ಗಾಂಜಾ ಸೇರಿ ಮಾದಕ ಪದಾರ್ಥಗಳ ಮಾರಾಟ; ಕೇವಲ 2 ತಿಂಗಳಲ್ಲಿ 130 ಪ್ರಕರಣ ದಾಖಲು

ಬೆಂಗಳೂರು; ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ಪದಾರ್ಥಗಳ ಮಾರಾಟ ಪ್ರಕರಣ 2020ರ ಜನವರಿ ಮತ್ತು ಫೆಬ್ರುವರಿಯ ಕೇವಲ 2 ತಿಂಗಳಲ್ಲಿ 130 ಪ್ರಕರಣಗಳು ವರದಿಯಾಗಿರುವುದು ಇದೀಗ ಬಹಿರಂಗವಾಗಿದೆ. ಬೆಂಗಳೂರು ನಗರ ಜಿಲ್ಲೆಯ ಕೆ ಆರ್‌ ಪುರಂ, ಸುದ್ದುಗುಂಟೆ ಪಾಳ್ಯ, ಆಡುಗೋಡಿ, ಬಾಣಸವಾಡಿ ಸೇರಿದಂತೆ ವಿವಿಧೆಡೆ ಮಾದಕ ಪದಾರ್ಥಗಳ ಮಾರಾಟ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದ್ದರೂ ಪ್ರಕರಣಗಳನ್ನು ಶೂನ್ಯ ಮಟ್ಟಕ್ಕೆ ಇಳಿಸುವಲ್ಲಿ ಬೆಂಗಳೂರು ನಗರ ಪೊಲೀಸ್‌ ಹಿಂದೆ ಬಿದ್ದಿದೆ.

ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ಪದಾರ್ಥಗಳ ಮಾರಾಟ ಪ್ರಕರಣವು ಇದೀಗ ಕನ್ನಡ ಚಿತ್ರರಂಗದ ನಟ, ನಟಿಯರ ಹೆಸರು ಥಳಕು ಹಾಕಿಕೊಂಡಿರುವ ಬೆನ್ನಲ್ಲೇ ಗೃಹ ಇಲಾಖೆ ಸದನಕ್ಕೆ ಒದಗಿಸಿದ್ದ ಮಾಹಿತಿಯೂ ಮುನ್ನೆಲೆಗೆ ಬಂದಿದೆ. ಮಾದಕ ಪದಾರ್ಥಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ ಎಂದು ಗೃಹ ಇಲಾಖೆ ಉತ್ತರ ಒದಗಿಸಿದೆಯಾದರೂ ಈಗಲೂ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿರುವುದು ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ರಾಜ್ಯದ ಬೆಂಗಳೂರು ಸೇರಿದಂತೆ ವಿವಿಧೆಡೆ ಎಲ್‌ಎಸ್‌ಡಿ, ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ಪದಾರ್ಥಗಳ ಮಾರಾಟ ಹೆಚ್ಚಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು 2020ರ ಮಾರ್ಚ್‌ನಲ್ಲೇ ಅಧಿಕೃತವಾಗಿ ಒಪ್ಪಿಕೊಂಡಿದ್ದರು. ಬೆಂಗಳೂರು ನಗರವೊಂದರಲ್ಲೇ ಜನವರಿ ಮತ್ತು ಫೆಬ್ರುವರಿ 2 ತಿಂಗಳಲ್ಲೇ 130 ಪ್ರಕರಣಗಳು ದಾಖಲಾಗಿರುವುದು, ಮಾರಾಟ ಜಾಲಕ್ಕೆ ಕಡಿವಾಣ ಬಿದ್ದಿಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ.

ಬ್ರೌನ್‌ ಶುಗರ್‌, ಒಪಿಯಂ, ಹೆರಾಯಿನ್‌, ಹಾಶೀಸ್‌, ಚರಸ್‌, ಕೊಕೈನ್‌, ಎಪ್ರಿಡಿಮ್‌, ಎಂಡಿಎಂಎ, ಎಂಡಿಎಸ್‌, ಪೌಡರ್‌, ಕೆಟಾಮಿನ್‌, ಯಾಬಾ, ಎಲ್‌ಎನ್‌ಡಿ ಪೇಪರ್‌, ಗಾಂಜಾ ಸೇರಿದಂತೆ ಇನ್ನಿತರೆ ರೂಪದ ಮಾದಕ ಪದಾರ್ಥಗಳು ಬೆಂಗಳೂರು ನಗರದ ಬಹುತೇಕ ಭಾಗಗಳಲ್ಲಿ ಎಲ್ಲೆಂದರಲ್ಲಿ ದೊರೆಯುತ್ತಿದ್ದರೂ ಪೊಲೀಸ್‌ ಇಲಾಖೆ ಇಂತಹ ಜಾಲದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ.

2020ರ ಫೆಬ್ರುವರಿ 20ರ ಅಂತ್ಯಕ್ಕೆ ಬೆಂಗಳೂರು ನಗರದ 107 ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 130 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಸದ್ದುಗುಂಟೆ ಪಾಳ್ಯವೊಂದರಲ್ಲೇ ಈ ಅವಧಿಯಲ್ಲಿ ಒಟ್ಟು 33 ಪ್ರಕರಣಗಳು ದಾಖಲಾಗಿವೆ. ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ 130.656 ಕೆ ಜಿ ಪ್ರಮಾಣದಲ್ಲಿ ಗಾಂಜಾವನ್ನು ವಶಕ್ಕೆ ಪಡೆದಿರುವ ಬೆಂಗಳೂರು ಪೊಲೀಸ್‌, 226 ಆರೋಪಿಗಳನ್ನು ಬಂಧಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ 6, ಬಾಣಸವಾಡಿಯಲ್ಲಿ 3, ಭಾರತಿ ನಗರದಲ್ಲಿ 4, ಕಮರ್ಷಿಯಲ್‌ ಸ್ಟ್ರೀಟ್‌ 4, ದೇವರಜೀವನಹಳ್ಳಿಯಲ್ಲಿ 11, ಇಂದಿರಾ ನಗರದಲ್ಲಿ 5, ಕಾಡುಗೋಡಿಯಲ್ಲಿ 8 ಪ್ರಕರಣಗಳು ಕಳೆದ ಜನವರಿ ಮತ್ತು ಫೆಬ್ರುವರಿಯಲ್ಲಿ ದಾಖಲಾಗಿವೆ.

ಒಟ್ಟು 130 ಪ್ರಕರಣಗಳ ಪೈಕಿ 123 ಪ್ರಕರಣಗಳು ಗಾಂಜಾ ಮಾರಾಟಕ್ಕೆ ಸಂಬಂಧಿಸಿವೆ. ಅಲ್ಲದೆ 127.763 ಕೆ ಜಿ ಗಾಂಜಾವನ್ನು ವಶಪಡಿಸಿಕೊಂಡಿರುವುದು ಗೊತ್ತಾಗಿದೆ. 2017ರಲ್ಲಿ 554.611 ಕೆ ಜಿ ಗಾಂಜಾ ವಶಪಡಿಸಿಕೊಂಡಿದ್ದ ಪೊಲೀಸರು ಇದಕ್ಕೆ ಸಂಬಂಧಿಸಿದಂತೆ 493 ಭಾರತೀಯರು, 23 ಮಂದಿ ವಿದೇಶಿಯರನ್ನು ಬಂಧಿಸಿದ್ದರು. 2018ರಲ್ಲಿ 759.838 ಕೆ ಜಿ ಗಾಂಜಾ ವಶವಾಗಿದ್ದು, 421 ಭಾರತೀಯರು, 13 ವಿದೇಶಿಯರನ್ನು ಬಂಧಿಸಲಾಗಿತ್ತು. 2019ರಲ್ಲಿ 1047.41 ಕೆ ಜಿ ಗಾಂಜಾ ವಶಕ್ಕೆ ಪಡೆದಿದ್ದರೆ ಈ ಸಂಬಂಧ 1,193 ಭಾರತೀಯರು, 7 ಮಂದಿ ವಿದೇಶಿಯರನ್ನು ಬಂಧಿಸಲಾಗಿತ್ತು.

ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ಪದಾರ್ಥಗಳ ಮಾರಾಟಕ್ಕೆ ಸಂಬಂಧಿಸಿದಂತೆ 2017ರಲ್ಲಿ 357 ಪ್ರಕರಣಗಳು(569.516 ಕೆ ಜಿ) 2018ರಲ್ಲಿ 286 ಪ್ರಕರಣ(765.359 ಕೆ ಜಿ) 2019ರಲ್ಲಿ 768 ಪ್ರಕರಣ (1053.188 ಕೆ ಜಿ)ಗಳು ದಾಖಲಾಗಿದ್ದವು.

the fil favicon

SUPPORT THE FILE

Latest News

Related Posts