ಬೆಂಗಳೂರು; ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್‌ಎಸ್ ರೆಡ್ಡಿ ವಿರುದ್ಧ ದೂರು ದಾಖಲಿಸಿದ್ದ ರಾಮ್ ಮೋಹನ್ ಮೆನನ್ ವಿರುದ್ಧದ ಭೂ ಹಗರಣವೊಂದರಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲು ನಗರಾಭಿವೃದ್ಧಿ ಇಲಾಖೆ ಬಿಎಂಆರ್‌ಡಿಎ ಆಯುಕ್ತರಿಗೆ ವರ್ಷದ ನಂತರ ಸೂಚಿಸಿದೆ.
ಬೆಂಗಳೂರು ಮಹಾನಗರ ಪ್ರದೇಶ ಪ್ರಾಧಿಕಾರ ಆಯುಕ್ತರು ವರ್ಷದ ಹಿಂದೆಯೇ ಪತ್ರ ಬರೆದಿದ್ದರೂ ಕ್ರಮಕ್ಕೆ ಮುಂದಾಗದಿದ್ದ ನಗರಾಭಿವೃದ್ಧಿ ಇಲಾಖೆ, ಇದೀಗ ವರ್ಷದ ನಂತರ ಕ್ರಮ ಕೈಗೊಳ್ಳುವ ಸಂಬಂಧ ಪತ್ರ ಬರೆದು ಕೈತೊಳೆದುಕೊಂಡಿದೆ.
ಅಂದಾಜು 200 ಕೋಟಿ ರುಪಾಯಿ ಬೆಲೆಬಾಳುವ 15,714.47 ಸಾವಿರ ಚದರ ಮೀಟರ್ ವಿಸ್ತೀರ್ಣದ ಸಾರ್ವಜನಿಕ ಉಪಯೋಗ ಪ್ರದೇಶವನ್ನು ಅಭಿವೃದ್ಧಿದಾರರಿಗೆ ನೀಡಿರುವ ಪ್ರಕರಣದಲ್ಲಿ ಆರೋಪಿತ ಅಭಿವೃದ್ಧಿದಾರ ರಾಮ್ ಮೋಹನ್ ಮೆನನ್ ಪರ ನಿಂತಿದ್ದ ನಗರಾಭಿವೃದ್ಧಿ ಇಲಾಖೆ ಇದೀಗ ಕಾನೂನು ಕ್ರಮ ಜರುಗಿಸಲು ಬಿಎಂಆರ್‌ಡಿಎಗೆ 2020ರ ಸೆ.18ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಇಂದಿರಾನಗರ ಕ್ಲಬ್ ಅಧ್ಯಕ್ಷರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್‌ಎಸ್ ರೆಡ್ಡಿ ಹಾಗೂ ನಾಗೇಂದ್ರ ಎಂಬುವರು ಕ್ಲಬ್ ಹಣ ದುರುಪಯೋಗಪಡಿಸಿಕೊಂಡು ಸದಸ್ಯರಿಗೆ ವಂಚಿಸಿದ್ದಾರೆ ಎಂದು ಕ್ಲಬ್ ಸದಸ್ಯ ರಾಮ್ ಮೋಹನ್ ಮೆನನ್ ಅವರು ದೂರು ನೀಡಿದ್ದರು. ಇದರ ಬೆನ್ನಲ್ಲೇ ಬೇರೊಂದು ಪ್ರಕರಣದಲ್ಲಿ ರಾಮ್ ಮೋಹನ್ ಮೆನನ್ ವಿರುದ್ಧ ಕಾನೂನು ಕ್ರಮ ಜರುಗಿಸಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ.
ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ಪ್ರತಿ ಚದುರ ಮೀಟರ್‌ಗೆ ಮಾರ್ಗಸೂಚಿ ಬೆಲೆ 5,000 ರು. ಇದೆ. 15,714.47 ಚದರ ಮೀಟರ್ ಜಾಗಕ್ಕೆ ಸರ್ಕಾರಿ ಮಾರ್ಗಸೂಚಿ ದರ 89 ಕೋಟಿ ರು. ಇದೆ. ಮಾರುಕಟ್ಟೆಯಲ್ಲಿ ಪ್ರತಿ ಚದರ ಮೀಟರ್‌ಗೆ 10,000 ರು ಎಂದಿಟ್ಟುಕೊಂಡರೂ 200 ಕೋಟಿ ರು. ಬೆಲೆ ಬಾಳಲಿದೆ ಎಂದು ಹೇಳಲಾಗಿದೆ.
ಈ ಕುರಿತು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ)ಆಯುಕ್ತರು 2019ರ ಜುಲೈ 2ರಂದೇ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಈವರೆವಿಗೂ ಆರೋಪಿತ ಮೆನನ್ ವಿರುದ್ಧ ಈವರೆಗೂ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ.
ಪ್ರಕರಣದ ಹಿನ್ನೆಲೆ
ಆನೇಕಲ್ ತಾಲೂಕು ಸರ್ಜಾಪುರ ಹೋಬಳಿಯ ಸೋಂಪುರ ಗ್ರಾಮದ ಸರ್ವೆ ನಂಬರ್ 37/1ಬಿ, 37/1ಸಿ, 39/3, 40,45,46,49/1, 49/2, 49/3,49/450/1ಎ, 50/1ಬಿ, 50/3 ನಲ್ಲಿ ಒಟ್ಟು 14 ಎಕರೆ ತ ಗುಂಟೆ ವಿಸ್ತೀರ್ಣದಲ್ಲಿ ಅನುಮೋದನೆ ದೊರೆತಿದ್ದ ವಸತಿ ವಿನ್ಯಾಸದಲ್ಲಿ ಸಾರ್ವಜನಿಕ ಉಪಯೋಗದ ಪ್ರದೇಶವನ್ನು ಉಳಿಸಿಕೊಳ್ಳಬೇಕಿದ್ದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಕರ್ತವ್ಯಲೋಪದಿಂದಾಗಿ ಅಭಿವೃದ್ಧಿದಾರ ಸೂರಜ್ ಕಾಂಡೋಮಿಮ್ಸ್ ಪ್ರೈ ಲಿ.ನ ಪಾಲಾಗಿತ್ತು. ಪ್ರಕರಣದ ಕುರಿತು ವಿವರವಾದ ವರದಿ ಸಲ್ಲಿಸುವ ಸಂಬಂಧ ಬಿಎಂಆರ್‌ಡಿಎ ನಗರಾಭಿವೃದ್ಧಿ ಇಲಾಖೆಗೂ ಪತ್ರ ಬರೆದಿತ್ತು. ಈ ಕುರಿತು ವರದಿ ಸಲ್ಲಿಕೆಯಾಗಿ ವರ್ಷ ಕಳೆದರೂ ಆಪಾದಿತರ ವಿರುದ್ಧ ಒಂದೇ ಒಂದು ಕ್ರಮ ಜರುಗಿಸಿರಲಿಲ್ಲ.
14 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿನ್ಯಾಸದ ಮಾಲೀಕರು 20 ವರ್ಷದ ಹಿಂದೆಯೇ ನಕ್ಷೆಗೆ ಅನುಮೋದನೆ ಪಡೆದಿದ್ದರಲ್ಲದೆ, 2 ಬಾರಿ ಮಾರ್ಪಡಿತ ನಕ್ಷೆಗೂ ಅನುಮೋದನೆ ಪಡೆದಿದ್ದರು. ನಾಗರಿಕ ನಿವೇಶನ, ರಸ್ತೆಗಳನ್ನು ಬಿಎಂಆರ್‌ಡಿಎಗೆ 2006ರಲ್ಲಿ ಹಸ್ತಾಂತರಿಸಿದ್ದರು. ಆದರೆ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವುದನ್ನು ಮರೆಮಾಚಿ ಗ್ರಾಮ ಪಂಚಾಯ್ತಿಯಿಂದ ನಿಯಮಬಾಹಿರವಾಗಿ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆದಿದ್ದರು ಎಂಬ ಸಂಗತಿ ಬಿಎಂಆರ್‌ಡಿಎ ಆಯುಕ್ತರು ಬರೆದಿದ್ದ ಪತ್ರದಿಂದ ತಿಳಿದು ಬಂದಿದೆ.
ಅಲ್ಲದೆ ಅನಧಿಕೃತ ಸ್ವತ್ತುಗಳಿಗೆ ಸ್ಥಳೀಯ ಸಂಸ್ಥೆ ಖಾತೆ ಮಾಡುವ ಮೂಲಕ ಅಕ್ರಮವನ್ನು ಮುಂದುವರೆಸಿತ್ತಲ್ಲದೆ, ಪ್ರಾಧಿಕಾರಕ್ಕೆ ಹಸ್ತಾಂತರಿಸಿದ್ದ ಪಾರ್ಕ್, ಸಿ ಎ ನಿವೇಶನಗಳನ್ನು ಖಾಸಗಿ ವ್ಯಕ್ತಿಗಳಿಗೆ ನೋಂದಣಿ ಮಾಡಿಕೊಡುವ ಮೂಲಕ ಉಪ ನೋಂದಣಾಧಿಕಾರಿಗಳೂ ಅಕ್ರಮದಲ್ಲಿ ಪಾಲು ಪಡೆದಿದ್ದಾರೆ ಎಂಬ ಆರೋಪಗಳಿವೆ.
ಹಾಗೆಯೇ ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಿ ವಿನ್ಯಾಸ ನಕ್ಷೆ ಅನುಮೋದನೆ ಪಡೆದಿದ್ದಾರೆ ಎಂಬ ಆರೋಪದ ಕುರಿತು ನಿಯಮಾನುಸಾರ ಕ್ರಮ ಜರುಗಿಸಿಲ್ಲ. ಅಲ್ಲದೆ ಮಾಲೀಕರು ಪ್ರಾಧಿಕಾರದಿಂದ ಅನುಮೋದನೆ ಆಗಿರುವ ವಿನ್ಯಾಸದಲ್ಲಿನ ಹಾಗೂ ಸಿ ಎ ಜಾಗಗಳನ್ನೂ ನಿಯಮಬಾಹಿರವಾಗಿ ಪರಭಾರೆ ಮಾಡಿದ್ದರು. ಅಲ್ಲದೆ ಅನಧಿಕೃತವಾಗಿ ಕಟ್ಟಡಗಳನ್ನೂ ನಿರ್ಮಿಸಿದ್ದಾರೆ ಎಂದು ಬಿಎಂಆರ್‌ಡಿಎ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು.
‘ಸರ್ಕಾರಕ್ಕೆ ಹಸ್ತಾಂತರಿಸಿದ್ದ ಪಾರ್ಕ್, ಸಿ ಎ ನಿವೇಶನಗಳಲ್ಲಿ ಅನಧಿಕೃತವಾಗಿ ಕಟ್ಟಡವನ್ನು ನಿರ್ಮಿಸಿದವರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕ ಹಿತವನ್ನು ಕಾಪಾಡುವುದು ಸೂಕ್ತವಾಗಿರುತ್ತದೆ. ಅಲ್ಲದೆ ಸುರಜ್ ಕಾಂಡೋಮಿನಮ್ಸ್ ಪ್ರೈ ಲಿ ವಿರುದ್ಧ ಸ್ಥಳೀಯ ಪ್ರಾಧಿಕಾರದಿಂದ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬೇಕು,’ ಎಂದು ಆಯುಕ್ತರು ಶಿಫಾರಸ್ಸು ಮಾಡಿದ್ದರು.
‘ಈ ಪ್ರಕರಣದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಬೇಕಿದ್ದ ಜಾಗವನ್ನು ಭೂಮಾಫಿಯಾ ಕಬಳಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆನೇಕಲ್ ಯೋಜನ ಪ್ರಾಧಿಕಾರ ಅಧಿಕಾರಿಗಳು ಭೂಗಳ್ಳರೊಡನೆ ಶಾಮೀಲಾಗಿದ್ದಾರೆ. ಕೋಟ್ಯಂತರ ರು.ಬೆಲೆ ಬಾಳುವ ಸರ್ಕಾರಿ ಸ್ವತ್ತನ್ನು ಖಾಸಗಿ ಅಭಿವೃದ್ಧಿದಾರರಿಗೆ ನೀಡಲಾಗಿದೆ. ಅಲ್ಲದೆ ಈ ಜಾಗ ರಾಜ್ಯಪಾಲರ ಹೆಸರಿಗೆ ನೋಂದಣಿಯಾಗಿ ಸರ್ಕಾರದ ವಶದಲ್ಲಿದ್ದ ಈ ಜಾಗವನ್ನು ಪುನಃ ಸರ್ಕಾರದ ಯಾವುದೇ ಆದೇಶಗಳಿಲ್ಲದಿದ್ದರೂ ಎರಡನೇ ಬಾರಿಗೆ ಲೇಔಟ್ ಮಾಲೀಕರಿಗೆ ನಿಯಮಬಾಹಿರವಾಗಿ ನೀಡಿರುವುದು ಸರಿಯಲ್ಲ. ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಲ್ಲದೆ ಸಾರ್ವಜನಿಕ ಉಪಯೋಗಕ್ಕೆ ಈ ಜಾಗವನ್ನು ಮರಳಿ ಪಡೆಯಬೇಕು,’ ಎನ್ನುತ್ತಾರೆ ದೂರುದಾರ ಮಾಧವಪ್ರಸಾದ್ ರೆಡ್ಡಿ.