ಡಾ ವೈ ಮಂಜುನಾಥ್‌ ವಿಚಾರಣೆಗೆ ಅನುಮತಿ ನಿರಾಕರಣೆ; ಜಾರಕಿಹೊಳಿ ಕುಟುಂಬಕ್ಕೆ ಮಣಿಯಿತೇ?

ಬೆಂಗಳೂರು; ಮದ್ಯದ ಅಂಗಡಿಗಳ ಪರವಾನಿಗೆ ನವೀಕರಿಸಲು ಲಂಚ ಪಡೆದಿದ್ದ ಪ್ರಕರಣದಲ್ಲಿ ಅಬಕಾರಿ ಜಂಟಿ ಆಯುಕ್ತ ಹಾಗೂ ಜಾರಕಿಹೊಳಿ ಕುಟುಂಬ ಸದಸ್ಯರೂ ಆಗಿರುವ ಡಾ ವೈ ಮಂಜುನಾಥ್‌ ಅವರನ್ನು ವಿಚಾರಣೆಗೊಳಪಡಿಸಲು ಅನುಮತಿ ಕೋರಿ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ್ದ ಪ್ರಸ್ತಾವನೆ 2ನೇ ಬಾರಿಯೂ ತಿರಸ್ಕೃತಗೊಂಡಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂಇವರನ್ನು ವಿಚಾರಣೆಗೊಳಪಡಿಸಲು  ಲೋಕಾಯುಕ್ತಕ್ಕೆ ಅನುಮತಿ ನೀಡಿರಲಿಲ್ಲ. ಹಿಂದಿನ ಕಾಂಗ್ರೆಸ್‌ ಸರ್ಕಾರ ಕೈಗೊಂಡಿದ್ದ ನಿರ್ಣಯವನ್ನೇ ಈಗಿನ ಬಿಜೆಪಿ ಸರ್ಕಾರವೂ ಪುನರುಚ್ಚರಿಸಿದೆ.

ಕೆಎಎಸ್ ವೃಂದದಲ್ಲದ ಅಧಿಕಾರಿಗಳಿಗೆ (ನಾನ್ ಕೆಎಎಸ್‌) ಐಎಎಸ್‌ ಹುದ್ದೆಗೆ ಬಡ್ತಿ ನೀಡಲು ರಾಜ್ಯ ಬಿಜೆಪಿ ಸರ್ಕಾರವು ಮಂಜುನಾಥ್‌ ಅವರ ಹೆಸರನ್ನೊಳಗೊಂಡಿರುವ ಪಟ್ಟಿಯನ್ನು ಕೇಂದ್ರಕ್ಕೆ ರವಾನೆಯಾಗಿರುವ ಬೆನ್ನಲ್ಲೇ ಲೋಕಾಯುಕ್ತ ಪ್ರಕರಣದಲ್ಲಿ ವಿಚಾರಣೆಗೊಳಪಡಿಸಲು 2ನೇ ಬಾರಿಯೂ ಅನುಮತಿ ತಿರಸ್ಕರಿಸಿರುವುದು ಮುನ್ನೆಲೆಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಯೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಲೋಕಾಯುಕ್ತ ಸಂಸ್ಥೆಯು ಮಂಜುನಾಥ್‌ ಅವರನ್ನು ವಿಚಾರಣೆಗೊಳಪಡಿಸಲು 2017ರ ಡಿಸೆಂಬರ್‌ 23ರಂದು ಪ್ರಸ್ತಾವನೆ ಸಲ್ಲಿಸಿತ್ತು. (ಪತ್ರ ಸಂಖ್ಯೆ; FD 109 EPS 2012) ಆದರೆ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಲೋಕಾಯುಕ್ತ ಪ್ರಸ್ತಾವನೆಯನ್ನು ತಿರಸ್ಕೃರಿಸಿತ್ತು. ಇದಾದ ನಂತರವೂ ಲೋಕಾಯುಕ್ತ ಸಂಸ್ಥೆಯು 2020ರ ಆಗಸ್ಟ್‌ 11ರಂದು ಸಲ್ಲಿಸಿದ್ದ ಮತ್ತೊಂದು ಪ್ರಸ್ತಾವನೆಯನ್ನು ಈಗಿನ ಬಿಜೆಪಿ ಸರ್ಕಾರವೂ ತಿರಸ್ಕೃರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಐಎಎಸ್‌ಗೆ ಬಡ್ತಿ ಪಡೆದ ನಂತರ ಡಾ ವೈ ಮಂಜುನಾಥ್‌ ಅವರು ಮೈಸೂರು ಜಿಲ್ಲಾಧಿಕಾರಿ ಹುದ್ದೆ ಪಡೆಯಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ. ಅಲ್ಲದೆ ನಿವೃತ್ತಿ ನಂತರ ಮೈಸೂರು ಜಿಲ್ಲೆಯ ವಿಧಾನಸಭೆ ಕ್ಷೇತ್ರವೊಂದರಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಕರಣದ ಹಿನ್ನೆಲೆ

ಡಾ ವೈ ಮಂಜುನಾಥ್‌ ಅವರು ಮೈಸೂರಿನಲ್ಲಿ ಅಬಕಾರಿ ಉಪ ಆಯುಕ್ತರಾಗಿದ್ದ ಅವಧಿಯಲ್ಲಿ ಅಬಕಾರಿ ಪರವಾನಿಗೆ ನವೀಕರಿಸಲು ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು 2012ರ ಜೂನ್‌ 27ರಂದು ದಾಳಿ ನಡೆಸಿತ್ತು. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಸೆಕ್ಷನ್‌ 13(1) ಮತ್ತು 13(2) ಅಡಿಯಲ್ಲಿ ಎಫ್‌ಐಆರ್‌( 11/2012) ದಾಖಲಾಗಿತ್ತು. ಅಲ್ಲದೇ ಇದೇ ಪ್ರಕರಣದಲ್ಲಿ ಮಂಜುನಾಥ್‌ ಅವರನ್ನು 2012ರ ಜೂನ್‌ 28ರಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. 2012ರ ಜುಲೈ 7ರಂದು ಇವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು ಎಂಬುದು ತಿಳಿದು ಬಂದಿದೆ.

ವಿಚಾರಣೆಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾದ ಭ್ರಷ್ಟರನ್ನು ರಕ್ಷಿಸುವ ಮತ್ತು ಬಡ್ತಿ ನೀಡುವ ಜನದ್ರೋಹಿ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಅಧಿಕಾರ ದುರುಪಯೋಗ ಮತ್ತು ಅಕ್ರಮಗಳ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿ ಬಂದ ಶಾಸಕರ, ಮಂತ್ರಿಗಳ, ಮುಖ್ಯಮಂತ್ರಿಗಳ ನಾಡಿನಲ್ಲಿ ಇನ್ನೇನು ನಿರೀಕ್ಷಿಸಬಹುದು? ಭ್ರಷ್ಟರನ್ನ ಪೋಷಿಸುತ್ತಿರುವ ಬಿಜೆಪಿ ಮತ್ತು ಹಿಂದೆ ಕ್ರಮ ಕೈಗೊಳ್ಳದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮತ್ತು ಈಗಿನ ಬಿಜೆಪಿ ಸರ್ಕಾರ ನಿಜವಾದ ಮುಖವೇ ಇದು.

ರವಿಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷರು.

ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದ ಡಾ ವೈ ಮಂಜುನಾಥ್‌ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಅವರು ಕರ್ತವ್ಯಕ್ಕೆ ಮರಳಲು 2012ರ ಜುಲೈ 17ರಂದು ಆದೇಶಿಸಿತ್ತಲ್ಲದೆ, ಸರ್ಕಾರ ಹೊರಡಿಸಿದ್ದ ಅಮಾನತು ಆದೇಶಕ್ಕೆ ತಡೆ ನೀಡಿತ್ತು. ಅದರಂತೆ 2017ರ ಜುಲೈ 18ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು ಎಂಬ ವಿಚಾರ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಕೆಎಎಸ್ ವೃಂದದಲ್ಲದ ಅಧಿಕಾರಿಗಳಿಗೆ (ನಾನ್ ಕೆಎಎಸ್‌) ಐಎಎಸ್‌ ಹುದ್ದೆಗೆ ಬಡ್ತಿ ನೀಡುವ ಸಂಬಂಧ ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳುಹಿಸಿರುವ ಪಟ್ಟಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಶೇಷ ಕರ್ತವ್ಯಾಧಿಕಾರಿ ಎ ಲೋಕೇಶ್‌, ಜಾರಕಿಹೊಳಿ ಕುಟುಂಬ ಸದಸ್ಯ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ ವೈ ಮಂಜುನಾಥ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಅನಿಲ್‌ಕುಮಾರ್‌ ಸೇರಿದಂತೆ ಒಟ್ಟು 14 ಮಂದಿ ಅಧಿಕಾರಿಗಳ ಹೆಸರಿದೆ.

ಕೆಎಎಸ್‌ ವೃಂದದವರಲ್ಲದ ಸಾರಿಗೆ, ಅಬಕಾರಿ, ಲೆಕ್ಕಪತ್ರ, ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆಯಲ್ಲಿ ಸೇವಾ ಹಿರಿತನ ಹೊಂದಿರುವ ಹಾಗೂ ಐಎಎಸ್‌ಗೆ ಬಡ್ತಿ ಪಡೆಯುವ ಅರ್ಹತೆ ಇದ್ದ ಅಧಿಕಾರಿಗಳ ಪಟ್ಟಿಯನ್ನು 2020ರ ಅಕ್ಟೋಬರ್‌ 17ರಂದು ಕೇಂದ್ರ ಲೋಕಸೇವಾ ಆಯೋಗಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ರವಾನಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts