ವಿಜಯೇಂದ್ರ ವಿರುದ್ಧ ಎಫ್‌ಐಆರ್‌ ಇಲ್ಲ, ತನಿಖೆಯೂ ಇಲ್ಲ; ಏಕಾಏಕೀ ದೂರೇ ಮುಕ್ತಾಯ

ಬೆಂಗಳೂರು; ಸುಲಿಗೆ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳನ್ನು ಉಲ್ಲೇಖಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ದಾಖಲಿಸಿದ್ದ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸದೇ, ತನಿಖೆಯನ್ನೂ ನಡೆಸದ ಶೇಷಾದ್ರಿಪುರಂ ಠಾಣೆಯ ಇನ್ಸ್‌ಪೆಕ್ಟರ್‌ ಎಂ ಎಲ್‌ ಕೃಷ್ಣಮೂರ್ತಿ ಅವರೀಗ ದೂರರ್ಜಿಯ ವಿಚಾರಣೆಯನ್ನೇ ಮುಕ್ತಾಯಗೊಳಿಸಿದ್ದಾರೆ.

ವಿಜಯೇಂದ್ರ ಮತ್ತಿತರರ ವಿರುದ್ಧ ದಾಖಲಾತಿಗಳ ಸಮೇತ ದೂರು ಸಲ್ಲಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್‌ಗೆ 2020ರ ಅಕ್ಟೋಬರ್‌ 5ರಂದು ಹಿಂಬರಹ ನೀಡಿರುವ ಶೇಷಾದ್ರಿಪುಂರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅವರು ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಚಾರಣೆ ನಡೆಸದೆಯೇ ಏಕಪಕ್ಷೀಯವಾಗಿ ದೂರರ್ಜಿಯನ್ನು ಮುಕ್ತಾಯಗೊಳಿಸಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ವಿಶೇಷವೆಂದರೆ ಪರಿಷತ್‌ಗೆ ನೀಡಿರುವ ಹಿಂಬರಹದಲ್ಲಿ ‘ದಿ ಫೈಲ್‌’ ಪ್ರಕಟಿಸಿದ್ದ ವರದಿಯನ್ನೂ ಉಲ್ಲೇಖಿಸಲಾಗಿದೆ.

ಹಿಂಬರಹದಲ್ಲೇನಿದೆ?

ಚಂದ್ರಕಾಂತ್‌ ರಾಮಲಿಂಗಂ ಅವರನ್ನು ವಿಚಾರಣೆ ಮಾಡಿ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದು ಜನಾಧಿಕಾರ ಸಂಘರ್ಷ ಪರಿಷತ್‌ ಬಗ್ಗೆ ಚಂದ್ರಕಾಂತ್‌ ರಾಮಲಿಂಗಂರವರಿಗೆ ಪರಿಚಯವಿಲ್ಲ. ಆದರ್ಶ ಐಯ್ಯರ್‌, ಪ್ರಕಾಶ್‌ಬಾಬು, ವಿಶ್ವನಾಥ್‌ ಅವರು ಈ ವಿಚಾರವಾಗಿ ನನ್ನನ್ನು ಸಂಪರ್ಕಿಸಿಲ್ಲ. ಜನಾಧಿಕಾರ ಸಂಘರ್ಷ ಪರಿಷತ್‌ರವರು ಕೊಟ್ಟಿರುವ ಅರ್ಜಿ, ಪವರ್‌ ಟಿ ವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಆಧಾರದ ಮೇಲೆ ನೀಡಿರುತ್ತಾರೆ. ಆದರೆ ಇವರು ದೂರಿನಲ್ಲಿ ತಿಳಿಸಿರುವ ಅಂಶಗಳು ಸತ್ಯಕ್ಕೆ ದೂರವಾಗಿರುತ್ತದೆ ಎಂದು ನುಡಿದಿರುತ್ತಾರೆ. ಹಾಗೂ ನನಗೆ ಆದ ತೊಂದರೆ, ಸುಲಿಗೆಯ ಬಗ್ಗೆ ಕೆ ಪಿ ಅಗ್ರಹಾರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಪ್ರಕರಣ ತನಿಖೆಯಲ್ಲಿರುತ್ತದೆ. ನನಗೆ ಗೊತ್ತಿಲ್ಲದ ಜನಾಧಿಕಾರ ಸಂಘರ್ಷ ಪರಿಷತ್‌/ರಾಕೇಶ್‌ ಶೆಟ್ಟಿ ಅವರ ಬೆಂಬಲಿಗರಂತೆ ನನ್ನ ಪರವಾಗಿ ನೀಡಿರುವ ದೂರು ಅರ್ಜಿಯನ್ನು ಮುಕ್ತಾಯ ಮಾಡಬೇಕೆಂದು ಕೋರಿ ಹೇಳಿಕೆಯನ್ನು ನೀಡಿರುತ್ತಾರೆ. ಅಲ್ಲದೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಅಕೌಂಟ್‌ನ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಿದ್ದು ತಾವು ಆರೋಪಿಸಿರುವ ವಹಿವಾಟು ಇಲ್ಲದೇ ಇದ್ದು ಹಾಗೂ ನೊಂದ ಚಂದ್ರಕಾಂತ್‌ ರಾಮಲಿಂಗಂ ಅವರು ನೀಡಿರುವ ಹೇಳಿಕೆಯ ಆಧಾರದ ಮೇರೆಗೆ ನೀವು ನೀಡಿರುವ ಅರ್ಜಿಯ ವಿಚಾರಣೆಯನ್ನು ಮುಕ್ತಾಯ ಮಾಡಿರುತ್ತೇವೆ,’ ಎಂದು ಹಿಂಬರಹದಲ್ಲಿ ವಿವರಿಸಲಾಗಿದೆ.

ಈ ಕುರಿತು ‘ದಿ ಫೈಲ್‌’ ಜತೆ ಮಾತನಾಡಿದ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌ ಅವರು ದೂರಿನ ಮೇಲೆ ಎಫ್‌ಐಆರ್‌ನ್ನು ದಾಖಲಿಸದೆಯೇ ತನಿಖೆ ಮಾಡಿದ್ದೇವೆ ಎಂದು ಹೇಳಿರುವ ಶೇಷಾದ್ರಿಪುರಂ ಇನ್ಸ್‌ಪೆಕ್ಟರ್‌ ಅವರ ಹಿಂಬರಹವೇ ಕಾನೂನುಬಾಹಿರ. ಹಲವಾರು ಸಾಂವಿಧಾನಿಕ ಪೀಠಗಳ ತೀರ್ಪನ್ನು ಹಾಗೂ ಉಚ್ಛ ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘಿಸಿ ಹೀಗೆ ದೂರನ್ನು ಮುಕ್ತಾಯಗೊಳಿಸಿರುವುದು ಕೂಡ ಒಂದು ಅಪರಾಧವೇ ಸರಿ. ಕಾನೂನನ್ನು ಕಾಪಾಡುವ ಕರ್ತವ್ಯವಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ ಈ ತರಹದ ಕಾನೂನು ಉಲ್ಲಂಘನೆ ಮಾಡುವುದು ಎಷ್ಟು ಸರಿ,’ ಎಂದು ಪ್ರಶ್ನಿಸಿದರು.

‘ಯಾವುದೇ ದೂರು ಒಂದು ಸಂಜ್ಞೆಯ ಅಪರಾಧವಾಗಿದೆ ಎಂದು ಒಬ್ಬ ದೂರುದಾರ ತನ್ನ ದೂರನ್ನು ಹಿಂಪಡೆದುಕೊಳ್ಳದೆಯೇ ಭ್ರಷ್ಟಾಚಾರದ ಆರೋಪ, ಲಂಚದ ಆರೋಪ ಸೇರಿದಂತೆ ಹಲವು ಗುರುತರ ಆರೋಪಗಳು ಇರುವಾಗ ತನಿಖೆ ಮಾಡಿಯೇ ಪ್ರಕರಣವನ್ನು ಮುಕ್ತಾಯಗೊಳಿಸಬೇಕು. ಎಫ್‌ಐಆರ್‌ ದಾಖಲಿಸದಿರುವುದು ವಿಚಿತ್ರವಾದ ಸಂಗತಿ. ಇದು ದೇಶದ ಕಾನೂನು ಪ್ರಕ್ರಿಯೆಗಳಿಗೆ ವಿರುದ್ಧವಾಗಿರುವಂಥದ್ದು. ಒಬ್ಬ ಆರೋಪಿತ ತುಂಬಾ ಪ್ರಮುಖವಾದ ವ್ಯಕ್ತಿಯಾಗಿದ್ದು, ಹಾಗಾಗಿ ಎಫ್‌ಐಆರ್‌ ಮಾಡಿಲ್ಲವೋ. ಅದೇ ಕಾರಣವಾಗಿದ್ದಲ್ಲಿ ಪೊಲೀಸರು ಕಾನೂನುರೀತಿ ಪ್ರಕ್ರಿಯೆಗಳನ್ನು ನಡೆದಿಲ್ಲ ಎಂಬುದು ಕಂಡು ಬರುತ್ತದೆ. ಇದರ ಬಗ್ಗೆ ತನಿಖೆಯಾಗಬೇಕಾದ ಅವಶ್ಯಕತೆ ಇದೆ,’ ಎಂದು ವಾದವನ್ನು ಮುಂದೊಡ್ಡುತ್ತಾರೆ ರಾಜ್ಯ ಸರ್ಕಾರದ ಮಾಜಿ ರಾಜ್ಯ ಅಭಿಯೋಜಕ ಬಿ ಟಿ ವೆಂಕಟೇಶ್‌.

ಎಫ್‌ಐಆರ್‌ ದಾಖಲಿಸದೆಯೇ ಪ್ರಕರಣವನ್ನು ಹೇಗೆ ಮುಕ್ತಾಯಗೊಳಿಸಲಾಯಿತು, ಒಂದು ಸಂಜ್ಞೆಯ ಅಪರಾಧ ನಡೆದಿರುವ ಪ್ರಕರಣದಲ್ಲಿ ಎಫ್‌ಐಆರ್‌ ಮಾಡಲೇಬೇಕಿತ್ತು. ಇದು ಕೂಡ ಕಾನೂನು ಪ್ರಕ್ರಿಯೆಯ ಒಂದು ಭಾಗ. ಇದು ಉಳ್ಳವರಿಗೊಂದು ಕಾನೂನು, ಇಲ್ಲವರಿಗೊಂದು ಕಾನೂನು ಎಂಬುದನ್ನು ನಿರೂಪಿಸಿದ್ದಾರೆ ಎಂದೂ ವೆಂಕಟೇಶ್‌ ಹೇಳುತ್ತಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ 120 ಗಂಟೆಗಳಾದರೂ ಶೇಷಾದ್ರಿಪುರಂ ಠಾಣೆಯ ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ಅವರು ಎಫ್‌ಐಆರ್‌ ದಾಖಲಿಸಿರಲಿಲ್ಲ. ಹೀಗಾಗಿ ಜನಾಧಿಕಾರ ಸಂಘರ್ಷ ಪರಿಷತ್‌ ಐಪಿಸಿ ಕಲಂ 217ರ ಪ್ರಕಾರ ಅವರ ವಿರುದ್ಧವೇ ದೂರು ದಾಖಲಿಸಿದ್ದನ್ನು ಸ್ಮರಿಸಬಹುದು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ಪ್ರಕರಣದ ಹಿನ್ನೆಲೆ

ಬಹುಮಹಡಿ ವಸತಿ ಸಮುಚ್ಛಯ ಕಂಪನಿ ನಿರ್ದೇಶಕ ಚಂದ್ರಕಾಂತ್‌ ರಾಮಲಿಂಗಂ ಎಂಬುವರಿಂದ 7.40 ಕೋಟಿಯನ್ನು ಸುಲಿಗೆ ಮಾಡಿದ್ದಾರೆ ಎಂದು ಐಪಿಸಿ ಸೆಕ್ಷನ್‌ 384, 120(ಬಿ) ಮತ್ತು 34ನ್ನು ಉಲ್ಲೇಖಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ದೂರು ದಾಖಲಿಸಿತ್ತು.

ಶಶಿಧರ್‌ ಮರಡಿ ಅವರು ಹೊಂದಿರುವ ಬ್ಯಾಂಕ್‌ ಖಾತೆಗೆ 7.4 ಕೋಟಿ ರು.ಗಳನ್ನು ನಿರ್ಮಾಣ ಕಂಪನಿ ಆರ್‌ಟಿಜಿಎಸ್‌ ಮೂಲಕ ಸಂದಾಯ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು. ಅದೇ ರೀತಿ ವಾಟ್ಸಾಪ್‌ ಸಂಭಾಷಣೆಯಲ್ಲಿ ನಮೂದಿಸಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶೇಷಾದ್ರಿಪುರಂ ಶಾಖೆಯಲ್ಲಿ ಶಶಿಧರ್‌ ಮರಡಿ ಹೊಂದಿರುವ ಉಳಿತಾಯ ಖಾತೆಗೆ ಜನಾಧಿಕಾರ ಸಂಘರ್ಷ ಪರಿಷತ್‌ 100 ರು. ನಗದನ್ನು ಪಾವತಿಸಿ ಖಾತೆಯನ್ನು ಖಚಿತಪಡಿಸಿಕೊಂಡಿರುವುದನ್ನೂ ದೂರಿನಲ್ಲಿ ಉಲ್ಲೇಖಿಸಿತ್ತು.

ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಬಳಸಿಕೊಂಡು ನಿರ್ಮಾಣ ಕಂಪನಿಯಿಂದ ಲಂಚ ಪಡೆದಿರುವುದು ತಿಳಿದಿದ್ದರೂ ಸಹ ಆ ಅಧಿಕಾರಿ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸದಿರುವುದು ಬಿ ವೈ ವಿಜಯೇಂದ್ರ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ನಿರ್ಮಾಣ ಕಂಪನಿಗೆ ಬೆದರಿಕೆ ಹಾಕಿ ಹಣ ನೀಡಲು ಒತ್ತಡ ಹೇರಿ ನಿರ್ಮಾಣ ಕಾರ್ಯಕ್ಕೆ ತಡೆ ಹಾಕಿರುವುದು ಸುಲಿಗೆ ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ದೂರಿನಲ್ಲಿ ಪರಿಷತ್‌ ವಿವರಿಸಿತ್ತು.

ವಾಟ್ಸಾಪ್‌ ಚಾಟ್‌ಗಳಲ್ಲಿ ಶಶಿಧರ್‌ ಮರಡಿ ಎಂಬುವರು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನಂತರ ಹಣ ಪಡೆದಿರುವುದು, ನಗದು ಹಾಗೂ ಆರ್‌ಟಿಜಿಎಸ್‌ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮತ್ತು ತಮ್ಮ ಸಹಚರರ ಮೂಲಕ ಸಮನ್ವಯ ಮಾಡಲು ತಿಳಿಸಿರುವುದು ಹಾಗೂ ಹಣ ಪಡೆದಿರುವ ಬಗ್ಗೆಯೂ ಖಚಿತಪಡಿಸಿರುವುದು ಈ ಪ್ರಕರಣಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತದೆ ಎಂದು ದೂರಿನಲ್ಲಿ ಹೇಳಲಾಗಿದೆ.

the fil favicon

SUPPORT THE FILE

Latest News

Related Posts