ಅಕ್ರಮ ಪದವಿ; ವಿಧಾನ ಪರಿಷತ್‌ ಉಪ ಕಾರ್ಯದರ್ಶಿ ಮಲ್ಲೇಶಪ್ಪ ವಿರುದ್ಧ ಕ್ರಮವಿಲ್ಲವೇಕೆ?

ಬೆಂಗಳೂರು; ಪರೀಕ್ಷೆಗೆ ಹಾಜರಾದ ದಿನದಂದೇ ಕಚೇರಿಗೂ ಹಾಜರಾಗಿರುವುದು ಮತ್ತು ಅಕ್ರಮವಾಗಿ ಪದವಿ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಪರಿಷತ್ತಿನ ಸಚಿವಾಲಯದ ಉಪ ಕಾರ್ಯದರ್ಶಿ ಎಚ್‌ ಮಲ್ಲೇಶಪ್ಪ ಅವರಿಗೆ ಸಚಿವಾಲಯವು ಪುನಃ ನೋಟೀಸ್‌ ಜಾರಿಗೊಳಿಸಿದೆ. ಕಳೆದ 5 ವರ್ಷದಿಂದಲೂ ಸಚಿವಾಲಯವು ನೋಟೀಸ್‌ ಜಾರಿಗೊಳಿಸುತ್ತಿದೆಯಾದರೂ ಆರೋಪಿತ ಅಧಿಕಾರಿ ವಿರುದ್ಧ ಈವರೆವಿಗೂ ಸಚಿವಾಲಯವು ಕ್ರಮ ಕೈಗೊಂಡಿಲ್ಲ. ಇದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಸಚಿವಾಲಯದ ಉಪ ಕಾರ್ಯದರ್ಶಿ ಬಿ ಆರ್‌ ಗಾಯತ್ರಿ ಅವರು 2020ರ ಜೂನ್‌ 5ರಂದು ಮಲ್ಲೇಶಪ್ಪ ಅವರಿಗೆ ನೋಟೀಸ್‌ ಜಾರಿಗೊಳಿಸಿರುವ ಬೆನ್ನಲ್ಲೇ ಇದೇ ಆರೋಪವನ್ನು ಸಾಬೀತುಪಡಿಸಲು ದಾಖಲೆಗಳೊಂದಿಗೆ ಹಾಜರಾಗಿ ಮಾಹಿತಿ ಒದಗಿಸಬೇಕು ಎಂದು ದೂರುದಾರ ಸತೀಶ್‌ ಮತ್ತು ಸುನೀತಾ ಎಂಬುವರಿಗೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎನ್‌ ಜಯಂತಿ ಅವರು 2020ರ ಜುಲೈ 20 ಮತ್ತು ಆಗಸ್ಟ್‌ 20ರಂದು ಪ್ರತ್ಯೇಕ ಪತ್ರಗಳಲ್ಲಿ ಸೂಚಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಪರೀಕ್ಷೆ ದಿನಗಳಂದು ಪರೀಕ್ಷೆಗೂ ಹಾಜರಾಗಿ ಕಚೇರಿಗೆ ಹಾಜರಾಗಿರುವುದು ತಾವು ದೂರಿನೊಂದಿಗೆ ಸಲ್ಲಿಸಿರುವ ದಾಖಲೆಗಳಿಂದ ಕಂಡು ಬಂದಿರುತ್ತದೆ. ಆದರೆ ದೂರಿನಲ್ಲಿ ತಿಳಿಸಿರುವ ಇತರೆ ವಿಷಯಗಳನ್ನು ಸಾಬೀತುಪಡಿಸಲು ಹೆಚ್ಚಿನ ದಸ್ತಾವೇಜುಗಳನ್ನು ಹೊಂದಿದ್ದಲ್ಲಿ ದಸ್ತಾವೇಜಿನೊಂದಿಗೆ ಖುದ್ದು ಕಚೇರಿಗೆ ಹಾಜರಾಗಿ ಮಾಹಿತಿ ಒದಗಿಸಬೇಕು,’ ಎಂದು ಸಚಿವಾಲಯದ ಅಧೀನ ಕಾರ್ಯದರ್ಶಿ ಎನ್‌ ಜಯಂತಿ ಅವರು 2020ರ ಆಗಸ್ಟ್‌ 20ರಂದು ದೂರುದಾರ ಸತೀಶ್‌ ಎಂಬುವರಿಗೆ ಸೂಚಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಕರ್ನಾಟಕ ವಿಧಾನಪರಿಷತ್ತಿನ ಸಚಿವಾಲಯದ ಉಪ ಕಾರ್ಯದರ್ಶಿ ಎಚ್‌ ಮಲ್ಲೇಶಪ್ಪ ಅವರು 2012-13, 2013-14-2014-15ನೇ ಶೈಕ್ಷಣಿಕ ವರ್ಷದಲ್ಲಿ ಬಿ ಎ ಪರೀಕ್ಷೆ ಬರೆದಿದ್ದರು. ಉತ್ತೀರ್ಣರಾಗಿರುವುದಕ್ಕೆ ಸಂಬಂಧಿಸಿದಂತೆ ಪ್ರಾವಿಷನಲ್‌ ಪಾಸ್‌ ಸರ್ಟಿಫಿಕೇಟ್‌ 2015ರಲ್ಲಿ ಪಡೆದಿದ್ದರು.

ಮಲ್ಲೇಶಪ್ಪ ಅವರು ಪರೀಕ್ಷೆಗೆ ಹಾಜರಾದ ದಿನದಂದೇ ಕಚೇರಿ ಕೆಲಸಕ್ಕೂ ಹಾಜರಾಗಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು. ಬಡ್ತಿ ಪಡೆಯುವ ಆಸೆಯಿಂದ ಬೇರೊಬ್ಬ ವ್ಯಕ್ತಿಯಿಂದ ಪರೀಕ್ಷೆ ಬರೆಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಬಿ ಎ ಪದವಿಯನ್ನು ಅಕ್ರಮವಾಗಿ ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು.

ಈ ಸಂಬಂಧ ಮಲ್ಲೇಶಪ್ಪ ಅವರಿಗೂ 2020ರ ಜೂನ್‌ 5ರಂದು ನೋಟೀಸ್‌ ಜಾರಿಗೊಳಿಸಿದ್ದ ಸಚಿವಾಲಯದ ಉಪ ಕಾರ್ಯದರ್ಶಿ ಗಾಯತ್ರಿ ಅವರು ನೋಟೀಸ್‌ ತಲುಪಿದ 5 ದಿನದೊಳಗೆ ವಿವರಣೆ ಒದಗಿಸಲು ಸೂಚಿಸಿದ್ದರು. ಇಲ್ಲವಾದಲ್ಲಿ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳನ್ವಯ ಶಿಸ್ತು ಕ್ರಮ ಜರುಗಿಸಬೇಕಾದೀತು ಎಂದು ನೋಟೀಸ್‌ನಲ್ಲಿ ಎಚ್ಚರಿಸಿದ್ದರು.
5 ವರ್ಷದ ಹಿಂದೆಯೂ ನೋಟೀಸ್‌ ಜಾರಿಯಾಗಿತ್ತು.

ಸದ್ಯ ಉಪ ಕಾರ್ಯದರ್ಶಿ ಹುದ್ದೆಯಲ್ಲಿರುವ ಎಚ್‌ ಮಲ್ಲೇಶಪ್ಪ ಅವರು ಪ್ರಭಾರಿ ಅಧೀನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲೇ ವಿಧಾನಪರಿಷತ್‌ನ ಹಿಂದಿನ ಅಧೀನ ಕಾರ್ಯದರ್ಶಿ ಕೆ ಸಿ ಪ್ರಭು ಅವರು 2015ರ ಅಕ್ಟೋಬರ್‌ 5ರಂದು ಷೋಕಾಸ್‌ ನೋಟೀಸ್‌ ಜಾರಿಗೊಳಿಸಿದ್ದರು. ‘ಮಲ್ಲೇಶಪ್ಪ ಅವರು ಪಡೆದಿರುವ ಪದವಿಯು ಖೊಟ್ಟಿ (ಬೋಗಸ್‌)’ ಎಂದು ಸಚಿವಾಲಯದ ಶಾಖಾಧಿಕಾರಿಯಾಗಿದ್ದ ಕೆ ರಾಮಣ್ಣ ಎಂಬುವರು ಸಲ್ಲಿಸಿದ್ದ ಮನವಿ ಮೇರೆಗೆ ಷೋಕಾಸ್‌ ನೋಟೀಸ್‌ ಜಾರಿಗೊಳಿಸಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

ಸರ್ಕಾರದ ಕಣ್ಣಿಗೆ ಮಣ್ಣೆರೆಚಿದ್ದರೇ?

ಎಚ್‌ ಮಲ್ಲೇಶಪ್ಪ ಅವರು ಕಚೇರಿಗೆ ಹಾಜರಾಗಿದ್ದರೂ ಸಹ 2 ದಿನಗಳ ಪರೀಕ್ಷೆಗಳನ್ನು ಬರೆದು ತೇರ್ಗಡೆ ಹೊಂದಿರುತ್ತೇನೆಂದು ಅಂಕಪಟ್ಟಿಗಳನ್ನು ಸಲ್ಲಿಸಿದ್ದರು. 2012ರಲ್ಲಿ ನಿಯಮಬಾಹಿರವಾಗಿ ಸರ್ಕಾರದ ಕಣ್ಣಿಗೆ ಮಣ್ಣೆರಚಿ 15 ದಿನಗಳ ಸಾಂದರ್ಭಿಕ ರಜೆಯ ಬದಲು 22 ದಿನಗಳ ರಜೆಯನ್ನು ಪಡೆದುಕೊಂಡಿದ್ದರು. ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಡೆಸಿದ 2012,2013, 2014ನೇ ಸಾಲಿನ ಪರೀಕ್ಷೆಗಳಿಗೆ ಮಾನ್ಯತೆ ನೀಡಿರಲಿಲ್ಲ. ಹೀಗಾಗಿ ಎಚ್‌ ಮಲ್ಲೇಶಪ್ಪ ಅವರು ಸಲ್ಲಿಸಿದ್ದ ಪದವಿ ಪರೀಕ್ಷೆಯ ಅರ್ಹತೆಗೆ ಯಾವುದೇ ಮಾನ್ಯತೆ ಇರಲಿಲ್ಲ ಎಂಬ ಅಂಶವನ್ನು ಶಾಖಾಧಿಕಾರಿ ಕೆ ರಾಮಣ್ಣ ಅವರು ಸಲ್ಲಿಸಿದ್ದ ಮನವಿ ಹೊರಗೆಡವಿತ್ತು.

ಸರ್ಕಾರಿ ನೌಕರರ ವಿರುದ್ಧ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ವಿಧಿಸಬಹುದಾದ ದಂಡನೆಗಳ ಕುರಿತು ಕಾರ್ಯವಿಧಾನದ ಲೋಪಗಳಿಗೆ ‘ಮೊದಲ ಸಂದರ್ಭದಲ್ಲಿ ವಾಗ್ದಂಡನೆ ಮತ್ತು ಎರಡು ಮತ್ತು ನಂತರದ ಸಂದರ್ಭಗಳಲ್ಲಿ ಕಾಲ ವೇತನ ಶ್ರೇಣಿಯನ್ನು ಕೆಳಗಿನ ಹಂತಕ್ಕೆ ಇಳಿಸಬಹುದು,’ ಎಂದು ಷೋಕಾಸ್‌ ನೋಟೀಸ್‌ನಲ್ಲಿ ತಿಳಿಸಿದ್ದ ಕೆ ಸಿ ಪ್ರಭು ಅವರು, ಪ್ರಸ್ತುತ ತಾವು ಮಾಡಿರುವ ತಪ್ಪು ಮೇಲ್ನೋಟಕ್ಕೆ ಸಾಬೀತಾಗಿರುವುದಾಗಿ ತಿಳಿದು ಬಂದಿದೆ,’ ಎಂದು ಷೋಕಾಸ್‌ ನೋಟೀಸ್‌ನಲ್ಲಿ ತಿಳಿಸಿದ್ದರು.

ಇದನ್ನಾಧರಿಸಿ ಜಾರಿಗೊಳಿಸಿದ್ದ ನೋಟೀಸ್‌ಗೆ ಉತ್ತರಿಸಿದ್ದ ಎಚ್‌ ಮಲ್ಲೇಶಪ್ಪ ಅವರು ಆರೋಪಗಳನ್ನು ತಳ್ಳಿ ಹಾಕಿ ವಿವರಣೆಯನ್ನು 2015ರ ಅಕ್ಟೋಬರ್‌ 17ರಂದು ನೀಡಿದ್ದರು. ಅಲ್ಲದೆ ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಕು ಎಂದು ಕೋರಿದ್ದರು. ಆದರೆ ಈ ಪ್ರಕರಣ ಈವರೆವಿಗೂ ತಾರ್ಕಿಕ ಅಂತ್ಯ ಕಂಡಿಲ್ಲ. 2019ರಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನಿತಾ ಮತ್ತು ಸತೀಶ್‌ ಎಂಬುವರು ದೂರು ಸಲ್ಲಿಸಿ ಪ್ರಕರಣವನ್ನು ಚಾಲ್ತಿಯಲ್ಲಿಟ್ಟಿರುವುದು ತಿಳಿದು ಬಂದಿದೆ.

ಈ ಪ್ರಕರಣದ ಕುರಿತು ಹಿಂದಿನ ಸಭಾಪತಿ ಡಿ ಎಚ್‌ ಶಂಕರಮೂರ್ತಿ ಮತ್ತು ಹಾಲಿ ಸಭಾಪತಿ ಪ್ರತಾಪಚಂದ್ರಶೆಟ್ಟಿ ಅವರ ಗಮನದಲ್ಲಿದ್ದರೂ ಈವರೆವಿಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts