತೆ ಒಟ್ಟು 15 ಜಿಲ್ಲೆಗಳಿಗೆ 19,02,000.00 ಗಳ ಪ್ರೋತ್ಸಾಹ ಧನವನ್ನು ಮಂಜೂರು ಮಾಡಿ 2020ರ ಅಕ್ಟೋಬರ್ 29ರಂದು ಸರ್ಕಾರ ಆದೇಶ ಹೊರಡಿಸಿದೆ. 2020ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿ ಆದೇಶಿಸಿದೆ. ಆಯ್ಕೆಯಾದ ಫಲಾನುಭವಿಗಳ ಪಟ್ಟಿ ಮತ್ತು ಸರ್ಕಾರ ಹೊರಡಿಸಿರುವ ಆದೇಶದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, ಆಯ್ಕೆ ಸಮಿತಿಯು ಕೇವಲ ಒಬ್ಬ ಫಲಾನುಭವಿಯನ್ನು ಮಾತ್ರ ಆಯ್ಕೆ ಮಾಡಿದೆ. ಮೈಸೂರು ಜಿಲ್ಲೆಯಲ್ಲಿ 51, ಮಂಡ್ಯ 9, ಹಾಸನ 18, ಕೊಪ್ಪಳ 18, ದಾವಣಗೆರೆ 2, ದಕ್ಷಿಣ ಕನ್ನಡ 23, ಬೆಳಗಾವಿ 79, ಧಾರವಾಡ 28, ಗದಗ್ 8, ಹಾವೇರಿ 23, ಬಾಗಲಕೋಟೆ 34, ಉತ್ತರ ಕನ್ನಡ 2, ರಾಯಚೂರು 17 ಮತ್ತು ಉಡುಪಿಯಲ್ಲಿ 4 ಫಲಾನುಭವಿಗಳನ್ನು ಆಯಾ ಜಿಲ್ಲಾ ಸಮಿತಿಗಳು ಆಯ್ಕೆ ಮಾಡಿರುವುದು ಪಟ್ಟಿಯಿಂದ ತಿಳಿದು ಬಂದಿದೆ.
ಮೈಸೂರು ಜಿಲ್ಲಾ ಸಮಿತಿಯು ಆಯ್ಕೆ ಮಾಡಿರುವ 51 ಮಂದಿ ಫಲಾನುಭವಿಗಳಲ್ಲಿ ಒಬ್ಬ ಮುಸ್ಲೀಂ ಕಾನೂನು ಪದವೀಧರನಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಆಯ್ಕೆಯಾಗಿರುವ 79 ಫಲಾನುಭವಿಗಳಲ್ಲಿ ಮುಸ್ಲಿಂ ಸಮುದಾಯದಿಂದ 5 ಮಂದಿಯನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ಮಂದಿ ಫಲಾನುಭವಿಗಳ ಪೈಕಿ 3 ಮಂದಿ, ಧಾರವಾಡದಲ್ಲಿ 28 ಮಂದಿ ಮತ್ತು ಹಾವೇರಿ ಜಿಲ್ಲೆಯ 23 ಫಲಾನುಭವಿಗಳಲ್ಲಿ ತಲಾ ಒಬ್ಬರಂತೆ, ಬಾಗಲಕೋಟೆಯ 34 ಫಲಾನುಭವಿಗಳಲ್ಲಿ ಇಬ್ಬರು, ರಾಯಚೂರು ಜಿಲ್ಲೆಯ 17 ಫಲಾನುಭವಿಗಳಲ್ಲಿ 4 ಮಂದಿ, ಹಾಸನದ 18 ಫಲಾನುಭವಿಗಳಲ್ಲಿ 2 , ದಾವಣಗೆರೆಯ ಇಬ್ಬರು ಫಲಾನುಭವಿಗಳಲ್ಲಿ ಒಬ್ಬರು ಮಾತ್ರ ಆಯ್ಕೆಯಾಗಿರುವುದು ಪಟ್ಟಿಯಿಂದ ಗೊತ್ತಾಗಿದೆ.
ಮಂಡ್ಯ, ಕೊಪ್ಪಳ, ಗದಗ್, ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಒಟ್ಟು ಫಲಾನುಭವಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಒಬ್ಬನೇ ಒಬ್ಬ ಕಾನೂನು ಪದವೀಧರ ಆಯ್ಕೆಯಾಗದಿರುವುದು ಪಟ್ಟಿಯಿಂದ ತಿಳಿದು ಬಂದಿದೆ. ಹಾಗೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರೋತ್ಸಾಹ ಧನಕ್ಕಾಗಿ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ. ಹೀಗಾಗಿ ಈ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಆಯ್ಕೆ ಆಗಿಲ್ಲದಿರುವುದು ಪಟ್ಟಿಯಿಂದ ಗೊತ್ತಾಗಿದೆ.
ರಾಜ್ಯದಲ್ಲಿ ಕಾನೂನು ಪದವಿ ಪಡೆದು ಹೊರಬರುವ ವಕೀಲರಿಗೆ ವೃತ್ತಿ ಜೀವನ ಆರಂಭ ಮಾಡುವ ಮೊದಲು ನುರಿತ/ಹಿರಿಯ ವಕೀಲರ ಜತೆ ವೃತ್ತಿ ಜೀವನದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ಧನ ನೀಡುವ ಯೋಜನೆ 2006ರಲ್ಲೇ ಆರಂಭಗೊಮಡಿದೆ. ಪ್ರಾರಂಭಿಕ ಹಂತದಲ್ಲಿ ಸಹಾಯಧನ ನೀಡುವ ಸಲುವಾಗಿ ಪ್ರತಿ ತಿಂಗಳು 1,000 ರು.ಗಳಂತೆ 12 ತಿಂಗಳ ಅವಧಿಗೆ ಸೀಮಿತಗೊಳಿಸಲಾಗಿತ್ತು. ನಂತರದ ವರ್ಷಗಳಲ್ಲಿ 24 ತಿಂಗಳುಗಳಿಗೆ ಸೀಮಿತಗೊಳಿಸಿ ತಿಂಗಳಿಗೆ ತಲಾ 2,000 ರು.ಗಳಿಗೆ ಪರಿಷ್ಕರಿಸಲಾಗಿತ್ತು.
2016-17ನೇ ಸಾಲಿಗೂ ಮುನ್ನ ಕಾನೂನು ಪದವೀಧರರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ತಾಲೂಕು ಹಂತದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿತ್ತು. 2016-17ರಲ್ಲಿ ಸಮಿತಿಗಳನ್ನು ಬದಲಿಸಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರವು ಆಯಾ ಜಿಲ್ಲೆಗಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಒಂದೇ ವ್ಯಾಪಕವಾದ ಜಿಲ್ಲಾ ಆಯ್ಕೆ ಸಮಿತಿಯನ್ನು ಪುನರ್ ರಚಿಸಿತ್ತು.