ಪರೇಶ್‌ ಮೇಸ್ತಾ ಹತ್ಯೆ ಪ್ರಕರಣ; ಸಿಬಿಐ ವರದಿ ತರಿಸಿಕೊಳ್ಳಲು ಬಿಜೆಪಿ ಸರ್ಕಾರಕ್ಕೆ ನಿರಾಸಕ್ತಿ

ಬೆಂಗಳೂರು; ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಹೊನ್ನಾವರದ ಪರೇಶ್‌ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಪ್ರಗತಿ ಕೇಳಿ ಬಿಜೆಪಿ ಸರ್ಕಾರ ಈವರೆವಿಗೂ ಒಂದೇ ಒಂದು ಪತ್ರವನ್ನು ಬರೆದಿಲ್ಲ. ಅಲ್ಲದೆ ಮರಣೋತ್ತರ ವರದಿಯನ್ನೂ ಬಿಡುಗಡೆಗೊಳಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದ್ದ ಪ್ರತಿಭಟನೆ ವೇಳೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಪೊಲೀಸ್‌ ಇಲಾಖೆಯ ಅಸಮ್ಮತಿ ನಡುವೆಯೂ ವಿಚಾರಣೆಯಿಂದಲೇ ಹಿಂದಕ್ಕೆ ಪಡೆದಿರುವ ಬಿಜೆಪಿ ಸರ್ಕಾರ, ಸಿಬಿಐನಿಂದ ವರದಿ ತರಿಸಿಕೊಳ್ಳುವಲ್ಲಿ ಈವರೆವಿಗೂ ಮುಂದಾಗಿಲ್ಲ. ಅಲ್ಲದೆ ಸಿಬಿಐನಿಂದ ವರದಿ ಬರುವ ಮುನ್ನವೇ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಕೈಬಿಟ್ಟಿರುವುದು ಕೂಡ ಸಂಶಯಗಳಿಗೆ ಕಾರಣವಾಗಿದೆ.

ಪರೇಶ್‌ ಮೇಸ್ತಾ ಎಂಬ ಯುವಕನ ಹತ್ಯೆ ಪ್ರಕರಣದಲ್ಲಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವನ್ನು ಕೈಬಿಡಲು ಶಾಸಕಿ ರೂಪಾಲಿನಾಯ್ಕ ಅವರು 2019ರ ಜುಲೈ 29ರಂದು ಪತ್ರ ಬರೆದಿದ್ದರು. ಆದರೆ ಪ್ರಕರಣಗಳ ವ್ಯತ್ಯಾಸವಿದೆ ಎಂದು ಡಿಜಿಐಜಿಪಿ ಅವರು ಒಳಾಡಳಿತ ಇಲಾಖೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೂ ಬಿಜೆಪಿ ಸರ್ಕಾರ ಪ್ರಕರಣವನ್ನು ವಿಚಾರಣೆಯಿಂದಲೇ ಹಿಂದಕ್ಕೆ ಪಡೆದಿತ್ತು.

ಪರೇಶ್‌ ಮೇಸ್ತ ಹತ್ಯೆ ಪ್ರಕರಣವು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ ಕರಾವಳಿ ಭಾಗದಲ್ಲಿ ತೀವ್ರ ಪ್ರತಿಭಟನೆ, ಗಲಾಟೆಗಳಿಗೆ ಕಾರಣವಾಗಿತ್ತು. ಈ ಪ್ರಕರಣವನ್ನು ಅತ್ಯಂತ ಪ್ರತಿಷ್ಠೆಯನ್ನಾಗಿಸಿಕೊಂಡಿದ್ದ ಬಿಜೆಪಿಯೇ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಸಿಬಿಐನಿಂದ ವರದಿ ತರಿಸಿಕೊಳ್ಳಲು ಆಸಕ್ತಿ ವಹಿಸುತ್ತಿಲ್ಲ. ಮೇಸ್ತ ಹತ್ಯೆಯಾದ ನಂತರ ಬಿಜೆಪಿಯ ಅಂದಿನ ರಾಷ್ಟ್ರಾಧ್ಯಕ್ಷ ಹಾಗೂ ಹಾಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದರು.

ಇದೇ ಪ್ರಕರಣವನ್ನೇ 2018ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆ ಪ್ರಣಾಳಿಕೆ ಮಾಡಿಕೊಂಡಿದ್ದ ಬಿಜೆಪಿ ಶಾಸಕರು, ಸಂಸದರು 3 ವರ್ಷಗಳಾದರೂ ಇದರ ಬಗ್ಗೆ ಸೊಲ್ಲೆತ್ತಿಲ್ಲ. ಮೇಸ್ತ ಹತ್ಯೆ ಪ್ರಕರಣವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದ ಬಿಜೆಪಿಯು, ಅಧಿಕಾರಕ್ಕೆ ಬಂದ ನಂತರ ಮರೆತೇ ಬಿಟ್ಟಿದೆ.

ಹೊನ್ನಾವರ ನಿವಾಸಿ ಆಜಾದ್‌ ಅಣ್ಣಿಗೇರಿ, ಆಸಿಫ್‌ ರಫೀಕ್‌, ಮೊಹಮ್ಮದ್‌ ಫೈಸಲ್‌, ಇಮ್ತಿಯಾಜ್‌ ಘನಿ, ಸಲೀಂ ಸೇರಿದಂತೆ ಇನ್ನಿತರರ ವಿರುದ್ಧ ಗಲಭೆ, ಶಸ್ತ್ರಾಸ್ತ್ರ, ಅಕ್ರಮ ಗುಂಪು ಸೇರುವಿಕೆ ಸೇರಿದಂತೆ ಇನ್ನಿತರ ಐಪಿಸಿ ಕಾಯಿದೆಯ ಕಲಂಗಳ ಅಡಿ ಏ.23ರಂದು ಚೆನ್ನೈ ಸಿಬಿಐ ವಿಭಾಗದಲ್ಲಿ ಎಫ್‌ಐಆರ್‌ ದಾಖಲಾಗಿದೆ. 2017ರ ಡಿ. 6 ರಂದು ಪರೇಶ್‌ ಮೇಸ್ತನನ್ನು ಕೊಲೆ ಮಾಡಿ ಶವವನ್ನು ಕೆರೆಯಲ್ಲಿ ಬಿಸಾಡಲಾಗಿತ್ತು ಎಂಬ ಆರೋಪವಿದೆ. ಈ ಪ್ರಕರಣವನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರ ಸಿಬಿಐಗೆ 2017ರಲ್ಲಿ ವಹಿಸಿತ್ತು.

ಎಫ್‌ಐಆರ್‌ ದಾಖಲಾದ ನಂತರದ ಪ್ರಗತಿ ಆಗಿದೆಯೇ?

ಡಿ. 6ರಂದು ರಾತ್ರಿ ಆರೋಪಿಗಳು ಹೊನ್ನಾವರ ಬಸ್‌ ನಿಲ್ದಾಣದ ಬಳಿ ಕಬ್ಬಿಣದ ರಾಡ್‌, ಕತ್ತಿ ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದೇವಸ್ಥಾನ, ಅಂಗಡಿಗಳು, ಟೆಂಪೊ ವಾಹನಗಳು ಸೇರಿದಂತೆ ಸಾರ್ವಜನಿಕ ಆಸ್ತಿ-ಪಾಸ್ತಿ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದರು. ಅಲ್ಲದೇ, ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ 18 ವರ್ಷದ ಯುವಕ ಪರೇಶ್‌ ಮೇಸ್ತನನ್ನು ಕ್ರೂರವಾಗಿ ಕೊಂದಿದ್ದರು. ಬಳಿಕ ಶವವನ್ನು ಶೆಟ್ಟಿಕೆರೆಯಲ್ಲಿ ಬಿಸಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು. ಕೊಲೆಯಾದ ಎರಡು ದಿನಗಳ ಬಳಿಕ ಅಂದರೆ ಡಿ.8ರಂದು ಶವ ಪತ್ತೆಯಾಗಿತ್ತು ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಆ ನಂತರ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಸಿಬಿಐ ಪೊಲೀಸರು, ಪ್ರಕರಣದ ಕುರಿತು ಹೊಸದಾಗಿ ತನಿಖೆಗೆ ಕೈಗೆತ್ತಿಕೊಂಡಿತ್ತು. ತನಿಖೆಯ ಹೊಣೆ ಹೊತ್ತಿದ್ದ ಸಿಬಿಐನ ಇನ್ಸ್‌ಪೆಕ್ಟರ್‌ ಎಸ್‌. ಸುಬ್ರಮಣಿಯನ್‌ ತನಿಖೆಗೆ ಚಾಲನೆ ನೀಡಿದ್ದರು. ಆದರೆ ಈ ಸಂಬಂಧ ತನಿಖಾ ಪ್ರಗತಿ ಏನಾಗಿದೆ ಎಂಬ ಮಾಹಿತಿ ಖುದ್ದು ಒಳಾಡಳಿತ ಇಲಾಖೆಗೇ ಇಲ್ಲ ಎಂದು ತಿಳಿದು ಬಂದಿದೆ.

ಹತ್ಯೆ ಪ್ರಕರಣವನ್ನು ವಿರೋಧಿಸಿದ್ದ ಬಿಜೆಪಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಕರಾವಳಿ ಭಾಗದ ವಿವಿಧ ಪಟ್ಟಣಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಇದು ಹೊನ್ನಾವರ, ಕುಮಟಾ, ಕಾರವಾರ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದು ಕೋಮು ಗಲಭೆಗೆ ತಿರುಗಿಕೊಂಡಿತ್ತು. ಹಾಗೆಯೇ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಉತ್ತರ ಕನ್ನಡ ಜಿಲ್ಲೆ ಬಂದ್‌ ವೇಳೆ ಕಾರವಾರದಲ್ಲಿನ ಪಶ್ಚಿಮ ವಲಯ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts