ಬೆಂಗಳೂರು; ಅಕ್ರಮವಾಗಿ ಖಾತೆ ಬದಲಾವಣೆ, ನ್ಯಾಯಾಲಯದ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸದಿರುವುದು, ಕರ್ನಾಟಕ ಭೂ ಸುಧಾರಣೆ ಕಾಯ್ದೆ ಉಲ್ಲಂಘನೆ, ವಂಶವೃಕ್ಷವನ್ನು ಬದಲಾಯಿಸಿರುವುದು, ಆರೋಪಿಗಳ ಖುಲಾಸೆಗೆ ಸಹಕಾರ, ಸುಳ್ಳು ಜಾತಿ ಪ್ರಮಾಣ ಪತ್ರ, ಪಹಣಿಯಲ್ಲಿ ಸರ್ಕಾರಿ ಜಮೀನಿನ ಕಡಿಮೆ ಅಳತೆ ತೋರಿಸುವುದು, ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ಭೂ ಪರಿವರ್ತನೆ, ಆರ್‌ಟಿಸಿಯಲ್ಲಿ ಉದ್ದೇಶಪೂರ್ವಕವಾಗಿ ತಪ್ಪಾಗಿ ನಮೂದಿಸುವುದು, ಅರಣ್ಯ ಪ್ರದೇಶವನ್ನು ಭೂಮಾಫಿಯಾ ಪಾಲಾಗಿಸಿರುವುದು ಸೇರಿದಂತೆ ಇನ್ನಿತರೆ ಗಂಭೀರ ಮತ್ತು ಗುರುತರ ಆರೋಪಗಳಿಗೆ 104 ಕೆ ಎ ಎಸ್ ಅಧಿಕಾರಿಗಳು ಗುರಿಯಾಗಿದ್ದಾರೆ.
ಕಂದಾಯ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ತಳವೂರಿರುವ ಹಿರಿಯ ಮತ್ತು ಕಿರಿಯ ಶ್ರೇಣಿ, ಆಯ್ಕೆ ಶ್ರೇಣಿ ವೃಂದದ ಕೆಎಎಸ್ ಅಧಿಕಾರಿಗಳ ವಿರುದ್ಧ ಸರ್ಕಾರದ ಹಂತದಲ್ಲಿ ದಾಖಲಾಗಿರುವ ಮತ್ತು ವಿಚಾರಣೆ ವರದಿ ಸಲ್ಲಿಕೆಯಾಗಿರುವ ಅಧಿಕಾರಿಗಳ ವಿರುದ್ಧದ ಆರೋಪ ಪಟ್ಟಿಯನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಕರ್ನಾಟಕ ಆಡಳಿತ ಸೇವೆಯ ಸೀನಿಯರ್ ಸೂಪರ್ ಟೈಂ ಸ್ಕೇಲ್/ಸೂಪರ್ ಟೈಂ ಸ್ಕೇಲ್/ ಆಯ್ಕೆ/ಹಿರಿಯ/ಕಿರಿಯ ಶ್ರೇಣಿ ವೃಂದದ ಅಧಿಕಾರಿಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈವರೆವಿಗೂ ವರದಿಗಳನ್ನು ಸಲ್ಲಿಸದಿರುವುದೂ ಬಹಿರಂಗವಾಗಿದೆ. ಆರೋಪಿತ ಕೆಎಎಸ್ ಅಧಿಕಾರಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ ನೀಡದ ಕಂದಾಯ ಇಲಾಖೆಯು ಈ ಸಂಬಂಧ ಹೆಚ್ಚುವರಿ ದಾಖಲೆಗಳನ್ನು ನೀಡದೇ ಮರೆಮಾಚುತ್ತಿರುವುದು ದಾಖಲೆಯಿಂದ ತಿಳಿದು ಬಂದಿದೆ. ಈ ಅಧಿಕಾರಿಗಳ ವಿರುದ್ಧದ ಇಲಾಖೆ ವಿಚಾರಣೆ ಪ್ರಗತಿಯು ಆಮೆಗತಿಯಲ್ಲಿರುವುದು ತಿಳಿದು ಬಂದಿದೆ.
ಆರೋಪಿತ ಅಧಿಕಾರಿಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ, ಮಾಹಿತಿ ನೀಡಬೇಕಿದ್ದ ಕಂದಾಯ ಇಲಾಖೆಯು ಹಲವು ವರ್ಷಗಳಿಂದಲೂ ಕಡತಗಳನ್ನು ಬಾಕಿ ಇರಿಸಿಕೊಂಡಿದೆ. ಹೀಗಾಗಿ ಬಹುತೇಕ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಇನ್ನೂ ಬಾಕಿ ಇರುವುದು ಬಹಿರಂಗವಾಗಿದೆ.
ಅಧಿಕಾರಿಗಳ ಪಟ್ಟಿ ಇಲ್ಲಿದೆ
ಡಾ ಶಂಕರ ವಣಿಕ್ಯಾಳ (ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಕರ್ತವ್ಯ ಲೋಪ), ಡಾ ಬಿ ವಿ ವಾಸಂತಿ ಅಮರ್(ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿಗಳ ಪ್ರಕರಣದಲ್ಲಿ ಮಧ್ಯಂತರ ವರದಿ ಸಲ್ಲಿಸದಿರುವುದು), ಕೆ ರಂಗನಾಥ್ (ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಅಪೀಲುಗಳನ್ನು ಕೈಗೊಂಡಿರುವುದು), ನಾಗರಾಜ್ ಸಿಂಗ್ರೇರ್(ಹೈಕೋರ್ಟ್ ರಿಟ್ ಪಿಟೀಷನ್ 13995-98/2019 ಪ್ರಕರಣ), ಜಿ ವಿ ಸೀನಪ್ಪ (ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ 6 ಎಕರೆ ಜಮೀನು ವಕ್ಫ್ ಮಂಡಳಿಗೆ ಸೇರಿಲ್ಲ ಎಂದು ಪ್ರಕಟಿಸಿರುವುದು), ಎಂ ಎಲ್ ವೈಶಾಲಿ(ತೀರ್ಥಹಳ್ಳಿ ತಾಲೂಕಿನ ಹೆಗಲೆತ್ತಿ ಗ್ರಾಮದ 162 ಎಕರೆ ಅರಣ್ಯ ಪ್ರದೇಶದ ಹಕ್ಕುದಾರಿಕೆಯನ್ನು ಕೇರಳ ಮೂಲದ ವ್ಯಾಪಾರಿಗೆ ನೀಡಿರುವುದು) ಕುಸುಮ ಕುಮಾರಿ( ಕಾಡುಕುರುಬ ಎಂಬ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವುದು) ಟಿ ಯೋಗೇಶ್(ವಿಭಿನ್ನ ಆದೇಶ ಹೊರಡಿಸಿರುವುದು ಮತ್ತು ಕರ್ತವ್ಯ ಲೋಪ ಎಸಗಿರುವುದು)
ಟಿ ವೆಂಕಟೇಶ್( ಜಮೀನುದಾರರು, ಡೆವಲಪರ್‌ಗಳಿಂದ 1.50 ಲಕ್ಷ ವಸೂಲಿ), ಪಿ ಎಸ್ ಮಂಜುನಾಥ್ (ಭ್ರಷ್ಟಾಚಾರ), ಗೋವಿಂದರೆಡ್ಡಿ(ಸಿಂಧನೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪಿ ಸಿ ನಂ;196/10, ಸಿ ಸಿ ನಂ 612/2015ರಲ್ಲಿ ತೀರ್ಪಿನ್ವಯ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ) ಡಿ ಭಾರತಿ ( ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಅವ್ಯವಹಾರ), ಕೆ ರಂಗನಾಥ್ (ಅರಣ್ಯ ಪ್ರದೇಶ ಉಳಿಸದ ಆರೋಪ) ಪಿ ವಸಂತಕುಮಾರ್ ಐಎಎಸ್ (ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳಾಗಿದ್ದ ಅವಧಿಯಲ್ಲಿ ಕ್ರಿಮಿನಲ್ ಮಿಸಿಲೇನಿಯಸ್ ಸಂಖ್ಯೆ 215/2017 ಆದೇಶದ ವಿರುದ್ಧ ಕ್ರಿಮಿನಲ್ ಅಪೀಲು ದಾಖಲಿಸಿರುವ ಬಗ್ಗೆ), ಜಿ ಎನ್ ಮಂಜುನಾಥ್ (ಹಾಸನ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದರ ಬಹಿರಂಗ ಪ್ರಚಾರ ಮಾಡುತ್ತಿದ್ದ ಆರೋಪ), ಡಿ ಶಿವಸ್ವಾಮಿ(ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿ ಚದಲಪುರದಲ್ಲಿನ ಜಮೀನಿಗೆ ನಕಲಿ ಸಾಗುವಳಿ ಪತ್ರ ಕಲ್ಪಿಸಿ ನಕಲು ಸಹಿ ಮಾಡಿ ಸುಳ್ಳು ಕೇಸುಗಳನ್ನು ದಾಖಲಿಲಸಲು ಅನುಮತಿ ನೀಡಿರುವುದು), ಎಂ ಕೆ ಜಗದೀಶ್ (ದಾಖಲೆಗಳನ್ನು ತಿದ್ದಿ ಕಾನೂನುಬಾಹಿರವಾಗಿ ದೂರುದಾರರ ಜಮೀನುಗಳ ಕಬಳಿಸಲು ಯತ್ನ)
ಬಿ ಶಿವಯ್ಯ (ಕಬಿನಿ ಜಲಾಶಯ ಯೋಜನೆ-2ರಲ್ಲಿ ಭ್ರಷ್ಟಾಚಾರ, ಕರ್ತವ್ಯ ಲೋಪ), ಮಹೇಶ್ ಕರ್ಜಗಿ (ಧಾರವಾಡ ಸಹಾಯಕ ಆಯುಕ್ತರಾಗಿದ್ದ ಅವಧಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪ), ಡಾ ರಾಜೇಂದ್ರ ಪ್ರಸಾದ್ ಎಂ ಎನ್ (ರಾಮನಗರ ಉಪ ವಿಭಾಗಾಧಿಕಾರಿಯಾಗಿದ್ದ ಅವಧಿಯಲ್ಲಿ ಕನಕಪುರ ತಾಲೂಕು ಕಸಬಾ ಹೋಬಳಿ ರಾಂಪುರ ಗ್ರಾಮದ ಸರ್ವೆ ನಂಬರ್ 229ರ 2 ಎಕರೆ 5 ಗುಂಟೆ ಜಮೀನಿನ ಪಹಣಿಯನ್ನು ಅರ್ಜಿದಾರರ ಗಮನಕ್ಕೆ ತರದೆಯೇ ಸಂಪೂರ್ಣವಾಗಿ ತೆಗೆದುಹಾಕಿ ಅಧಿಕಾರ ದುರ್ಬಳಕೆ ಮಾಡಿರುವ ಆರೋಪ), ನವೀನ್ ಜೋಸೆಫ್ (ಮೈಸೂರು ತಾಲೂಕು ಕಸಬಾ ಹೋಬಳಿ ಲಕ್ಷ್ಮೀಪುರ ಗ್ರಾಮದ ಸರ್ವೆ ನಂ 179ರಲ್ಲಿ 1.12 ಎಕರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಕರ್ನಾಟಕ ಭೂ ಕಂದಾಯ ಕಾಯ್ದೆ ಉಲ್ಲಂಘಿಸಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಿ ಕರ್ತವ್ಯಲೋಪ ಎಸಗಿರುವ ಆರೋಪ)
ಶ್ರೀ ಹರ್ಷ ಎಸ್ ಶೆಟ್ಟಿ, ಎನ್ ರಾಚಪ್ಪ (ಕಲಬುರಗಿ ಜಿಲ್ಲೆಯ ವಕ್ಕಲಗೇರಾ ಹಳ್ಳಿಯಲ್ಲಿ ಸರ್ವೆ ನಂಬರ್ 37/ಎ/1, 37/2ರಲ್ಲಿ ನಿರ್ಮಾಣವಾಗಿದ್ದ ಮನೆಗಳ ನೆಲಸಮಗೊಳಿಸಲು ಕಾನೂನುಬಾಹಿರವಾಗಿ ಆದೇಶ) ಕುಸುಮ ಕುಮಾರಿ (ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿದ್ದ ಅವಧಿಯಲ್ಲಿ ದಲಿತರಿಗೆ ಜಮೀನು ಬಿಡಿಸಿಕೊಡದೆ ಕಾನೂನುಬಾಹಿರವಾಗಿ ಸವರ್ಣೀಯರ ಪರ ಖಾತೆ, ಪಹಣಿ ಬದಲಾವಣೆ ಮಾಡಿರುವುದು), ಎಂ ಕೆ ಜಗದೀಶ್ (ವಿಶೇಷ ಜಿಲ್ಲಾಧಿಕಾರಿ -1 ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗ, ಕರ್ನಾಟಕ ಭೂ ಕಂದಾಯ ಅಧಿನಿಯಮ ಕಲಂ 7ರಲ್ಲಿ ಪ್ರಾದೇಶಿಕ ಆಯುಕ್ತರಿಗೆ ಪ್ರತ್ಯಾಯೋಜಿಸಲಾಗಿರುವ ಅಧಿಕಾರ ದುರುಪಯೋಗ, ಆದೇಶ ಉಲ್ಲಂಘನೆ-ಸುಷ್ಮಾ ಗೋಡಬಲೆ ನೀಡಿರುವ ವರದಿ) ಆರತಿ ಆನಂದ್ (ಯಡಿಯೂರು ಸಿದ್ದಲಿಂಗೇಶ್ವರ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ದುರುಪಯೋಗ), ವಿ ಆರ್ ಶೈಲಜಾ (ಜಿಲ್ಲಾಧಿಕಾರಿ ಆದೇಶವನ್ನು 3 ವರ್ಷ ಕಳೆದರೂ ಅನುಷ್ಠಾನಗೊಳಿಸದಿರುವದು), ಸಿ ಮಂಜುನಾಥ್ (ಶಿಸ್ತು ಕ್ರಮ (ರಿ ಅ ಸಂ; 33365/2015), ಭೀಮಾನಾಯಕ್ (ನಿಯಮ 32 ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸುವುದು), ಬಿ ಎ ಜಗದೀಶ್ (ಹೇಮಾವತಿ, ಯಗಚಿ ಜಲಾಶಯ ಅವ್ಯವಹಾರ)
ಅಲ್ಲದೆ ಲೋಕಾಯುಕ್ತ, ಉಪ ಲೋಕಾಯುಕ್ತರಿಂದ ಸ್ವೀಕೃತವಾಗಿರುವ ಕಲಂ 12(3) ಅಡಿಯಲ್ಲಿ 5 ಪ್ರಕರಣಗಳಲು, ಸಿಸಿಎ ನಿಯಮಾವಳಿಗಳ 14(ಎ)ಅಡಿ ಇಲಾಖೆ ವಿಚಾರಣೆಗೆ ವಹಿಸುವ ಪ್ರಕರಣಗಳ ಬಗ್ಗೆಯೂ ಸರಿಯಾದ ಮಾಹಿತಿಯನ್ನು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಕಳಿಸದೇ ಕಂದಾಯ ಸಚಿವಾಲಯ ನಿರ್ಲಕ್ಷ್ಯ ವಹಿಸುತ್ತಿರುವುದು ತಿಳಿದು ಬಂದಿದೆ.