ಕಲ್ಯಾಣ ಕರ್ನಾಟಕಕ್ಕೆ ಹರಿದಿದ್ದು 20,880 ಕೋಟಿ ಅನುದಾನದ ಹೊಳೆ; ಕಾಣಿಸದ ಅಭಿವೃದ್ಧಿಯ ಕಳೆ!

ಬೆಂಗಳೂರು; ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ಹೊಂದಿರುವ ತಾಲೂಕುಗಳಲ್ಲಿ ಸಮತೋಲಿತ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಕಂಡು ಬರುತ್ತಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರ ಸಮಿತಿ ಶಿಫಾರಸ್ಸಿನಂತೆ ಜಾರಿಗೊಂಡಿರುವ ವಿಶೇಷ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ 20,880 ಕೋಟಿ ರು.ಗೂ ಹೆಚ್ಚಿನ ಮೊತ್ತ ಖರ್ಚಾಗಿದೆಯಾದರೂ ಪ್ರಗತಿಯ ಕುರುಹುಗಳು ಅಷ್ಟಾಗಿ ಕಾಣಿಸುತ್ತಿಲ್ಲ.

ಹೈದ್ರಾಬಾದ್‌ ಕರ್ನಾಟಕದ 6 ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಣ ಬಿಡುಗಡೆಯಾಗುತ್ತಿದೆಯಾದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿವೆ. 2017-18 ಮತ್ತು 2018-19ನೇ ಸಾಲಿನಲ್ಲಿ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ  ಮಂಡಳಿ ಅನುಮೋದಿಸಿದ್ದ ಸಣ್ಣಸಣ್ಣ ಕಾಮಗಾರಿಗಳೂ ಸೇರಿದಂತೆ ಎಲ್ಲಾ ಬಗೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಿದ್ದ ಗಡುವು ಮೀರಿದ್ದರೂ ಕಾಮಗಾರಿಗಳು ಪೂರ್ಣಗೊಂಡಿಲ್ಲ.

ಕಲಬುರಗಿ ಮತ್ತು ಬೀದರ್‌ನಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವ ಮಾತಿರಲಿ, ಕಾಮಗಾರಿಗಳು ಆರಂಭಗೊಳ್ಳದಿದ್ದರೂ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಾಫ್ಟ್‌ವೇರ್‌ನಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಮತ್ತು ಪೂರ್ಣಗೊಂಡಿದೆ ಎಂದು ತಪ್ಪು ಮಾಹಿತಿ ನೀಡುತ್ತಿರುವ ಅಧಿಕಾರಿಗಳು, ಹಣವನ್ನು ಜೇಬಿಗಿಳಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಈ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡಿದ್ದ ಮಂಡಳಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸುಬೋಧ್ ಯಾದವ್‌ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ವಾರ್ಷಿಕ ಯೋಜನೆಗಳ ಹೆಸರಿನಲ್ಲಿ 2002-03ರಿಂದ 2009-10ರವರೆಗೆ 15,000 ಕೋಟಿ ರು.ಅನುದಾನ ಒದಗಿಸಲಾಗಿತ್ತು. ವಿಶೇಷ ಅಭಿವೃದ್ಧಿ ಯೋಜನೆ ಕೂಡ 2007-08ರಿಂದ ಸರಿಯಾಗಿ ಅನುಷ್ಠಾನವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರಾದರೂ, ಅನುಷ್ಠಾನ ಹಂತದಲ್ಲಿಯೇ ಅನುದಾನ ಸೋರಿಕೆಯಾಗುತ್ತಿದೆ. 2007-08ರಿಂದ 2018-19ರವರೆಗೆ 31,227 ಕೋಟಿ ರು., ಅನುದಾನ ನಿಗದಿಪಡಿಸಿದ್ದು, ಬಿಡುಗಡೆ ಮಾಡಲಾಗಿರುವ ಅನುದಾನದ ಪೈಕಿ 20,880 ಕೋಟಿ ರು.ವೆಚ್ಚವಾಗಿದೆ.

2018-19ನೇ ಸಾಲಿನ ಆಯವ್ಯಯದಡಿ ವಿಶೇಷ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ 3,007 ಕೋಟಿ ರು .ಅನುದಾನ ನಿಗದಿಯಾಗಿತ್ತು. ಇದರಲ್ಲಿ 217 ಕೋಟಿ ರು.ಅನುದಾನ ಹೈದರಬಾದ್‌ಕರ್ನಾಟಕ ಜಿಲ್ಲೆಗಳಲ್ಲಿ ಬಳಕೆ ಮಾಡಲಾಗಿದೆ.  ಅಂದರೆ ಒಟ್ಟು ಅನುದಾನದ ಪೈಕಿ  ಶೇ.89.85ರಷ್ಟು ಹಣ ನೀರಿನಂತೆ ಹರಿದಿದೆಯಾದರೂ ಈ ಭಾಗದ ಹಿಂದುಳಿದ ತಾಲೂಕುಗಳಲ್ಲಿ ಪ್ರಗತಿಯ ಕುರುಹು ಕಾಣಿಸುತ್ತಿಲ್ಲವೇಕೆ?

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಒಟ್ಟು 6,523 ಕೋಟಿ ರು. ಮಂಜೂರಾಗಿದೆ. 2013-14ರಲ್ಲಿ 153.50 ಕೋಟಿ, 2014-15ರಲ್ಲಿ 600 ಕೋಟಿ, 2015-16ರಲ್ಲಿ 1,000 ಕೋಟಿ, 2016-17ರಲ್ಲಿ 1,000 ಕೋಟಿ, 2017-18ರಲ್ಲಿ 1,000 ಕೋಟಿ, 2018-19ರಲ್ಲಿ 1,000 ಕೋಟಿ, 2019-20ರಲ್ಲಿ 1,500 ಕೋಟಿ ರು. ಈ ಪ್ರದೇಶಗಳ ಅಭಿವೃದ್ಧಿ ಹೆಸರಿನಲ್ಲಿ ಮಂಜೂರಾಗಿದೆ.

ಮೂಲಸೌಲಭ್ಯ ಕಲ್ಪಿಸಲು 2007-08ರಿಂದ 2018-19ರವರೆಗೆ 1,720.47 ಕೋಟಿ ರು., ಆರೋಗ್ಯ ಮತ್ತು ಶಿಕ್ಷಣಕ್ಕಾಗಿ 3,150.52 ಕೋಟಿ ರು., ಕಾರ್ಮಿಕ ಮತ್ತು ಸಮಾಜ ಕಲ್ಯಾಣಕ್ಕಾಗಿ 1,730.25 ಕೋಟಿ ರು., ನೀರಾವರಿಗೆ 6,178.01 ಕೋಟಿ ರು.ಅನುದಾನ ನೀಡಲಾಗಿದೆ. ಈ ಪೈಕಿ ಶೇಕಡವಾರು ವೆಚ್ಚದತ್ತ ಗಮನ ಹರಿಸಿದರೆ ಮೂಲಸೌಲಭ್ಯ ಹೆಸರಿನಲ್ಲಿ ಶೇ.97.58, ಆರೋಗ್ಯ ಮತ್ತು ಶಿಕ್ಷಣದಲ್ಲಿ ಶೇ.90.62, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶೇ 95.57, ನೀರಾವರಿಗೆ ಶೇ.91.36ರಷ್ಟು ವೆಚ್ಚವಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಹಣವು ಯೋಜಿತ ಅನುದಾನಕ್ಕೆ ಶೇ.74.42ರಷ್ಟು ಇದ್ದರೆ, ವೆಚ್ಚ ಮಾಡಿರುವ ಹಣವು ಬಿಡುಗಡೆ ಮಾಡಲಾದ ಹಣದ ಶೇ.89.85ರಷ್ಟಿದೆ.

ಹಣದ ಬಿಡುಗಡೆ ಮತ್ತು ವೆಚ್ಚದ ಅಂಕಿ ಸಂಖ್ಯೆಗಳಲ್ಲಿ ಪ್ರಗತಿಯಾಗಿದೆಯಾದರೂ ಈಗಲೂ ಈ ಭಾಗಗಳಲ್ಲಿ ಗ್ರಾಮಗಳಿಗೆ, ತಾಂಡಾಗಳಿಗೆ ಮೂಲ ಸೌಲಭ್ಯ ಸಮರ್ಪಕವಾಗಿ ಲಭಿಸಿಲ್ಲ. ರಸ್ತೆಗಳ ಅಭಿವೃದ್ಧಿ, ಸಣ್ಣ ಸಣ್ಣ ಬ್ಯಾರೇಜುಗಳ ನಿರ್ಮಾಣ, ಏತ ನೀರಾವರಿ, ಹೆಚ್ಚುವರಿ ಸಂಪನ್ಮೂಲಗಳ ವರ್ಗಾವಣೆ, ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸಿರುವುದರಲ್ಲಿ ನಿರೀಕ್ಷಿತ ಪ್ರಮಾಣದ ಸಾಧನೆ ಕಂಡು ಬಂದಿಲ್ಲ.

ಅದರಲ್ಲೂ ತುಂಬಾ ಮುಖ್ಯವಾಗಿ ಹೈದರಾಬಾದ್‌ಕರ್ನಾಟಕ ಪ್ರದೇಶಕ್ಕೆ 371 ಜೆ ಸ್ಥಾನಮಾನ ಲಭಿಸಿದ ನಂತರ ಅನುದಾನ ಎನ್ನುವುದು ಸಾಗರದಂತೆ ಹರಿದಿದೆ. 2017-18ನೇ ಸಾಲಿನವರೆಗೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರತಿಶತ 70ರಷ್ಟು ಅನುದಾನ ಖರ್ಚಾಗಿರುವುದು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ. 2018-19ನೇ ಸಾಲಿನ ಆಯವ್ಯಯದಲ್ಲಿ 1,000 ಕೋಟಿ ರು. ಒದಗಿಸಲಾಗಿತ್ತು. ಇದರಲ್ಲಿ 500 ಕೋಟಿ ರು.ಬಿಡುಗಡೆಯೂ ಆಗಿದೆ. ನವೆಂಬರ್‌ 2018ರ ಅಂತ್ಯಕ್ಕೆ ಹೈದರಬಾದ್‌ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯೊಂದರಿಂದಲೇ 692.97 ಕೋಟಿ ರು.ಖರ್ಚಾಗಿದೆ.

ಸಾವಿರಾರು ಕೋಟಿ ರು.ಅನುದಾನ ನಿಜಾರ್ಥದಲ್ಲಿ ಬಳಕೆಯಾಗಿದ್ದಲ್ಲಿ ಕಲಬುರಗಿ ವಿಭಾಗ(ಬಳ್ಳಾರಿ, ಬೀದರ್‌, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ)ದ ಜನರ ತಲಾ ಆದಾಯ ಹೆಚ್ಚಬೇಕಿತ್ತು. ವಾಸ್ತವದಲ್ಲಿ ಬೆಂಗಳೂರು ವಿಭಾಗದ ತಲಾ ಆದಾಯದ ಅರ್ಧಕ್ಕಿಂತಲೂ ಕಡಿಮೆ ಇದೆ. ಇನ್ನು, . ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ, ಬೃಹತ್‌ಪ್ರಮಾಣದ ಕೈಗಾರಿಕೆಗಳು ಈ ಭಾಗದಲ್ಲಿ ನೆಲೆಗೊಂಡಿಲ್ಲ.

ಅತ್ಯಂತ ಹಿಂದುಳಿದ 39 ತಾಲೂಕುಗಳಲ್ಲಿ ಕೈಗಾರಿಕೆ ಚಟುವಟಿಕೆಗಳನ್ನು ಸುಧಾರಿಸುವ ಸಲುವಾಗಿ ಅನುಷ್ಠಾನಗೊಂಡಿದ್ದ ಕೈಗಾರಿಕೆ ವಿಕಾಸ ಯೋಜನೆಯೂ ಫಲಪ್ರದವಾಗಿಲ್ಲ. ಈ ಯೋಜನೆ ಅನುಷ್ಠಾನದಿಂದ ಸಾಮಾಜಿಕ, ಆರ್ಥಿಕ ಮಟ್ಟವೂ ಗಮನಾರ್ಹವಾಗಿ ಹೆಚ್ಚಳವಾಗಿಲ್ಲ. ಶೇ.97.59ರಷ್ಟು ಮಂದಿ ಇನ್ನೂ ಬಡತನ ರೇಖೆಯ ಕೆಳಗಿದ್ದಾರೆ ಎಂದು ಕೈಗಾರಿಕೆ ವಿಕಾಸ ಯೋಜನೆಯ ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖವಾಗಿದೆ. ಆದಾಯ, ಜೀವನಮಟ್ಟ, ಖಾಸಗಿ ಉದ್ಯೋಗಗಳು ದೊರೆಯುವಿಕೆ, ಆರೋಗ್ಯ ವ್ಯವಸ್ಥೆ, ಮೂಲಭೂತ ಸೌಕರ್ಯಗಳು ಸೇರಿದಂತೆ ಅಂತರ ತಾಲೂಕಿನ ಅಸಮಾನತೆ ಇನ್ನೂ ಗಣನೀಯವಾಗಿದೆ.

2010-ರಿಂದ 2014-15ರವರೆಗಿನ ಅವಧಿಯಲ್ಲಿ ದೊಡ್ಡ ಮತ್ತು ಮೆಗಾ ಪ್ರಮಾಣದ ಉದ್ಯೋಗ ಘಟಕಗಳ ಸಂಖ್ಯೆಯಲ್ಲಿಯೂ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿಲ್ಲ. ಕೈಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದ 66 ತಾಲೂಕುಗಳು ರಾಜ್ಯದ ಕೈಗಾರಿಕೆ ಅಭಿವೃದ್ಧಿಯಲ್ಲಿ ಸರಾಸರಿಗಿಂತ ಹಿಂದಿವೆ. ಈ ಭಾಗದಲ್ಲಿ ಕೈಗಾರಿಕೆ ಮೂಲಭೂತ ಸೌಕರ್ಯ ಮತ್ತು ಕೈಗಾರಿಕೆ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯಮಟ್ಟಕ್ಕಿಂತಲೂ ಬಹಳಷ್ಟು ಹಿಂದುಳಿದಿವೆ. ಹೀಗಾಗಿ ಉದ್ಯೋಗ ದರವು ನಿರೀಕ್ಷೆಯಂತೆ ಬೆಳವಣಿಗೆಯಾಗಿಲ್ಲ.

ಒಟ್ಟು ಕೆಲಸಗಾರರ ಪ್ರಮಾಣದ ಅಂಕಿ ಸಂಖ್ಯೆಗಳತ್ತ ಕಣ್ಣಾಯಿಸಿದರೆ ಕಲಬುರಗಿ ಜಿಲ್ಲೆಯೊಂದರಲ್ಲೇ ಕೆಲಸಗಾರರ ಸಮೂಹದ ಭಾಗವಹಿಸಿಕೆ ಗ್ರಾಮಾಂತರ ಭಾಗದಲ್ಲಿ ಶೇ. 46.64, ನಗರ ಭಾಗದಲ್ಲಿ ಶೇ.33.49ರಷ್ಟಿದೆ. ರಾಜ್ಯದ ಸರಾಸರಿ ಕೆಲಸಗಾರರ ಭಾಗವಹಿಸಿಕೆ ದರದೊಡನೆ ಬೀದರ್‌(ಶೇ.41.25), ಕಲಬುರಗಿ(ಶೇ.42.36), ಬಳ್ಳಾರಿ(ಶೇ.45.54) ಜಿಲ್ಲೆಗಳು ರಾಜ್ಯ ಸರಾಸರಿ ದರ ಶೇ.45.62ಕ್ಕಿಂತಲೂ ಕಡಿಮೆ ಇದೆ. ಕೃಷಿಕರ ಸಂಖ್ಯೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಕೃಷಿಕರ ಸಂಖ್ಯೆ ಇಳಿಕೆಯಾಗುತ್ತಿರುವ ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆ ಅತಿ ಕಡಿಮೆ ಅಂದರೆ ಶೇ.1.05ರಷ್ಟಿದೆ.

ಉದ್ಯೋಗಕ್ಕಾಗಿ ನೋಂದಾಯಿಸಿರುವ ನಿರುದ್ಯೋಗಿಗಳ ಪೈಕಿ ಬೆಳಗಾವಿಯಲ್ಲಿ (51,091), ಬಳ್ಳಾರಿ(54,229), ಬೀದರ್‌(30,309), ವಿಜಯಪುರ(25,855), ಕಲಬುರಗಿ(74,122), ರಾಯಚೂರು(70,778), ಯಾದಗಿರಿ(15,063 ಸೇರಿದಂತೆ ಒಟ್ಟು 2,73,091ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಶೈಕ್ಷಣಿಕ ಪ್ರಗತಿಯೂ ಅಷ್ಟಕ್ಕಷ್ಟೇ ಇದೆ. ಈ ಭಾಗದಲ್ಲಿ ಶಾಲೆಯನ್ನು ಬಿಡುತ್ತಿರುವ ಮತ್ತು ಶಾಲೆಯಿಂದಲೇ ಹೊರಗುಳಿಯುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇಇದೆ. 2018-19ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಾರ ಶಾಲೆ ಬಿಡುತ್ತಿರುವ ಬಹುತೇಕ ಮಕ್ಕಳು ವಿಜಯಪುರ, ಬೀದರ್‌, ಯಾದಗಿರಿ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಗದಗ್‌, ಚಿಕ್ಕೋಡಿ ಜಿಲ್ಲೆ ಮುಂಚೂಣಿಯಲ್ಲಿವೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿಯೂ ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳು ಉಳಿದ ಜಿಲ್ಲೆಗಳಿಗಿಂತಲೂ ಕೆಳಮಟ್ಟದಲ್ಲಿವೆ. ಕಲಬುರಗಿ, ಬಳ್ಳಾರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಲಿಂಗಸಂಬಂಧಿ ಅಸಮಾನತೆ ಸೂಚ್ಯಂಕ ಅತಿ ಹೆಚ್ಚಿದೆ. ಬೀದರ್‌ಜಿಲ್ಲೆ 17ನೇ ಸ್ಥಾನ(0.4286),ಕಲಬುರಗಿ 30ನೇ ಸ್ಥಾನ(0.5037), ಕೊಪ್ಪಳ 25ನೇ ಸ್ಥಾನ(0.4698),  ರಾಯಚೂರು ಜಿಲ್ಲೆ 26ನೇ ಸ್ಥಾನ(0.4803), ಯಾದಗಿರಿ 23ನೇ(0.4600)  ಸ್ಥಾನದಲ್ಲಿದೆ.

ಅದೇ ರೀತಿ ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಕಲಬುರಗಿ, ರಾಯಚೂರು,ಯಾದಗಿರಿ ಜಿಲ್ಲೆಗಳಲ್ಲಿ ಕದ್ದುಮುಚ್ಚಿ ದೇವದಾಸಿ ಪದ್ಧತಿ ಈಗಲೂ ಜಾರಿಯಲ್ಲಿದೆ. ದೇವದಾಸಿಯರ ಪುನರ್ವಸತಿಗಾಗಿ ಹಲವು ಯೋಜನೆಗಳು ಈ ಭಾಗದಲ್ಲಿ ಅನುಷ್ಠಾನಗೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ ರಹಸ್ಯವಾಗಿ ಈ ಪದ್ಧತಿ ಈಗಲೂ ಮುಂದುವರೆದಿದೆ ಎಂಬ ವಿಚಾರ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ ಅಧ್ಯಯನ ವರದಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts