ದುಬಾರಿ ದರದಲ್ಲಿ ಆರ್‌ಟಿಪಿಸಿಆರ್ ಖರೀದಿ; ಆದೇಶಕ್ಕೂ ಮುನ್ನವೇ ಸಿದ್ಧವಾಗಿತ್ತು ಇನ್‌ವಾಯ್ಸ್‌?

ಬೆಂಗಳೂರು; ಕೋವಿಡ್‌-19 ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಡೆಸುತ್ತಿರುವ ವಿಚಾರಣೆ ಪ್ರಗತಿಯಲ್ಲಿದ್ದರೂ ದುಬಾರಿ ದರದಲ್ಲಿ ವೈದ್ಯಕೀಯ ಪರಿಕರಗಳ ಖರೀದಿ ಪ್ರಕ್ರಿಯೆಗಳಿಗೆ ಈಗಲೂ ಕಡಿವಾಣ ಬಿದ್ದಿಲ್ಲ. ಉಪಕರಣಗಳ ಸರಬರಾಜು ಆದೇಶ ತಲುಪುವ ಮುನ್ನವೇ ಆಂಧ್ರ ಮೂಲದ ಸರಬರಾಜುದಾರರು ಇನ್‌ವಾಯ್ಸ್‌ಗಳನ್ನು ಮೊದಲೇ ತಯಾರಿಸಿಟ್ಟುಕೊಂಡಿದ್ದ ಪ್ರಕರಣಗಳು ಕೂಡ ಇದೀಗ ಬಹಿರಂಗವಾಗಿದೆ.

ಉಪಕರಣಗಳ ಕೊರತೆ ಕಾರಣದಿಂದ ಹೆಚ್ಚುವರಿ ದರ ನೀಡಬೇಕಾಯಿತು ಎಂಬ ಅಧಿಕಾರಿಗಳ ವಾದವನ್ನೇ ಸಚಿವ ಬಿ ಶ್ರೀರಾಮುಲು ಮತ್ತು ಡಾ ಕೆ ಸುಧಾಕರ್‌ ಅವರು ಮುಂದೊಡ್ಡಿದ್ದಾರಾದರೂ ಜೂನ್‌ ತಿಂಗಳಲ್ಲೂ ದುಬಾರಿ ದರದಲ್ಲೇ ಉಪಕರಣಗಳನ್ನು ಖರೀದಿಸಲಾಗಿದೆ. ಸರಬರಾಜುದಾರರೊಂದಿಗೆ ಅಧಿಕಾರಿಗಳು ಮೊದಲೇ ಒಳ ವ್ಯವಹಾರ ಕುದುರಿಸಿದ್ದರು ಎಂಬ ಆರೋಪಕ್ಕೆ ಪೂರಕ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಆಂಧ್ರ ಪ್ರದೇಶ ಮೂಲದ ಪಟೇಲ್‌ ಎಂಟರ್‌ಪ್ರೈಸೆಸ್‌ ಹೆಸರಿನ ಸರಬರಾಜುದಾರರು ಆರ್‌ಟಿಪಿಸಿಆರ್‌ ಉಪಕರಣಗಳನ್ನು ರಾಜ್ಯಕ್ಕೆ ಸರಬರಾಜು ಮಾಡಿರುವ ಪ್ರಕರಣವೇ ತಾಜಾ ನಿದರ್ಶನ. ಈ ಕಂಪನಿಯಿಂದ ಆರ್‌ಟಿಪಿಸಿಆರ್‌ ಉಪಕರಣಗಳನ್ನು ಖರೀದಿಸುವ ಮುನ್ನ ಕೆಡಿಎಲ್‌ಡಬ್ಲ್ಯೂಎಸ್‌ ಅಧಿಕಾರಿಗಳು ಮಾರುಕಟ್ಟೆಯಲ್ಲಿರುವ ನೈಜ ದರವನ್ನು ಪರಿಶೀಲಿಸಿಲ್ಲ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ಈ ಪ್ರಕರಣವೊಂದರಿಂದಲೇ ಸರ್ಕಾರದ ಬೊಕ್ಕಸಕ್ಕೆ ಅಂದಾಜು 1.24 ಕೋಟಿ ನಷ್ಟವಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ.

ಒಟ್ಟು 268 ಪ್ರಮಾಣದ ಆರ್‌ಟಿಪಿಸಿಆರ್‌ ಕಿಟ್‌ಗಳನ್ನು ಸರಬರಾಜು ಮಾಡಲು ಪಟೇಲ್‌ ಎಂಟರ್‌ಪ್ರೈಸೆಸ್‌ಗೆ ಕೆಡಿಎಲ್‌ಡಬ್ಲ್ಯೂಎಸ್‌ 2020ರ ಜೂನ್‌ 6ರಂದು ಆದೇಶ ನೀಡಿದೆ. ಕಿಟ್‌ವೊಂದಕ್ಕೆ 1.04 ಲಕ್ಷ ರು.ದರದಲ್ಲಿ (ಜಿಎಸ್‌ಟಿ ಹೊರತುಪಡಿಸಿ) ಒಟ್ಟು 268 ಕಿಟ್‌ಗಳಿಗೆ 3.12 ಕೋಟಿ ರು.ಗಳಿಗೆ ಆದೇಶ ನೀಡಿರುವುದು ದಾಖಲೆಯಿಂದ ಗೊತ್ತಾಗಿದೆ.

ಆದರೆ ಇದೇ ಉಪಕರಣಕ್ಕೆ ಮಾರುಕಟ್ಟೆಯಲ್ಲಿ ಗರಿಷ್ಠ 70,000 ರು. ಇದೆ (ಜಿಎಸ್‌ಟಿ ಸೇರಿ) ಎಂದು ತಿಳಿದು ಬಂದಿದೆ. ಆದರೂ ಅಧಿಕಾರಿಗಳು ಮಾರುಕಟ್ಟೆಯಲ್ಲಿರುವ ದರವನ್ನು ಪರಿಶೀಲಿಸದೆಯೇ ಕಿಟ್‌ವೊಂದಕ್ಕೆ 46,480 ರು.ಹೆಚ್ಚುವರಿ ದರ ನೀಡಿ ಖರೀದಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಕಿಟ್‌ವೊಂದಕ್ಕೆ 70,000 ರು. ದರದಲ್ಲಿ 268 ಕಿಟ್‌ಗಳನ್ನು ಖರೀದಿಸಿದ್ದರೆ 1.87 ಕೋಟಿ ರು. ಮಾತ್ರ ವೆಚ್ಚವಾಗುತ್ತಿತ್ತು. ಆದರೆ 46,480 ರು. ಹೆಚ್ಚುವರಿ ದರ ನೀಡಿ ಖರೀದಿಸಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ 1.24 ಕೋಟಿ ರು. ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಆದೇಶ ಸಿಗುವ ಮೊದಲೇ ಸಿದ್ಧವಾಗಿತ್ತೇ ಇನ್‌ವಾಯ್ಸ್‌?

ಈ ಪ್ರಕರಣದ ಮತ್ತೊಂದು ವಿಶೇಷವೆಂದರೆ ಸರಬರಾಜು ಆದೇಶ ಪಡೆದಿರುವ ಪಟೇಲ್‌ ಎಂಟರ್‌ಪ್ರೈಸೆಸ್‌, ಸರಬರಾಜು ಆದೇಶ ಸಿಗುವ ಮೊದಲೇ ಇನ್‌ವಾಯ್ಸ್‌ ಸಿದ್ಧಪಡಿಸಿಕೊಂಡಿತ್ತೇ ಎಂಬ ಬಲವಾದ ಶಂಕೆ ವ್ಯಕ್ತವಾಗಿವೆ. ಪಟೇಲ್‌ ಎಂಟರ್‌ಪ್ರೈಸೆಸ್‌ಗೆ 2020ರ ಜೂನ್‌ 6ರಂದು ಕೆಡಿಎಲ್‌ಡಬ್ಲ್ಯೂಎಸ್‌ ಖರೀದಿ ಆದೇಶ ನೀಡಿತ್ತು.(PO No;KDL/EQPT/Covid-19 PD Kit/145d/2019-20 P O Date;06/06/2020) ಆದರೆ ಈ ಏಜೆನ್ಸಿಯ ಟ್ಯಾಕ್ಸ್‌ ಇನ್‌ವಾಯ್ಸ್‌ನಲ್ಲಿ 2020ರ ಮೇ 20 ದಿನಾಂಕ ನಮೂದಾಗಿದೆ. ಈ ಟ್ಯಾಕ್ಸ್‌ ಇನ್‌ವಾಯ್ಸ್‌ಗೆ ಸೊಸೈಟಿಯ ಹೆಚ್ಚುವರಿ ನಿರ್ದೇಶಕರು ಸಹಿ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಸಾಮಾನ್ಯವಾಗಿ ಸರಬರಾಜು ಆದೇಶ ಪಡೆದ ನಂತರ ಏಜೆನ್ಸಿಗಳು ಉಪಕರಣಗಳನ್ನು ಸರಬರಾಜು ಮಾಡುವ ಸಂದರ್ಭದಲ್ಲಿ ಟ್ಯಾಕ್ಸ್‌ ಇನ್‌ವಾಯ್ಸ್‌ನ್ನು ಸಂಬಂಧಿಸಿದ ಪ್ರಾಧಿಕಾರಗಳಿಗೆ ನೀಡುತ್ತವೆ. ಆದರೆ ಈ ಪ್ರಕರಣದಲ್ಲಿ 2020ರ ಜೂನ್‌ 6ರಂದು ಹೊರಡಿಸಿದ್ದ ಸರಬರಾಜು ಆದೇಶಕ್ಕೂ ಮುನ್ನವೇ ಏಜೆನ್ಸಿಯು ಮೇ 26ರಂದೇ ಸಿದ್ಧಪಡಿಸಿತ್ತು ಎಂಬುದನ್ನು ನಿರೂಪಿಸುವಂತಹ ಇನ್‌ವಾಯ್ಸ್‌ನ್ನು ಸೊಸೈಟಿಗೆ ನೀಡಿದೆ. ಸರಬರಾಜು ಆದೇಶ ದೊರಕುವ ಮುನ್ನವೇ ಇನ್‌ವಾಯ್ಸ್‌ ನ್ನು ಒಂದು ತಿಂಗಳ ಮೊದಲೇ ಸಿದ್ಧಪಡಿಸಿದ್ದು ನಿಜವಾದಲ್ಲಿ ಸೊಸೈಟಿಯ ಅಧಿಕಾರಿಗಳು ಸರಬರಾಜುದಾರರೊಂದಿಗೆ ಮೊದಲೇ ಒಳ ವ್ಯವಹಾರ ಅಥವಾ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿಗೆ ಬಲವನ್ನು ತಂದುಕೊಟ್ಟಿದೆ.

ಇನ್‌ವಾಯ್ಸ್‌ನಲ್ಲಿ ಉಪಕರಣದ ತಯಾರಿಕೆ ವರ್ಷದ ವಿವರವಿಲ್ಲ

ಸಾಮಾನ್ಯವಾಗಿ ಇನ್‌ವಾಯ್ಸ್‌ನಲ್ಲಿ ಉಪಕರಣದ ದರ ನಮೂದಿಸುವ ಜತೆಗೆ ಉಪಕರಣದ ತಯಾರಿಕೆ ವರ್ಷವನ್ನೂ ನಮೂದಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಆರ್‌ಟಿಪಿಸಿಆರ್‌ ಉಪಕರಣದ ತಯಾರಿಕೆ ಕಂಪನಿ ಹೆಸರನ್ನು ಉಲ್ಲೇಖಿಸಲಾಗಿದೆಯೇ ವಿನಃ ಯಾವ ವರ್ಷದಲ್ಲಿ ಉಪಕರಣವನ್ನು ತಯಾರಿಸಲಾಗಿದೆ ಎಂಬ ವಿವರವಿಲ್ಲದಿರುವುದು ಉಪಕರಣದ ಗುಣಮಟ್ಟದ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿವೆ.

ಇನ್ನು, ಆದೇಶ ಪಡೆದ 15 ದಿನದೊಳಗೆ 268 ಉಪಕರಣಗಳನ್ನು ಸರಬರಾಜು ಮಾಡಲಿದೆ. ತಪ್ಪಿದರೆ ಆದೇಶವನ್ನು ರದ್ದುಗೊಳಿಸಬಹುದು. ಇದಕ್ಕೆ ಯಾವ ಅಭ್ಯಂತರವೂ ಇಲ್ಲ ಎಂದು ಏಜೆನ್ಸಿಯೇ ಖುದ್ದು ಸ್ವಯಂ ದೃಢೀಕರಣ ಪತ್ರವನ್ನೂ ನೀಡಿತ್ತು. ಆದರೆ ಆದೇಶ ಪಡೆದ 15 ದಿನಗಳಾದ ನಂತರವೂ ಉಪಕರಣಗಳನ್ನು ಸರಬರಾಜು ಮಾಡಿರಲಿಲ್ಲ ಎಂದು ಗೊತ್ತಾಗಿದೆ.

ಕೊಟೇಷನ್‌ನಲ್ಲಿನ ಷರತ್ತುಗಳ ಪ್ರಕಾರ ನಿಗದಿತ ಅವಧಿಯೊಳಗೆ ಉಪಕರಣಗಳನ್ನು ಸರಬರಾಜು ಮಾಡದೇ ಇದ್ದಲ್ಲಿ ಆದೇಶ ರದ್ದುಗೊಳಿಸದ ಅಧಿಕಾರಿಗಳು, ಉಪಕರಣಗಳನ್ನು ಸರಬರಾಜು ಮಾಡಲು ಅನಧಿಕೃತವಾಗಿ ಕಾಲಾವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.

the fil favicon

SUPPORT THE FILE

Latest News

Related Posts