ಐಎಂಎ; ಹೇಮಂತ್‌ ನಿಂಬಾಳ್ಕರ್‌ ವಿರುದ್ಧ ಶಿಸ್ತುಕ್ರಮ ಜರುಗಿಸಲು ಮೀನಮೇಷ

ಬೆಂಗಳೂರು; ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ಎಂ.ನಿಂಬಾಳ್ಕರ್ ಮತ್ತು ಅಜಯ್‌ ಹಿಲೊರಿ ಸೇರಿದಂತೆ ಒಟ್ಟು ಐವರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಿಬಿಐ ಪತ್ರ ಬರೆದು 9 ತಿಂಗಳಾದರೂ ರಾಜ್ಯ ಸರ್ಕಾರ ಈವರೆವಿಗೂ ಕ್ರಮ ವಹಿಸದಿರುವುದು ಬಹಿರಂಗವಾಗಿದೆ.

ಹೇಮಂತ್‌ ನಿಂಬಾಳ್ಕರ್‌ ಸೇರಿದಂತೆ ಹಲವು ಅಧಿಕಾರಿಗಳನ್ನು ಪ್ರಾಸಿಕ್ಯೂಷನ್‌ಗೆ ಗುರಿಪಡಿಸಲು ಸಿಬಿಐಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ಶಿಸ್ತು ಕ್ರಮ ಜರುಗಿಸುವ ಸಂಬಂಧ ಕ್ರಮ ವಹಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್‌(ಈಗ ದಿವಂಗತರು) ಅವರನ್ನು ಅಮಾನತುಗೊಳಿಸಿದ್ದ ಸರ್ಕಾರ, ಐಪಿಎಸ್‌ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮೀನಮೇಷ ಎಣಿಸುತ್ತಿರುವುದು ಸಂಶಯಗಳಿಗೆ ಕಾರಣವಾಗಿದೆ.

ಸಿಬಿಐ ಎಸ್ಪಿ ಮತ್ತು ಮುಖ್ಯ ತನಿಖಾಧಿಕಾರಿ ಪಿ ಸೀಫಾಸ್‌ ಕಲ್ಯಾಣ್‌ ಅವರು 2019ರ ಡಿಸೆಂಬರ್‌ 18ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಪತ್ರದ ಕ್ರಮ ಸಂಖ್ಯೆ 15.2ರಲ್ಲಿ ಎಲ್‌ ಸಿ ನಾಗರಾಜ್‌(ಎ-18), ಇ ಬಿ ಶ್ರೀಧರ್‌ (ಎ-31), ಹೇಮಂತ್‌ ನಿಂಬಾಳ್ಕರ್‌(ಎ-32), ಅಜಯ್‌ ಹಿಲೋರಿ (ಎ-33), ಎಂ ರಮೇಶ್‌ (ಎ-34) ಗೌರಿಶಂಕರ್‌(ಎ-35) ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಇದೇ ಪತ್ರದಲ್ಲಿ ವಿಚಾರಣೆಗೆ ಅನುಮತಿಯನ್ನೂ ಸಿಬಿಐ ಕ್ರಮ ಸಂಖ್ಯೆ 15.3ರಲ್ಲಿ ಕೋರಿತ್ತು. ಆದರೆ ರಾಜ್ಯ ಸರ್ಕಾರ ಕ್ರಮ ಸಂಖ್ಯೆ 15.3ರಲ್ಲಿನ ಸಿಬಿಐ ಕೋರಿಕೆಯನ್ನು ಪುರಸ್ಕರಿಸಿ ಆರೋಪಿತ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡಿ ಆದೇಶಿಸಿತ್ತು.

‘ಇದೊಂದು ಬಹುದೊಡ್ಡ ಹಗರಣ. ಇದರಲ್ಲಿ ಸಾವಿರಾರು ಜನರಿಗೆ ಸಾವಿರಾರು ಕೋಟಿ ರು.ಮೊತ್ತದಲ್ಲಿ ವಂಚನೆಯಾಗಿದೆ ಎಂದು ಸಿಬಿಐ ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ. ಈ ಅವ್ಯವಹಾರದಲ್ಲಿ ಹೇಮಂತ್‌ ನಿಂಬಾಳ್ಕರ್‌, ಅಜಯ್‌ ಹಿಲ್ಹೋರಿ ಹಾಗೂ ಮತ್ತಿತರ ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಈ ತನಿಖೆ ಆಧರಿಸಿ ಸಿಬಿಐ ಕಳೆದ ವರ್ಷ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ಹಾಗೂ ವಿಚಾರಣೆಗೆ ಅನುಮತಿ ನೀಡಿ ಕೇಳಿತ್ತು. ಆದರೆ ಸರ್ಕಾರವು ಜಾಣತನದಿಂದ ವಿಚಾರಣೆಗೆ ಅನುಮತಿ ನೀಡಿತೇ ಹೊರತು ಅವರನ್ನು ಅಮಾನತುಗೊಳಿಸುವುದಾಗಲೀ, ರಜೆ ಮೇಲೆ ಕಳಿಸುವುದಾಗಲಿ ಸೇರಿದಂತೆ ಯಾವ ಶಿಸ್ತುಕ್ರಮವನ್ನು ಜರುಗಿಸಲ್ಲ. ಆದ್ದರಿಂದ ಈ ಆರೋಪಿಗಳನ್ನು ತನಿಖೆಗೆ ಒಳಪಡಿಸಲು ಸಿಬಿಐಗೆ ತಾಂತ್ರಿಕ ಅಡಚಣೆಗಳಿವೆ. ಈ ಐಪಿಎಸ್‌ ಅಧಿಕಾರಿಗಳನ್ನು ಸರ್ಕಾರ ತಕ್ಷಣವೇ ಅಮಾನತುಗೊಳಿಸಬೇಕು,’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅಶೋಕಕುಮಾರ್‌ ಅಡಿಗ.

ಹಗರಣದಲ್ಲಿ ಈ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಸಾಕ್ಷ್ಯಗಳು ದೊರೆತಿವೆ. ಹೀಗಾಗಿ, ಈ ಅಧಿಕಾರಿಗಳ ವಿರುದ್ಧ, ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ –2004’ (ಕೆಪಿಐಡಿಎಫ್‌ಇ) ಅಡಿ ಪ್ರಾಸಿಕ್ಯೂಷನ್‌ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಿಬಿಐ ಪತ್ರ ಬರೆದಿತ್ತು. ಅಲ್ಲದೆ ಐಎಂಎ ಹಗರಣಕ್ಕೆ ಸಂಬಂಧಿಸಿ ಸಿಬಿಐ 2019ರ ಆಗಸ್ಟ್‌ 30ರಂದು ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಹಾಗೆಯೇ ಇದೇ ಫೆಬ್ರುವರಿಯಲ್ಲಿ ನಿಂಬಾಳ್ಕರ್ ಹಾಗೂ ಹಿಲೊರಿ ವಿರುದ್ಧವೂ ಎಫ್ಐಆರ್ ದಾಖಲಿಸಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ, ಹೇಮಂತ್ ನಿಂಬಾಳ್ಕರ್ ಮತ್ತು ಅಜಯ ಹಿಲೊರಿ ಅವರು ಐಎಂಎ ಪರವಾಗಿ ವರದಿ ಸಿದ್ಧಪಡಿಸಿ ಕ್ಲೀನ್ ಚಿಟ್ ನೀಡಿದ್ದನ್ನು ಉಲ್ಲೇಖಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

ಐಎಂಎ ಸಮೂಹದ ಕಂಪನಿಗಳ ವಿರುದ್ಧ ದೂರು ಕೇಳಿಬಂದಾಗ ಹೇಮಂತ್ ನಿಂಬಾಳ್ಕರ್ ತನಿಖೆ ನಡೆಸಿದ್ದರು. ಐಎಂಎ ಪರವಾಗಿ ವರದಿಗಳನ್ನು ಸಿದ್ಧಪಡಿಸಿದ್ದರು. ಹಾಗಾಗಿ, ಐಎಂಎ ವಿರುದ್ಧ ಕ್ರಮ ಜರುಗಿಸಲು ಯಾರೂ ಮುಂದಾಗಲಿಲ್ಲ. ಐಎಂಎ ವಂಚನೆ ಮುಂದುವರಿಯಲು ಇದು ಕಾರಣವಾಯಿತು ಎಂದೂ ಹೇಳಿತ್ತು.

ಅಕ್ರಮ ಎಸಗಲು ಐಎಂಎ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್‌ ಅವರಿಂದ ಪೊಲೀಸ್‌ ಅಧಿಕಾರಿಗಳು ಹಣ ಪಡೆದಿರುವ ಬಗ್ಗೆಯೂ ಸಿಬಿಐ ಪತ್ರದಲ್ಲಿ ಉಲ್ಲೇಖಿಸಿತ್ತು. ಐಎಂಎ ವಂಚನೆ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸಿದ್ದ ಕೆಳಹಂತದ ಅಧಿಕಾರಿಗಳಾಗಿದ್ದ ರಮೇಶ ಅವರು ನೀಡಿದ್ದ ವರದಿಯನ್ನು ಹಿಲೊರಿ ಮುಚ್ಚಿಹಾಕಲು ಯತ್ನಿಸಿದ್ದರು. ಇದಕ್ಕಾಗಿ, ಐಎಂಎಯಿಂದ ಅನೇಕ ಬಾರಿ ಹಣ, ಪೀಠೋಪಕರಣಗಳ ಬಿಲ್ ಪಾವತಿಯಂತಹ ಲಾಭ ಮಾಡಿಕೊಂಡಿದ್ದರು ಎಂದು ಸಿಬಿಐ ಉಲ್ಲೇಖಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts